ಶುಕ್ರವಾರ, ಜುಲೈ 30, 2021
28 °C

ದಿನದ ಸೂಕ್ತಿ | ಸುಖಿ ಯಾರು?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕಸ್ಯ ನ ಶೋಕೋ ಯಃ ಸ್ಯಾತ್‌
ಅಕ್ರೋಧಃ ಕಿಂ ಸುಖಂ ತುಷ್ಟಿಃ ।
ಕೋ ರಾಜಾ ರಂಜನಕೃತ್‌
ಕಶ್ಚ ಶ್ವಾ ನೀಚಸೇವಕೋ ಯಃ ಸ್ಯಾತ್‌ ।।

ಇದರ ತಾತ್ಪರ್ಯ ಹೀಗೆ:

‘ಶೋಕರಹಿತನು ಯಾರು? ಕ್ರೋಧರಹಿತ. ಯಾವುದು ಸುಖ? ಸಂತೃಪ್ತಿ. ರಾಜ ಯಾರು? ಪ್ರಜಾರಂಜನೆಯನ್ನು ಮಾಡತಕ್ಕವನು. ಯಾರು ನಾಯಿ? ಯಾರು ನೀಚರ ಸೇವಕನೋ ಅವನು.‘

ನಮಗೆ ನಿತ್ಯವೂ ಹಲವು ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಂಡು, ಅದರಂತೆ ಜೀವನವನ್ನೂ ರೂಪಿಸಿಕೊಂಡರೆ, ಆಗ ಜೀವನದ ಪಯಣ ಸುಗಮವೂ ಸುಂದರವೂ ಆಗುತ್ತದೆ.

ನಮ್ಮ ಸಮಸ್ಯೆ ಎಂದರೆ ನಮಗೆ ಪ್ರಶ್ನೆಗಳೇ ಹುಟ್ಟುವುದಿಲ್ಲ. ನಾವು ಜೀವನದಲ್ಲಿ ಓಡುತ್ತಲೇ ಇರುತ್ತೇವೆ; ಆದರೆ ಯಾವ ದಿಕ್ಕಿನ ಕಡೆಗೆ ಓಡುತ್ತಿದ್ದೇವೆ; ಯಾವ ಉದ್ದೇಶದಿಂದ ಓಡುತ್ತಿದ್ದೇವೆ – ಎಂಬುದೂ ಗೊತ್ತಿಲ್ಲದೆ ಓಡುತ್ತಲೇ ಇರುತ್ತೇವೆ. ನಮ್ಮ ಜೀವನದಲ್ಲಿ ಸ್ಪಷ್ಟತೆ ಒದಗಲು ಕೆಲವೊಂದು ಪ್ರಶ್ನೆಗಳು ಅನಿವಾರ್ಯ. ಸುಭಾಷಿತ ಇಲ್ಲಿ ಅಂಥ ಕೆಲವು ಪ್ರಶ್ನೆಗಳನ್ನೂ ಅವುಗಳಿಗೆ ಉತ್ತರವನ್ನೂ ಕಾಣಿಸಿದೆ.

ಜೀವನದ ದೊಡ್ಡ ಸಂಕಟವೇ ಶೋಕ; ಎಂದರೆ ದುಃಖ. ಈ ದುಃಖಕ್ಕೆ ಕಾರಣ ಏನು? ಸುಭಾಷಿತ ಹೇಳುತ್ತಿದೆ: ಕ್ರೋಧ. ಕ್ರೋಧ ಯಾರಲ್ಲಿ ಇಲ್ಲವೋ, ಅವನು ಶೋಕರಹಿತ. ಭಗವದ್ಗೀತೆಯ ಶ್ಲೋಕವೊಂದನ್ನು ಇಲ್ಲಿ ಮೆಲುಕು ಹಾಕಬಹುದು:

ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್‌ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ ॥

ಗೀತೆ ಹೇಳುತ್ತಿದೆ: ’ಕ್ರೋಧದ ಕಾರಣದಿಂದ ಮನುಷ್ಯನಲ್ಲಿ ಸಂಮೋಹ ಉಂಟಾಗುತ್ತದೆ; ಎಂದರೆ ಇದನ್ನು ಮಾಡಬೇಕು, ಇದನ್ನು ಮಾಡಬಾರದು – ಎಂಬ ವಿಚಾರಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಸಂಮೋಹದಿಂದ ಸ್ಮೃತಿ, ಸ್ಮರಣೆಯನ್ನು ಕಳೆದುಕೊಳ್ಳುತ್ತಾನೆ; ‘ನಾನು ಯಾರು‘ ಎನ್ನುವುದರಿಂದ ಹಿಡಿದು, ತನ್ನ ವಿದ್ಯೆ–ಅಂತಸ್ತು–ಗೌರವ ಎಲ್ಲ ರೀತಿಯ ಸ್ಮೃತಿಯನ್ನೂ ಕಳೆದುಕೊಳ್ಳುತ್ತಾನೆ. ಒಮ್ಮೆ ಸ್ಮೃತಿಯನ್ನೇ ಕಳೆದುಕೊಂಡಮೇಲೆ ಬುದ್ಧಿಯನ್ನು ಕಳೆದುಕೊಂಡಂತೆಯೇ ಹೌದು. ಬುದ್ಧಿ ಹೋಯಿತು ಎಂದರೆ ಎಲ್ಲವೂ ನಾಶವಾಯಿತು ಎಂದೇ ಸರಿ.‘

ಎಲ್ಲವನ್ನೂ ನಾವು ಏಕಾದರೂ ಕಳೆದುಕೊಂಡೇವು? ಕ್ರೋಧದಿಂದಲೇ. ಹೀಗಾಗಿ ಕ್ರೋಧ – ಕೋಪ – ಯಾರಲ್ಲಿ ಇಲ್ಲವೋ ಅವರಿಗೆ ಶೋಕವೂ ಇರದು.

ಸುಖ. ಮನುಷ್ಯ ಏನೆಲ್ಲ ಮಾಡುತ್ತಾನೆ, ಅವೆಲ್ಲವೂ ಸುಖವನ್ನು ದಕ್ಕಿಸಿಕೊಳ್ಳುವುದಕ್ಕಾಗಿಯೇ ಆಗಿರುತ್ತದೆ. ಆದರೆ ನಾವು ಹೊರಗಿನ ವಸ್ತುಗಳ ಸಾನ್ನಿಧ್ಯದಲ್ಲಿಯೇ ಸುಖವನ್ನು ಹುಡುಕುತ್ತಿರುತ್ತೇವೆ. ಈ ವಸ್ತುಪ್ರಪಂಚಕ್ಕೆ ಕೊನೆಯೇ ಇಲ್ಲ. ಒಂದು ಮೊಬೈಲ್‌ ಕೊಂಡ ಮರುಕ್ಷಣವೇ ಇನ್ನು ಹತ್ತು ಮಾಡೆಲ್‌ ಮಾರುಕಟ್ಟೆಗೆ ಬಂದಿರುತ್ತದೆ! ಎಲ್ಲವನ್ನೂ ಕೊಳ್ಳಲು ಸಾಧ್ಯವೆ? ಸುಭಾಷಿತ ಅದಕ್ಕೇ ಹೇಳುತ್ತಿರುವುದು ತೃಪ್ತಿಯಲ್ಲಿಯೇ ಸುಖವಿದೆ.

ಇನ್ನು ರಾಜ. ನಮ್ಮ ಕಾಲದಲ್ಲಿ ಮಂತ್ರಿಗಳು. ಯಾರು ಪ್ರಜೆಗಳಿಗೆ ರಂಜನೆ, ಎಂದರೆ ಸಂತೋಷವನ್ನು ಒದಗಿಸುತ್ತಾನೆಯೋ ಅವನೇ ನಿಜವಾದ ರಾಜ. ಈ ಮಾತಿಗೆ ಹೆಚ್ಚಿನ ವಿವರಣೆ ಬೇಕಾಗಿಲ್ಲವೆನ್ನಿ!  ಸದ್ಯ ನಮಗೆ ಎದುರಾಗಿರುವ ದೊಡ್ಡ ಆತಂಕದಿಂದ ಜನರನ್ನು ಪಾರುಮಾಡಲು ನಮ್ಮ ಸುತ್ತಮುತ್ತಲಿರುವ ರಾಜಕಾರಣಿಗಳು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ – ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತಿರುವ ಸಂಗತಿಯಲ್ಲವೆ?

ನಮ್ಮ ನಿತ್ಯದ ಬೈಗುಳಗಳಲ್ಲಿ ‘ನಾಯಿ’ ಎಂಬುದನ್ನೂ ಬಳಸುತ್ತಿರುತ್ತೇವೆ. ಗೊತ್ತು–ಗುರಿಯಿಲ್ಲದೆ ಅಲ್ಲಿ ಇಲ್ಲಿ ತಿನ್ನುತ್ತ, ಓಡುತ್ತ ಕಾಲ ತಳ್ಳುತ್ತದೆ ಎಂಬ ಕಾರಣದಿಂದ ನೀಚಾರ್ಥದಲ್ಲಿ ಈ ಪದವನ್ನು ಬಳಸುತ್ತೇವೆ, ಬೈಗುಳವಾಗಿ. ಆದರೆ ಸುಭಾಷಿತ ಹೇಳುತ್ತಿದೆ, ನಿಜವಾದ ನಾಯಿ ನಾಲ್ಕು ಕಾಲಿನ ಪ್ರಾಣಿಯಲ್ಲ, ಎರಡು ಕಾಲಿನ ಮನುಷ್ಯ; ಎಂಥ ಮನುಷ್ಯ ಎಂದರೆ ನೀಚರಲ್ಲಿ ಸೇವೆಯನ್ನು ಮಾಡುವವನು; ಭ್ರಷ್ಟಾಚಾರಿಗಳ ಮುಂದೆ ಕೈಕಟ್ಟಿ ನಿಲ್ಲುವವನು. ಪ್ರಾಣಿಯಾದ ನಾಯಿಗೆ ಸ್ವಾಮಿನಿಷ್ಠೆ ಇರುವುದೇ ವಿನಾ ದಾಸ್ಯಬುದ್ಧಿ ಇರುವುದಿಲ್ಲ, ಅದಕ್ಕೂ ಸ್ವಾಭಿಮಾನ ಇರುತ್ತದೆ; ಇವನಿಗೆ ಇರುವುದಿಲ್ಲ ಎನ್ನುವುದು ಸುಭಾಷಿತದ ಇಂಗಿತ. ಭ್ರಷ್ಟ ರಾಜಕಾರಣಿಗಳ ಮುಂದೆ ನಡು ಬಗ್ಗಿಸಿ, ಕೈ ಕಟ್ಟಿ, ಹಲ್ಲುಬಿಟ್ಟುಕೊಂಡು ನಿಲ್ಲುವವರೆಲ್ಲರೂ ಸುಭಾಷಿತದ ಈ ಮಾತನ್ನು ಕೇಳಿಸಿಕೊಂಡರೆ ಒಳಿತು.

 ದಿನದ ಸೂಕ್ತಿ ಪಾಡ್‌ಕಾಸ್ಟ್ ಕೇಳಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು