ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಧರ್ಮದ ಮಾತೃವಾತ್ಸಲ್ಯ

Last Updated 24 ಜುಲೈ 2020, 19:31 IST
ಅಕ್ಷರ ಗಾತ್ರ

ಧರ್ಮದ ವ್ಯಾಖ್ಯಾನ ಸುಲಭವಲ್ಲದಿರಬಹುದು; ಆದರೆ ಧರ್ಮವನ್ನು ಬಿಟ್ಟು ನಮ್ಮ ಸಂಸ್ಕೃತಿಯ ನಡೆ–ನುಡಿಗಳೇ ಇರಲು ಸಾಧ್ಯವಿಲ್ಲ...

ಧರ್ಮಾದರ್ಥಃ ಪ್ರಭವತೇ ಧರ್ಮಾತ್‌ ಪ್ರಭವತೇ ಸುಖಮ್‌ ।

ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ।।

ಇದರ ತಾತ್ಪರ್ಯ ಹೀಗೆ:

’ಧರ್ಮದಿಂದಲೇ ಅರ್ಥ; ಧರ್ಮದಿಂದಲೇ ಸುಖ; ಸಕಲ ಆಸೆಗಳೂ ಧರ್ಮದಿಂದಲೇ ಕೈಗೂಡುತ್ತವೆ. ಧರ್ಮದ ತಳಹದಿಯ ಮೇಲೆಈ ಜಗತ್ತು ನಿಂತಿದೆ.‘

ನಮ್ಮ ದೇಶದಲ್ಲಿ ಧರ್ಮದ ಬಗ್ಗೆ ನಡೆದಿರುವಷ್ಟು ಜಿಜ್ಞಾಸೆ–ಚರ್ಚೆ–ಸಂವಾದ–ವಿವಾದಗಳು ಇನ್ನೊಂದು ತತ್ತ್ವದ ಬಗ್ಗೆ ನಡೆದಿಲ್ಲ ಎನ್ನಬಹುದು. ಧರ್ಮದ ಕಲ್ಪನೆ ಅಪವ್ಯಾಖ್ಯಾನಕ್ಕೆ ತುತ್ತಾದಷ್ಟು ಇನ್ನೊಂದು ತತ್ತ್ವವೂ ಇಲ್ಲ ಎನ್ನಬಹುದು. ಇದಕ್ಕೆ ಕಾರಣವೂ ಇಲ್ಲದಿಲ್ಲ; ಅದು ಏನೆಂದರೆ, ಧರ್ಮದ ವ್ಯಾಖ್ಯಾನ ಅಷ್ಟು ಸುಲಭವಲ್ಲ. ಇದಕ್ಕೆ ಹಲವು ಆಯಾಮಗಳ ಅರ್ಥಪರಂಪರೆಯೇ ಉಂಟು. ಹೀಗಾಗಿ ಧರ್ಮವನ್ನು ಬಹುಪಾಲು ಸಂದರ್ಭಗಳಲ್ಲಿ ತಪ್ಪಾಗಿ ಗ್ರಹಿಸಿಕೊಂಡೇ ಅದರ ಪರವಾಗಿಯೋ ವಿರುದ್ಧವಾಗಿಯೋ ಮಾತನಾಡುತ್ತಿರುತ್ತೇವೆ. ಹೀಗಿದ್ದರೂ ಒಂದು ವಿಷಯವನ್ನು ಮಾತ್ರ ಸ್ಪಷ್ಟವಾಗಿ ಹೇಳಬಹುದು. ಧರ್ಮ ಎನ್ನುವುದು 'Religion'ಅಲ್ಲ!

ಧರ್ಮದ ವ್ಯಾಖ್ಯಾನ ಸುಲಭವಲ್ಲದಿರಬಹುದು; ಆದರೆ ಧರ್ಮವನ್ನು ಬಿಟ್ಟು ನಮ್ಮ ಸಂಸ್ಕೃತಿಯ ನಡೆ–ನುಡಿಗಳೇ ಇರಲು ಸಾಧ್ಯವಿಲ್ಲ ಎನ್ನುವುದೂ ದಿಟ. ಸುಭಾಷಿತ ಇಲ್ಲಿ ಅದನ್ನೇ ಹೇಳುತ್ತಿರುವುದು: 'ನಮ್ಮ ಎಲ್ಲ ಆಗುಹೋಗುಗಳೂ ಧರ್ಮದ ಮೇಲೆಯೇ ನಿಂತಿವೆ; ನಮ್ಮ ಆಗುಹೋಗುಗಳು ಮಾತ್ರ ಅಲ್ಲ, ಇಡಿಯ ಜಗತ್ತೇ ಧರ್ಮ ಎಂಬ ಅಡಿಪಾಯದ ಮೇಲೆ ನಿಂತಿದೆ.'

ನಮ್ಮನ್ನು ಯಾವುದು ಎತ್ತಿಹಿಡಿಯುತ್ತದೆಯೋ ಅದೇ ಧರ್ಮ. ಇದು ಧರ್ಮದ ಮುಖ್ಯವಾದ ವ್ಯಾಖ್ಯಾನಗಳಲ್ಲಿ ಒಂದು. ಯಾವಾಗ ಎತ್ತಿಹಿಡಿಯುತ್ತದೆ – ಎನ್ನುವುದು ಕೂಡ ಮುಖ್ಯ. ನಾವು ಬೀಳುವಾಗ ಬಿದ್ದು ಗಾಯವಾಗದಂತೆನಮ್ಮನ್ನು ಎತ್ತಿ ಕಾಪಾಡುವುದು. ಇದನ್ನೇ ಸುಭಾಷಿತ ಸೂಕ್ಷ್ಮವಾಗಿ ಹೇಳುತ್ತಿರುವುದು.

ಧರ್ಮಕ್ಕೆ ನಮ್ಮನ್ನು ಕಾಪಾಡುವ ಗುಣ ಮಾತ್ರವಷ್ಟೆ ಇಲ್ಲ; ನಾವೂ ಅದನ್ನು ಕಾಪಾಡಬೇಕಾಗುತ್ತದೆ. ನಮಗೂ ಧರ್ಮಕ್ಕೂ ಈ ಎರಡು ನೆಲೆಗಳ ಮೇಲೆ ನಂಟು ಏರ್ಪಟ್ಟಿರುತ್ತದೆ.

ಧರ್ಮವನ್ನು ಕಾಪಾಡುವುದು ಎಂದರೇನು? ನಾವು ಧರ್ಮದ ಆಚರಣೆಯಲ್ಲಿಯೇ ಸದಾ ನಡೆಯತಕ್ಕದ್ದು. ಧರ್ಮವನ್ನು ಕಾಪಾಡುವುದು ಎಂದರೆ ಅದರ ದಾರಿಯಲ್ಲಿ ನಡೆಯುತ್ತಲೇ ಇರುವುದು. ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಪ್ರತಿ ವಿಷಯದಲ್ಲೂ 'ಧರ್ಮ ಮುಖ್ಯ'ಎಂಬ ಆದೇಶ ಹೊರಡುತ್ತಿರುತ್ತದೆ. ಇಲ್ಲಿ ಇನ್ನೊಂದು ಶ್ಲೋಕ ಇದೆ, ನೋಡಿ:

ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ ।

ತಸ್ಮಾದ್ಧರ್ಮೋ ನ ಹಂತವ್ಯೋ ಮಾ ನೋ ಧರ್ಮೋ ಹತೋsವಧೀತ್‌ ।।

’ಧರ್ಮವನ್ನು ಮೀರಿದರೆ ಅದು ನಮಗೆ ಹಾನಿಯನ್ನುಂಟುಮಾಡುತ್ತದೆ; ಧರ್ಮವನ್ನು ಅಚರಿಸಿದರೆ ರಕ್ಷಣೆಯುಂಟಾಗುತ್ತದೆ; ಅದರಿಂದ ಧರ್ಮವನ್ನು ಮೀರಬಾರದು. ಧರ್ಮವನ್ನು ಮೀರಿ ಹಾಳಾಗುವುದು ಬೇಡ.‘

ಧರ್ಮಾಚರಣೆಯ ವಿಷಯದಲ್ಲಿ ಇಷ್ಟು ನಿಷ್ಠುರವೂ ಕಠಿಣವೂ ಶಾಸನದಂತೆಯೂ ನಡೆದುಕೊಳ್ಳುವ ಪರಂಪರೆಯು ಔದಾರ್ಯದಿಂದಲೂ ನಡೆದುಕೊಳ್ಳುತ್ತದೆ; ಈ ಉದಾಹರಣೆಯನ್ನು ನೋಡಿ:

ದೇಶಭಂಗೇ ಪ್ರವಾಸೇ ವಾ ವ್ಯಾಧಿಷು ವ್ಯಸನೇಷ್ವಪಿ ।

ರಕ್ಷೇದೇವ ಸ್ವದೇಹಾದಿ ಪಶ್ಚಾದ್ಧರ್ಮಂ ಸಮಾಚರೇತ್ ।।

’ದೇಶದಲ್ಲಿ ಯುದ್ಧ ಮೊದಲಾದ ಉಪದ್ರವಗಳಿದ್ದಾಗ, ಪ್ರಯಾಣಸಮಯದಲ್ಲಿ, ರೋಗಗಳಲ್ಲಿ, ಸಂಕಟ ಎದುರಾದಾಗ ಮೊದಲು ತನ್ನ ಶರೀರವನ್ನು ಕಾಪಾಡಿಕೊಳ್ಳಬೇಕು. ಆಮೇಲೆ ಧರ್ಮದ ಕಡೆ ಗಮನ ಕೊಡಬಹುದು.‘

ನಾವು ಧರ್ಮದ ಆಚರಣೆಯನ್ನು ನಡೆಸಲು ಸಾಧ್ಯವಾಗುವುದು ನಮ್ಮ ಶರೀರದ ಮೂಲಕವೇ. ಹೀಗಾಗಿ ಶರೀರದ ರಕ್ಷಣೆಗೇ ಸಂಕಷ್ಟ ಎದುರಾಗುವ ಸಂದರ್ಭಗಳಲ್ಲಿ ಮೊದಲಿಗೆ ನಮ್ಮ ಶರೀರವನ್ನು ರಕ್ಷಿಸಿಕೊಳ್ಳುವುದೇ ಆ ಸಮಯದ ದಿಟವಾದ ಧರ್ಮ – ಎನ್ನುವುದು ಕೂಡ ಧರ್ಮದ ವ್ಯಾಪ್ತಿಯೇ. ಹೀಗಾಗಿಯೇ ಧರ್ಮದ ಬಗ್ಗೆ ಮೇಲುಮೇಲಿನ ಸರಳ ವ್ಯಾಖ್ಯಾನ ಸಲ್ಲದು.

ಯಾವಾಗ ಕಠಿಣವಾಗಿರಬೇಕೋ ಆಗ ಕಠಿಣವಾಗಿಯೂ, ಯಾವಾಗ ಪ್ರೀತಿಯಿಂದಿರಬೇಕೋ ಆಗ ಪ್ರೀತಿಯಿಂದಿರುವುದೂ, ಯಾವಾಗ ಕಾಪಾಡಬೇಕು ಆಗ ಕಾಳಜಿಯನ್ನು ವಹಿಸುವುದೂ ಮಾತೃವಾತ್ಸಲ್ಯದ ಗುಣ. ಧರ್ಮಕ್ಕೂ ಅಂಥದೇ ಆಯಾಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT