ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕಣ್ಣು ಕಣ್ಣನ್ನು ಕಾಣದು!

Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ಅನ್ಯಸ್ಯ ದೋಷಂ ಪಶ್ಯಂತಿ ಸುಸೂಕ್ಷ್ಮಮಪಿ ತತ್ಪರಾಃ ।

ಸ್ವನೇತ್ರಮಿವ ನೇಕ್ಷಂತೇ ಸ್ವದೋಷಂ ಮಲಿನಾ ಜನಾಃ ।।

ಇದರ ತಾತ್ಪರ್ಯ ಹೀಗೆ:’ಇನ್ನೊಬ್ಬರ ತಪ್ಪು ಚಿಕ್ಕದಾಗಿದ್ದರೂ ದುರ್ಜನರು ಉತ್ಸಾಹದಿಂದ ಕಂಡುಹಿಡಿಯುತ್ತಾರೆ; ಆದರೆ ಹೇಗೆ ತಮ್ಮ ಕಣ್ಣನ್ನು ತಾವೇ ನೋಡಲಾರರೋ ಹಾಗೆ ತಮ್ಮ ತಪ್ಪನ್ನು ಅವರು ತಿಳಿಯುವುದೇ ಇಲ್ಲ.‘

ಇದು ’ರಾಮಾಯಣಮಂಜರಿ‘ಯ ಒಂದು ಶ್ಲೋಕ.

ಸದ್ಯ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ನೋಡಿದರೆ ಈ ಸುಭಾಷಿತ ಹೇಳುತ್ತಿರುವುದು ವಾಸ್ತವ ಎಂಬುದು ಮನದಟ್ಟಾಗುತ್ತದೆ; ಈ ಪರಿಸರದ ಭಾಗವಾಗಿಯೇ ನಾವು ಕೂಡ ಇದ್ದೇವೆ ಎನ್ನುವುದನ್ನೂ ಮರೆಯುವಂತಿಲ್ಲವೆನ್ನಿ!

ಕೊರೊನಾ ಭಯದಿಂದ ಇಡಿಯ ಜಗತ್ತು ತತ್ತರಿಸುತ್ತಿದೆ. ವೈರಸ್ಸನ್ನು ಹರಡದಂತೆ ತಡೆಯಲು ಸದ್ಯಕ್ಕೆ ಇರುವ ದಾರಿ ಎಂದರೆ ’ಸೋಷಿಯಲ್‌ ಡಿಸ್ಟೆಂಸ್ಸಿಂಗ್‌‘; ಒಬ್ಬರು ಇನ್ನೊಬ್ಬರಿಂದ ದೂರ ಇರುವುದು. ಇದರಿಂದ ಸೋಂಕು ಹರಡಂತೆ ಎಚ್ಚರ ವಹಿಸಬಹುದು. ಅದು ಸರಿ; ಆದರೆ ಈ ಪರಸ್ಪರ ಅಂತರವನ್ನು ಹೇಗೆ ರೂಢಿಗೆ ತರುವುದು? ಅನಗತ್ಯವಾದ ಓಡಾಟವನ್ನು ನಾವೆಲ್ಲರೂ ನಿಲ್ಲಿಸತಕ್ಕದ್ದು; ಹೊರಗೆ ಅಂಗಡಿಗೆ ಅನಿವಾರ್ಯವಾಗಿ ಹೋಗಬೇಕಾಗಿಬಂದರೂ ಸಾಲಿನಲ್ಲಿ ನಿಲ್ಲುವುದು; ಸಾಕಷ್ಟು ದೂರ ನಿಲ್ಲುವುದು... ಹೀಗೆಲ್ಲ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಒಂದು ವಿಷಯವನ್ನು ನಾವಿಲ್ಲಿ ಗಮನಿಸಬಹುದು. ಈ ’ಸೋಷಿಯಲ್‌ ಡಿಸ್ಟೆಂಸ್ಸಿಂಗ್‌‘ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ಆದರೆ ಅದನ್ನು ಇತರರು ಪಾಲಿಸುತ್ತಿಲ್ಲ – ಎಂದು ಗೊಣಗುತ್ತಿರುತ್ತೇವೆಯೇ ಹೊರತು ನಾವು ಅದನ್ನು ಪಾಲಿಸುತ್ತಿದ್ದೇವೆಯೆ, ಇಲ್ಲವೆ – ಎಂಬುದರ ಆತ್ಮಾವಲೋಕನವನ್ನು ಮಾಡಿಕೊಳ್ಳುವುದೇ ಇಲ್ಲ! ಸುಭಾಷಿತ ಹೇಳುತ್ತಿರುವುದು ಇದನ್ನೇ!!

ನಾವು ಜಗತ್ತನ್ನು ಹೇಗೆ ನೋಡುತ್ತೇವೆ? ನಮ್ಮ ಕಣ್ಣುಗಳಿಂದಲೇ ಅಲ್ಲವೆ? ಆದರೆ ಇಲ್ಲೊಂದು ಸಮಸ್ಯೆ ಇದೆ. ಕಣ್ಣಿರುವುದು ಜಗತ್ತನ್ನು ನೋಡುವುದಕ್ಕೆ, ಹೌದು; ಆದರೆ ನಾವು ಅದನ್ನು ಬೇರೆಯವರ ತಪ್ಪುಗಳನ್ನು ನೋಡುವುದಕ್ಕಾಗಿಯೇ ಇದೆ ಎನ್ನುವಂತೆ ಬಳಸಿಕೊಳ್ಳುತ್ತಿರುತ್ತೇವೆ. ಅದೂ ಕಣದಷ್ಟಿರುವ ತಪ್ಪನ್ನೂ ಬೆಟ್ಟವನ್ನು ಕಾಣುವಂತೆ ದೊಡ್ಡದಾಗಿಯೇ ಕಾಣಬಲ್ಲವೆನ್ನಿ! ಇಂಥ ವಿಶೇಷ ’ಗುಣ‘ ಇರುವವರನ್ನು ಸುಭಾಷಿತ ತಕ್ಕ ಗೌರವದಿಂದಲೇ ಕರೆಯುತ್ತಿದೆ: ’ದುರ್ಜನರು‘. ಆಹಾ! ಎಂಥ ಗೌರವ!!

ಹಾಗಾದರೆ ನಾವು ತಪ್ಪನ್ನೇ ಮಾಡುವುದಿಲ್ಲವೆ? ಧಾರಾಳವಾಗಿ ಮಾಡುತ್ತಲೇ ಇರುತ್ತೇವೆ; ಆದರೆ ಅವು ನಮ್ಮ ಗಮನಕ್ಕೆ ಬರುವುದಿಲ್ಲವಷ್ಟೆ! ಇದು ಹೇಗೆಂದರೆ, ಎಲ್ಲವನ್ನೂ ನೋಡುವ ಕಣ್ಣು ತನ್ನನ್ನು ತಾನು ನೋಡಿಕೊಳ್ಳಬಹುದೆ? ಸಾಧ್ಯವಿಲ್ಲವಷ್ಟೆ! ಅಂತೆಯೇ ನಮ್ಮ ತಪ್ಪನ್ನು ನಾವು ’ನೋಡಿಕೊಳ್ಳಲಾರೆವು‘. ಆದರೆ ನಮ್ಮ ತಪ್ಪುಗಳನ್ನು ನಾವು ನೋಡಿಕೊಳ್ಳುವುದೇ ದಿಟವಾದ ಆತ್ಮಸಂಸ್ಕಾರ. ಸರಿ, ಒಪ್ಪೋಣ; ಆದರೆ ನಮ್ಮ ಕಣ್ಣು ನಮಗೆ ಕಾಣುವುದಿಲ್ಲವಲ್ಲ? ಏನು ಮಾಡುವುದು?

ಇದಕ್ಕೆ ಒಂದು ಪರಿಹಾರ ಇದೆ ಎಂದೆನಿಸುತ್ತದೆ. ಕಣ್ಣು ಕಣ್ಣನ್ನು ಕಾಣದು; ಆದರೆ ಕಣ್ಣನ್ನು ಕಾಣಿಸಬಲ್ಲ ಸಲಕರಣೆ ಏನಾದರೊಂದು ಇರಲೇಬೇಕಲ್ಲ! ಹೌದು, ಕನ್ನಡಿ; ಅದು ನಮ್ಮ ಕಣ್ಣನ್ನು ನಮಗೆ ಕಾಣಿಸಿಕೊಡುತ್ತದೆ; ಅಷ್ಟೇಕೆ ನಮ್ಮ ಮುಖವನ್ನೂ ಕಾಣಿಸುತ್ತದೆಯೆನ್ನಿ! ಹೀಗೆ ನಮ್ಮನ್ನು ನಮಗೆ ಕಾಣಿಸಿಕೊಡುವ ’ಕನ್ನಡಿ‘ಯೇ ಜಗತ್ತು. ನಾವು ಜಗತ್ತನ್ನು ನೋಡಬಲ್ಲವರಾದರೆ ಆಗ ನಮ್ಮ ಕಣ್ಣನ್ನೂ ನಾವು ನೋಡಬಲ್ಲೆವು. ಎಂದರೆ, ಜಗತ್ತು ನಮ್ಮ ತಮ್ಮನ್ನು ನಮಗೆ ಕಾಣಿಸುವ ಕನ್ನಡಿ; ನಾವು ಅದನ್ನು ’ನೋಡುವ‘ ಮನಸ್ಸನ್ನು ಸಂಪಾದಿಸಿಕೊಳ್ಳಬೇಕಷ್ಟೆ.

ಜಗತ್ತು ಎನ್ನುವುದನ್ನು ನಾವು ಸ್ವಲ್ಪ ಕಿರಿದಾಗಿಸಿಕೊಂಡು ಸದ್ಯಕ್ಕೆ ’ಸಮಾಜ‘ ಎಂದುಕೊಳ್ಳೋಣ. ಸಮಾಜದಲ್ಲಿ ತಪ್ಪುಗಳಿವೆ; ಇರುವುದು ಸಹಜವೇ! ಆದರೆ ಆ ತಪ್ಪುಗಳಿಗೆ ಕಾರಣ ಯಾರು? ನಮ್ಮ ಕಣ್ಣಿಗೆ ಬೀಳುವ ಒಂದೊಂದು ತಪ್ಪಿನ ಜಾಡನ್ನು ಹುಡುಕುತ್ತಹೋದರೆ ಎಲ್ಲ ತಪ್ಪುಗಳ ಮೂಲದಲ್ಲಿ ನಾವೇ ಇರುತ್ತೇವೆ; ಕೆಲವೊಂದು ತಪ್ಪುಗಳಿಗೆ ಪ್ರತ್ಯಕ್ಷಮೂಲವಾಗಿದ್ದರೆ, ಇನ್ನು ಕೆಲವೊಂದಕ್ಕೆ ನಾವು ಪರೋಕ್ಷಕಾರಣವಾಗಿರುತ್ತೇವೆ. ಸುಭಾಷಿತ ಪರೋಕ್ಷವಾಗಿ ಹೇಳುತ್ತಿರುವುದು ಇದನ್ನೇ, ’ನೀನು ಇತರರ ತಪ್ಪನ್ನು ಗುರುತಿಸಿ, ಅದನ್ನು ಕೂಗಿ ಕೂಗಿ ಹೇಳುವ ಮೊದಲು, ಆ ತಪ್ಪಿಗೆ ನೀನೆಷ್ಟು ಹೊಣೆಗಾರ‘ ಎನ್ನುವುದನ್ನು ತಿಳಿದುಕೋ.

ನಾವು ರಸ್ತೆಗೆ ಎಸೆದ ಹಣ್ಣಿನ ಸಣ್ಣ ಸಿಪ್ಪೆ, ಉಗುಳಿದ ಎಂಜಲು, ಎಸೆದ ಕಸ – ಇವು ಯಾವುದೋ ಒಂದು ದೊಡ್ಡ ಅನಾಹುತಕ್ಕೆ ಕಾರಣವಾಗಿರಬಲ್ಲದು. ನಾವು ಇಂದು ಆಡಿದ ಮಾತು, ಆಡದ ಮಾತು, ನಮ್ಮ ನಿಷ್ಕ್ರಿಯತೆ, ತಪ್ಪಾದ ನಿಲುವು – ಹೀಗೆ ಯಾವುದು ಕೂಡ ಮುಂದೆ ದೊಡ್ಡ ದುರಂತಕ್ಕೆ ಕಾರಣವಾಗಬಲ್ಲದು. ಹೀಗಾಗಿ ನಾವು ಇತರರ ತಪ್ಪನ್ನು ಕುರಿತು ತಲೆ ಕೆಡಿಸಿಕೊಳ್ಳುವ ಮೊದಲು ’ಆ ತಪ್ಪಿಗೆ ನಾವೆಷ್ಟು ಕಾರಣವಾಗಿರಬಹುದು‘ ಎಂದೂ ಆಲೋಚಿಸಬೇಕಾಗುತ್ತದೆ. ಎಲ್ಲರೂ ತಮ್ಮ ತಮ್ಮ ತಪ್ಪುಗಳ ಬಗ್ಗೆ ಎಚ್ಚರಿಕೆಯಿಂದ ಇದ್ದದ್ದೇ ಆದರೆ ಆಗ ಯಾರಿಗೂ ಇತರರ ತಪ್ಪುಗಳ ಬಗ್ಗೆ ಯೋಚಿಸಬೇಕಾದ ಸಂದರ್ಭವೇ ಎದುರಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT