ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ದೇವರು ಯಾರು?

Last Updated 26 ಜೂನ್ 2020, 13:46 IST
ಅಕ್ಷರ ಗಾತ್ರ

ಅಯಮುತ್ತಮೋsಯಮಧಮೋ

ಜಾತ್ಯಾ ರೂಪೇಣ ಸಂಪದಾ ವಯಸಾ ।

ಶ್ಲಾಘ್ಯೋsಶ್ಲಾಘ್ಯೋ ವೇತ್ಥಂ

ನ ವೇತ್ತಿ ಭಗವಾನನುಗ್ರಹಾವಸರೇ ।।

ಇದರ ತಾತ್ಪರ್ಯ ಹೀಗೆ:

‘ಜಾತಿಯಿಂದಾಗಲೀ ರೂಪದಿಂದಾಗಲೀ ಹಣದಿಂದಾಗಲೀ ವಯಸ್ಸಿನಿಂದಾಗಲೀ – ಇವನು ಉತ್ತಮ, ಇವನು ಅಧಮ; ಇವನು ಶ್ರೇಷ್ಠ, ಇವನು ಕನಿಷ್ಠ – ಎಂದು ದಯೆ ತೋರುವ ಸಮಯದಲ್ಲಿ ಭಗವಂತ ವಿಚಾರಿಸುವುದಿಲ್ಲ.‘

ಈ ಸುಭಾಷಿತ ತುಂಬ ಮೌಲಿಕವಾಗಿದೆ; ಇದು ‘ದೇವರು‘ ಯಾರು ಎನ್ನುವುದನ್ನು ಲಕ್ಷಣೀಕರಿಸುತ್ತಿದೆ.

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ ಇಲ್ಲಿ ಆಲಿಸಿ:

ಭೇದಬುದ್ಧಿಯನ್ನು ಕಳೆದುಕೊಂಡವನೇ ದೇವರು. ಏಕೆಂದರೆ ಅವನ ಪಾಲಿಗೆ ಇಡಿಯ ಸೃಷ್ಟಿಯೇ ಒಂದು; ಇದು ಏಕೆಂದರೆ ಸಮಸ್ತ ಸೃಷ್ಟಿಯೇ ಅವನ ಮಗು. ಕೊರೊನಾವೂ ಅವನ ಸೃಷ್ಟಿ; ಅದಕ್ಕೆ ಬಲಿಯಾಗುವರೂ ಅವನ ಸೃಷ್ಟಿ; ಅದಕ್ಕೆ ಲಸಿಕೆಯನ್ನು ಕಂಡುಹಿಡಿಯಬಲ್ಲವನೂ ಅವನ ಸೃಷ್ಟಿ. ಹೀಗಿದ್ದಾಗ ಅವನು ಇವರಲ್ಲಿ ಯಾರನ್ನು ತಾನೆ ಭೇದಬುದ್ಧಿಯಿಂದ ನೋಡುತ್ತಾನೆ?

ಆದರೆ ನಮ್ಮ ವ್ಯವಹಾರ ನಿಂತಿರುವುದೆಲ್ಲ ಭೇದಬುದ್ಧಿಯ ಅಸ್ಥಿಪಂಜರದ ಮೇಲೆಯೇ ಹೌದು. ನಾವು ಸಮಾನತೆಯ ಮಂತ್ರವನ್ನು ಜಪಿಸುತ್ತಿರುತ್ತೇವೆ; ಆದರೆ ಆಚರಣೆಯಲ್ಲಿ ಅಸಮಾನತೆಯನ್ನೇ ಇಟ್ಟುಕೊಂಡಿರುತ್ತೇವೆ. ಈ ಸಮಾನತೆಯ ಅಭಯವನ್ನು, ಪ್ರೀತಿಯ ಅಪ್ಪುಗೆಯನ್ನು, ದಯೆಯ ಧೈರ್ಯವನ್ನು ನಮ್ಮವರಿಗೆ, ನಮ್ಮ ಹತ್ತಿರದವರಿಗೆ ಮಾತ್ರ ದಯಪಾಲಿಸುತ್ತಿರುತ್ತೇವೆ – ’ನನ್ನವರು ಮತ್ತು ಪಾಂಡವರು‘ ಎಂದ ಧೃತರಾಷ್ಟ್ರನಂತೆ!

ನಾವು ಮುಖ್ಯವಾಗಿ ಯಾವ ಯಾವ ಪಾತಳಿಗಳಲ್ಲಿ ಭೇದವನ್ನು ಆಚರಿಸುತ್ತಿರುತ್ತೇವೆ – ಎನ್ನುವುದರ ಪಟ್ಟಿಯನ್ನೇ ಕೊಟ್ಟಿದೆ, ಸುಭಾಷಿತ: ಜಾತಿಯಿಂದ, ರೂಪದಿಂದ, ಹಣದಿಂದ, ವಯಸ್ಸಿನಿಂದ. ಈ ನಾಲ್ಕು ಕಾಲುಗಳ ಮೇಲೆ ನಮ್ಮ ಭೇದಬುದ್ಧಿ ನಿಂತಿರುತ್ತದೆ; ನಾವು ಇತರರ ಬಗ್ಗೆ ನೀಡುವ ತೀರ್ಪಿಗೆ ಇವೇ ಮಾನದಂಡಗಳಾಗಿರುತ್ತವೆ.

ನಮ್ಮ ಜಾತಿಯವನಾದರೆ ಅವನು ಉತ್ತಮ ಆಗಿರಲೇಬೇಕು; ಹೀಗಿರುವಾಗ ಉಳಿದ ಜಾತಿಯವರು ಅಧಮರು ಎಂದು ಬೇರೆ ಹೇಳಬೇಕೆ – ಎನ್ನುವುದು ನಮ್ಮ ಪ್ರಬಲವಾದ ಸಿದ್ಧಾಂತ. ’ನನ್ನ ಜಾತಿಯಲ್ಲಿ ಅವನು ಹುಟ್ಟದಿರುವುದೇ ಅವನ ಅಧಮತ್ವಕ್ಕೆ ದೊಡ್ಡ ಸಾಕ್ಷಿ‘ ಎಂಬ ಮಾನಸಿಕತೆ ನಮ್ಮದಾಗಿರುತ್ತದೆ.

ನಮ್ಮ ಕಣ್ಣಿಗೆ ಚೆಂದ – ಎಂದು ಕಂಡವರನ್ನು ಮನಸ್ಸು ತುಂಬ ಸುಲಭದಲ್ಲಿ ತನ್ನದನ್ನಾಗಿಸಿಕೊಳ್ಳುತ್ತದೆ. ಒಬ್ಬರು ರೂಪದಲ್ಲಿ ಹೆಚ್ಚು, ಆದರೆ ಗುಣದಲ್ಲಿ ಕಡಿಮೆ; ಇನ್ನೊಬ್ಬರು ರೂಪದಲ್ಲಿ ಕಡಿಮೆ, ಗುಣದಲ್ಲಿ ಬಂಗಾರ – ಈ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾದರೆ ನಾವು ರೂಪವನ್ನು ಆರಿಸಿಕೊಳ್ಳುತ್ತೇವೆಯೇ ವಿನಾ ಗುಣವನ್ನಲ್ಲ. ಏಕೆಂದರೆ ಅದು ನಮ್ಮ ದೃಷ್ಟಿದೋಷ. ನಮ್ಮ ಕಣ್ಣು ಹೊರಗಿನ ಸೌಂದರ್ಯವನ್ನು ನೋಡುತ್ತದೆಯೇ ಹೊರತು ಅಂತರಂಗದ ಸೊಗಸನ್ನಲ್ಲ.

ಇನ್ನು ಹಣ. ಇದರ ಬಗ್ಗೆ ಹೇಳುವಂತೆಯೇ ಇಲ್ಲ. ಯಾವ ಕ್ಷಣದಲ್ಲೂ ನಾವು ಹಣದ ಕಡೆಗೇ ಮುಖ ಮಾಡಿರುತ್ತೇವೆ. ದುಡ್ಡಿದ್ದವನೇ ನಮ್ಮ ಪಾಲಿಗೆ ದೊಡ್ಡಪ್ಪ! ಈ ದುಡ್ಡಿದವನು ಏನು ಮಾಡಿದರೂ ಸರಿಯಾಗಿಯೇ ಇರುತ್ತದೆ – ಎಂಬ ನಿತ್ಯತೀರ್ಪು ನಮ್ಮದು. ಹಲವು ಸಲ ಜಾತಿ, ರೂಪಗಳ ಮೋಹವನ್ನೂ ಮೀರಿ ದುಡ್ಡಿನ ಆಕರ್ಷಣೆ ಕೆಲಸಮಾಡುತ್ತದೆ ಎಂದರೆ ಅದರ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದು.

ಎಲ್ಲರೂ ಕೊನೆಯಲ್ಲಿ ಬಳಸುವ ಅಸ್ತ್ರ ವಯಸ್ಸು. ’ಅವನ ವಯಸ್ಸಿಗಾದರೂ ಗೌರವ ಬೇಡ್ವಾ‘ ಎಂಬ ತರ್ಕಕ್ಕೆ ಒಂದಲ್ಲ ಒಂದು ಸಂದರ್ಭದಲ್ಲಿ ಇಲ್ಲ ನಾವು ಬಲಿಯಾಗಿರುತ್ತೇವೆ, ಅಥವಾ ನಾವೇ ಯಾರನ್ನಾದರೂ ಬಲಿ ತೆಗೆದುಕೊಂಡಿರುತ್ತೇವೆ! ’ಅವನು ತಪ್ಪು ಮಾಡಿದ ನಿಜ, ಆದರೆ ಅವನ ವಯಸ್ಸು ನೋಡಿ ಸುಮ್ಮನಾದೆ‘ – ಈ ಧೋರಣೆಯನ್ನೂ ಧಾರಾಳವಾಗಿಯೇ ಎಷ್ಟೋ ಸಲ ಚಲಾಯಿಸಿರುತ್ತೇವೆ.

ಒಟ್ಟಿನಲ್ಲಿ ಹೇಳುವಾದಾರೆ, ನಾವು ಯಾರಿಗಾದರೂ ಸಹಾಯವನ್ನೋ ಸಹಕಾರವನ್ನೋ ನ್ಯಾಯವನ್ನೋ ನೀಡುವಾಗ ನಮ್ಮಲ್ಲಿ ಎಚ್ಚರವಾಗಿರುವ ಬುದ್ಧಿಯೆಂದರೆ ಅದು ಭೇದಬುದ್ಧಿಯೇ ಆಗಿರುತ್ತದೆ.

ಸುಭಾಷಿತ ಹೇಳುತ್ತಿದೆ: ದೇವರು ಯಾರ ಬಗ್ಗೆಯೂ ಯಾವುದೇ ವಿಧದ ಭೇದಗಳ ದೆಸೆಯಿಂದ ’ಅವನು ಅಧಮ, ಇವನು ಉತ್ತಮ‘ ಎಂದು ವ್ಯವಹರಿಸುವುದಿಲ್ಲ; ಅದೂ ದಯಾಗುಣ. ನಾವು ’ದಯೆ‘ ಎನ್ನುವುದನ್ನೂ ಸೀಮಿತಾರ್ಥದಲ್ಲಿಯೇ ಗ್ರಹಿಸುತ್ತೇವೆಯೆನ್ನಿ! ದೇವರ ದಯೆ ಯಾವ ರೂಪದಲ್ಲಿ ಯಾವಾಗ ಒದಗುತ್ತದೆ ಎಂದು ಊಹಿಸುವುದು ಕೂಡ ಕಷ್ಟ.

ಈ ಸುಭಾಷಿತವನ್ನು ಇನ್ನೂ ಒಂದು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು: ’ಜಾತಿ, ರೂಪ, ಹಣ, ವಯಸ್ಸಿನ ಲೆಕ್ಕಾಚಾರದಿಂದ ಭೇದಮಾಡದೆ ಎಲ್ಲ ದೀನರನ್ನೂ ಸಮಾನವಾಗಿ ನೋಡಿ, ಅವರಿಗೆ ಆಶ್ರಯವನ್ನು ಒದಗಿಸಬಲ್ಲವನೇ ದೇವರು.‘ ಈ ದೇವರು ಮನುಷ್ಯರೂಪದಲ್ಲೂ ಇರಬಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT