ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಎಲ್ಲಿ ಇರಬೇಕು?

Last Updated 11 ಜುಲೈ 2021, 4:11 IST
ಅಕ್ಷರ ಗಾತ್ರ

ಯಸ್ಮಿನ್‌ ದೇಶೇ ನ ಸಂಮಾನೋ ನ ಪ್ರೀತಿರ್ನ ಚ ಬಾಂಧವಾಃ ।

ನ ಚ ವಿದ್ಯಾಗಮಃ ಕಶ್ಚಿತ್‌ ನ ತತ್ರ ದಿವಸಂ ವಸೇತ್‌ ।।

ಇದರ ತಾತ್ಪರ್ಯ ಹೀಗೆ:

‘ಯಾವ ಸ್ಥಳದಲ್ಲಿ ಸಂಮಾನ, ಪ್ರೀತಿ, ಬಂಧುಗಳು ಮತ್ತು ವಿದ್ಯೆಯ ಪ್ರಾಪ್ತಿಗೆ ಅವಕಾಶ ಇಲ್ಲವೋ ಅಲ್ಲಿ ಒಂದು ದಿನವೂ ಇರಬಾರದು.’

ಮನುಷ್ಯ ಮನುಷ್ಯನಾಗಿರುವುದೇ ಕೆಲವೊಂದು ವಿಶೇಷ ಗುಣಗಳಿಂದ. ಈ ಗುಣಗಳೇ ಇಲ್ಲದಿದ್ದರೆ ಅವನು ಕೂಡ ಆಗ ಯಾವುದೋ ಒಂದು ಪ್ರಾಣಿಗೆ ಸಮ ಅಷ್ಟೆ. ಹೀಗಾಗಿ ನಮ್ಮಲ್ಲಿರುವ ಮನುಷ್ಯತ್ವವು ಅರಳಲು ಅವಕಾಶ ಇಲ್ಲದ ಕಡೆ ನಾವು ಇರಲೇಬಾರದು ಎಂದು ಸುಭಾಷಿತ ಹೇಳುತ್ತಿದೆ.

ಸಂಮಾನ, ಪ್ರೀತಿ, ಬಂಧುಗಳು ಮತ್ತು ವಿದ್ಯೆ – ಇವು ನಮ್ಮ ವ್ಯಕ್ತಿತ್ವವನ್ನೂ ಸಂತೋಷವನ್ನೂ ಹೆಚ್ಚಿಸುವ ಸಂಗತಿಗಳು ಎಂದು ಸುಭಾಷಿತ ಗುರುತಿಸಿದೆ.

ಸಂಮಾನ ಎಂದರೆ ಗೌರವ, ಕೀರ್ತಿ, ಪ್ರಶಂಸೆ. ಇವು ನಮ್ಮ ಕೆಲಸದ ಬಗ್ಗೆ ಅಭಿಮಾನವನ್ನು ಹುಟ್ಟಿಸುತ್ತವೆ. ಈ ಅಭಿಮಾನವೇ ಕೆಲಸದಲ್ಲಿ ತೊಡಗುವಂತೆ ಪ್ರಚೋದಿಸುತ್ತದೆ.

ಪ್ರೀತಿಗಿರುವ ಶಕ್ತಿಯ ಬಗ್ಗೆ ನಮಗೆ ತಿಳಿದೇ ಇದೆ. ಇದು ನಮ್ಮಿಂದ ಎಂಥ ಕೆಲಸವನ್ನೂ ಮಾಡಿಸಬಲ್ಲದು. ನಮಗೆ ಅಂತರಂಗಶಕ್ತಿಯನ್ನು ಕೊಡುವುದೇ ಪ್ರೀತಿ. ಪ್ರೀತಿ ಇಲ್ಲದಿದ್ದರೆ ಶೂನ್ಯಭಾವ ನಮ್ಮನ್ನು ಆವರಿಸುತ್ತಿದೆ. ಪ್ರೀತಿ ಕ್ಷಣಿಕವಾದ ಆಕರ್ಷಣೆ ಅಲ್ಲ, ಅದು ಶಾಶ್ವತವಾದ ಭರವಸೆ.

ನಮ್ಮ ಸುಖ–ದುಃಖಗಳನ್ನು ಹಂಚಿಕೊಳ್ಳಲು ನಾಲ್ಕು ಜನರ ಸಂಪರ್ಕ ನಮಗೆ ಬೇಕೇ ಬೇಕು. ಇದು ಸಿಗದೆಹೋದರೆ ಒಂಟಿತನ ನಮ್ಮನ್ನು ಆವರಿಸುತ್ತದೆ. ಆಗ ಬದುಕು ತುಂಬ ಯಾತನಮಯವಾಗುತ್ತದೆ.

ನಮಗೆ ಒಳಿತು–ಕೆಡುಕುಗಳನ್ನು ಪರಿಚಯಿಸಿ, ನಮ್ಮ ಬುದ್ಧಿಗೆ ಸ್ಥಿರತೆಯನ್ನು ಒದಗಿಸುವುದೇ ವಿದ್ಯೆ. ನಮ್ಮ ಜೀವನಕ್ಕೆ ಬೆಳಕನ್ನು ನೀಡುವುದು ಕೂಡ ವಿದ್ಯೆಯೇ. ನಮ್ಮ ಜೀವನ ಯಾವ ಕಡೆಗೆ ಸಾಗಿದರೆ ಸುಗಮವಾಗುತ್ತದೆ ಎಂಬ ತಿಳಿವಳಿಕೆ ದಕ್ಕುವುದು ಕೂಡ ವಿದ್ಯೆಯಿಂದಲೇ. ಇಂಥ ನಾವು ವಿದ್ಯೆಯನ್ನು ಕಲಿಯದಿದ್ದರೆ, ಕಲಿಯುವ ಅವಕಾಶ ಒದಗದಿದ್ದರೆ ನಮ್ಮ ಜೀವನ ಅರ್ಥವಂತಿಕೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಹೀಗಾಗಿಯೇ ಸುಭಾಷಿತ ಹೇಳುತ್ತಿದೆ: ‘ಯಾವ ಸ್ಥಳದಲ್ಲಿ ಸಂಮಾನ, ಪ್ರೀತಿ, ಬಂಧುಗಳು ಮತ್ತು ವಿದ್ಯೆಯ ಪ್ರಾಪ್ತಿಗೆ ಅವಕಾಶ ಇಲ್ಲವೋ ಅಲ್ಲಿ ಒಂದು ದಿನವೂ ಇರಬಾರದು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT