ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದೈವಗತಿ

Last Updated 13 ಫೆಬ್ರುವರಿ 2021, 1:12 IST
ಅಕ್ಷರ ಗಾತ್ರ

ನೈವಾರ್ಥೇನ ನ ಕಾಮೇನ ವಿಕ್ರಮೇಣ ನ ಚಾಜ್ಞಯಾ ।

ಶಕ್ಯಾ ದೈವಗತಿರ್ಲೋಕೇ ನಿವರ್ತಯಿತುಮುದ್ಯತಾ ।।

ಇದರ ತಾತ್ಪರ್ಯ ಹೀಗೆ:

‘ಲೋಕದಲ್ಲಿ ಪ್ರವರ್ತಿಸಲು ತೊಡಗಿರುವ ದೈವಗತಿಯನ್ನು ಹಣದಿಂದಾಗಲೀ ಕಾಮದಿಂದಾಗಲೀ ಪರಾಕ್ರಮದಿಂದಾಗಲೀ ಅಪ್ಪಣೆಯಿಂದಾಗಲೀ ತಪ್ಪಿಸಲು ಸಾಧ್ಯವಿಲ್ಲ.’

ಕೆಲವೊಂದು ಘಟನೆಗಳಿಗೆ ಕಾರಣ ಏನೆಂದು ನಮಗೆ ಗೊತ್ತಾಗುವುದಿಲ್ಲ; ಅವನ್ನು ನಡೆಯಲಾರದಂತೆ ನಿಲ್ಲಿಸಲೂ ಸಾಧ್ಯವಾಗುವುದಿಲ್ಲ. ಅಂಥವುಗಳ ಬಗ್ಗೆ ಸುಭಾಷಿತ ಇಲ್ಲಿ ಮಾತನಾಡುತ್ತಿದೆ.

ಕೆಲವೊಂದು ಸಂಗತಿಗಳು ನಾವು ಎಷ್ಟು ಬೇಡ ಎಂದು ಬೇಡಿಕೊಂಡರೂ ನಡೆದೇ ನಡೆಯುತ್ತವೆ; ಕೆಲವೊಂದನ್ನು ಬೇಕು ಎಂದು ಎಷ್ಟು ಪ್ರಾರ್ಥಿಸಿಕೊಂಡರೂ ಅವು ನಡೆಯುವುದೇ ಇಲ್ಲ. ಇದಕ್ಕೆ ಕಾರಣ ಏನು? ಹೇಳುವುದು ಕಷ್ಟ. ಇಂಥ ಸಂಗತಿಗಳನ್ನೇ ಬಹುಶಃ ನಮ್ಮವರು ಅದೃಷ್ಟ, ದೈವಗತಿ – ಎಂದು ಕರೆದಿರಬಹುದೆ ಎನಿಸುತ್ತದೆ. ನಮ್ಮ ಬುದ್ಧಿಶಕ್ತಿಗೆ ಎಟುಕದ ವಿದ್ಯಮಾನಗಳಿಗೆ ಏನು ಕಾರಣ ಕೊಡುವುದು? ತೇನ ವಿನಾ ತೃಣಮಪಿ ನ ಚಲತಿ – ಅವನು, ಎಂದರೆ ದೇವರು ಇಲ್ಲದೆ, ಹುಲ್ಲುಕಡ್ಡಿಯೂ ಅಲುಗಾಡದು – ಎಂಬ ಮಾತಿನ ಧ್ವನಿಯೇ ‘ದೈವಗತಿ‘ ಕಲ್ಪನೆಯಲ್ಲಿರುವುದು ಎನಿಸುತ್ತದೆ. ಜಗತ್ತಿನ ಎಲ್ಲ ಆಗುಹೋಗುಗಳಿಗೂ ದೇವರೇ ಕಾರಣ ಎಂಬ ನಂಬಿಕೆ ಇಲ್ಲಿರುವಂಥದ್ದು.

ಜಗತ್ತಿನ ಎಲ್ಲ ಆಗುಹೋಗುಗಳ ಹಿಂದೆ ದೇವರು ಇದ್ದಾನೆ ಎಂಬುದನ್ನು ಕೆಲವರು ಒಪ್ಪಬಹುದು, ಕೆಲವರು ಒಪ್ಪದಿರಬಹುದು. ಇಲ್ಲಿ ಪ್ರಶ್ನೆ ಇರುವುದು ಅದಲ್ಲ; ಕೆಲವೊಂದು ವಿದ್ಯಮಾನಗಳನ್ನು ತಪ್ಪಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು:ದೈವಗತಿಯನ್ನು ಹಣದಿಂದಾಗಲೀ ಕಾಮದಿಂದಾಗಲೀ ಪರಾಕ್ರಮದಿಂದಾಗಲೀ ಅಪ್ಪಣೆಯಿಂದಾಗಲೀ ತಪ್ಪಿಸಲು ಸಾಧ್ಯವಿಲ್ಲ.

ಜೀವನದಲ್ಲಿ ನಾವು ಯಾವುದಾದರೊಂದು ವಿದ್ಯಮಾನವನ್ನು ನಿಯಂತ್ರಿಸಲು ಬಳಸಿಕೊಳ್ಳುವ ದಾರಿಗಳು ಎಂದರೆ ಹಣ, ಬಯಕೆ, ಬಲ ಮತ್ತು ಅಧಿಕಾರ. ಆದರೆ ಇವನ್ನು ಬಳಸಿಕೊಂಡೂ ಕೆಲವೊಂದನ್ನು ವಿದ್ಯಮಾನಗಳನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗದು. ಇದು ನಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ.

ಹೀಗೆಂದು ದೈವಗತಿಗೋ ಅದೃಷ್ಟಕ್ಕೋ ನಾವು ಹೆದರಬೇಕು – ಎಂಬುದು ಇಲ್ಲಿರುವ ಆಶಯವಲ್ಲ. ಎಲ್ಲವೂ ನಮ್ಮ ಎಣಿಕೆಯಂತೆ ನಡೆಯದು – ಎಂಬ ವಾಸ್ತವವನ್ನು ನಾವು ಒಪ್ಪಿಕೊಂಡರೆ ಆಗ ಜೀವನದ ಗತಿ ಹಗುರವಾಗುತ್ತದೆ; ಅನವಶ್ಯಕವಾದ ಚಿಂತೆಗೆ ಒಳಗಾಗಬೇಕಾದ ಆವಶ್ಯಕತೆ ಇರದು ಎಂಬ ವಿವೇಕ ಇಲ್ಲಿರುವುದು.

ಇನ್ನೊಂದು ಸುಭಾಷಿತವನ್ನು ನೋಡಿ:

ನ ಹಿ ಭವತಿ ಯನ್ನ ಭಾವ್ಯಂ ಭವತಿ ಚ ಭಾವ್ಯಂ ವಿನಾsಪಿ ಯತ್ನೇನ ।

ಕರತಗತಮಪಿ ನಶ್ಯತಿ ಯಸ್ಯ ತು ಭವಿತವ್ಯತಾ ನಾಸ್ತಿ ।।

’ಯಾವುದು ಆಗುವುದಿಲ್ಲವೋ ಅದು ಆಗುವುದಿಲ್ಲ; ಯಾವುದು ಆಗಬೇಕೋ ಅದು ಪ್ರಯತ್ನಮಾಡದಿದ್ದರೂ ಆಗೇ ಆಗುತ್ತದೆ. ಯಾರಿಗೆ ಆಗಬೇಕೆಂದು ಅದೃಷ್ಟವಿಲ್ಲವೋ ಅವನ ಕೈಯಲ್ಲಿರುವುದು ಕೂಡ ನಾಶವಾಗುತ್ತದೆ.’

ಇದರ ಆಶಯ ಎಂದರೆ – ಜೀವನದಲ್ಲಿ ಚಿಂತೆಯನ್ನು ಬಿಡಬೇಕು; ಚಿಂತನೆಯನ್ನು ರೂಢಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT