ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ಆಶ್ರಯ

Last Updated 27 ಸೆಪ್ಟೆಂಬರ್ 2021, 6:14 IST
ಅಕ್ಷರ ಗಾತ್ರ

ಸೇವಿತವ್ಯೋ ಮಹಾವೃಕ್ಷಃ ಫಲಚ್ಛಾಯಾಸಮನ್ವಿತಃ ।

ಯದಿ ದೈವಾತ್ಫಲಂ ನಾಸ್ತಿ ಛಾಯಾ ಕೇನ ನಿವಾರ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಹಣ್ಣು, ನೆರಳು – ಇವುಗಳಿಂದ ಕೂಡಿದ ದೊಡ್ಡ ಮರವನ್ನೇ ಆಶ್ರಯಿಸಬೇಕು. ದುರದೃಷ್ಟವಶಾತ್‌ ಆ ಮರಗಳಿಂದ ಹಣ್ಣು ಇಲ್ಲದಿದ್ದರೂ ನೆರಳನ್ನು ಯಾರೂ ತಪ್ಪಿಸುವುದಿಲ್ಲವಷ್ಟೆ?’

ನಾವು ಆಶ್ರಯಿಸಿದರೆ ದೊಡ್ಡವರನ್ನೇ ಆಶ್ರಯಿಸಬೇಕು; ನಮಗೆ ಅದರಿಂದ ಸಹಾಯ ಖಂಡಿತ ದೊರೆಯುತ್ತದೆ ಎಂಬುದು ಈ ಸುಭಾಷಿತದ ಆಶಯ. ಇದನ್ನು ನಿರೂಪಿಸಲು ಅದೊಂದು ಉದಾಹರಣೆಯನ್ನೂ ನೀಡಿದೆ.

ನಾವು ಆಶ್ರಯಿಸಬೇಕಾದ್ದು ದೊಡ್ಡ ಮರವನ್ನು. ಅದರಲ್ಲಿ ಹಣ್ಣುಗಳು ಇರಬೇಕು; ನೆರಳನ್ನು ಸಮೃದ್ಧವಾಗಿ ಕೊಡುವಷ್ಟು ದೊಡ್ಡದಾಗಿರಬೇಕು. ಇಂಥ ಮರವನ್ನು ಆಶ್ರಯಿಸಿದಾಗ ನಮಗೆ ಒಂದು ವೇಳೆ ಹಣ್ಣು ಸಿಗದೆ ಹೋಗಬಹುದು; ಆದರೆ ನೆರಳಂತೂ ಖಂಡಿತ ಸಿಕ್ಕೇ ಸಿಗುತ್ತದೆ. ಹೀಗೆಯೇ ಜೀವನದಲ್ಲಿ ನಾವು ಆರಿಸಿಕೊಳ್ಳುವ ಪ್ರತಿಯೊಂದು ವಸ್ತುವೂ ವಿವರವೂ ದೊಡ್ಡದಾಗಿರಬೇಕು, ಘನವಾಗಿರಬೇಕು ಎಂಬುದು ಸುಭಾಷಿತದ ಇಂಗಿತ.

ಉದಾಹರಣೆಗೆ, ನಾವು ಓದಲು ಆರಿಸಿಕೊಳ್ಳುವ ಪುಸ್ತಕವನ್ನೇ ನೋಡಬಹುದು. ಯಾವುದೋ ಮೂರನೆಯ ದರ್ಜೆಯ ಪುಸ್ತಕವನ್ನು ಓದಿ, ಈ ಕಡೆ ಸಂತೋಷವೂ ಇಲ್ಲ, ಆ ಕಡೆ ಜ್ಞಾನಸಂಪಾದನೆಯೂ ಇಲ್ಲ ಎಂಬಂಥ ಪರಿಸ್ಥಿತಿಯನ್ನು ತಂದುಕೊಳ್ಳಬಾರದು. ರಾಮಾಯಣ–ಮಹಾಭಾರತಗಳನ್ನೋ ಕಾಳಿದಾಸ–ಕುಮಾರವ್ಯಾಸರನ್ನೋ ಶೇಕ್ಸ್‌ಪಿಯರ್–ಪಂಪರನ್ನೋ ಓದಲು ಆರಿಸಿಕೊಂಡರೆ ಒಂದಲ್ಲ ಒಂದು ವಿಧದಲ್ಲಿ ಆ ಓದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ನೆರವಾಗುತ್ತದೆ.

ಹೀಗೆಯೇ ನಾವು ಸ್ನೇಹವನ್ನು ಸಂಪಾದಿಸಬೇಕಾದುದು ಕೂಡ ಎತ್ತರದ ವ್ಯಕ್ತಿಗಳನ್ನೇ. ಅವರ ಸಾಮೀಪ್ಯ ಖಂಡಿತವಾಗಿಯೂ ನಮ್ಮ ಜೀವನಕ್ಕೆ ಪೂರಕವಾಗಿ ಒದಗುತ್ತದೆ. ನಾವು ಆರಿಸಿಕೊಳ್ಳುವಾಗಲೇ ಕುಬ್ಜರನ್ನು ಆರಿಸಿಕೊಂಡರೆ ನಾವೂ ಕುಬ್ಜರೇ ಆಗುತ್ತೇವೆ.

ಮಹತ್ತಾದುದರಲ್ಲಿಯೇ ಮನಸ್ಸನ್ನು ತೊಡಗಿಸಿ ಎಂದು ಉಪನಿಷತ್ತು ಕೂಡ ಘೋಷಿಸಿದೆ. ಇಂಥ ಆಯ್ಕೆಯಲ್ಲಿಯೇ ನಿಜವಾದ ಸುಖವೂ ಇರುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT