ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಧರ್ಮ, ಅರ್ಥ, ಕಾಮ

Last Updated 22 ಜುಲೈ 2021, 4:34 IST
ಅಕ್ಷರ ಗಾತ್ರ

ಧರ್ಮೋ ರಾಜನ್‌ ಗುಣಶ್ರೇಷ್ಠೋ ಮಧ್ಯಗೋ ಹ್ಯರ್ಥ ಉಚ್ಯತೇ ।

ಕಾಮೋ ಯವೀಯಾನಿತಿ ಚ ಪ್ರವದಂತಿ ಮನೀಷಿಣಃ ।।

ಇದರ ತಾತ್ಪರ್ಯ ಹೀಗೆ:

‘ಗುಣಗಳಲ್ಲಿ ಧರ್ಮವು ಶ್ರೇಷ್ಠವಾದದ್ದು. ಹಣವನ್ನು ಸಂಪಾದಿಸುವುದು ಮಧ್ಯಮವಾದದ್ದು. ಕಾಮ–ಭೋಗ ಕೊನೆಯದು. ಹೀಗೆಂದು ತಿಳಿದವರು ಹೇಳುತ್ತಾರೆ.’

ಇದು ಮಹಾಭಾರತದ ಮಾತು. ಭೀಷ್ಮನು ಯುಧಿಷ್ಠಿರನಿಗೆ ಹೇಳಿದ್ದು.

ನಮ್ಮ ಜೀವನದಲ್ಲಿ ಯಾವುದಕ್ಕೆ ಎಷ್ಟು ಬೆಲೆ, ಯಾವುದರ ಸ್ಥಾನ ಎಲ್ಲಿ – ಎಂಬುದನ್ನು ಗೊತ್ತುಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ಜೀವನ ಏರುಪೇರಾದೀತು ಎಂಬುದು ಈ ಸುಭಾಷಿತದ ಇಂಗಿತ.

ನಮ್ಮ ಜೀವನದಲ್ಲಿ ಸರಿ–ತಪ್ಪುಗಳ ವಿಮರ್ಶೆ ನಿರಂತರವಾಗಿ ನಡೆಯುತ್ತಲೇ ಇರಬೇಕು. ಯಾವ ದಾರಿಯಲ್ಲಿ ಹೋಗಬೇಕು ಎಂಬ ವಿವೇಚನೆಯೂ ನಡೆಯುತ್ತಿರಬೇಕು. ಹೀಗೆ ನಮ್ಮ ಸ್ವಚ್ಛಂದವನ್ನು ನಿಯಂತ್ರಿಸಿ, ನಮಗೆ ಸರಿಯಾದ ದಿಕ್ಕನ್ನು ತೋರಿಸುವುದೇ ಧರ್ಮ. ಇದು ನಮ್ಮ ಜೀವನದ ಎಲ್ಲ ಆಗುಹೋಗುಗಳಲ್ಲೂ ಅಡಿಪಾಯವಾಗಿರಬೇಕು.

ಹಣವನ್ನು ಸಂಪಾದಿಸಲೇ ಬೇಕು. ಹಣ ಇಲ್ಲದಿದ್ದರೆ ಜೀವನ ನಡೆಯದು, ನಿಜ. ಇದು ಪುರುಷಾರ್ಥಗಳಲ್ಲಿ ಒಂದು; ಅರ್ಥ ಎಂದು ಇದರ ಹೆಸರು. ಇದು ಪುರುಷಾರ್ಥವೇನೋ ಹೌದು. ಆದರೆ ಇದು ಮೊದಲ ಪುರುಷಾರ್ಥವಲ್ಲ. ಎಂದರೆ ಹಣ ನಮ್ಮ ಜೀವನದ ಎರಡನೆಯ ಆದ್ಯತೆಯಾಗಿರಬೇಕು ಎನ್ನುತ್ತಿದೆ ಸುಭಾಷಿತ.

ನಮಗೆಲ್ಲರಿಗೂ ಆಸೆಗಳು ಸಹಜ. ಇವುಗಳನ್ನು ಪೂರೈಸಿಕೊಳ್ಳುವುದು ಕೂಡ ತಪ್ಪಲ್ಲ. ಆದರೆ ಇದರ ಸ್ಥಾನ ಧರ್ಮ, ಅರ್ಥಗಳ ನಂತರದ್ದು. ಈ ಆಸೆಗಳ ಸಮೂಹವನ್ನೇ ಕಾಮ ಎಂದು ಕರೆದಿರುವುದು.

ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳಬೇಕಾದ್ದು ಮೊದಲನೆಯ ಕರ್ತವ್ಯ. ಬಳಿಕ ಸರಿಯಾದ ದಾರಿಯಲ್ಲಿ ನಡೆಯಲು ಬೇಕಾದ ಸಲಕರಣೆಗಳನ್ನು ಸಂಪಾದಿಸುವುದು ಎರಡನೆಯ ಕೆಲಸ. ಹೀಗೆ ಧರ್ಮಬದ್ಧವಾಗಿ ಸಂಪಾದಿಸಿದ ಸಂಪತ್ತಿನಿಂದ ಸುಖವನ್ನು ಪಡೆಯವುದು ನಮ್ಮ ಜೀವನದ ಗುರಿಯಾಗಬೇಕು. ಈ ಮೂರು ಸಾಧನಗಳನ್ನೇ ತ್ರಿವರ್ಗ ಎಂದು ಶಾಸ್ತ್ರಗಳು ಘೋಷಿಸಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT