ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಯೋಚಿಸಿ ಕೆಲಸ ಮಾಡಿ

ಅಕ್ಷರ ಗಾತ್ರ

ಸುಹೃದ್ಭಿರಾಪ್ತೈರಸಕೃದ್ವಿಚಾರಿತಂ

ಸ್ವಯಂ ಚ ಬುದ್ಧ್ಯಾ ಪ್ರವಿಚಾರಿತಾಶ್ರಯಮ್‌ ।

ಕರೋತಿ ಕಾರ್ಯಂ ಖಲು ಯಃ ಸ ಬುದ್ಧಿಮಾನ್‌

ಸ ಏವ ಲಕ್ಷ್ಮ್ಯಾ ಯಶಸಾಂ ಚ ಭಾಜನಮ್‌ ।।

ಇದರ ತಾತ್ಪರ್ಯ ಹೀಗೆ:

‘ತನ್ನ ಆಪ್ತಮಿತ್ರರು ಅನೇಕ ಸಲ ವಿಚಾರಮಾಡಿರುವಂಥದೂ, ತಾನು ಕೂಡ ತನ್ನ ಸ್ವಂತ ಬುದ್ಧಿಯಿಂದ ಚೆನ್ನಾಗಿ ಯೋಚಿಸಿರುವಂಥದೂ ಆದ ಕೆಲಸವನ್ನು ಬುದ್ಧಿವಂತನಾದ ಯಾವನು ಮಾಡುತ್ತಾನೋ ಅವನು ಸಂಪತ್ತಿಗೂ ಯಶಸ್ಸಿಗೂ ಪಾತ್ರನಾಗುತ್ತಾನೆ.’

ನಾವು ನಿತ್ಯವೂ ಎಷ್ಟೋ ಕೆಲಸಗಳನ್ನು ಮಾಡುತ್ತಿರುತ್ತೇವೆ. ಈ ಕೆಲಸಗಳ ಫಲವಾಗಿಯೋ ಸುಖವನ್ನೋ ದುಃಖವನ್ನೋ ಲಾಭವನ್ನೋ ನಷ್ಟವನ್ನೋ ಅನುಭವಿಸುತ್ತಿರುತ್ತೇವೆ. ಆದುದರಿಂದಲೇ ನಾವು ಮಾಡುವ ಕೆಲಸವನ್ನು ತುಂಬ ಎಚ್ಚರಿಕೆಯಿಂದ ಮಾಡಬೇಕು, ಅಲ್ಲವೆ? ಇದನ್ನೇ ಸುಭಾಷಿತ ಹೇಳುತ್ತಿರುವುದು. ಚೆನ್ನಾಗಿ ವಿಚಾರಮಾಡಿ, ಅದು ಸರಿಯಾಗಿ ಎಂದು ತೀರ್ಮಾನವನ್ನು ಮಾಡಿ ಎಂದು ಅದು ಹೇಳುತ್ತಿದೆ. ಈ ವಿಚಾರ ಕೂಡ ಕೇವಲ ಯಾರೋ ಒಬ್ಬರು ಮಾಡಿರುವಂಥದ್ದು ಅಲ್ಲ, ತನ್ನ ಆಪ್ತಸ್ನೇಹಿತರೂ ಮಾಡಿರಬೇಕು, ತಾನೂ ಮಾಡಿರಬೇಕು. ಎಂದರೆ ಒಂದು ಕೆಲಸವನ್ನು ನಾವು ಒಂದು ಸಲ ಯೋಚಿಸಿದರೆ ಸಾಲುವುದಿಲ್ಲ, ಹತ್ತು ಸಲ ಯೋಚಿಸಬೇಕು; ಆ ಬಳಿಕವಷ್ಟೆ ಅದನ್ನು ಮಾಡಬೇಕು. ತಾನೊಬ್ಬನೇ ಯೋಚಿಸಿದರೆ ಒಂದೇ ವಿಧದಲ್ಲಿ ಯೋಚಿಸಲಷ್ಟೆ ಸಾಧ್ಯವಾಗಬಹುದು; ತನ್ನ ಆಪ್ತರೂ ಯೋಚಿಸಿದರೆ ಅವರು ಇನ್ನೂ ನಾಲ್ಕು ಆಯಾಮಾಗಳಲ್ಲಿ ಯೋಚಿಸಬಲ್ಲರು. ಅದಕ್ಕಾಗಿಯೇ ಆಪ್ತರೂ ಯೋಚಿಸಿರುವಂಥ ಕೆಲಸವನ್ನು ಮಾಡಬೇಕು ಎಂದು ಹೇಳುತ್ತಿರುವುದು. ಯಾವುದೇ ಕೆಲಸವನ್ನು ದುಡುಕಿನಿಂದ ಮಾಡಿದರೆ ಅದರಿಂದ ಅನಾಹುತಗಳು ಆಗುವುದು ನಿಶ್ಚಯ ಎಂಬುದು ನಮ್ಮ ಗಮನಕ್ಕೆ ಬಂದೇ ಇರುತ್ತದೆ. ಆದರೂ ನಾವು ದುಡುಕಿನಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ. ಅದು ನಿಲ್ಲಬೇಕು; ಚೆನ್ನಾಗಿ ಯೋಚಿಸಿ, ಸಾಧಕ–ಬಾಧಕಗಳನ್ನು ಗಮನಿಸಿಕೊಂಡು, ಅನಂತರ ಆ ಕೆಲಸದಲ್ಲಿ ಮುಂದುವರಿಯುವುದೇ ವಿವೇಕದ ಲಕ್ಷಣ.

ಇನ್ನೊಂದು ಸುಭಾಷಿತ ಏನು ಹೇಳುತ್ತಿದೆ ನೋಡಿ:

ಸುಜೀರ್ಣಮನ್ನಂ ಸುವಿಚಕ್ಷಣಃ ಸುತಃ

ಸುಶಾಸಿತಾಂ ಸ್ತ್ರೀ ನೃಪತಿಃ ಸುಸೇವಿತಃ ।

ಸುಚಿಂತ್ಯ ಚೋಕ್ತಂ ಸುವಿಚಾರ್ಯ ಯತ್ಕೃತಂ

ಸುದೀರ್ಘಕಾಲೇ ನ ಹಿ ಯಾತಿ ವಿಕ್ರಿಯಾಮ್‌ ।।

’ಚೆನ್ನಾಗಿ ಜೀರ್ಣವಾದ ಅನ್ನ, ಒಳ್ಳೆಯ ಸಾಮರ್ಥ್ಯವುಳ್ಳ ಮಗ, ಚೆನ್ನಾದ ರೀತಿಯಲ್ಲಿ ನಡೆದುಕೊಳ್ಳುವ ಹೆಣ್ಣು, ಚೆನ್ನಾಗಿ ಸೇವಿಸಲ್ಪಟ್ಟ ರಾಜ, ಚೆನ್ನಾಗಿ ಯೋಚಿಸಲ್ಪಟ್ಟ ಮಾತು, ಚೆನ್ನಾಗಿ ವಿಚಾರಮಾಡಿ ಮಾಡಿದ ಕೆಲಸ – ಇವು ಬಹಳ ಕಾಲವಾದಮೇಲೂ ಬದಲಾವಣೆಯನ್ನು ಹೊಂದುವುದಿಲ್ಲ.’

ಚೆನ್ನಾಗಿ ವಿಚಾರಮಾಡಿ ಮಾಡಿದ ಕೆಲಸ ಬಹಳ ಕಾಲವಾದಮೇಲೂ ಇರುತ್ತದೆ ಎಂದರೆ ಅದು ಶಾಶ್ವತವಾಗಿರುತ್ತದೆ ಎಂದು ಅರ್ಥ. ಮನೆ ಕಟ್ಟುವ ಮೊದಲು ಅಡಿಪಾಯ ಹೇಗಿರಬೇಕೆಂದು ವಿಚಾರಮಾಡಿ, ಅದರಂತೆ ಸಿದ್ಧಮಾಡಿದರೆ ಆಗ ಮನೆ ಹಲವು ಕಾಲ ಗಟ್ಟಿಯಾಗಿ ನೆಲೆ ನಿಲ್ಲುತ್ತದೆ, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT