ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸಜ್ಜನರ ಸ್ನೇಹ ಕಬ್ಬಿನಂತೆ

Last Updated 13 ಜುಲೈ 2021, 5:02 IST
ಅಕ್ಷರ ಗಾತ್ರ

ಇಕ್ಷೋರಗ್ರಾತ್‌ ಕ್ರಮಶಃ ಪರ್ವಣಿ ಪರ್ವಣಿ ಯಥಾರಸವಿಶೇಷಃ ।

ತದ್ವತ್ಸಜ್ಜನಮೈತ್ರೀ ವಿಪರೀತಾನಾಂ ಚ ವಿಪರೀತಾ ।।

ಇದರ ತಾತ್ಪರ್ಯ ಹೀಗೆ:

‘ಕಬ್ಬಿನ ಜಲ್ಲೆಯ ತುದಿಯಿಂದ ಗೆಣ್ಣು ಗೆಣ್ಣಿಗೂ ಹೇಗೆ ರುಚಿ ಹೆಚ್ಚಾಗುತ್ತದೆಯೋ ಹಾಗೇ ಸತ್ಪುರುಷರ ಸ್ನೇಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಿಹಿಯಾಗುವುದು. ಆದರೆ ದುರ್ಜನರ ಸ್ನೇಹ ಮಾತ್ರ ಇದೇ ರೀತಿ ಕೆಡುತ್ತಹೋಗುವುದು.’

ಕಬ್ಬನ್ನು ತಿಂದಿರುವವರ ಗಮನಕ್ಕೆ ಬಂದಿರುವ ವಿವರವನ್ನು ತಿಳಿಸುತ್ತ ಮನುಷ್ಯರ ಸ್ವಭಾವದ ಬಗ್ಗೆ ಈ ಸುಭಾಷಿತ ಮಾತನಾಡುತ್ತಿದೆ. ಕಬ್ಬಿನ ಜಲ್ಲೆ ಮೇಲಿನ ತುದಿಯಿಂದ ಬುಡದ ಕಡೆಗೆ ಇರುವ ಗೆಣ್ಣು ಕ್ರಮಕ್ರಮವಾಗಿ ಹೆಚ್ಚೆಚ್ಚು ಸಿಹಿಯಾಗಿರುತ್ತದೆ. ಇದೇ ರೀತಿಯಲ್ಲಿ ಸಜ್ಜನರ ಸ್ನೇಹ ಕೂಡ ಹೆಚ್ಚುತ್ತಹೋಗುತ್ತದೆ ಎಂಬುದು ಸುಭಾಷಿತದ ಸಂದೇಶ. ಈ ಸ್ನೇಹ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿರುತ್ತದೆ ಎಂಬುದನ್ನು ಹೇಳಲು ಅದು ಕಬ್ಬಿನ ಜಲ್ಲೆಯ ಉದಾಹರಣೆಯನ್ನು ತೆಗೆದುಕೊಂಡಿದೆ.

ಸಜ್ಜನರೊಂದಿಗಿನ ನಮ್ಮ ಸ್ನೇಹ ಹೀಗೆ ಹೆಚ್ಚಾಗಲು ಕಾರಣ ಎಂದರೆ ಅವರ ಸ್ನೇಹದಲ್ಲಿ ಪ್ರಾಮಾಣಿಕತೆ ಇರುತ್ತದೆ; ಮಾತ್ರವಲ್ಲ, ಅದರಲ್ಲಿ ಕಾಳಜಿಯೂ ಇರುತ್ತದೆ; ಜೊತೆಗೆ ಆದರ್ಶವೂ ಸೇರಿರುತ್ತದೆ. ಆದರೆ ದುರ್ಜನರೊಂದಿಗಿನ ಸ್ನೇಹ ಹೀಗೆ ಇರುವುದಿಲ್ಲ; ಈ ಸ್ನೇಹ ಕ್ಷಣದಿಂದ ಕ್ಷಣಕ್ಕೆ ಕೆಡುತ್ತಹೋಗುತ್ತದೆ. ದುರ್ಜನನ ಸ್ನೇಹ ಆರಂಭದಲ್ಲಿ ಸಿಹಿಯಾಗಿರುತ್ತದೆ; ಆದರೆ ಕ್ರಮೇಣ ಅದು ಕಹಿಯಾಗುತ್ತಹೋಗುತ್ತದೆ.

ನಿಜವಾದ ಆದರ್ಶ, ಪ್ರೀತಿ, ಕಾಳಜಿಗಳು ಇದ್ದರೆ ಆಗ ಮಾತ್ರವೇ ಸ್ನೇಹ ಗಟ್ಟಿಯಾಗುವುದು. ಯಾವುದೋ ಸ್ವಾರ್ಥದ ಕಾರಣದಿಂದಲೋ ’ಟೈ ಪಾಂಸ್‌‘ನ ಕಾರಣದಿಂದಾಗಿಯೋ ಸ್ನೇಹ ಏರ್ಪಟ್ಟಿದ್ದರೆ, ಅಂಥ ಸ್ನೇಹ ಬೇಗನೆ ಕೊನೆಯಾಗುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT