ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಜೀವನಮೌಲ್ಯಗಳು

Last Updated 1 ಏಪ್ರಿಲ್ 2021, 6:02 IST
ಅಕ್ಷರ ಗಾತ್ರ

ಕಿಂ ಭೂಷಣಂ ರುಚಿರಮತ್ರ ಯಶೋ ನ ರತ್ನಂ

ಕಿಂ ಕಾರ್ಯಮಾರ್ಯಚರಿತಂ ಸುಕೃತಂ ನ ದೋಷಃ ।

ಕಿಂ ಚಕ್ಷುರಪ್ರತಿಹತಂ ಧಿಷಣಾ ನ ನೇತ್ರಂ

ಕಿಂ ತಾಪಹಾರಿ ಮಧುರಂ ವಚನಂ ನ ಪಾಥಃ ।।

ಇದರ ತಾತ್ಪರ್ಯ ಹೀಗೆ:

‘ಸುಂದರವಾದ ಒಡವೆ ಯಾವುದು? ಕೀರ್ತಿ, ರತ್ನವಲ್ಲ. ಆಚರಿಸಬೇಕಾದ್ದು ಯಾವುದು? ಶಿಷ್ಟರು ನಡೆಸುವ ಒಳ್ಳೆಯ ಕೆಲಸ, ಪಾಪಕಾರ್ಯವಲ್ಲ. ತಡೆಯೇ ಇಲ್ಲದ ಕಣ್ಣು ಯಾವುದು? ಬುದ್ಧಿ, ನೇತ್ರವಲ್ಲ. ಪಾಪಹಾರಿ ಯಾವುದು? ಒಳ್ಳೆಯ ಮಾತು, ನೀರಲ್ಲ.’

ಜೀವನದಲ್ಲಿ ನಿಜವಾಗಿಯೂ ಮೌಲ್ಯಯುತವಾದ ವಿವರಗಳು ಯಾವುವು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಒಡವೆಗಳ ಮೂಲಕ ನಾವು ಅಲಂಕಾರ ಮಾಡಿಕೊಳ್ಳುತ್ತೇವೆ. ರತ್ನಗಳ ಹಾರ ಮುಂತಾದ ಬೆಲೆಬಾಳುವ ಆಭರಣಗಳ ಮೂಲಕ ಸಿಂಗಾರಮಾಡಿಕೊಳ್ಳುತ್ತೇವೆ. ಆದರೆ ಕೀರ್ತಿಯೇ ನಿಜವಾದ ಒಡವೆ ಎಂದು ಸುಭಾಷಿತ ಹೇಳುತ್ತಿದೆ. ನಮ್ಮ ವ್ಯಕ್ತಿತ್ವದ ಸೌಂದರ್ಯ ಹೆಚ್ಚುವುದು ಕೀರ್ತಿ ಎಂಬ ಒಡವೆಯಿಂದಲೇ ಹೊರತು ಬಂಗಾರ–ರತ್ನಗಳ ಕಂಠೀಹಾರಗಳಿಂದ ಅಲ್ಲ.

ನಮ್ಮ ಮನಸ್ಸು ಸದಾ ಪಾಪಕೆಲಸಮಾಡಬೇಕೆಂದೇ ಹಂಬಲಿಸುತ್ತಿರುತ್ತದೆ. ಏಕೆಂದರೆ ಇದು ಸುಲಭ. ಮಾತ್ರವಲ್ಲ, ಕೆಟ್ಟಕೆಲಸ ಮಾಡಲು ನಮಗೆ ಗುರುವಿನ ಆವಶ್ಯಕತೆ ಇರದು; ನಮಗೆ ನಾವೇ ಗುರು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ನಾವು ಆಚರಿಸಬೇಕಾದ್ದು ಸಜ್ಜನರು, ಶಿಷ್ಟರು ಯಾವ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅಂಥವನ್ನು ನಾವು ಆಚರಿಸಬೇಕು.

ಪ್ರಪಂಚವನ್ನು ನೋಡಲು ನಮಗೆ ಒದಗುವುದು ನಮ್ಮ ಕಣ್ಣುಗಳು. ಆದರೆ ಕಣ್ಣು ಒದಗಿಸುವ ನೋಟ ದಿಟವಾದ ನೋಟವಲ್ಲ; ಬುದ್ಧಿ ಎಂಬ ಜ್ಞಾನನೇತ್ರ ಒದಗಿಸುವ ನೋಟವೇ ದಿಟವಾದ ನೋಟ; ಬುದ್ಧಿಯೇ ನಿಜವಾದ ಕಣ್ಣು.

ನೀರು ನಮ್ಮ ಎಲ್ಲ ಪಾಪಗಳನ್ನೂ ಪರಿಹರಿಸುತ್ತದೆ ಎಂಬ ನಂಬಿಕೆ ನಮ್ಮದು. ಹೀಗಾಗಿಯೇ ತೀರ್ಥಕ್ಷೇತ್ರಗಳ ನದೀಸ್ನಾನವನ್ನು ಪವಿತ್ರ ಎಂದು ಪರಿಗಣಿಸುವುದು; ನಮ್ಮ ಧಾರ್ಮಿಕ ಆಚರಣೆಗಳಲ್ಲಿ ನೀರನ್ನು ಪವಿತ್ರಜಲವಾಗಿ ಬಳಸುವುದು. ಆದರೆ ನಮ್ಮ ಪಾಪವನ್ನು ಪರಿಹರಿಸುವುದು ನೀರಲ್ಲ, ಒಳ್ಳೆಯ ಮಾತು ಎನ್ನುತ್ತಿದೆ ಸುಭಾಷಿತ.

ಹೌದು, ನಮ್ಮ ಮಾನಸಿಕ ಶುದ್ಧತೆಗೆ ಮಾನದಂಡ ಎಂದರೆ ಅದು ನಾವಾಡುವ ಮಾತುಗಳೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT