ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಅವರಿಗೆ ಅವರೇ ಶತ್ರುಗಳು

Last Updated 10 ಫೆಬ್ರುವರಿ 2021, 5:06 IST
ಅಕ್ಷರ ಗಾತ್ರ

ಲುಬ್ಧಸ್ಯ ನಶ್ಯತಿ ಯಶಃ ಪಿಶುನಸ್ಯ ಮೈತ್ರೀ

ನಷ್ಟಕ್ರಿಯಸ್ಯ ಕುಲಮರ್ಥಪರಸ್ಯ ಧರ್ಮಃ ।

ವಿದ್ಯಾಫಲಂ ವ್ಯಸನಿನಃ ಕೃಪಣಸ್ಯ ಸೌಖ್ಯಂ

ರಾಜ್ಯಂ ಪ್ರಮತ್ತಸಚಿವಸ್ಯ ನರಾಧಿಪಸ್ಯ ।।

ಇದರ ತಾತ್ಪರ್ಯ ಹೀಗೆ:

‘ಲೋಭಿಯ ಯಶಸ್ಸು ನಾಶವಾಗುತ್ತದೆ. ಚಾಡಿ ಹೇಳುವವನಿಗೆ ಸ್ನೇಹದ ನಷ್ಟ ಆಗುತ್ತದೆ. ಧರ್ಮಬದ್ಧವಾದ ಕಾರ್ಯಗಳನ್ನು ಮಾಡದವನ ಕುಲವೇ ನಾಶವಾಗುತ್ತದೆ. ಹಣವನ್ನು ಮಾತ್ರ ಲೆಕ್ಕಿಸುವವನ ಧರ್ಮವೇ ನಾಶವಾಗುತ್ತದೆ. ಕೆಟ್ಟ ಚಟಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ಸಿಗುವುದಿಲ್ಲ. ಜಿಪುಣನಿಗೆ ಸುಖವೇ ಇಲ್ಲವಾಗುತ್ತದೆ. ಹೀಗೆಯೇ ಮೈಮರೆತ ಮಂತ್ರಿಯನ್ನು ಹೊಂದಿರುವಂಥ ರಾಜನ ರಾಜ್ಯವೇ ನಾಶವಾಗುತ್ತದೆ.’

ಪ್ರತಿಯೊಂದು ಸ್ವಾಭಾವಕ್ಕೂ ಅದರದದೇ ಆದ ಶಕ್ತಿಯೂ ಇರುತ್ತದೆ; ಹಾಗೆಯೇ ಮಿತಿಯೂ ಇರುತ್ತದೆ. ಇವೆರಡನ್ನೂ ಅರ್ಥಮಾಡಿಕೊಳ್ಳಬೇಕು; ಇಲ್ಲವಾದಲ್ಲಿ ತೊಂದರೆ ಎದುರಾಗುತ್ತದೆ ಎನ್ನುತ್ತಿದೆ ಸುಭಾಷಿತ.

ಲೋಭಿಯ ಯಶಸ್ಸು ನಾಶವಾಗುತ್ತದೆಯಂತೆ. ಲೋಭ ಎಂದರೆ ಇರುವುದೆಲ್ಲವೂ ನನಗೇ ಇರಲಿ – ಎನ್ನುವ ಬುದ್ಧಿ. ಇಂಥ ಅತಿಯಾಸೆ ಇರುವವನ ಯಶಸ್ಸು ನಾಶವಾಗದಿರುತ್ತದೆಯೆ?

ಚಾಡಿ ಹೇಳುವವನು ಸ್ನೇಹವನ್ನು ಕಳೆದುಕೊಳ್ಳುತ್ತಾನಂತೆ. ಇದು ಸಹಜ ತಾನೆ? ಚಾಡಿ ಹೇಳುವ ಚಟ ಇದ್ದವನು, ಇವತ್ತು ಅವರ ಬಗ್ಗೆ ಹೇಳುತ್ತಾನೆ, ನಾಳೆ ನಮ್ಮ ಬಗ್ಗೆಯೂ ಹೇಳುತ್ತಾನೆ. ಇಂಥವರೊಂದಿಗೆ ಯಾರು ತಾನೆ ಸ್ನೇಹವನ್ನು ಉಳಿಸಿಕೊಳ್ಳಲು ಬಯಸಿಯಾರು?

ಧರ್ಮಬದ್ಧವಾದ ಕೆಲಸಗಳಲ್ಲಿ ತೊಡಗದವನ ಕುಲವೇ ನಾಶವಾಗುತ್ತದೆ; ಇದು ನಿಜ ತಾನೆ? ಮಾಡಬೇಕಾದ ಕೆಲಸಗಳನ್ನು ಮಾಡದಿರುವುದು, ಮಾಡಬಾರದ ಕೆಲಸಗಳನ್ನು ಮಾಡುವುದು – ಹೀಗೆ ವಿಪರೀತವಾಗಿ ನಡೆದುಕೊಂಡರೆ ಅವನ ಕುಟುಂಬ ಕಷ್ಟಕ್ಕೆ ಸಿಲುಕುದೆ ಇದ್ದೀತೆ? ಕೊನೆಗೆ ಅವನ ಕುಟುಂಬ ಇದರಿಂದ ನಾಶವಾಗದೆ ಉಳಿದೀತೆ?

ಪ್ರತಿ ಕೆಲಸದ ಮೊದಲಿನಲ್ಲೂ ಕೊನೆಯಲ್ಲೂ ಕೇವಲ ಹಣವನ್ನು ಮಾತ್ರವೇ ನೋಡುವವರು ಇರುತ್ತಾರೆ. ಅವರು ಜೀವನದಲ್ಲಿ ದುಡ್ಡನ್ನು ಬಿಟ್ಟು ಇನ್ನೊಂದರ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಹಣವೇ ಗುರಿಯಾದಾಗ ಅಲ್ಲಿ ಧರ್ಮಕ್ಕೆ ಅವಕಾಶ ಕಡಿಮೆಯಾಗುತ್ತಹೋಗುತ್ತದೆ. ಕೊನೆಗೆ ಧರ್ಮವು ನಾಶವೂ ಆಗುತ್ತದೆಯಷ್ಟೆ.

ಯಾವುದಾದರೂ ವಿದ್ಯೆ ಆಗಲಿ, ಅದನ್ನು ದಕ್ಕಿಸಿಕೊಳ್ಳಬೇಕಾದರೆ ಏಕಾಗ್ರತೆ ಅತ್ಯಂತ ಆವಶ್ಯಕ. ನಮ್ಮ ಏಕಾಗ್ರತೆಯನ್ನು ಕೆಡಿಸುವಂಥವು ನಮ್ಮ ಹವ್ಯಾಸಗಳು. ಅದರಲ್ಲೂ ಕೆಟ್ಟ ಚಟಗಳಿಗೆ ದಾಸರಾದರೆ ಮುಗಿಯಿತು, ನಮ್ಮ ಏಕಾಗ್ರತೆಯ ಗತಿ ಮುಗಿದಂತೆಯೇ. ಏಕಾಗ್ರತೆಯಿಲ್ಲದೆ ಯಾವ ವಿದ್ಯೆಯೂ ದಕ್ಕದು. ದುರ್ವ್ಯಸನಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ಹೇಗೆ ತಾನೆ ದಕ್ಕೀತು?

ಜಿಪುಣನು ತಾನೂ ತಿನ್ನಲಾರ, ಇನ್ನೊಬ್ಬರಿಗೂ ತಿನ್ನಿಸಲಾರ. ಇಂಥವನಿಗೆ ಸುಖ ಹೇಗೆ ತಾನೆ ಒದಗೀತು?

ರಾಜ್ಯವೊಂದರ ಆಡಳಿತ ಚೆನ್ನಾಗಿ ನಡೆಯಬೇಕಾದರೆ ಅದು ರಾಜನೊಬ್ಬನಿಂದಲೇ ಸಾಧ್ಯವಾಗದು; ಮಂತ್ರಿಗಳೂ ಸಮರ್ಥರೂ ಪ್ರಾಮಾಣಿಕರೂ ಆಗಿರಬೇಕಾಗುತ್ತದೆ. ಮೈಮರೆತ ಮಂತ್ರಿಗಳ ರಾಜ್ಯ, ಆ ರಾಜ ಎಷ್ಟೇ ದಕ್ಷನೂ ಪ್ರಾಮಾಣಿಕನೂ ಆಗಿದ್ದರೂ, ಅದು ಹೇಗೆ ತಾನೆ ಏಳಿಗೆಯನ್ನು ಹೊಂದೀತು? ಅಭಿವೃದ್ಧಿಯನ್ನು ಸಾಧಿಸಿತು? ಮೈಮರೆತ ಮಂತ್ರಿಗಳಿರುವ ರಾಜ್ಯವು ನಾಶವಾದಂತೆಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT