ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಬಲವಂತಕ್ಕೆ ಕಾಯಿ ಹಣ್ಣಾಗದು

ದಿನದ ಸೂಕ್ತಿ
Last Updated 26 ಜೂನ್ 2020, 19:30 IST
ಅಕ್ಷರ ಗಾತ್ರ

ಬಲಾದ್ದತ್ತಂ ಬಲಾದ್ಭುಕ್ತಂ ಬಲಾದ್ಯಚ್ಚಾಪಿ ಲೇಖಿತಮ್‌ ।

ಸರ್ವಾನ್‌ ಬಲಕೃತಾನರ್ಥಾನ್ ಅಕೃತಾನ್‌ ಮನುರಬ್ರವೀತ್‌ ।।

ಇದರ ತಾತ್ಪರ್ಯ ಹೀಗೆ:

’ಬಲವಂತವಾಗಿ ಕೊಟ್ಟದ್ದು, ತಿಂದದ್ದು, ಬರೆದದ್ದು – ಎಲ್ಲವೂ ವ್ಯರ್ಥ. ಬಲವಂತದಿಂದ ನಡೆಸಿದ ಯಾವ ಕೆಲಸವೂ ಊರ್ಜಿತವಾಗದು.‘

ನಾವು ಯಾವ ಕೆಲಸನ್ನು ಮಾಡಿದರೂ, ಅದರಲ್ಲಿ ನಮ್ಮ ಮನಸ್ಸು ಕೂಡ ಭಾಗವಹಿಸಬೇಕು. ಹೀಗೆ ಮನಸ್ಸು ತೊಡಗದಿದ್ದರೆ ಮಾಡಿದ ಕೆಲಸವೆಲ್ಲವೂ ವ್ಯರ್ಥವೇ ಆಗುತ್ತದೆ. ಕುದುರೆಯನ್ನು ನೀರಿನ ಸಮೀಪ ನಾವು ಕರೆದುಕೊಂಡುಹೋಗಬಹುದು; ಆದರೆ ನೀರನ್ನು ಕುಡಿಯುವ ಸಂಕಲ್ಪವನ್ನು ಕುದುರೆಯೇ ಮಾಡಬೇಕು. ಈ ವಿದ್ಯಮಾನ ನಮ್ಮ ನಡವಳಿಕೆಗೂ ಸಲ್ಲುವ ಮಾತು.

ಸಂಕಲ್ಪದಲ್ಲಿ ನಮ್ಮ ಭಾವ–ಬುದ್ಧಿಗಳೆರಡೂ ಒಂದಾಗಿ, ನಾವು ಮಾಡುವ ಕೆಲಸದಲ್ಲಿ ಪ್ರೀತಿಯಿಂದ ತೊಡಗುವಂತೆ ಉತ್ತೇಜಿಸುತ್ತದೆ. ದಿಟವಾದ ಸಂಕಲ್ಪದ ಉದ್ದೇಶವೇ ಇದು. ಆದರೆ ಇಂದು ನಮ್ಮ ರಾಜಕಾರಣಿಗಳ ಮಾತಿನ ಕೊನೆಯಲ್ಲಿ ’ದೇಶ ಕಟ್ಟುವ ಸಂಕಲ್ಪ ಮಾಡೋಣ‘, ’ಅದನ್ನು ಮಾಡುವ ಸಂಕಲ್ಪ ಮಾಡೋಣ‘, ’ಇದನ್ನು ಮಾಡುವ ಸಂಕಲ್ಪ ಮಾಡೋಣ‘ ಎಂದು ಯದ್ವಾ ತದ್ವಾ ಬಳಕೆಯಾಗಿ ಈ ಶಬ್ದ ಅದರ ಸ್ವಾರಸ್ಯವನ್ನೇ ಕಳೆದುಕೊಂಡಿದೆಯೆನ್ನಿ!

ಬಲವಂತವಾಗಿ ತೊಡಗಿಕೊಂಡ ಯಾವು ಕೆಲಸವೂ ಊರ್ಜಿತವಾಗುವುದಿಲ್ಲ ಎನ್ನುತ್ತಿದೆ. ಸದ್ಯದ ಪರಿಸ್ಥಿತಿಯನ್ನೇ ಅವಲೋಕಿಸಬಹುದು. ನಾವು ಪರಸ್ಪರ ಅಂತರವನ್ನು ಕಾಪಾಡಿಕೊಳ್ಳಬೇಕು – ಎಂಬ ಸಂಕಲ್ಪಮಾಡಿ, ಅದರಂತೆ ನಡೆದುಕೊಳ್ಳಬೇಕಾದವರು ನಾವು. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದವರು ನಾವು. ಸರ್ಕಾರ ಎಷ್ಟು ದಿನ ಲಾಕ್‌ಡೌನ್‌ ಮಾಡಿದರೂ ಇಂಥದೊಂದು ಮನಸ್ಸು ನಮ್ಮದಾಗದ ವಿನಾ ಕೊರೊನಾದ ನಿಯಂತ್ರಣ ಸಾಧ್ಯವಾಗದು. ಸರ್ಕಾರದ ಬಲಕ್ಕೆ ಹೆದರಿ ಪಾಲಿಸುವ ಲಾಕ್‌ಡೌನ್‌ ನಿಯಮಗಳು ಕಾಟಾಚಾರದ ಶಿಸ್ತು ಆಗಿರುತ್ತದೆ ಎನ್ನುವುದನ್ನು ನಾವು ಗಮನಿಸಿದ್ದೇವೆ. ಮೂಗ–ಬಾಯಿಗಳ ಮೇಲಿದ್ದ ಬೇಕಿರುವ ಮಾಸ್ಕ್, ಪೊಲೀಸರು ಆ ಕಡೆ ತಿರುಗಿದ ಕೂಡಲೇ ನಮ್ಮ ಕೊರಳಿಗೆ ಹಾರವಾಗುತ್ತದೆ, ಅಷ್ಟೆ! ಇದನ್ನೇ ಸುಭಾಷಿತ ಹೇಳುತ್ತಿರುವುದು, ಬಲವಂತದಿಂದ ಮಾಡಿದ ಯಾವ ಕೆಲಸವೂ ಊರ್ಜಿತವಾಗುವುದಿಲ್ಲ; ಎಂದರೆ ಫಲಕಾರಿಯಾಗದು.

ನಾವು ತಿಂದದ್ದು ಜೀರ್ಣವಾಗಬೇಕಾದರೂ ಮನಸ್ಸು ’ತಿನ್ನುವ ಕ್ರಿಯೆ‘ಯಲ್ಲಿ ತೊಡಗಬೇಕು. ನಮ್ಮ ಬಲವಂತಕ್ಕೆ ತಿಂಡಿಯನ್ನು ಬಾಯಿಗೆ ತುರುಕಿಕೊಳ್ಳುವ ಮಗು ಅದನ್ನು ಅನಂತರ ವಾಂತಿಮಾಡಿಕೊಳ್ಳುವುದನ್ನು ನೋಡಿರುತ್ತೇವೆ. ಹೀಗೆ ತಿಂದದ್ದನ್ನು ದೊಡ್ಡವರು ಮಗುವಿನಂತೆ ಉಗುಳದೆ ನುಂಗಬಹುದು; ಆದರೆ ಅದು ಜೀರ್ಣವಾಗದು.

ನಮ್ಮ ಪ್ರತಿ ಕೆಲಸದಲ್ಲೂ ಮನಸ್ಸು ಭಾಗವಹಿಸಬೇಕು; ಸಂತೋಷವಾಗಿ ಭಾಗವಹಿಸಬೇಕು. ಸಂಕಲ್ಪಶಕ್ತಿಯೂ ತಾದಾತ್ಮ್ಯಬುದ್ಧಿಯೂ ಇಲ್ಲದ ವಿನಾ ಯಾವ ಕೆಲಸವೂ ನಿಶ್ವಿತಫಲವನ್ನು ನೀಡದು. ಊಟವಾದರೂ ಆಟವಾದರೂ ನೋಟವಾದರೂ – ನಮ್ಮ ಮನಸ್ಸಿನ ಒಪ್ಪಿಗೆಯಿಲ್ಲದ ಹೊರತು ಸಾರ್ಥಕತೆಯನ್ನು ಪಡೆಯದು.

ಮಕ್ಕಳು ಅವರಿಗೆ ಇಷ್ಟವಿಲ್ಲದ ವಿಷಯದಲ್ಲಿಹೆತ್ತವರ ಬಲವಂತಕ್ಕೆ ಪದವಿಯನ್ನು ಪಡೆಯಬಹುದು. ಆದರೆ ಅವರು ಆ ವಿಷಯದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುವಲ್ಲೂ ವಿಫಲರಾಗುತ್ತಾರೆ; ಮಾತ್ರವಲ್ಲ, ಸಂತೋಷದಿಂದಲೂ ಅದರಲ್ಲಿ ತೊಡಗಿಕೊಳ್ಳಲೂ ಸೋಲುತ್ತಾರೆ. ಹೀಗಲ್ಲದೆ ಮಕ್ಕಳಿಗೆ ಮನಸ್ಸಿರುವ ಕ್ಷೇತ್ರದಲ್ಲಿ ತೊಡಗುವ ಅವಕಾಶವನ್ನು ತಂದೆ–ತಾಯಿ ಒದಗಿಸಿದರೆ ಖಂಡಿತವಾಗಿಯೂ ಮಕ್ಕಳು ಏಳಿಗೆಯನ್ನೂ ಸಂತೋಷವನ್ನೂ ಹೊಂದುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT