ಭಾನುವಾರ, ಜನವರಿ 19, 2020
26 °C

ಕಾಡುಮೊಲಕ್ಕೆ ಕಿವಿ ಚುಚ್ತಾರೆ, ಇದು ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ

ಎಸ್‌. ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ನಾಳೆ ಸಂಕ್ರಾಂತಿ ಹಬ್ಬ. ಇದು ಅಪ್ಪಟ ರೈತಾಪಿ ಹಬ್ಬ. ಈ ಹಬ್ಬವನ್ನು ಹಲವು ಕಡೆ ಹಲವು ರೀತಿಯಲ್ಲಿ ಆಚರಿಸುತ್ತಾರೆ. ಆದರೆ, ಕಂಚೀಪುರದಲ್ಲಿ ಕಾಡುಮೊಲವನ್ನು ಬೇಟೆಯಾಡಿ ತಂದು ಕಿವಿಗೆ ಓಲೆ ತೊಡಿಸಿ ಪೂಜೆ ಮಾಡಿ ಮರಳಿ ಕಾಡಿಗೆ ಬಿಡುತ್ತಾರೆ.

ಸಂಕ್ರಾಂತಿ ಹಬ್ಬದಲ್ಲಿ ರಾಸುಗಳನ್ನು ತೊಳೆದು, ಅಲಂಕರಿಸಿ ಕಿಚ್ಚು ಹಾಯಿಸುವುದು, ರಾಶಿ ಪೂಜೆ ಮಾಡುವುದು ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿರುವ ಸಾಮಾನ್ಯ ಆಚರಣೆ. ಆದರೆ, ಇಲ್ಲೊಂದು ಅಪರೂಪದ ಆಚರಣೆ ಇದೆ. ಸಂಕ್ರಾಂತಿ ಹಬ್ಬದ ದಿನ ಕಾಡಿನಿಂದ ಮೊಲ ಹಿಡಿದು ತಂದು ಅದರ ಕಿವಿಗೆ ಓಲೆ ತೊಡಿಸುತ್ತಾರೆ! ಈ ವಿಶಿಷ್ಟ ಆಚರಣೆ ನಡೆಯುವುದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ.

ಹೌದು, ಈ ಊರಲ್ಲಿ ಸಂಕ್ರಾಂತಿ ಆಚರಿಸುವುದು ಹೀಗೆಯೇ. ಒಂದೊಮ್ಮೆ ಅಂದು ಮೊಲ ಸಿಗದಿದ್ದರೆ, ಸಂಕ್ರಾಂತಿ ಹಬ್ಬ ಮಾಡುವುದೇ ಇಲ್ಲವಂತೆ. ಇದು ಗ್ರಾಮದ ಕಂಚೀವರದರಾಜಸ್ವಾಮಿ ದೇವರ ಭಕ್ತರು ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯ ಎನ್ನುತ್ತಾರೆ ಪ್ರಧಾನ ಅರ್ಚಕ ಡಿ. ಪರಶುರಾಮಪ್ಪ.

ಬಲೆ ಹಿಡಿದು ಹೊರಡುತ್ತಾರೆ..

ಶೂನ್ಯ ಮಾಸದ ಕೊನೆಯ ದಿನ ಮಕರ ಸಂಕ್ರಾಂತಿ. ಅಂದು ಭಕ್ತರೆಲ್ಲ ಬೆಳಿಗ್ಗೆಯೇ ಸ್ನಾನ ಮಾಡಿ, ಮಡಿಬಟ್ಟೆಯುಟ್ಟು ಬೇಟೆಯಲ್ಲಿ ನುರಿತವರು ಬಲೆ, ಬೆತ್ತದಂತಹ ಬೇಟೆಗಾರಿಕೆಯ ಪರಿಕರಗಳನ್ನು ಹಿಡಿದು ದೇಗುಲಕ್ಕೆ ಬರುತ್ತಾರೆ. ಆ ಪರಿಕರಗಳಿಗೆ ನಾಮಧಾರಣೆ ಮಾಡಿ ಪೂಜೆ ಸಲ್ಲಿಸುತ್ತಾರೆ. ‘ಸಂಕ್ರಾಂತಿ ಮೊಲ ಸಿಗಲಪ್ಪ’ ಎಂದು ಪ್ರಾರ್ಥಿಸುತ್ತಾರೆ. ಈ ವೇಳೆ ದಾಸಯ್ಯರ ಜಾಗಟೆ, ಶಂಖ, ಕಹಳೆ ಮೊಳಗುತ್ತವೆ. ಊರಿನ ನೂರಾರು ಮಂದಿ ಕಂಚೀವರದರಾಜಸ್ವಾಮಿ ಗೋವಿಂದಾ... ಗೋವಿಂದಾ... ಎನ್ನುತ್ತಾ ಮೆರವಣಿಗೆಯೊಂದಿಗೆ ಊರ ಬಾಗಿಲಿನ ಮೂಲಕ ಬೇಟೆಗೆ ಹೊರಡುತ್ತಾರೆ ಎಂದು ಮೊಲ ಬೇಟೆಯ ಸಂದರ್ಭದ ಚಿತ್ರಣವನ್ನು ಎಳೆ ಎಳೆಯಾಗಿ ತೆರೆದಿಡುತ್ತಾರೆ ಗ್ರಾಮದ ಪ್ರಹ್ಲಾದ್.

ಸಂಕ್ರಾಂತಿ ಮೊಲ ಸಿಕ್ಕಿತ್ರಪ್ಪೋ ...

ಕಾಡಿನ ಬಗ್ಗೆ ಅನುಭವವಿರುವವರು ಮೊಲ ಹೆಚ್ಚಾಗಿ ಓಡಾಡುವ ಜಾಗವನ್ನು ಗುರುತಿಸುತ್ತಾರೆ. ಹತ್ತು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಏಳೆಂಟು ಬಲೆಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಜೋಡಿಸುತ್ತಾರೆ. ಯಾವುದೇ ದಿಕ್ಕಿನಿಂದ ಮೊಲ ಓಡಿಬಂದರೂ ಬಲೆಗೆ ಬೀಳಲೇ ಬೇಕು. ಹಾಗೆ ಬಲೆ ಜೋಡಿಸುತ್ತಾರೆ. ಮೊಲ ಬಲೆಗೆ ಬೀಳುವುದನ್ನು ಕಾಯಲು ಒಬ್ಬನನ್ನು ಸಮೀಪದಲ್ಲೇ ಕೂರಿಸಿರುತ್ತಾರೆ. ಬೇಟೆಯಲ್ಲಿ ತಜ್ಞರಾಗಿರುವ ಏಳೆಂಟು ಮಂದಿ ಬೆತ್ತಗಳನ್ನು ಹಿಡಿದು ಸುತ್ತಲಿನ ಪೊದೆಗಳ ಬಳಿ ಗೋವಿಂದಾ... ಗೋವಿಂದಾ... ಎಂದು ಕೂಗುತ್ತಾರೆ. ಉಷ್‌ ಉಷ್‌ ಎನ್ನುತ್ತಾ ಬೆತ್ತದಿಂದ ಪೊದೆಗಳನ್ನು ಕೆದಕುತ್ತಾರೆ. ಮೊಲಗಳು ಪೊದೆಗಳಲ್ಲಿ ಅವಿತು ಕುಳಿತಿದ್ದರೆ ಹೊರಗೆ ಬರಲಿ ಎಂಬುದಕ್ಕಾಗಿ ಹೀಗೆ ಮಾಡುತ್ತಾರೆ.

ಮೊದಲೇ ಸೂಕ್ಷ್ಮ ಪ್ರಾಣಿಯಾಗಿರುವ ಮೊಲ, ಸಣ್ಣ ಸದ್ದು ಕೇಳಿದರೆ ಗಾಬರಿಗೊಂಡು ಓಡುತ್ತದೆ. ಇನ್ನೂ ಇಂಥ ಸದ್ದಿಗೆ ಅಡಗಿ ಕೂರಲು ಸಾಧ್ಯವೇ. ಹೀಗಾಗಿ ಈ ಸದ್ದು ಗದ್ದಲಕ್ಕೆ ಎಲ್ಲೆಲ್ಲಿದ್ದ ಮೊಲಗಳು ಚಂಗನೆ ನೆಗೆದು ಹೊರಗೆ ಬಂದು ಬಲೆಗೆ ಬೀಳುತ್ತವೆ. ಆಗ, ಕಾರ್ಯಕ್ರಮದ ಮುಖಂಡರು ಓಡಿ ಹೋಗಿ ಬಲೆಯೊಳಗಿದ್ದ ಮೊಲವನ್ನು ಎತ್ತಿ ಹಿಡಿದು ‘ಸಂಕ್ರಾಂತಿ ಮೊಲ ಸಿಕ್ಕಿತ್ರಪ್ಪೋ..’ ಎಂದು ಕೂಗುತ್ತಾರೆ. ಗಾಬರಿಯಿಂದ ಪತರಗುಟ್ಟುವ ಮೊಲದ ಹಿಂದಿನ ಕಾಲುಗಳನ್ನು ಕಟ್ಟಿ, ಬುಟ್ಟಿಗೆ ಹಾಕುತ್ತಾರೆ. ಸುತ್ತಲಿದ್ದ ಜನರೆಲ್ಲ ಓಡೋಡಿ ಬಂದು ಬುಟ್ಟಿಯಲ್ಲಿ ಗಾಬರಿಯೊಂದಿಗೆ ಪಿಳಿ ಪಿಳಿ ಕಣ್ಣುಬಿಡುತ್ತಿದ್ದ ಬೂದುಬಣ್ಣದ ಮೊಲವನ್ನು ನೋಡಿ ಸಂಭ್ರಮಿಸುತ್ತಾರೆ. ಹರ್ಷೋದ್ಗಾರದೊಂದಿಗೆ ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ಮೆರವಣಿಗೆಯಲ್ಲಿ ಗ್ರಾಮದ ಕಂಚೀವ ರದರಾಜಸ್ವಾಮಿ ದೇವಾಲಯಕ್ಕೆ ತರುತ್ತಾರೆ ಎಂದು ಮೊಲ ಹಿಡಿಯುವ ಬಗೆಯನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ ಗ್ರಾಮದ ಕರಿಯಪ್ಪ.

ಸ್ನಾನ, ನಾಮಧಾರಣೆ...

ಕಾಡಿನಿಂದ ತಂದ ಮೊಲಕ್ಕೆ ಮೊದಲು ಸ್ನಾನ. ನಂತರ ದೇವರ ಸನ್ನಿಧಿಯಲ್ಲಿ ನಾಮಧಾರಣೆ. ಆನಂತರ ಕಿವಿ ಚುಚ್ಚಿ ರಿಂಗ್, ಓಲೆ ಅಥವಾ ಗೆಜ್ಜೆ ಹಾಕುತ್ತಾರೆ. ಊರಿನ ಅಕ್ಕಸಾಲಿಗರು, ಮಗುವಿಗೆ ಕಿವಿ ಚುಚ್ಚುವ ವಿಧಾನದಲ್ಲೇ ನಿಧಾನವಾಗಿ ಮೊಲದ ಕಿವಿ ಚುಚ್ಚುತ್ತಾರೆ. ನಂತರ ನವ ವಧುವಿನಂತೆ ಹೂವಿನಿಂದ ಸಿಂಗರಿಸಿ, ದೇವರ ಮೂರ್ತಿ ಎದುರಿಗೆ ಮೂರು ಬಾರಿ ನೀವಾಳಿಸುತ್ತಾರೆ. ಮತ್ತೆ ಬುಟ್ಟಿಯಲ್ಲಿ ಕೂರಿಸಿ, ಅದನ್ನು ತಲೆ ಮೇಲೆ ದೇವರ ಮೂರ್ತಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಡೋಲು, ವಾದ್ಯ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗುತ್ತದೆ. ಈ ವೇಳೆ ದೇವರ ಮೇಲೆ ಚಿಲ್ಲರೆ (ನಾಣ್ಯ) ತೂರುತ್ತಾರೆ. ‘ಈ ಎಲ್ಲ ಆಚರಣೆಗಳಿಂದ ಶೂನ್ಯಮಾಸದ ದೋಷ ನಿವಾರಣೆ ಆಗುತ್ತದೆ. ಗ್ರಾಮದ ಜನರಿಗೆ ಒಳಿತಾಗುತ್ತದೆ’ ಎಂಬ ನಂಬಿಕೆ ಭಕ್ತರದ್ದು.

ಮೊಲ ಮರಳಿ ಕಾಡಿಗೆ

ಮೆರವಣಿಗೆ ಮುಗಿದ ನಂತರ ಸಂಜೆ ಮೊಲವನ್ನು ಕಾಡಿಗೆ ಬಿಡುತ್ತಾರೆ. ಈ ಆಚರಣೆಯಲ್ಲಿರುವ ಒಂದು ನಿಬಂಧನೆ ಏನೆಂದರೆ, ಮೊಲವನ್ನು ಹಿಡಿಯುವಾಗ, ಮೆರವಣಿಗೆಯೂ ಸೇರಿದಂತೆ ಯಾವುದೇ ಸಂದರ್ಭ ದಲ್ಲಿ ಅದಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು. ಹಾಗೆಯೇ ಈ ಹಬ್ಬದಲ್ಲಿ ಪೂಜೆ ಮಾಡಿ ರುವ ಮೊಲವನ್ನು ಯಾರೂ ಕೊಲ್ಲಬಾರದು. ‘ಇದೇ ಕಾರಣಕ್ಕೇ ಮೊಲಕ್ಕೆ ಕಿವಿಯೋಲೆ ಹಾಕುತ್ತೇವೆ ಎಂದು ಕಿವಿ ಚುಚ್ಚುವ ಹಿಂದಿನ ಉದ್ದೇಶ ವಿವರಿಸುತ್ತಾರೆ ಗ್ರಾಮಸ್ಥರು.

ಈ ಬೇಟೆಯಲ್ಲಿ ಎಷ್ಟೇ ಮೊಲಗಳು ಬಲೆಗೆ ಬಿದ್ದರೂ, ದೇವಸ್ಥಾನಕ್ಕೆ ಪೂಜೆಗಾಗಿ ತರುವುದು ಒಂದು ಮೊಲ ಮಾತ್ರ. ಉಳಿದವನ್ನು ಕಾಡಿನಲ್ಲೇ ಬಿಡುತ್ತಾರೆ. ಒಂದೊಮ್ಮೆ ಮೊಲ ಸಿಗದಿದ್ದರೆ ಆ ವರ್ಷ ಸಂಕ್ರಾಂತಿ ಹಬ್ಬದ ಆಚರಣೆಯೇ ಆಗುವುದಿಲ್ಲವಂತೆ. ‘ಆದರೆ, ಇಲ್ಲಿವರೆಗೂ ಎಂದೂ ಹಾಗಾಗಿಲ್ಲ. ಈ ಭಾಗದಲ್ಲಿ ಬೇಟೆಗಾರರು ಕಡಿಮೆಯಾಗಿದ್ದು, ಮೊಲದ ಸಂತತಿ ಹೆಚ್ಚಿದೆ. ಮೊಲ ಸಿಕ್ಕೇಸಿಗುತ್ತದೆ’ ಎಂಬುದು ಗ್ರಾಮದ ತಿಪ್ಪೇಸ್ವಾಮಿ ಅವರ ವಿಶ್ವಾಸ.

ತಲೆಮಾರುಗಳಿಂದ ನಡೆದುಕೊಂಡು ಬಂದಿ ರುವ ಈ ಆಚರಣೆಯಿಂದ, ಊರಿಗೆ ಆ ವರ್ಷ ಒಳ್ಳೆಯದಾಗುತ್ತಿದೆ. ಅದಕ್ಕಾಗಿಯೇ ಇದನ್ನು ಮುಂದುವರಿಸುತ್ತಿದ್ದೇವೆ ಎನ್ನುವುದು ಕಂಚೀಪುರ ಗ್ರಾಮಸ್ಥರ ಅಭಿಪ್ರಾಯ.

ಆಚರಣೆಯ ಹಿನ್ನೆಲೆ

‘ಶೂನ್ಯ ಮಾಸದಲ್ಲಿ ಕಂಚೀವರದರಾಜಸ್ವಾಮಿಗೆ ದೋಷ ಉಂಟಾಗುತ್ತದೆ. ಇದರಿಂದ ದೇವರ ಮಹಿಮೆ ಕಳೆಗುಂದುತ್ತದೆ. ಆಗ ಭಕ್ತರ ಇಷ್ಟಾರ್ಥಗಳು ಈಡೇರುವುದಿಲ್ಲ. ಹಾಗಾಗಿ, ದೇವರ ದೋಷ ನಿವಾರಿಸಲು ಹಾಗೂ ದೃಷ್ಟಿ ತೆಗೆಯಲು ಮೊಲವೇ ಸೂಕ್ತ ಪ್ರಾಣಿ ಎಂಬ ನಂಬಿಕೆಯಿಂದ ಸಂಕ್ರಾಂತಿ ದಿನ ಮೊಲ ಹಿಡಿದು ಪೂಜೆ ಮಾಡುತ್ತೇವೆ’ ಎನ್ನುತ್ತಾರೆ ಗ್ರಾಮದ ಹಿರಿಯ ಮೂಡ್ಲಪ್ಪ.

ಮತ್ತೋಡು ಸಂಸ್ಥಾನದ ದೊಡ್ಡಹಾಲಪ್ಪ ನಾಯಕನ ಕಾಲದಿಂದಲೂ (1651ರಿಂದ) ಗ್ರಾಮದಲ್ಲಿ ಕಂಚೀವರದರಾಜಸ್ವಾಮಿ ನೆಲೆಸಿರುವುದಾಗಿ ಇಲ್ಲಿನ ತಾಮ್ರ ಶಾಸನದಲ್ಲಿ ಉಲ್ಲೇಖವಿದೆ. ಇದು ಬೇಟೆಗಾರಿಕೆಯ ದೇವರಾದ್ದರಿಂದ, ಆ ವಂಶಸ್ಥರೇ ಇಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರು. ಅಂದಿನಿಂದಲೂ ಈ ಆಚರಣೆ ನಡೆದುಕೊಂಡು ಬಂದಿರಬಹುದು ಎನ್ನುತ್ತಾರೆ ಪ್ರಧಾನ ಅರ್ಚಕ ಪರಶುರಾಮಪ್ಪ.

ಇದನ್ನೂ ಓದಿ: ಸಂಕ್ರಾಂತಿ: ಎಳ್ಳು ಬೆಲ್ಲದ ಹಬ್ಬ

‘ಬಹಳ ಹಿಂದೆ ಈ ಭಾಗದಲ್ಲಿ ಬೇಟೆಯಾಡುತ್ತಿದ್ದರು ಎನ್ನಿಸುತ್ತದೆ. ಸಾಂಕೇತಿಕವಾಗಿ ಬೇಟೆಯನ್ನು ನೆನಪಿಸಲು ಇಂಥದ್ದೊಂದು ಸಂಪ್ರದಾಯವನ್ನು ಮುಂದುವರಿಸಿರಬಹುದು’ ಎನ್ನುತ್ತಾರೆ ಜಾನಪದ ತಜ್ಞ ಡಾ. ಮೀರಾಸಾಬಿಹಳ್ಳಿ ಶಿವಣ್ಣ. ‘ಸಂಕ್ರಾಂತಿ ಆಸುಪಾಸಿನಲ್ಲಿ ಹೀಗೆ ಮೊಲವನ್ನು ಹಿಡಿದು ಪೂಜೆ ಮಾಡುವಂತಹ ಆಚರಣೆಗಳು ಕೆಲವು ಕಡೆಗಳಲ್ಲಿವೆ. ನನ್ನ ಕ್ಷೇತ್ರಕಾರ್ಯದಲ್ಲಿ ಇವುಗಳನ್ನು ದಾಖಲಿಸಿದ್ದೇನೆ. ಆದರೆ, ಕೆಲವೊಂದು ಆಚರಣೆಗಳಿಗೆ ನಿರ್ದಿಷ್ಟವಾದ ಕಾರಣಗಳು ಸಿಕ್ಕಿಲ್ಲ’ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು