ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕುಲಘಾತುಕ ಗುಣನಿಧಿ ಚರಿತ್ರೆ

ಭಾಗ 110
Last Updated 2 ಮೇ 2022, 19:30 IST
ಅಕ್ಷರ ಗಾತ್ರ

ಸೃಷ್ಟಿಖಂಡದಲ್ಲಿ ‘ಗುಣನಿಧಿಚರಿತ್ರವರ್ಣನ’ ಎಂಬ ಹದಿನೇಳನೆಯ ಅಧ್ಯಾಯವಿದೆ.

ಬ್ರಹ್ಮ ಹೇಳಿದ ಸೃಷ್ಟಿವರ್ಣನವನ್ನು ಕೇಳಿದ ನಂತರ ನಾರದ, ಮತ್ತೆ ಬ್ರಹ್ಮನನ್ನು ‘ಭಕ್ತವತ್ಸಲನಾದ ಶಂಕರ ಕೈಲಾಸಕ್ಕೆ ಹೋಗಿದ್ದು ಯಾವಾಗ? ಮಹಾತ್ಮನಾದ ಕುಬೇರನೊಡನೆ ಆತನಿಗೆ ಸ್ನೇಹ ಎಲ್ಲಿ ಉಂಟಾಯಿತು? ಪರಿಪೂರ್ಣ ಶಿವಸ್ವರೂಪನಾದ ಹರನು ಅಲ್ಲಿ ಏನು ಮಾಡಿದ? ಇದೆಲ್ಲವನ್ನೂ ನನಗೆ ತಿಳಿಯಪಡಿಸು ತಂದೆಯೇ’ ಎಂದು ಕೋರುತ್ತಾನೆ. ಅದಕ್ಕೆ ಬ್ರಹ್ಮ ‘ನಾರದ ಕೇಳು. ಶಿರಸ್ಸಿನಲ್ಲಿ ಚಂದ್ರಲೇಖೆಯನ್ನು ತಳೆದ ಆ ಶಿವನ ಚರಿತ್ರೆಯನ್ನು ಹೇಳುತ್ತೇನೆ. ಆತನು ಕೈಲಾಸಕ್ಕೆ ಹೋದ ಬಗೆಯನ್ನೂ, ಕುಬೇರನೊಡನೆ ಆತನಿಗೆ ಸಖ್ಯವಾದ ರೀತಿಯನ್ನೂ ನಿನಗೆ ವಿವರಿಸುವೆ’ ಎಂದು ಗುಣನಿಧಿಯ ಚರಿತ್ರೆಯನ್ನು ಹೇಳುತ್ತಾನೆ.

ಕಾಂಪಿಲ್ಯವೆಂಬ ಪಟ್ಟಣದಲ್ಲಿ ಸೋಮಯಾಜಿಗಳ ವಂಶದ ಯಜ್ಞದತ್ತನೆಂಬ ಒಬ್ಬ ದೀಕ್ಷಿತನಿದ್ದ. ಆತನು ಯಜ್ಞವಿದ್ಯೆಯಲ್ಲಿ ಪಾರಂಗತನಾಗಿದ್ದ. ಆತ ಚತುರ್ವೇದ, ಶಿಕ್ಷಾದಿ ವೇದಾಂಗಗಳನ್ನು ಚೆನ್ನಾಗಿ ಬಲ್ಲವನಾಗಿದ್ದ. ವೇದಾಂತ ಮೊದಲಾದ ತತ್ವಶಾಸ್ತ್ರಗಳಲ್ಲಿ ಬಹು ಸಮರ್ಥನಾಗಿದ್ದ. ಅಲ್ಲದೆ, ಆತ ರಾಜಮಾನ್ಯನೂ ಬಹಳ ದಾನಮಾಡುವವನೂ ಆಗಿದ್ದ. ಆತನ ಕೀರ್ತಿಯು ಎಲ್ಲೆಲ್ಲಿಯೂ ಹರಡಿತ್ತು. ಆತ ಅಗ್ನಿಶುಶ್ರೂಷೆ ಮತ್ತು ವೇದಾಧ್ಯಯನದಲ್ಲಿ ತುಂಬ ಆಸಕ್ತಿ ವಹಿಸಿದ್ದ. ಯಜ್ಞದತ್ತನಿಗೆ ಸುಂದರನಾದ, ಮನೋಹರವಾದ ಅಂಗಸೌಷ್ಠವ ಹೊಂದಿದ, ಚಂದ್ರಬಿಂಬವನ್ನು ಹೋಲುವಂಥ ಗುಣನಿಧಿ ಎಂಬ ಮಗನಿದ್ದ.

ಉಪನಯನ ಸಂಸ್ಕಾರವಾದ ನಂತರ ಗುಣನಿಧಿ ಎಂಟು ವಿದ್ಯೆಗಳನ್ನು ಚೆನ್ನಾಗಿ ಕಲಿತ. ಆದರೆ, ವಿದ್ಯಾವಂತನಾದ ನಂತರ ತಂದೆ ಯಜ್ಞದತ್ತನಿಗೆ ತಿಳಿಯದಂತೆ ಜೂಜುಗಾರಿಕೆಯಂಥ ಕೆಟ್ಟ ಚಟ ಕಲಿತ. ಇದಕ್ಕಾಗಿ ಗುಣನಿಧಿ ತನ್ನ ತಾಯಿಯನ್ನು ಪೀಡಿಸಿ ಹಣವನ್ನು ಪಡೆಯುತ್ತಿದ್ದ. ಒಬ್ಬನೇ ಮಗನೆಂಬ ಮಮತೆಯಿಂದ ಆ ತಾಯಿ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಳು. ಹಾದಿತಪ್ಪಿದ ಗುಣನಿಧಿ ಜೂಜುಕೋರರೊಂದಿಗೆ ಸ್ನೇಹವನ್ನು ಬೆಳೆಸಿ, ಕುಲ ಸಂಪ್ರದಾಯದ ಆಚಾರಗಳನ್ನೆಲ್ಲಾ ಬಿಟ್ಟ. ವೇದಶಾಸ್ತ್ರಗಳನ್ನು, ವೇದಾಂತಿಗಳನ್ನು ದೂಷಿಸುತ್ತಿದ್ದ. ಯಾವಾಗಲೂ ಸಂಗೀತವನ್ನು ಹಾಡುತ್ತ, ವಾದ್ಯಗಳನ್ನು ನುಡಿಸುತ್ತ, ಕೋಳಿ-ಕಾಳಗರೊಡನೆ ಸೇರಿ ವಿನೋದಾನಂದ ಮಾಡುತ್ತಿದ್ದ. ಪುಂಡುಪೋಕರಿಗಳೊಂದಿಗೆ ಹೆಚ್ಚು ಸ್ನೇಹ ಹೊಂದಿದ್ದ ಆತನಿಗೆ ತಾಯಿ ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ.

ನಿತ್ಯ ಗೃಹಕೃತ್ಯಗಳಲ್ಲೇ ಮಗ್ನನಾಗಿರುತ್ತಿದ್ದ ಯಜ್ಞದತ್ತ ದೀಕ್ಷಿತನಿಗೆ ತನ್ನ ಮಗ ಕೆಟ್ಟ ಹಾದಿ ತುಳಿದಿರುವುದು ಗೊತ್ತಿರಲಿಲ್ಲ. ತಂದೆಗೆ ಕಾಣದಂತೆ ಓಡಾಡುತ್ತಿದ್ದ ಗುಣನಿಧಿಯ ಬಗ್ಗೆ ಯಜ್ಞದತ್ತ ತನ್ನ ಪತ್ನಿಯನ್ನು ಕೇಳಿದಾಗಲೆಲ್ಲ’ ಈಗ ತಾನೇ ಅವನು ಹೊರಗೆ ಹೋಗಿದ್ದಾನೆ. ಸ್ನಾನಮಾಡಿ, ದೇವರ ಪೂಜೆಯನ್ನು ನೆರವೇರಿಸಿ ಪಾಠಗಳನ್ನೆಲ್ಲಾ ಓದುತ್ತಿದ್ದ. ಈಗಷ್ಟೆ ಸ್ನೇಹಿತರೊಡನೆ ಹೋಗಿದ್ದಾನೆ’ ಎಂದು ಸುಳ್ಳು ಹೇಳುತ್ತಿದ್ದಳು. ಒಬ್ಬನೇ ಮಗನೆಂಬ ಪ್ರೀತಿಯಿಂದ, ನಿಜವನ್ನು ಮರೆಮಾಚುತ್ತಿದ್ದಳು. ಇದರಿಂದ ಯಜ್ಞದತ್ತನಿಗೆ ತನ್ನ ಮಗನ ದುರ್ನಡತೆಗಳೊಂದೂ ಗೊತ್ತಾಗುತ್ತಿರಲಿಲ್ಲ.

ಗುಣನಿಧಿ ಹದಿನಾರರ ಪ್ರಾಯಕ್ಕೆ ಬಂದಾಗ ಗೃಹ್ಯಸೂತ್ರೋಕ್ತ ವಿಧಿಗನುಸಾರವಾಗಿ ಮದುವೆ ಮಾಡಲಾಯಿತು. ನಂತರವೂ ಗುಣನಿಧಿ ತನ್ನ ಗುಣಗಳನ್ನ ಬದಲಿಸಿಕೊಳ್ಳಲಿಲ್ಲ. ಕಂಗಾಲಾದ ತಾಯಿ ಮಗನಿಗೆ ಬುದ್ಧಿ ಹೇಳುತ್ತಿದ್ದಳು. ಆದರೆ ಗುಣನಿಧಿ ಮಾತ್ರ ಗುಣವಂತನಾಗುವ ಯಾವ ಲಕ್ಷಣವನ್ನೂ ತೋರಿಸಲಿಲ್ಲ. ‘ಮಗು ಗುಣನಿಧಿ, ಮಹಾತ್ಮನಾದ ನಿನ್ನ ತಂದೆಯು ಮಹಾ ಕೋಪಿಷ್ಠನೆಂಬುದು ನಿನಗೆ ತಿಳಿಯದೇ? ಅವರಿಗೇನಾದರೂ ನಿನ್ನ ಕೆಟ್ಟ ನಡತೆಯ ವಿಚಾರ ಗೊತ್ತಾದ್ದರೆ, ನಿನ್ನನ್ನೂ ನನ್ನನ್ನೂ ಚೆನ್ನಾಗಿ ಹೊಡೆಯುವರು. ನಾನು ನಿತ್ಯವೂ ನಿಮ್ಮ ತಂದೆಗೆ ಗೊತ್ತಾಗದಂತೆ ನಿನ್ನ ಕೆಟ್ಟ ನಡತೆಯೆಲ್ಲವನ್ನೂ ಮರೆಮಾಚುತ್ತಿದ್ದೇನೆ. ನಿನ್ನ ತಂದೆ ತಮ್ಮ ಉತ್ತಮಶೀಲತನದಿಂದ, ಐಶ್ವರ್ಯದಿಂದ ಜನರೆಲ್ಲರಿಗೂ ಮಾನ್ಯರಾಗಿದ್ದಾರೆ. ಸದ್ವಿದ್ಯೆಯೂ ಸತ್ಸಹವಾಸವೂ ನಮ್ಮಂಥ ಶೀಲವಂತರಿಗೆ ಐಶ್ವರ್ಯವಲ್ಲವೇ? ನಿನಗೇಕೆ ಗುಣಸಂಪತ್ತಿನಲ್ಲಿ ಅಭಿಲಾಷೆ ಹುಟ್ಟಲಿಲ್ಲ? ವಂಶಪಾರಂಪರ್ಯವಾಗಿ ನಿಮ್ಮ ಹಿರಿಯರೆಲ್ಲರೂ ಒಳ್ಳೆಯ ಶ್ರೋತ್ರಿಯರು, ದೀಕ್ಷಿತರು, ಸೋಮಯಾಗವನ್ನು ಮಾಡಿದವರು. ಅವರೆಲ್ಲ ನಮ್ಮ ವಂಶದ ಕೀರ್ತಿಯನ್ನು ಬೆಳೆಸಿದ್ದಾರೆ. ನಿನಗೇಕೆ ಇಂಥ ಕೆಟ್ಟ ಬುದ್ಧಿ ಬಂತು’ ಅಂತ ರೋದಿಸುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT