ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಲಿಂಗದಿಂದ ಮೊಳಗಿದ ಓಂಕಾರ

ಅಕ್ಷರ ಗಾತ್ರ

ಸೃಷ್ಟಿಖಂಡದ ಎಂಟನೇ ಅಧ್ಯಾಯದಲ್ಲಿ ಬ್ರಹ್ಮ-ವಿಷ್ಣುವಿಗೆ ಶಿವಲಿಂಗದಿಂದ ಓಂಕಾರಧ್ವನಿ ಕೇಳಿಸಿದ ವಿವರ ಇದೆ. ಅದನ್ನ ಬ್ರಹ್ಮನು ನಾರದನಿಗೆ ಹೇಳುತ್ತಾನೆ: ‘ಎಲೈ ನಾರದಮುನಿ, ನಾನು ಮತ್ತು ವಿಷ್ಣು ಗರ್ವವನ್ನು ತ್ಯಜಿಸಿ, ಶಿವನ ದರ್ಶನವನ್ನು ಮಾಡಲು ಸ್ತುತಿಸುತ್ತಿದ್ದೆವು. ಆಗ ದೀನರನ್ನು ಸಲಹುವವನು, ಗರ್ವಿಗಳ ಗರ್ವವನ್ನು ನಾಶಮಾಡುವವನೂ ಆದಂತಹ ಶಿವನು ನಮಗೆ ಅನುಗ್ರಹ ನೀಡಿದ. ಆಗ ಶಿವಲಿಂಗದಿಂದ ಓಂಕಾರರೂಪವಾದ ದೀರ್ಘವಾದ ಒಂದು ಶಬ್ದ ಸ್ಪಷ್ಟವಾಗಿ ಕೇಳಿಸಿತು. ನಾನು ಮತ್ತು ವಿಷ್ಣುವೂ ಚಕಿತರಾಗಿ ಇದಾವ ಶಬ್ದವೆಂದು ಯೋಚಿಸಿದೆವು. ನಮಗೆ ಗೊತ್ತಾಗಲಿಲ್ಲ. ಯಾವಾಗ ನಾವು ನಿಷ್ಕಲ್ಮಷವಾದ ಮತ್ತು ಶಾಂತವಾದ ಬುದ್ಧಿಯಿಂದ ನೋಡಿದೆವೋ, ಆಗಷ್ಟೇ ಶಿವಲಿಂಗದ ಬಲಭಾಗದಲ್ಲಿ ಅನಾದಿಯಾದ ಶಿವಸ್ವರೂಪವಾದ ಓಂಕಾರದ ಆಕಾರವನ್ನು ಕಂಡೆವು. ಎಡಭಾಗದಲ್ಲಿ ಉಕಾರವನ್ನೂ ನೋಡಿದೆವು. ಮಕಾರವು ಶಿವಲಿಂಗದ ಮಧ್ಯಭಾಗದಲ್ಲಿ, ‘ಓಂ’ ಎಂಬ ನಾದವು ಅದರ ಸಮೀಪದಲ್ಲಿ ಕಾಣಿಸಿದವು. ಶಿವಲಿಂಗದ ದಕ್ಷಿಣಭಾಗದಲ್ಲಿ ಅಕಾರವು ಸೂರ್ಯಮಂಡಲದಂತೆ ಪ್ರಕಾಶಿಸುತ್ತಿತ್ತು. ಉತ್ತರಭಾಗದಲ್ಲಿನ ಉಕಾರವು ಅಗ್ನಿಯಂತೆ ರಾರಾಜಿಸುತ್ತಿತ್ತು. ಮಧ್ಯದಲ್ಲಿ ಮಕಾರವು ಚಂದ್ರಮಂಡಲದಂತೆ ಶಾಂತವಾಗಿ ವಿರಾಜಿಸುತ್ತಿತ್ತು.

‘ಲಿಂಗದ ಮೇಲ್ಭಾಗದಲ್ಲಿ ಶುದ್ಧಸ್ಫಟಿಕದಂತೆ ಶುಭ್ರವೂ, ತ್ರಿಮೂರ್ತಿ ಗಳಿಗೆ ಕಾರಣವೂ ಆದ, ಅಜ್ಞಾನಸಂಬಂಧವಿಲ್ಲದ, ನಿರ್ಮಲವಾದ, ಅವಯವಗಳಿಲ್ಲದ, ದುಃಖಸಂಬಂಧವಿಲ್ಲದ, ತನ್ನಲ್ಲಿ ಭೇದವಿಲ್ಲದ, ಒಳಹೊರಗುಗಳೆಂಬ ಭೇದವಿಲ್ಲದೆ ಇದ್ದರೂ ಮಾಯಾಮಯವಾದ ಒಳಹೊರಗು ಭೇದಗಳುಳ್ಳ, ಎಲ್ಲೆಡೆ ವ್ಯಾಪಕವಾಗಿರುವ, ವಿನಾಶಸ್ಥಿತಿ ಮುಂತಾದ ವಸ್ತುವಿಕಾರಗಳಿಲ್ಲದ, ಲೋಕದಲ್ಲಿಯ ವಿಷಯಗಳಿಂದಾಗುವ ಆನಂದವನ್ನುಂಟುಮಾಡುವುದಾದ, ಸತ್ಯ ಜ್ಞಾನ ಆನಂದಸ್ವರೂಪವಾದ, ಜಗತ್ತಿಗೆಲ್ಲಾ ಆಧಾರವಾದಂತಹ ಶಬ್ದಬ್ರಹ್ಮವನ್ನು ನಾನೂ ಮತ್ತು ವಿಷ್ಣು ನೋಡಿದೆವು.

‘ಆಗ ವಿಷ್ಣುವು ಈ ಶಬ್ದವು ಎಲ್ಲಿಂದ ಬರುತ್ತಿದೆ – ಎಂದು ತೇಜೋಮಯವಾದ ಆ ಲಿಂಗವನ್ನು ಪರೀಕ್ಷಿಸೋಣ ಅಂದ. ಮಹತ್ತಾದ ಈ ಅಗ್ನಿಸ್ತಂಭದ ಮೂಲಭಾಗಕ್ಕೆ ಹೋಗಿ ಪರೀಕ್ಷಿಸಬೇಕೆಂದು, ಶಬ್ದಬ್ರಹ್ಮ ಸ್ವರೂಪನೂ ಜಗದ್ರೂಪನೂ ಆದಂತಹ ಆ ಪರಮಾತ್ಮನನ್ನು ಹಾಗೆಯೇ ಧ್ಯಾನಿಸಿದ. ಆಗ ಅಲ್ಲಿ ಋಷಿಯೋರ್ವ ಕಾಣಿಸಿಕೊಂಡ. ಆ ಋಷಿಯಿಂದ ವಿಷ್ಣುವು ತನಗೆ ಕೇಳಿಸಿದ ಓಂಕಾರ ಧ್ವನಿಯು ಶಬ್ದಬ್ರಹ್ಮಸ್ವರೂಪನೂ ಪರಬ್ರಹ್ಮಸ್ವರೂಪನೂ ದೇವದೇವನೂ ಆದ ಪರಮೇಶ್ವರನ ಶಬ್ದ, ಇದು ಬ್ರಹ್ಮಸ್ವರೂಪವಾದುದೆಂದು ತಿಳಿದ.

‘ಶಿವನನ್ನು ಚಿಂತಿಸಲು ಅಸಾಧ್ಯ. ಕಾರಣವೇನೆಂದರೆ ಮನಸ್ಸು ಮೊದಲುಗೊಂಡು ಯಾವ ಇಂದ್ರಿಯಗಳೂ ಅವನನ್ನು ವಿಷಯಾಕರಿ ಸಲಾರವು. ಏಕೆಂದರೆ ಅವನಿಗೆ ರೂಪವಿಲ್ಲ. ಆದರೆ ಓಂಕಾರರೂಪವಾಗಿ ಆತನನ್ನು ಧ್ಯಾನಿಸಬಹುದು. ಓಂಕಾರರೂಪವಾದ ಒಂದು ಅಕ್ಷರವು ಸತ್ಯವಾದ, ಜಗತ್ತಿಗೆ ಪರಮಕಾರಣವೂ ಆನಂದ–ಜ್ಞಾನಸ್ವರೂಪವೂ ನಾಶವಿಲ್ಲದ್ದೂ ಆದ ಪರಬ್ರಹ್ಮಸ್ವರೂಪವನ್ನು ಬೋಧಿಸುವುದು. ಓಂಕಾರದಲ್ಲಿನ ಅಕಾರದಿಂದ ಬ್ರಹ್ಮನೂ, ಉಕಾರದಿಂದ ಹರಿಯಯೂ ಜನಿಸಿದರು; ಮಕಾರದಿಂದ ರುದ್ರ ಜನಿಸಿದ. ಬ್ರಹ್ಮ ಸೃಷ್ಟಿಕರ್ತನಾದರೆ, ಹರಿಯು ಜಗತ್ತನ್ನು ಮೋಹಗೊಳಿಸುವವನಾದ; ಶಿವನು ನಿತ್ಯವೂ ಅನುಗ್ರಹಿಸುವವನಾದ.

ಮಕಾರಸ್ವರೂಪೀ ಶಿವನು ಜಗತ್ತಿಗೆ ಕಾರಣವಾದ ಬೀಜವುಳ್ಳವನು. ಅಕಾರಸ್ವರೂಪನಾದ ಬ್ರಹ್ಮನೇ ಬೀಜವು. ಪ್ರಕೃತಿ ಮತ್ತು ಪುರುಷರನ್ನು ಸೃಜಿಸುವ ಉಕಾರಸ್ವರೂಪನಾದ ಹರಿಯು ಯೋನಿಯು (ಜಗತ್ತು ಜನಿಸುವ ಸ್ಥಾನ). ಬೀಜವುಳ್ಳವನು, ಬೀಜ ಮತ್ತು ಯೋನಿ – ಈ ಮೂರಕ್ಕೂ ಸ್ವರೂಪನಾದವನು ಪರಮೇಶ್ವರ. ಬೀಜಿಯಾದ ಶಿವನು ತನ್ನ ಸ್ವರೂಪವನ್ನು ವಿಭಾಗಿಸಿ ಸ್ವೇಚ್ಛೆಯಾಗಿ ವಿಹರಿಸುತ್ತಲಿರುವ. ಜಗದೊಡೆ ಯನಾದ ಬೀಜಿಯ ಲಿಂಗದಿಂದ ಅಕಾರ(ಬ್ರಹ್ಮ)ರೂಪವಾದ ಬೀಜ (ಜಗತ್ಕಾರಣ) ಉಂಟಾಯಿತು.

ಬೀಜವನ್ನು ಬೀಜಿಯಾದ ಶಿವನು ವಿಷ್ಣುವೆಂಬ ಯೋನಿಯಲ್ಲಿ ಹಾಕಿದ. ಅಲ್ಲಿ ಬೀಜವು ಬೆಳೆದು ಏಕರೂಪವಾದ ಮತ್ತು ಮಹತ್ತಾ ದೊಂದು ಸುವರ್ಣಮಯವಾದ ಗೋಳವಾಯಿತು. ಒಂದು ಸಾವಿರ ವರ್ಷಗಳ ಮೇಲೆ ಈಶ್ವರನು ಸಾಕ್ಷಾತ್ತಾಗಿ ಆ ಗೋಳವನ್ನು ಒಡೆದು ಎರಡು ಭಾಗವಾಗಿ ಮಾಡಿದ. ಆ ಅಂಡದ ಒಂದು ಸುವರ್ಣಭಾಗವು ಆಕಾಶದಲ್ಲಿ ನಿಂತಿತು. ಅದೇ ಸ್ವರ್ಗ. ಮತ್ತೊಂದು ಕೆಳಗೆ ನಿಂತಿತು. ಅದು ಶಬ್ದ, ರಸ, ಸ್ಪರ್ಶ, ಗಂಧ, ರೂಪ, ಎಂಬ ಐದು ಸ್ವರೂಪವಾಗಿರುವ ಭೂಮಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT