ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬನಶಂಕರಿ ದೇವಿ ರಥೋತ್ಸವ ವೈಭವ

ಮಾರ್ದನಿಸಿದ ’ಶಂಭೂಕೋ’ ಜಯಘೋಷ; ಲಕ್ಷಾಂತರ ಭಕ್ತರು ಭಾಗಿ
Last Updated 10 ಜನವರಿ 2020, 14:02 IST
ಅಕ್ಷರ ಗಾತ್ರ

ಬಾಗಲಕೋಟೆ:ಬನದ ಹುಣ್ಣಿಮೆಯ ಸೊಬಗು ಮೈದಳೆಯುವ ಮುನ್ನ ಶುಕ್ರವಾರ ಸಂಜೆ ಬಾದಾಮಿ ಸಮೀಪದ ಬನಶಂಕರಿಯ ಮಲಪ್ರಭೆಯ ತಟದಲ್ಲಿ ‘ಶಂಭೂಕೋ’ ಜಯಘೋಷ ಮಾರ್ದನಿಸಿತು. ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣದಿಂದ ಬಂದಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಾಡಿನ ಶಕ್ತಿ ದೇವತೆ ಬನಶಂಕರಿ ದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಹಿಂದಿನ ದಿನವಷ್ಟೇ ವೈವಿಧ್ಯಮಯ ಕಾಯಿ‍ಪಲ್ಲೆಗಳಿಂದ (ತರಕಾರಿ) ಸಿಂಗಾರಗೊಂಡು ಸರ್ವಾಲಂಕಾರಭೂಷಿತೆಯಾಗಿದ್ದ ಶಾಕಾಂಬರಿ ಮೂರ್ತಿಯನ್ನು ಅರ್ಚಕರು ಪಲ್ಲಕ್ಕಿಯಲ್ಲಿ ಹೊತ್ತುತಂದು ತೇರಿನಲ್ಲಿ ಪ್ರತಿಷ್ಠಾಪಿಸಿದರು.ವೇದ–ಘೋಷಗಳೊಂದಿಗೆ ವಾದ್ಯ–ವೈಭವದ ಮೆರವಣಿಗೆ ಇದಕ್ಕೆ ಸಾಥ್ ನೀಡಿತು.

ಹರಿದ್ರಾತೀರ್ಥ ಹೊಂಡದ ಪಕ್ಕದ ದೊಡ್ಡ ಬಯಲಿನಲ್ಲಿಮಹಿಳೆಯರು, ಮಕ್ಕಳು, ಹಿರಿಕಿರಿಯರೆಲ್ಲರೂ ಉತ್ಸಾಹದಲ್ಲಿ ನೆರೆದಿದ್ದರು. ಗೋಧೂಳಿ ಲಗ್ನದಲ್ಲಿರಥಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಘೋಷಣೆ, ಚಪ್ಪಾಳೆ ಮೊಳಗಿದವು. ಹಗ್ಗಕ್ಕೆ ಕೈ ಹಾಕಿ ತೇರು ಎಳೆದು ಸಂಭ್ರಮಿಸಿದರು. ಪೈಪೋಟಿಗೆ ಬಿದ್ದು ಉತ್ತತ್ತಿ, ಕೊಬ್ಬರಿ, ನಿಂಬೆ, ಬಾಳೆ ಹಣ್ಣು ಕಳಶದತ್ತ ತೂರಿದರು.

ಗರಿಗೆದರಿದ ಜಾತ್ರೆ

ಉತ್ತರ ಕರ್ನಾಟಕದ ಅತಿದೊಡ್ಡ ಸಾಂಸ್ಕೃತಿಕ ಮೇಳ ಬನಶಂಕರಿ ಜಾತ್ರೆಯ ರೂಪದಲ್ಲಿ ಇನ್ನೊಂದು ತಿಂಗಳು ಕಾಲ ಚಾಲುಕ್ಯರ ರಾಜಧಾನಿ ಬಾದಾಮಿಯ ಪಡಸಾಲೆಯಲ್ಲಿ ಗರಿಗೆದರಲಿದೆ. ಅದಕ್ಕೆ ದೇವಿಯ ರಥೋತ್ಸವ ಮುನ್ನುಡಿ ಬರೆಯಿತು.

ಪಾದಯಾತ್ರೆ, ಎತ್ತಿನಬಂಡಿ, ಟ್ರ್ಯಾಕ್ಟರ್ ಹಾಗೂ ಖಾಸಗಿ ವಾಹನಗಳಲ್ಲಿ ಭಕ್ತರು ಬಂದು ಬೀಡು ಬಿಟ್ಟಿದ್ದಾರೆ. ದೇವಸ್ಥಾನ ಸುತ್ತ ಮೈದಳೆದಿರುವ ಜಾತ್ರಾ ನಗರಿಯಲ್ಲಿ ತಾತ್ಕಾಲಿಕ ಟೆಂಟ್‌ ಹಾಕಿಕೊಂಡಿದ್ದಾರೆ. ಕೆಲವರು ಚಕ್ಕಡಿ ಬಂಡಿಗಳನ್ನೇ ನೆಲೆಯಾಗಿಸಿಕೊಂಡಿದ್ದು, ಇನ್ನೂ ಕೆಲವರು ಹರಿದ್ರಾತೀರ್ಥ ಹೊಂಡದ ಸುತ್ತಲಿನ ಕಲ್ಲಿನ ಪೌಳಿ, ಸಾಲು ಮಂಟಪದಲ್ಲಿ ಉಳಿದಿದ್ದಾರೆ.

ಬನಶಂಕರಿ ರಥೋತ್ಸವ ಕಣ್ತುಂಬಿಕೊಳ್ಳಲು ಹರಕೆ ಹೊತ್ತ ಭಕ್ತರು ಹಿಂದಿನ ದಿನ ರಾತ್ರಿಯಿಂದಲೇ ಪಾದಯಾತ್ರೆಯಲ್ಲಿ ಗುಡಿಗೆ ಬಂದರು. ಅವರಿಗೆ ದಾರಿ ಮಧ್ಯೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ನಸುಕಿನಿಂದಲೇ ಸಾಲುಗಟ್ಟಿ ದೇವಿಯ ದರ್ಶನ ಪಡೆದ ಭಕ್ತರು ಹೋಳಿಗೆ, ಕಡುಬು, ಗೋಧಿ ಹುಗ್ಗಿಯ ನೈವೇದ್ಯ ಅರ್ಪಿಸಿದರು. ಸರಸ್ವತಿ ಹಳ್ಳ ಹಾಗೂ ಹರಿದ್ರಾತೀರ್ಥ ಹೊಂಡದಲ್ಲಿ ಮಿಂದು ಬಂದು ದೇವಿಗೆ ದೀಡ್ ನಮಸ್ಕಾರ ಹಾಕಿದರು.

ಸ್ವಚ್ಛತೆಗೆ ಒತ್ತು

ಈ ಬಾರಿ ಜಾತ್ರೆಯಲ್ಲಿ ಜಿಲ್ಲಾಡಳಿತ ಸ್ವಚ್ಛತೆಗೆ ವಿಶೇಷ ಒತ್ತು ನೀಡಿದ್ದು, ಸಂಚಾರಿ ಶೌಚಾಲಯಗಳ ಇಡಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಹಿರ್ದೆಸೆಗೆ ಬಯಲು ಆಶ್ರಯಿಸುವುದು ಬೇಡ. ಶೌಚಾಲಯ ಬಳಕೆ ಮಾಡಿ ಎಂಬ ಸಂದೇಶವನ್ನು ಚೊಳಚಗುಡ್ಡ ಗ್ರಾಮ ಪಂಚಾಯ್ತಿಯಿಂದ ಸಾರಲಾಗುತ್ತಿದೆ.

ಬಾದಾಮಿ ಶಾಸಕರೂ ಆದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಥೋತ್ಸವಕ್ಕೆ ಚಾಲನೆ ನೀಡಿದರು. ಹಂಪಿ ಹೇಮಕೂಟದ ದಯಾನಂದ ಪುರಿ ಸ್ವಾಮೀಜಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಎಸ್‌ಪಿ ಲೋಕೇಶ ಜಗಲಾಸರ್, ಸಿಇಒ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿ ಕೆ. ಗಂಗಪ್ಪ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ಮಾಜಿ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಬಿ.ಆರ್.ಯಾವಗಲ್, ವಿಜಯಾನಂದ ಕಾಶಪ್ಪನವರ, ಎಸ್.ಜಿ.ನಂಜಯ್ಯನಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರಕ್ಷಿತಾ ಈಟಿ, ಮುಖಂಡರಾದ ಎಂ.ಬಿ.ಹಂಗರಗಿ, ರವೀಂದ್ರ ಕಲಬುರ್ಗಿ, ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಎಸ್.ಪೂಜಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT