ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ 2022: ಬಸವಣ್ಣ ಎಂಬ ಕೂಡಲಸಂಗಮ

Last Updated 2 ಮೇ 2022, 20:04 IST
ಅಕ್ಷರ ಗಾತ್ರ

ಬಸವಣ್ಣನಲ್ಲಿಯೇ ಒಂದು ಕೂಡಲಸಂಗಮವಿದೆ. ಹಾಗೆ ನೋಡಿದರೆ ತಾನೇ ಅದಾಗದೆ ಅದನ್ನು ತನ್ನೊಳಗೆ ಇರಿಸಿಕೊಳ್ಳಲು ಬರುವುದಿಲ್ಲವಾದ್ದರಿಂದ ಯಾವುದು ಬಸವಣ್ಣನೋ ಅದೇ ಕೂಡಲಸಂಗಮವೂ ಆಗಿದೆ. ಏಕಾಣು ಜೀವಿಯು ವಿಕಸನಗೊಂಡು ಮಾನವನಾದುದು ವಿಕಸನದ ಒಂದು ಆಯಾಮವಾದರೆ ಮಾನವಜೀವಿಯ ಆಂತರಿಕ ವಿಕಸನದ ಇನ್ನೊಂದು ಆಯಾಮದಲ್ಲಿ ಕೂಡಲಸಂಗಮವಿದೆ. ಅಳಿಯುವ ಸ್ಥಾವರತೆಯನ್ನು ಕಳಚಿಕೊಂಡು ಅಳಿಯದ ಜಂಗಮತೆಯೆಡೆಗೆ ಬೆಳೆಯುವುದರಲ್ಲಿ ಈ ವಿಕಾಸದ ಚಲನೆಯಿದೆ.

ಮೊದಲಿಗೆ ಇಲ್ಲೊಂದು ಮನೆಯಿದೆ. ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ಕಸ ತುಂಬಿಕೊಂಡರೆ ಅದು ಮನೆಯೊಡೆಯನ ನೆಲೆಯನ್ನೇ ನಿರಾಕರಿಸಿಬಿಡುತ್ತದೆ. ಹಾಗಾಗದಿರಬೇಕಾದರೆ ಅವನು ಕೂಡಲಸಂಗಮನ ಮನೆಯ ಮಗನಾಗಿ ಮರುಹುಟ್ಟು ಪಡೆಯಬೇಕಾಗುತ್ತದೆ. ತನ್ನ ಮನೆಯೆಂಬುದು ವ್ಯಷ್ಟಿಯಾದರೆ ಕೂಡಲಸಂಗಮನ ಮನೆಯೆಂಬುದು ಸಮಷ್ಟಿಯಾಗಿದೆ. ತನ್ನ ಮನೆಯ ಸ್ಥಾಪನೆಗೆ ವಿಳಾಸವೊಂದರ ಅಗತ್ಯವಿದೆ. ಏಕೆಂದರೆ ಅದು ಇನ್ನಿತರ ಮನೆಗಳಿಂದ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳುವ ಸಾಧನವೂ ಆಗಿದೆ. ಆದರೆ ಕೂಡಲಸಂಗಮನ ಮನೆಯೆಂದರೆ ಅದು ಎಲ್ಲ ವಿಳಾಸಗಳಿಂದ ಬಿಡಿಸಿಕೊಳ್ಳುವುದೇ ಆಗಿದೆ. ಏಕೆಂದರೆ ಕೂಡಲಸಂಗಮನು ವಿಶ್ವತೋ ಮುಖನಾಗಿದ್ದಾನೆ; ವಿಶ್ವತೋ ಬಾಹುವಾಗಿದ್ದಾನೆ; ವಿಶ್ವತೋ ಚಕ್ಷುವಾಗಿದ್ದಾನೆ. ತಾನು ತನ್ನ ಮನೆಯ ಮಗನಾಗಿದ್ದರೆ ಆಗ ಅವನನ್ನು ‘ಇವನಾರವ, ಇವನಾರವ, ಇವನಾರವ’ ಎಂದು ಕೇಳುವಂತಾಗುತ್ತದೆ. ಆದರೆ ಕೂಡಲಸಂಗಮನ ಮನೆಯ ಮಗನಾದರೆ ಎಲ್ಲರೂ ‘ಇವ ನಮ್ಮವ, ಇವ ನಮ್ಮವ, ಇವ ನಮ್ಮವ’ ಎನ್ನುವಂತಾಗುತ್ತದೆ.

ಇಲ್ಲೊಂದು ಕೂಡುವಿಕೆಯಿದೆ. ಒಂದು ನೆಲೆಯಲ್ಲಿ ಕೂಡಲಸಂಗಮನು ಜಗದಗಲ, ಮುಗಿಲಗಲ, ಮಿಗೆಯಗಲವಾಗಿದ್ದಾನೆ. ಇದಕ್ಕೆ ವೈದೃಶ್ಯವೋ ಎಂಬಂತೆ ಇಲ್ಲಿ ಇನ್ನೊಂದು ನೆಲೆಯಲ್ಲಿ ಭಕ್ತನ ಕರಸ್ಥಲವಿದೆ. ಕರಸ್ಥಲವೆನ್ನುವಲ್ಲಿಯೇ ಅದರ ಸೀಮಿತತೆಯ ಸೂಚನೆಯೂ ಇದೆ. ಆದರೆ ಈ ಸೀಮಿತತೆಯು ಅಸೀಮವಾಗುವುದೇ ಇಲ್ಲಿನ ಪ್ರಧಾನ ನೆಲೆಯೂ ಆಗಿದೆ. ಅತೀತವಾದುದು ಹ್ರಸ್ವಗೊಂಡಿತೋ ಎಂಬಂತೆ ಕರಸ್ಥಲಕ್ಕೆ ಬಂದು ಚುಳುಕಾಗುತ್ತದೆ. ಮೇಲಿನ ಸ್ತರದಲ್ಲಿ ಇದು ಹಿಗ್ಗಿಕೊಂಡಿದ್ದುದು ಕುಗ್ಗಿದುದರ ನಿರೂಪಣೆಯಾಗಿದ್ದರೆ ಅಂತರಾಳದಲ್ಲಿ ಇದು ಕುಗ್ಗಿದಂತಿದ್ದುದು ಹಿಗ್ಗಿದುದರ ಕಥನವೇ ಆಗಿದೆ. ಕರಸ್ಥಲವು ಇಲ್ಲಿ ವಿಶ್ವಸ್ಥಲವಾಗುತ್ತದೆ. ಈ ಕೂಡುವಿಕೆಯೇ ಕೂಡಲಸಂಗಮವು ವಾಸ್ತವವಾಗುವ ವಿಧಾನವೂ ಆಗಿದೆ. ಕರಸ್ಥಲ-ವಿಶ್ವಸ್ಥಲಗಳ ಕೂಡುವಿಕೆಯಲ್ಲಿಯೇ ಭಕ್ತಿಯ ವಾಸ್ತವತೆಯೂ ಇದೆ. ಇಲ್ಲಿ ಭಕ್ತಿಯೂ ಆಯ್ಕೆಯ ಸಂಗತಿಯಾಗಿದೆ ಅಸ್ತಿತ್ವವಾಗುತ್ತದೆ. ಅಸ್ತಿತ್ವದ ಸಮಗ್ರತೆಯಲ್ಲಿ ತನ್ನ ವ್ಯಕ್ತಿಗತ ಅಸ್ತಿತ್ವದ ಬಿಂದುವನ್ನು ಗುರುತಿಸಿಕೊಳ್ಳುವಲ್ಲಿ ಮತ್ತು ಆ ಮೂಲಕ ಉಳಿದೆಲ್ಲ ಬಿಂದುಗಳೊಂದಿಗೆ ತನ್ನ ಸಾವಯವ ಸಂಬಂಧವನ್ನು ಕಂಡುಕೊಳ್ಳುವಲ್ಲಿ ಭಕ್ತಿಯ ಸಾರ್ಥಕ್ಯವಿದೆ. ಹೀಗಾಗಿ ಒಂದು ಪ್ರಾಥಮಿಕ ನೆಲೆಯಲ್ಲಿ ಖಾಸಗಿಯೆಂಬಂತೆ ತೋರುವ ಭಕ್ತಿ ಕೂಡ ಲೋಕಜಂಗಮದೊಂದಿಗೆ ತನ್ನನ್ನು ತಾನು ಹೆಣೆದುಕೊಳ್ಳುವ ಬಗೆಯೇ ಆಗಿದೆ. ‘ಒಡಲಿಲ್ಲದ ನಿರಾಳ ಕರ್ತೃ’ ಕೂಡಲ ಸಂಗಮದೇವನು ತನ್ನನ್ನು ತಾನು ಪ್ರಕಟಿಸಿಕೊಳ್ಳುವುದೇ ‘ಜಂಗಮಮುಖ ಲಿಂಗ’ವಾಗುವುದರ ಮೂಲಕ. ಹೀಗಾಗಿ ದೈವಿಕವೆಂದು ಹೇಳಲಾಗುವ ಭಕ್ತಿಯಾದರೂ ತನ್ನನ್ನು ತಾನು ವಾಸ್ತವಗೊಳಿಸಿಕೊಳ್ಳಬೇಕಾಗಿರುವುದು ಲೋಕಜಂಗಮದ ದಿನನಿತ್ಯದ ಸಾಧಾರಣ ವಿವರಗಳಲ್ಲಿಯೇ ಆಗಿದೆ. ‘ಭಕ್ತಿಯೆಂಬ ಭಂಡಕ್ಕೆ ಜಂಗಮವೇ ಸುಂಕಿಗ, ಕೂಡಲಸಂಗಮದೇವಾ’. ಜಂಗಮಕ್ಕೆ ಸಲ್ಲಬೇಕಾದ ಸುಂಕವನ್ನು ಸಲ್ಲಿಸಿದಾಗಲೇ ಭಕ್ತಿಯ ಭಂಡಾರ ‘ಸಾಚಾ’ ಆಗುತ್ತದೆ. ಹಾಗೆ ಸಲ್ಲಿಸದ ಸಲುಗೆಯಿಂದ ತಪ್ಪಿಸಿಕೊಂಡದ್ದು ‘ಕಳ್ಳನಾಣ್ಯ’ವಾಗುತ್ತದೆ. ಈ ಮಂಡನೆಯ ಮೂಲಕ ಇಲ್ಲಿ ಲಿಂಗ-ಜಂಗಮಗಳ ಕೂಡಲಸಂಗಮವೊಂದು ಸ್ಥಾಪನಗೊಳ್ಳುತ್ತಿದೆ. ದೇವನಿಷ್ಠೆ-ಲೋಕನಿಷ್ಠೆಗಳು ಒಂದೊಳಗೊಂದು ಕರಗಿಹೋಗುತ್ತಿವೆ. ಈ ಕೂಡಲಸಂಗಮದಲ್ಲಿ ದೇವಲೋಕ-ಮರ್ತ್ಯಲೋಕಗಳೆಂಬ ವಿಭಜನೆಯೂ ನಿರಾಕರಣೆಗೆ ಒಳಗಾಗುತ್ತದೆ.

ಈ ಎಲ್ಲದರ ಮೂಲಕ ಇನ್ನೊಂದು ನೆಲೆಯಲ್ಲಿ ತಥಾಕಥಿತ ಭಕ್ತಿ-ಧರ್ಮಾಚರಣೆಗಳ ಮೌಲ್ಯಮಾಪನವೂ ಆಗುತ್ತದೆ. ಹಾಗೆ ಆಗುವುದರಿಂದಲೇ ಇಲ್ಲಿ ಧರ್ಮವನ್ನಾಧರಿಸಿಕೊಂಡು ದಯೆಯು ನಿಂತಿದೆಯೆಂಬ ರೂಢಿಯ ಗ್ರಹಿಕೆಯನ್ನು ಪಲ್ಲಟಿಸಿ ದಯೆಯ ಆಧಾರದ ಮೇಲೆ ಧರ್ಮವನ್ನು ನಿಲ್ಲಿಸಲಾಗುತ್ತದೆ. ‘ದಯವಿಲ್ಲದ ಧರ್ಮವದೇವುದಯ್ಯ?’ (ದಯವಿಲ್ಲದ ಧರ್ಮವು ಏತಕ್ಕೆ ಬರುತ್ತದೆ?) ಎಂಬ ಮಾತು ಧರ್ಮಪರೀಕ್ಷೆಯ ಎಲ್ಲ ಕಾಲದ ಮಾನದಂಡವಾಗುತ್ತದೆ. ಜೊತೆಗೆ ದಯೆ ಮತ್ತು ಧರ್ಮಗಳ ಕೂಡಲಸಂಗಮದ ಸ್ಥಾಪನೆಯೆಂಬುದು ಮಾನವತೆಯ ಶಾಶ್ವತವಾದ ಕನಸಾಗಿಯೂ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT