ಭಕ್ತಿಗೆ ಲೋಕದಲ್ಲಿರುವ ವ್ಯಾಕರಣವೆಂದರೆ ದೇವನಿಗಾಗಿ ಮಾಡುವ ಮತ್ತು ದೇವನನ್ನು ಬೇಡುವ ವ್ಯಾಕರಣ. ಇಲ್ಲಿ ದೇವನನ್ನು ಬೇಡಿದರೂ ಅದು ದೇವನಿಗಾಗಿ ಬೇಡುವುದಾಗದೆ ಲೋಕಕ್ಕಾಗಿ ಬೇಡುವುದೇ ಆಗಿರುತ್ತದೆ. ಇಲ್ಲಿ ಲೋಕವನ್ನು ಒಂದು ಕೊರತೆಯ ನೆಲೆಯಲ್ಲಿ ಕಾಣಲಾಗುತ್ತದೆ. ಅಲ್ಲದೆ ಆ ಕೊರತೆಯನ್ನು ತುಂಬಿಕೊಳ್ಳುವುದಕ್ಕಾಗಿ ದೇವನನ್ನು ಅವಲಂಬಿಸಲಾಗುತ್ತದೆ. ಇಲ್ಲಿ ದೇವನಿಗಾಗಿ ಲೋಕವಲ್ಲ, ಲೋಕಕ್ಕಾಗಿ ದೇವನಿರುತ್ತಾನೆ. ಈ ಹಿನ್ನೆಲೆಯಲ್ಲಿ ಬಸವಣ್ಣನ ಒಂದು ವಚನವನ್ನು ಗಮನಿಸಬಹುದು: ‘ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು. ನೀನಲ್ಲದೆ ಮತ್ತಾರು ಇಲ್ಲವಯ್ಯ.

ಇಲ್ಲಿ ದೇವನೊಂದಿಗಿನ ಒಂದು ಸಂಬಂಧವನ್ನು ಸ್ಥಾಪಿಸಲಾಗುತ್ತಿದೆ. ಆದರೆ ಇಲ್ಲೊಂದು ಪಲ್ಲಟವಿದೆ. ಅದು ಲೋಕಸಂಬಂಧವನ್ನು ದೇವಸಂಬಂಧಕ್ಕೆ ಸ್ಥಳಾಂತರಿಸುವ ಪಲ್ಲಟವಾಗಿದೆ. ಈ ಸ್ಥಳಾಂತರವನ್ನು ಎರಡು ನೆಲೆಗಳಲ್ಲಿ ಈ ವಚನ ಸಾಧಿಸುತ್ತದೆ. ಮೊದಲನೆಯ ಹಂತದಲ್ಲಿ ‘ನೀನು ನೀನು’ ಎಂದು ಅವಧಾರಣೆಯನ್ನು ತರುವುದರ ಮೂಲಕ; ಎರಡನೆಯ ಹಂತದಲ್ಲಿ ‘ನೀನಲ್ಲದೆ ಮತ್ತಾರು ಇಲ್ಲವಯ್ಯ’ ಎಂಬ ನಿರಾಕರಣೆಯ ಮೂಲಕ.

ಈ ಅವಧಾರಣೆಯಲ್ಲಿ ಒಂದು ಲೋಕದ ವ್ಯಾಕರಣವಿದೆ. ‘ನೀನಲ್ಲದೆ ಮತ್ತಾರು ಇಲ್ಲ’ ಎನ್ನುವುದರ ಮೂಲಕ ಅದು ತನ್ನ ಜವಾಬ್ದಾರಿಯನ್ನು ಆ ಇನ್ನೊಬ್ಬ ವ್ಯಕ್ತಿಯ ಮೇಲೆ ಹೊರಿಸುತ್ತದೆ. ಹೀಗೆ ಹೊರಿಸಿದ್ದನ್ನು ತಾರ್ಕಿಕವಾಗಿ ಸಮರ್ಥಿಸುವ ಕೆಲಸವನ್ನು ಇಲ್ಲಿನ ಅವಧಾರಣೆ ಮಾಡುತ್ತದೆ. ಇದೊಂದು ಒಪ್ಪಿಸುವ ಭಾಷಿಕ ವಿಧಾನವೂ ಹೌದು. ಇಲ್ಲಿನ ತಾರ್ಕಿಕ ಸರಣಿಯನ್ನು ಅನುಸರಿಸಿಕೊಂಡು ಬಂದರೆ ತನ್ನ ‘ಒಪ್ಪಿಸುವಿಕೆಯೇ’ ಇಲ್ಲಿಯವರೆಗಿನ ಮಂಡನೆಯ ಶಿಖರವೂ ಹೌದು. ಆದರೆ ಈ ಸಹಜ ವ್ಯಾಕರಣ ವ್ಯಾಕರಣ ಇಲ್ಲಿಂದ ಮುಂದಕ್ಕೆ ಇದಕ್ಕಿದ್ದಂತೆ ಪಲ್ಲಟಗೊಂಡುಬಿಡುತ್ತದೆ. ಮುಂದಿನ ವಾಕ್ಯ ತನ್ನನ್ನು ಒಪ್ಪಿಕೊಳ್ಳುವವನ ಮುಂದೆ ಎರಡು ಆಯ್ಕೆಗಳನ್ನು ಇಡುತ್ತದೆ: ‘ಹಾಲಲದ್ದು ನೀರಲದ್ದು.’

ಆದರೆ ಇಲ್ಲಿಯವರೆಗಿನ ತಾರ್ಕಿಕ ಸರಣಿಯ ಪರಿಶೀಲನೆಯಿಂದ ಸ್ಪಷ್ಟವಾಗುವುದೇನೆಂದರೆ ಇಲ್ಲಿಯ ಮಂಡನೆ ‘ಹಾಲಲದ್ದು’ ಎಂಬ ಒಂದು ಆಯ್ಕೆಯನ್ನು ಮಾತ್ರ ಭಾಷಿಕವಾಗಿ ಒಪ್ಪಿಕೊಳ್ಳಬಲ್ಲುದಾಗಿದೆ. ಎರಡನೆಯ ಆಯ್ಕೆಯನ್ನು ಭಾಷಿಕ ರಚನೆಯೇ ನಿರಾಕರಿಸಿಬಿಡುತ್ತದೆ. ಇಷ್ಟಾದರೂ ಇಲ್ಲಿನ ತಾರ್ಕಿಕ ಪಲ್ಲಟ ಮಾತ್ರ ಅವೆರಡನ್ನೂ ಒಂದೇ ಆಯ್ಕೆಯ ಎರಡು ಸಂಗತಿಗಳೋ ಎಂಬಂತೆ ಒಂದು ನಿರ್ಲಿಪ್ತಿಯ ದನಿಯಲ್ಲಿ ಮುಂದಿಡುತ್ತಿದೆ. ಈ ಪಲ್ಲಟದ ಅನಿರೀಕ್ಷಿತತೆ ಒಂದು ಕ್ಷಣ ಕೇಳುಗನಾದ ಕೂಡಲಸಂಗಮನನ್ನೂ ಅಲುಗಾಡಿಸಿರಲು ಸಾಕು. ಇಲ್ಲಿಯ ವ್ಯಾಕರಣ ನುಡಿಯ ಜಾಡನ್ನು ಮಾತ್ರವಲ್ಲದೆ ಭಕ್ತಿಯನ್ನೂ ಅಲುಗಾಡಿಸಬಲ್ಲದಾಗಿದೆ. ಇದು ಭಕ್ತಿಯನ್ನು ಹಿತದ ನಂಟಿನಿಂದ ಬಿಡಿಸುವ ಎದೆಗಾರಿಕೆಯನ್ನು ತೋರುತ್ತದೆ.

ಲೋಕದ ಎಲ್ಲ ಅಹಿತಗಳನ್ನು ಅವು ಇರುವಂತೆಯೇ ಕಾಣುವ ಹಾಗೂ ಸ್ವೀಕರಿಸುವ ಈ ಧೈರ್ಯ ಭಕ್ತನನ್ನೂ ದೇವನನ್ನೂ ಬೇರೊಂದು ಬಗೆಯ ಸಂಬಂಧದಲ್ಲಿ ಸ್ಥಾಪಿಸುತ್ತದೆ. ಇನ್ನೊಂದು ನಿಟ್ಟಿನಿಂದ ನೋಡುವುದಾದರೆ ಅಹಿತವನ್ನು ದೇವನೊಂದಿಗಿನ ಸಂಬಂಧವು ಸ್ಥಾಪನೆಗೊಳ್ಳುವ ನಿಟ್ಟಿನಲ್ಲಿನ ಒಂದು ಅನಿವಾರ್ಯವನ್ನಾಗಿ ಮಾಡುತ್ತದೆ. ಬೇರೊಂದು ವಚನವು ಹೇಳುವಂತೆ, ‘ಶಿವಭಕ್ತನಾಗಿ ತನ್ನ ಹಿಡಿದಹನೆಂದು ಹೋದರೆ ನುಗ್ಗು ಮಾಡುವ, ನುಸಿಯ ಮಾಡುವ, ಮಣ್ಣ ಮಾಡುವ, ಮಸಿಯ ಮಾಡುವ’. ಇದು ಭಕ್ತಿಯೆಂಬ ಅಸ್ತಿತ್ವದ ಅನಿವಾರ್ಯವೂ ಆಗಿದೆ. ಇದು ಸಂಭವಿಸಿದಾಗ ಮಾತ್ರ ‘ಕಡೆಗೆ ತನ್ನಂತೆ ಮಾಡುವ’ ಪ್ರಕ್ರಿಯೆ ಸಾಧ್ಯವಾಗುತ್ತದೆ. ಹೀಗೆ ಅಹಿತವನ್ನು ಭಕ್ತಿಯ ಅನಿವಾರ್ಯ ಅಂಗವಾಗಿಸುವ ದರ್ಶನ ಮಾತ್ರವೇ ಅದನ್ನು ಇನ್ನೊಂದು ಅತಿರೇಕವಾದ ‘ತೋರುಂಬ ಲಾಭ’ವಾಗುವ ಅಪಾಯದಿಂದ ಪಾರುಮಾಡಬಲ್ಲದು. ಬಸವಣ್ಣನ ಕ್ರಾಂತಿಗೆ ಹೊರಗಿನ ಆಯಾಮಗಳಿರುವುದು ವೇದ್ಯವೇ. ಆದರೆ ಅದಕ್ಕೆ ಅಷ್ಟೇ ಮುಖ್ಯವಾದ ಒಳಗಿನ ಆಯಾಮಗಳಿರುವುದನ್ನು ಗಮನಿಸದಿರುವಂತಿಲ್ಲ. ಆ ನಿಟ್ಟಿನಲ್ಲಿ ಇದೊಂದು ಕಿರುನೋಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.