ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಎಂಬ ಜಗದ್ಗುರು

ಅಕ್ಷರ ಗಾತ್ರ

ವಾರಣಸೀಂ ಗಮಿಷ್ಯಾಮಿ ಗತ್ವಾ ವೈ ಕಾಶೀನಾಂ ಪುರೀಂ ।

ಅಂಧಭೂತಸ್ಯ ಲೋಕಸ್ಯ ಕರ್ತಾ ಸ್ಮ್ಯಸದೃಶಾಂ ಪ್ರಭಾಂ ।।

ಇದು ಲಲಿತವಿಸ್ತರದ ಮಾತು.

ಲಲಿತವಿಸ್ತರ – ಇದು ಬುದ್ಧನ ಜೀವನಚರಿತ್ರೆಯನ್ನು ಕಾವ್ಯಮಯವಾಗಿ ಚಿತ್ರಿಸಿರುವ ಕೃತಿ. ಈ ಕೃತಿಯಲ್ಲಿ ಬರುವ ಮಾತು ಇದು. ಇದರ ಸಂದರ್ಭವೂ ವಿಶೇಷವಾಗಿದೆ. ಸಿದ್ಧಾರ್ಥನಾಗಿದ್ದ ಶುದ್ಧೋದನ–ಮಹಾಮಾಯೆಯರ ಮಗ ಈಗ ಸಂಬೋಧಿಯನ್ನು ಪಡೆದು ಬುದ್ಧನಾಗಿದ್ದಾನೆ. ತಾನು ಪಡೆದ ಅರಿವನ್ನು ಜಗತ್ತಿಗೆ ಉಪದೇಶಿಸಬೇಕೆಂಬ ತವಕ ಅವನಲ್ಲಿ ಮೂಡಿದೆ. ಈ ಸಂದರ್ಭದಲ್ಲಿ ಅವನಾಡಿದ ಮಾತುಗಳನ್ನು ಲಲಿತವಿಸ್ತರ ಹೀಗೆ ಹೇಳುತ್ತಿದೆ. ಇದರ ತಾತ್ಪರ್ಯ ಹೀಗೆ:

’ವಾರಾಣಸಿಗೆ ಹೋಗಿ, ಕಾಶೀನಗರವನ್ನು ಸೇರಿ, ಅಲ್ಲಿ ಕತ್ತಲೆಯಿಂದ ತುಂಬಿರುವ ಲೋಕಕ್ಕೆ ಸಾಟಿಯಿಲ್ಲದ ಬೆಳಕನ್ನು ತುಂಬುವೆ.’

ಇದರ ಜೊತೆಗೆ ಅವನು ಇನ್ನೂ ಕೆಲವು ಮಾತುಗಳನ್ನು ಆಡುತ್ತಾನೆ:

’ವಾರಾಣಸಿಗೆ ಹೋಗಿ, ಕಾಶೀನಗರವನ್ನು ಸೇರಿ, ಅಲ್ಲಿ ಶಬ್ದಹೀನವಾದ ಲೋಕವನ್ನು ಅಮೃತದುಂದುಭಿಯಿಂದ ತುಂಬುವೆನು. ವಾರಾಣಸಿಗೆ ಹೋಗಿ, ಕಾಶೀನಗರವನ್ನು ಸೇರಿ, ಅಲ್ಲಿ ಇದುವರೆಗೂ ಯಾವ ಲೋಕಗಳಲ್ಲಿಯೂ ಪ್ರವರ್ತಿತಗೊಳಿಸದಿರುವಂಥ ಧರ್ಮಚಕ್ರವನ್ನು ಪ್ರವರ್ತಿಸುತ್ತೇನೆ.’

ಬುದ್ಧ ತಾನು ಪಡೆದುಕೊಂಡ ಅರಿವನ್ನು ಮೊದಲ ಬಾರಿಗೆ ಉಪದೇಶಮಾಡಿದುದನ್ನು ಧರ್ಮಚಕ್ರಪ್ರವರ್ತನ ಎಂದು ಕರೆಯುತ್ತಾರೆ. ಹೀಗೆ ಅವನು ಕಂಡುಕೊಂಡ ಜೀವನದರ್ಶನವನ್ನು ಆರ್ಯಸತ್ಯಗಳು ಎನ್ನುತ್ತಾರೆ. ಇವು ನಾಲ್ಕು. ಜಗತ್ತು ದುಃಖದಿಂದ ಕೂಡಿದೆ; ಈ ದುಃಖಕ್ಕೆ ಕಾರಣವೂ ಇದೆ; ಈ ದುಃಖವನ್ನು ನಿರೋಧಿಸಬಹುದು; ಈ ನಿರೋಧಕ್ಕೆ ದಾರಿಯೂ ಇದೆ – ಇವೇ ನಾಲ್ಕು ಆರ್ಯಸತ್ಯಗಳು.

ಬದುಕಿನಲ್ಲಿ ಒದಗುವ ದುಃಖವನ್ನು ಹೋಗಲಾಡಿಸಿಕೊಳ್ಳಲು ಬುದ್ಧನು ತೋರಿದ ದಾರಿಯೇ ಅಷ್ಟಾಂಗಿಕಾಮಾರ್ಗ; ಎಂದರೆ, ಎಂಟು ದಾರಿಗಳು. ಸಮ್ಯಕ್‌ ದೃಷ್ಟಿ, ಸಮ್ಯಕ್‌ ಸಂಕಲ್ಪ, ಸಮ್ಯಕ್‌ ವಾಕ್‌, ಸಮ್ಯಕ್‌ ಕರ್ಮ, ಸಮ್ಯಕ್‌ ಆಜೀವ, ಸಮ್ಯಕ್‌ ವ್ಯಾಯಾಮ, ಸಮ್ಯಕ್‌ ಸ್ಮೃತಿ, ಸಮ್ಯಕ್‌ ಸಮಾಧಿ – ಇವೇ ಅಷ್ಟಾಂಗಿಕಾಮಾರ್ಗ.

ಬುದ್ಧ ಪಡೆದ ಅರಿವನ್ನು ಸಂಬೋಧಿ ಎಂದೂ ಕರೆಯುತ್ತಾರೆ; ಚೆನ್ನಾದ ಅರಿವು ಎಂಬುದು ಇದರ ತಾತ್ಪರ್ಯ. ಧ್ಯಾನ ಮತ್ತು ಪ್ರಜ್ಞೆಯಿಂದ ಅವನು ಈ ಅರಿವನ್ನು ಪಡೆದು ಜಗದ್ಗುರುವಾದ. ದುಃಖದಿಂದ ಬಿಡುಗಡೆಯನ್ನು ಪಡೆಯುವ ದಾರಿಯನ್ನು ತೋರಿಸಿದ ಮಹಾನುಭಾವ ಅವನು. ಅವನು ತೋರಿಸಿದ ದಾರಿಯಲ್ಲಿ ನಮ್ಮ ಜೀವನವನ್ನು ರೂಪಿಸಿಕೊಂಡರೆ ಬದುಕಿಗೆ ಬೆಳಕೂ ಮೂಡುತ್ತದೆ, ನೆಮ್ಮದಿಯೂ ದಕ್ಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT