ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಪೂರ್ಣಿಮಾ: ಬುದ್ಧ ಹೇಳಿದ ಮೈತ್ರಿ...

Last Updated 25 ಮೇ 2021, 21:04 IST
ಅಕ್ಷರ ಗಾತ್ರ

ಸಿದ್ಧಾರ್ಥನ ಸೋದರಸಂಬಂಧಿ ದೇವದತ್ತನ ಬಾಣಕ್ಕೆ ಹಕ್ಕಿಯೊಂದು ಸಿಕ್ಕಿ, ನರಳುತ್ತಾ ಸಿದ್ಧಾರ್ಥನ ಬಳಿ ಬಂದು ಬೀಳುತ್ತದೆ. ಆಗ ಹಕ್ಕಿ ಯಾರಿಗೆ ಸೇರಬೇಕೆಂಬ ಜಿಜ್ಞಾಸೆ ಮೂಡುತ್ತದೆ. ಕ್ಷತ್ರಿಯರ ನಿಯಮದಂತೆ ಬೇಟೆಯಾಡಿದವನಿಗೆ ಸೇರಬೇಕೆ, ಅಥವಾ ಮಾನವೀಯತೆಯುಳ್ಳ ಜೀವರಕ್ಷಕನಿಗೆ ಸೇರಬೇಕೆ - ಎಂಬ ತಾರ್ಕಿಕ ಪ್ರಶ್ನೆಗೆ ಪಂಚಾಯ್ತಿಯಲ್ಲಿ ಸಿದ್ಧಾರ್ಥನಿಗೆ ಗೆಲುವಾಗುತ್ತದೆ. ಹಾಗೆಯೇ, ರೋಹಿಣೀನದಿ ನೀರಿನ ಹಂಚಿಕೆ ವಿಚಾರದಲ್ಲಿ ಯುದ್ಧವನ್ನು ವಿರೋಧಿಸಿ ಅಹಿಂಸೆಯನ್ನು ಎತ್ತಿಹಿಡಿದ ಸಿದ್ಧಾರ್ಥನನ್ನು ಶಾಕ್ಯಸಂಘದ ನಿಯಮದಂತೆ ಸಾಮ್ರಾಜ್ಯದಿಂದ ಬಹಿಷ್ಕಾರ ಹಾಕುತ್ತಾರೆ. ಈ ಎರಡು ಘಟನೆಗಳು ಸಿದ್ಧಾರ್ಥನ ಜೀವಪರ ದನಿಗೆ ನಿದರ್ಶನಗಳು.

ಇಲ್ಲಿ ಮೊದಲನೆಯ ಘಟನೆ ಜೀವಿ(ಹಕ್ಕಿ)ಗೆ ಸಂಬಂಧಿಸಿದ್ದಾದರೆ, ಎರಡನೇ ಘಟನೆ ಮನುಷ್ಯನಿಗೆ ಸಂಬಂಧಿಸಿದ್ದು. ಎರಡರಲ್ಲೂ ಜೀವರಕ್ಷಣೆಯೇ ಪ್ರಧಾನ. ಈ ಎರಡು ಅಂಶಗಳನ್ನು ಸೇರಿಸಿ ಬುದ್ಧನು ‘ಮೈತ್ರಿ’ ಎಂದು ಕರೆದನು. ಸಾಮಾನ್ಯ ಅರ್ಥದಲ್ಲಿ ‘ಮೈತ್ರಿ’ ಪದಕ್ಕೆ ಸ್ನೇಹ; ಗೆಳೆತನ ಎಂಬ ಅರ್ಥಗಳಿವೆ. ಆದರೆ ಬುದ್ಧ ಹೇಳಿದ ‘ಮೈತ್ರಿ’ಗೆ ಒಂದು ಮೀಮಾಂಸೆ ಇದೆ. ಬಹು ವಿಸ್ತಾರವಾದ ವ್ಯಾಪ್ತಿ ಇದೆ. ಬುದ್ಧನು ಪ್ರಥಮ ಉಪದೇಶದಲ್ಲಿ ಸದ್ಗುಣಗಳ ಮಾರ್ಗದ ಬಗ್ಗೆ ಹೇಳುವಾಗ ‘ಮೈತ್ರಿ’ಯನ್ನು ಪ್ರಸ್ತಾಪಿಸುತ್ತಾನೆ. ಬುದ್ಧನ ದೃಷ್ಟಿಯಲ್ಲಿ ಮೈತ್ರಿ ಎಂದರೆ ‘ಎಲ್ಲರಿಗೂ ಸಹಭಾವನೆಯನ್ನು ವಿಸ್ತರಿಸುವುದು – ಕೇವಲ ಮಿತ್ರರಿಗಷ್ಟೇ ಅಲ್ಲ, ವೈರಿಗಳಿಗೂ ಸಹ. ಮಾನವರಿಗಷ್ಟೇ ಅಲ್ಲ, ಎಲ್ಲಾ ಜೀವಿಗಳಿಗೂ’. ‘ಮನುಷ್ಯನಿಗೆ ಪ್ರೀತಿ ಅಗತ್ಯ. ಆದರೆ ಅದೊಂದೇ ಸಾಲದು, ನಮಗೆ ಬೇಕಾದದ್ದು ಮೈತ್ರಿ. ಅದು ಪ್ರೀತಿಗಿಂತ ಹೆಚ್ಚು ವಿಶಾಲ. ಮೈತ್ರಿಗೆ ಮನುಷ್ಯರೊಂದಿಗೆ ಮಾತ್ರವಲ್ಲ, ಎಲ್ಲಾ ಜೀವಿಗಳೊಂದಿಗೆ ಸಹಬಾಳ್ವೆ ಎಂಬ ಅರ್ಥವಿದೆ’ ಎಂದು ಅವನು ಹೇಳುತ್ತಾನೆ.

ಧಮ್ಮದ ವಿಚಾರದಲ್ಲಿ ಬುದ್ಧ ತನ್ನ ಮಾರ್ಗವನ್ನು ಸ್ಪಷ್ಟಪಡಿಸುತ್ತಾನೆ. ‘ತಾನು, ಅನೇಕ ಮಾನವರಲ್ಲಿ ಒಬ್ಬ. ತನ್ನ ಸಂದೇಶ ಮನುಷ್ಯರಿಗೆ ಮನುಷ್ಯ ಬೋಧಿಸಿದ ಉಪದೇಶ’ ಎಂದು ಹೇಳುತ್ತಾನೆ. ಇವನ ಮಾರ್ಗದಲ್ಲಿ ಪರಮಾತ್ಮನಾಗಲಿ, ಆತ್ಮನಾಗಲಿ ಇಲ್ಲ. ಮರಣೋತ್ತರ ಜೀವನಕ್ಕೆ ಸ್ಥಾನವಿಲ್ಲ. ಪ್ರಪಂಚವು ದುಃಖಮಯವಾಗಿದೆ, ಆ ದುಃಖವನ್ನು ಹೇಗೆ ನಿವಾರಿಸಬೇಕು ಎಂಬುದು ಧಮ್ಮದ ಗುರಿಯಾಗಿದೆ ಎಂದು ಹೇಳುತ್ತಾನೆ. ಬುದ್ಧನ ಪ್ರಕಾರ ಧರ್ಮ ಸದ್ಧರ್ಮವಾಗಬೇಕಾದರೆ ಪ್ರಜ್ಞೆ (ಸರಿಯಾಗಿ ಆಲೋಚಿಸುವುದು), ಶೀಲ (ಸರಿಯಾಗಿ ನಡೆದುಕೊಳ್ಳುವುದು), ಕರುಣೆ (ಸರಿಯಾಗಿ ನೆರವಾಗುವುದು), ಮೈತ್ರಿ (ಎಲ್ಲಾ ಜೀವಿಗಳ ಮೇಲೆಯೂ ಪ್ರೀತಿ) ಇವುಗಳನ್ನು ಪಡೆಯಬೇಕು.

ಪ್ರತಿಯೊಂದಕ್ಕೂ ಮನಸ್ಸೇ ಕೇಂದ್ರ ಎಂದು ಹೇಳುವ ಬುದ್ಧನು ಮನಸ್ಸಿನ ಸಂಸ್ಕರಣಕ್ಕೆ ಒತ್ತು ಕೊಡುತ್ತಾನೆ. ಮನಸ್ಸಿನ ಪರಿಶುದ್ಧಿಗೆ ಉತ್ತಮ ಸಾಧನಗಳಾಗಿ, ಚಿತ್ತದ ಸರ್ವಶ್ರೇಷ್ಠ ಮತ್ತು ದಿವ್ಯ ಅವಸ್ಥೆಗಳಾಗಿ ನಾಲ್ಕು ಬ್ರಹ್ಮವಿಹಾರಗಳನ್ನು ತಿಳಿಸುತ್ತಾನೆ. ಅವುಗಳೆಂದರೆ ಮೈತ್ರಿ, ಕರುಣೆ, ಮುದಿತಾ, ಉಪೇಕ್ಷಾ. ಇವುಗಳಲ್ಲಿ ಮೈತ್ರಿಗೆ ಮೊದಲ ಸ್ಥಾನ.

ಬುದ್ಧನ ಪ್ರಕಾರ ಮನುಷ್ಯನು ಮೈತ್ರಿಭಾವವನ್ನು ಅನುಸರಿಸುವಾಗ ಅವನಿಗಾಗುವ ಎಲ್ಲಾ ಅವಮಾನ, ಅನ್ಯಾಯಗಳನ್ನು ಸಹಿಸಿಕೊಂಡು, ಆಕ್ರಮಣಕಾರರ ಮೇಲೆಯೂ ಮೈತ್ರಿಯನ್ನು ತಾಳುತ್ತಾ ಹೋಗಬೇಕು. ಆಗ ಮನಸ್ಸನ್ನು ಭೂಮಿಯಂತೆ ಅಚಲವಾಗಿ, ಗಾಳಿಯಂತೆ ಸ್ವಚ್ಛವಾಗಿ ಮತ್ತು ನದಿಯಂತೆ ಆಳವಾಗಿ ಇಟ್ಟುಕೊಳ್ಳಲು ಸಾಧ್ಯ. ಹೀಗೆ ಮಾಡಿದರೆ ಮೈತ್ರಿಯು ಕ್ಷೋಭೆಗೆ ಒಳಗಾಗುವುದಿಲ್ಲ. ಮೈತ್ರಿ ಹೃದಯದಲ್ಲಿ ಹುಟ್ಟಿದರೂ ಅದರ ವ್ಯಾಪ್ತಿ ಅನಂತವಾಗಿರಬೇಕು. ಮಾಡುವ ಆಲೋಚನೆ ವಿಶಾಲವೂ ಅಳತೆಯನ್ನು ಮೀರಿದ್ದು ಆಗಬೇಕು. ಯಾವ ದ್ವೇಷ ಭಾವನೆಯೂ ಇರಬಾರದು. ಮನುಷ್ಯ ಕರುಣೆಯನ್ನು ಮಾತ್ರ ಅನುಷ್ಠಾನ ಮಾಡಿದರೆ ಸಾಲದು; ಮೈತ್ರಿಯ ಅನುಷ್ಠಾನ ಆವಶ್ಯಕ. ಏಕೆಂದರೆ ಮೈತ್ರಿ ಸಹೃದಯ ಸ್ವಾತಂತ್ರ್ಯ. ಅದು ಎಲ್ಲವನ್ನು ಒಳಗೊಳ್ಳುತ್ತದೆ, ಮಿಂಚುತ್ತದೆ, ಹೊಳೆಯುತ್ತದೆ, ಜ್ವಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT