ಸೋಮವಾರ, ಜನವರಿ 20, 2020
27 °C

ಯೇಸು ತೋರಿದ ಅದ್ಭುತಗಳು

ವಿ. ನರಹರಿ Updated:

ಅಕ್ಷರ ಗಾತ್ರ : | |

Prajavani

ಯೇಸುವಿನ ಜೀವನವೇ ಅತ್ಯದ್ಭುತ ಪವಾಡದಂತಿದೆ. ಅವರ ಪವಾಡಗಳು ಮಾನವೀಯ ಕಾಳಜಿ, ಸಹಜೀವಿಗಳಲ್ಲಿ ಅನುಕಂಪನ, ಪ್ರೀತ್ಯಾದರ ಮತ್ತು ದೇವನೆಡೆಗೆ ದೃಷ್ಟಿಯನ್ನು ತಿರುಗಿಸುವ ಗುರಿಗಳನ್ನು ತೋರಿಸುತ್ತವೆ...

ಇಸ್ರೇಲಿನ ಗಲಿಲಿಯಾ ಸಮೀಪದಲ್ಲಿ ಕಾನಾ ಎಂಬ ಒಂದು ಹಳ್ಳಿಯಿತ್ತು. ಅಲ್ಲೊಂದು ಮದುವೆಯ ಸಮಾರಂಭ. ತನ್ನ ತಾಯಿ ಮೇರಿಯೊಂದಿಗೆ ಯೇಸುವೂ ಅಲ್ಲಿಗೆ ಆಹ್ವಾನಿತರಾಗಿ ಹೋದರು. ಔತಣಕೂಟದ ನಡುವೆಯೇ ದ್ರಾಕ್ಷಾರಸದ ಸರಬರಾಜು ಮುಗಿದುಹೋಗುತ್ತದೆ. ಆತಿಥೇಯರಿಗೆ ಅತಿಥಿಗಳ ಮುಂದೆ ಅವಮಾನದ ಪ್ರಸಂಗವು ಎದುರಾಗುತ್ತಿತ್ತು. ಮೇರಿ ತಾಯಿಯು ಈ ಸಂಗತಿಯನ್ನು ಗಮನಿಸಿ, ಖಾಲಿಯಾಗಿದ್ದ ಕಲ್ಲಿನ ಬಾನಿಗಳಿಗೆ ನೀರನ್ನು ತುಂಬಿಸುವಂತೆ ಕೆಲಸಗಾರರಿಗೆ ಹೇಳುತ್ತಾಳೆ. ಯೇಸುವು ದ್ರಾಕ್ಷಾರಸವನ್ನು ಸರಬರಾಜು ಮಾಡುತ್ತಿದ್ದವರನ್ನು ಕರೆದು, ‘ಈ ದ್ರಾಕ್ಷಾರಸವನ್ನು ಜನರಿಗೆ ಹಂಚಿ’ ಎನ್ನುತ್ತಾರೆ. ಬೆರಗೋ ಬೆರಗು! ನೀರೆಲ್ಲ ಅತ್ಯುತ್ತಮ ದ್ರಾಕ್ಷಾರಸವಾಗಿರುತ್ತದೆ. ಇದು ಯೇಸು ಪ್ರಕಟಿಸಿದ ಮೊದಲ ಚಮತ್ಕಾರ.

ಒಮ್ಮೆ ಒಬ್ಬ ಹುಟ್ಟುಕುರುಡನನ್ನು ನೋಡಿ, ತನ್ನ ಎಂಜಲಿನಿಂದ ಮಣ್ಣಿನ ಲೇಪನವನ್ನು ಮಾಡಿ, ಆತನ ಕಣ್ಣುಗಳಿಗೆ ಲೇಪಿಸಿ ಯೇಸುವು, ‘ನೀನು ಸಿಲೋ ವಾನ್ ಎಂಬಲ್ಲಿನ ಕೊಳಕ್ಕೆ ಹೋಗಿ ತೊಳೆದುಕೋ’, ಎನ್ನುತ್ತಾರೆ. ಆತ ಹಾಗೆ ಮಾಡಿದಾಗ ಆತನಿಗೆ ದೃಷ್ಟಿಶಕ್ತಿ ಬರುತ್ತದೆ. ಮುಂದೆ ಅಧಿಕಾರಿಯ ಮಗನಿಗೆ ಆರೋಗ್ಯದಾನ, ರೋಗಿಯನ್ನು ಸ್ವಸ್ಥಗೊಳಿಸಿದ್ದು, ದೆವ್ವಗಳು ಹೊಕ್ಕವರಿಂದ ಭೂತೋಚ್ಛಾಟನೆ ಮಾಡಿದ್ದು, ಕುಷ್ಠರೋಗಿಗೆ ಸೌಖ್ಯವನ್ನು ಕರುಣಿಸಿದ್ದು, ಪಾರ್ಶ್ವವಾಯು ಪೀಡಿತನನ್ನು, ‘ನಾನು ಆದೇಶಿಸುತ್ತೇನೆ, ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’, ಎಂದು ಗುಣಪಡಿಸಿದ್ದು, ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಐದು ಸಾವಿರ ಮಂದಿಗೆ ಹೊಟ್ಟೆ ತುಂಬುವಷ್ಟು ಉಂಡರೂ ಇನ್ನೂ ಆಹಾರ ಉಳಿಯುವಂತೆ ಮಾಡಿದ್ದು, ಬಿರುಗಾಳಿಯನ್ನು ಬೆದರಿಸಿ ಶಾಂತಗೊಳಿಸಿದ್ದು, ನೀರಿನ ಮೇಲೆ ನಡೆದುಬಂದದ್ದು – ಹೀಗೆ ಸಾಗಿತ್ತು ಯೇಸುವಿನ ಅಲೌಕಿಕ ಚಮತ್ಕಾರಗಳ ಸಾಲು ಸಾಲು. ಅಷ್ಟೇನು, ಮಸಣಯಾತ್ರೆಯಲ್ಲಿ ಸಾಗಿದ್ದ ಶವವನ್ನು ಜೀವಂತಗೊಳಿಸಿದ್ದು, ಮರಣಿಸಿ ಹಲವು ದಿನಗಳ ಅನಂತರವೂ ತನ್ನ ಮಿತ್ರನನ್ನು ಬದುಕಿಸಿದ್ದು, ಆ ಸಾಲಿನ ವಿಚಿತ್ರ ಪ್ರಸಂಗಗಳೇ. ಯೇಸುವು ಹೀಗೆ ತೋರಿದ ಅಲೌಕಿಕ ಪರಿಣಾಮಗಳು ಕನಿಷ್ಠ ಮೂವತ್ತೈದರಷ್ಟಿವೆ.

ವಿಶೇಷವೆಂದರೆ, ಯೇಸುವು ತಾನು ದೈವೀಶಕ್ತಿಯಿಂದ ಪವಾಡ ನಡೆಸುತ್ತೇನೆ ಎಂದೇನೂ ಹೇಳಿರಲಿಲ್ಲ. ರೋಗವನ್ನು ಗುಣಪಡಿಸುವವನ ವ್ಯಕ್ತಿತ್ವ, ಮಂತ್ರ, ಪ್ರಾರ್ಥನೆಗಳಿಗಿಂತ ಗುಣ ಹೊಂದಬೇಕಾದವನ ದೈವವಿಶ್ವಾಸವೇ ಮುಖ್ಯ ಎಂದು. ಯಾರ ರೋಗವನ್ನಾದರೂ ಗುಣಪಡಿಸಿದಾಗ ಆತ ಹೇಳುತ್ತಿದ್ದುದು, ‘ನಿನ್ನ ವಿಶ್ವಾಸವೇ ನಿನ್ನನ್ನು ಗುಣಪಡಿಸಿತು’ ಎಂದು. ಯೆಹೂದ್ಯರು, ‘ದೇವರಿಗೆ ಎಲ್ಲವೂ ಸಾಧ್ಯ’ ಎಂದರೆ ಯೇಸುವು ‘ದೇವರಲ್ಲಿ ವಿಶ್ವಾಸವಿಡುವವನಿಗೆ ಎಲ್ಲವೂ ಸಾಧ್ಯ’ ಎಂದರು (ಮಾರ್ಕನ ಸೂಳ್ನುಡಿ).

‘ನಾನು ಮಾಡುವ ಕೆಲಸವನ್ನು ಯಾರಾದರೂ ಮಾಡಬಲ್ಲರು’, ಎಂಬ ಕ್ರಿಸ್ತನ ಹೇಳಿಕೆಯು (ಜಾನನ ಸುವಾರ್ತೆ) ಎಲ್ಲರನ್ನೂ ಕುರಿತೇ ಹೇಳಿದ್ದು. ಅಂದರೆ ನಮ್ಮ ಬುದ್ಧಿಗೆ ಇರುವ ಕುರುಡುತನ, ನಮ್ಮ ಮೂಕತನ ಮೊದಲಾದವುಗಳನ್ನು ದೂರ ಮಾಡಲು ದೇವನ ಮಾತುಗಳನ್ನು ಅನುಷ್ಠಾನಕ್ಕೆ ತರುವ ವಿಶ್ವಾಸವನ್ನು ತೋರಿಸಿದರೆ ನಾವೂ ಸಹ ಅಲೌಕಿಕ ಶಕ್ತಿಗಳನ್ನು ತೋರಿಸಬಹುದೆಂದು ಭಾವಾರ್ಥ. ‘ನಾನು ಖಂಡಿತವಾಗಿ ಹೇಳುತ್ತೇನೆ. ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವೇನಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದರೂ ಅದು ಹೋಗುತ್ತದೆ. ನಿಮ್ಮಿಂದ ಅಸಾಧ್ಯವಾದುದು ಯಾವುದೂ ಇರುವುದಿಲ್ಲ’, (ಮತ್ತಾಯನ ನಲ್ನುಡಿ) ಎಂದು ಯೇಸುವು ಅಚಲಶ್ರದ್ಧೆಗೆ ವ್ಯಕ್ತಿಗತ ಇಂಬನ್ನು ಕೊಡುತ್ತಾರೆ. ‘ವಿಶ್ವಾಸ’ ಎಂಬುದು ಒಂದು ತತ್ವ ಅಥವಾ ನಂಬಿಕೆಯ ಬೋಧನೆಗಳಿಗೆ ಬದ್ಧವಾದುದಲ್ಲ. ಇದೊಂದು ಆಳವಾದ ಖಾಸಗಿ ನಂಬಿಕೆ, ಆತ್ಮವಿಶ್ವಾಸ. ಅದು ದೃಢವಾಗುತ್ತಾ ಹೋಗಿ ಪ್ರಪಂಚದಲ್ಲಿರುವ ಒಳಿತಿನ ಕುರಿತು, ಸತ್ಯದ ಕುರಿತು ನಂಬಿಕೆಯು ಬಲಿತು, ಕೊನೆಗೆ ಅದು ತನ್ನಲ್ಲಿಯೇ ಇದೆ ಎಂಬ ಅರಿವಿನಲ್ಲಿ ಪರ್ಯವಸಾನವಾಗಬೇಕು. ‘ಒಬ್ಬನು ಮನಸ್ಸಿನಲ್ಲಿ ಸಂದೇಹಪಡದೆ ತಾನು ಹೇಳಿದ್ದು ಸಂಭವಿಸುತ್ತದೆ ಎಂದು ವಿಶ್ವಾಸವಿಟ್ಟರೆ, ನಾನು ನಿಮಗೆ ಖಾತ್ರಿಯಾಗಿ ಹೇಳುತ್ತೇನೆ, ಆತ ಹೇಳಿದಂತೆಯೇ ಆಗುತ್ತದೆ’ (ಮಾರ್ಕನ ಸುವಾರ್ತೆ) ಎಂದು ಯೇಸು ಹೇಳಿದಾಗ ಈ ತತ್ವವು ಧ್ವನಿಸುತ್ತದೆ.

ಯೇಸುವಿನ ಪವಾಡಗಳು ಅವರ ಮಾನವೀಯ ಕಾಳಜಿ, ಸಹಜೀವಿಗಳಲ್ಲಿ ಅನುಕಂಪನ, ಪ್ರೀತ್ಯಾದರ ಮತ್ತು ದೇವನೆಡೆಗೆ ದೃಷ್ಟಿಯನ್ನು ತಿರುಗಿಸುವ ಗುರಿಗಳನ್ನು ತೋರಿಸುತ್ತವೆ. ಅಂತಿಮವಾಗಿ ಯೇಸುವನ್ನು ಶಿಲುಬೆಗೆ ಏರಿಸಿದಾಗಲೂ ಜನಗಳು, ಯಹೂದಿಗಳು ಮತ್ತು ಆತನ ನೆಚ್ಚಿನ ಶಿಷ್ಯರೂ ಸಹ ಯೇಸುವಿನಿಂದ ಕೊನೆ ಗಳಿಗೆಯ ಚಮತ್ಕಾರಕ್ಕಾಗಿ ಕಾದದ್ದೇ ಕಾದದ್ದು! ಆದರೆ ಅತೀವ ಯಾತನಾಮಯ ಸನ್ನಿವೇಶದಲ್ಲೂ ಯೇಸು ಪವಾಡಕ್ಕೆ ಕೈಹಾಕಲೇ ಇಲ್ಲ.

ಸ್ವತಃ ಯೇಸುವಿನ ಜೀವನವೇ ಒಂದು ಅತ್ಯದ್ಭುತ ಪವಾಡದಂತಿದ್ದು ಆತನ ಜನಪರ ಕರುಣೆಗಳ ಸಂದೇಶಗಳೇ ಎರಡು ಸಾವಿರ ವರ್ಷಗಳ ಬಳಿಕವೂ ಬಾಳಿಕೆ ಬಂದದ್ದೇ ಒಂದು ಬಲುದೊಡ್ಡ ಪವಾಡವಲ್ಲವೆ?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು