ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಗುರು ದತ್ತಾತ್ರೇಯ

Last Updated 6 ಡಿಸೆಂಬರ್ 2022, 21:29 IST
ಅಕ್ಷರ ಗಾತ್ರ

ನಮ್ಮ ಜೀವನವನ್ನು ನಮಗೆ ಸಹನೀಯಗೊಳಿಸುವಲ್ಲಿ ಗುರುವಿನ ಪಾತ್ರ ದೊಡ್ಡದು. ಗುರು ಎಂದರೆ ಅರಿವಿನ ಮೂರ್ತರೂಪ. ಅರಿವು ಇಲ್ಲದಿದ್ದರೆ ಜೀವನದ ಸಂಕಟಗಳನ್ನು ಪರಿಹರಿಸಿಕೊಳ್ಳುವುದು ಕಷ್ಟ. ಹೀಗೆ ನಮ್ಮ ಜೀವನಕ್ಕೆ ಒದಗುವ ಅರಿವನ್ನು ನಮಗೆ ಕಾಣಿಸುವವನೇ ಗುರು. ‘ಅರಿವು’ – ಇದು ಲೌಕಿಕ ತಿಳಿವಳಿಕೆಯನ್ನು ನೀಡುವ ಸಾಮಾನ್ಯಜ್ಞಾನವೂ ಹೌದು, ಲೋಕೋತ್ತರವಾದ ಬೆಳಕನ್ನು ಕಾಣಿಸಬಲ್ಲ ವಿಶೇಷಜ್ಞಾನವೂ ಹೌದು.

ನಮ್ಮ ಸಂಸ್ಕೃತಿಯಲ್ಲಂತೂ ಗುರುತತ್ತ್ವಕ್ಕೆ ತುಂಬ ಎತ್ತರದ ಸ್ಥಾನವನ್ನು ನೀಡಲಾಗಿದೆ. ಇದಕ್ಕೆ ಕಾರಣವಾದರೂ ಸ್ಪಷ್ಟ: ಅರಿವಿನ ಶಕ್ತಿಯ ಮೂಲವೇ ಗುರುತತ್ತ್ವ ಆಗಿರುವುದರಿಂದ ಇಂಥದೊಂದು ಮನ್ನಣೆ ದಕ್ಕಿದೆ. ಈ ಕಾರಣದಿಂದಲೇ ಗುರುವನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಗಮವನ್ನಾಗಿ ಒಕ್ಕಣಿಸಿರುವುದು. ತ್ರಿಮೂರ್ತಿಗಳ ಸ್ವರೂಪದಲ್ಲಿ ನಮ್ಮ ಸಂಸ್ಕೃತಿ ಕಾಣಿಸಿರುವ ಗುರುತತ್ತ್ವದ ಮತ್ತೊಂದು ವಿಶೇಷ ಆಯಾಮವೇ ಅವಧೂತಗುರು ದತ್ತಾತ್ರೇಯ.

ಲೋಕಕ್ಕೆ ಅರಿವನ್ನು ನೀಡಬಲ್ಲ ಗುರು ಹೇಗಿರಬೇಕು ಎಂಬುದಕ್ಕೆ ಅಪೂರ್ವ ಸಂಕೇತವಾಗಿದೆ ಅವಧೂತತತ್ತ್ವ. ಗುರುವಿನ ಉದ್ದೇಶ ಲೋಕಕ್ಕೆ ಅರಿವನ್ನು ನೀಡುವುದು; ಆ ಮೂಲಕ ಜನರ ಬವಣೆಗಳನ್ನು ಪರಿಹರಿಸುವುದು; ಪ್ರಪಂಚದಲ್ಲಿ ಆನಂದವನ್ನು ನೆಲೆಯಾಗಿಸುವುದು. ಇಂಥ ವಿಶಾಲ ಭಾವ–ಬುದ್ಧಿಗಳ ಪ್ರಪಂಚದಲ್ಲಿ ವಿಹರಿಸುತ್ತಿರುವಂಥ ಗುರುವು ಜಗತ್ತಿನ ಎಣಿಕೆಗೆ ಸುಲಭವಾಗಿ ದಕ್ಕಲಾರ. ಮಾತ್ರವಲ್ಲ, ಅವನಿಗೆ ಜಗತ್ತಿನ ಯಾವ ಅಂಟು–ಕೊಳೆಗಳೂ ಸೋಂಕಲಾರವು. ಅವಧೂತನ ಕಲ್ಪನೆಯಲ್ಲಿ ಕಾಣುವ ಪ್ರಧಾನ ಲಕ್ಷಣಗಳೇ ಇವು. ಮೊದಲನೆಯದಾಗಿ ಅವನು ನಮ್ಮ ಊಹೆಯನ್ನು ಮೀರಿದವನಾಗಿರುತ್ತಾನೆ; ಗುರುವಾದವನು, ಎಂದರೆ ಜ್ಞಾನಿಯಾದವನು ಸಾಮಾನ್ಯವಾಗಿ ‘ಹೀಗೇ ಇರುತ್ತಾನೆ’ ಎಂಬ ಕಲ್ಪನೆಯನ್ನು ನಾವು ಮಾಡಿಕೊಂಡಿರುತ್ತೇವೆ. ‘ಅವನು ಸದಾ ಶುಭ್ರವಾಗಿರುತ್ತಾನೆ; ಒಳ್ಳೆಯ ಬಟ್ಟೆಯನ್ನು ತೊಟ್ಟಿರುತ್ತಾನೆ; ಅವನ ಹಾವ–ಭಾವಗಳು ನಮ್ಮ ಮನಸ್ಸನ್ನು ಆಕರ್ಷಿಸುವಂತೆ ಇರುತ್ತವೆ.’ ಹೀಗೆಲ್ಲ ನಾವು ಅಂದುಕೊಳ್ಳುತ್ತೇವೆ. ಆದರೆ ಅವಧೂತ ಹೀಗೆ ಇರುವವನಲ್ಲ; ಅವನು ಪರಮಜ್ಞಾನಿಯೇ ಹೌದು; ಹೀಗೆಂದು ಅವನನ್ನು ನಾವು ಸುಲಭವಾಗಿ ಗುರುತಿಸಲಾರೆವು. ಅವನು ಬಾಲನಂತಿರಬಹುದು, ಉನ್ಮತ್ತನಂತೆ ಇರಬಹುದು, ಪಿಶಾಚದಂತೆಯೂ ಇರಬಹುದು – ಎನ್ನುತ್ತದೆ, ಪರಂಪರೆ. ಈ ಮಾತಿನ ಅರ್ಥ ಹಲವು ಪದರಗಳಲ್ಲಿ ಹರಡಿಕೊಂಡಿದೆ. ಜಗತ್ತು ನನ್ನನ್ನು ‘ಜ್ಞಾನಿ ಎಂದು ಗುರುತಿಸಬಹುದು’ ಎಂಬ ಆಕರ್ಷಣೆಯನ್ನೂ ಬಯಕೆಯನ್ನೂ ಸಹಜವಾಗಿಯೇ ಕಳೆದುಕೊಂಡವವನಾಗಿರುತ್ತಾನೆ, ಅವಧೂತ ಎಂಬುದು ಇಲ್ಲಿರುವ ಸ್ವಾರಸ್ಯ.

ಲೋಕದ ಆದರಕ್ಕೂ ಅನಾದರಕ್ಕೂ ಗಮನ ಕೊಡದಂಥ ಮಾನಸಿಕತೆ ಹೇಗೆ ಒದಗುತ್ತದೆ? ಇದೇನು ಸುಲಭವಾಗಿ ದಕ್ಕುವಂಥ ಸಂಗತಿಯಲ್ಲ. ಅವಧೂತನು ಜಗತ್ತಿನ ವಿವರಗಳನ್ನು ’ಇದು ಶ್ರೇಷ್ಠ’ ಎಂದೋ, ಅಥವಾ ‘ಇದು ಕನಿಷ್ಠ’ ಎಂದೋ ಲೆಕ್ಕಾಚಾರ ಮಾಡುವವನಲ್ಲ; ಅವನು ಎಲ್ಲೆಲ್ಲೂ ಎಲ್ಲರಲ್ಲಿಯೂ ಏಕಭಾವವನ್ನೇ ಕಾಣುತ್ತಾನೆ. ಗುರುವಾದವನು – ಎಂದರೆ ದಿಟದ ಅರಿವನ್ನು ಪಡೆದಿರುವವನು – ಲೋಕವನ್ನು ಕಾಣಬೇಕಾದ ಕ್ರಮವೇ ಇದಲ್ಲವೆ? ಯಾರಿಗೆ ಶ್ರೇಷ್ಠ–ಕನಿಷ್ಠಗಳ ಗೊಡವೆಯಿಲ್ಲವೋ ಅವರಿಗೆ ಸಂಮಾನ–ಅವಮಾನಗಳ ಬಗ್ಗೆ ಗಮನವಾದರೂ ಏಕಿದ್ದೀತು?

ಜಗತ್ತಿನಲ್ಲಿ ಒಳಿತು ನೆಲೆಯಾಗಬೇಕೆಂಬ ತುಡಿತದಿಂದ ಕ್ರಿಯಾಶೀಲರಾಗಿರುವವರು ಅಹಂಕಾರ–ಮಮಕಾರಗಳನ್ನು ತ್ಯಾಗಮಾಡಬೇಕಷ್ಟೆ. ಇಂಥವನೇ ಲೋಕಗುರುವಾಗಲು ಸಾಧ್ಯ. ಅವಧೂತಗುರು ದತ್ತಾತ್ರೇಯನ ಪ್ರತೀಕದಲ್ಲಿ ಇಂಥದೊಂದು ಕಾಣ್ಕೆ ಅಡಗಿದೆ. ‘ನಾನು ತಿನ್ನುವುದು, ಮಾಡುವುದು, ಕೊಡುವುದು – ಪ್ರತಿಯೊಂದು ಕೂಡ ನನ್ನದಲ್ಲ; ನಾನು ಸದಾ ಶುದ್ಧ; ಆ ಶುದ್ಧತತ್ತ್ವಕ್ಕೆ ಅಹಂಕಾರ–ಮಮಕಾರಗಳೂ ಇಲ್ಲ, ಹುಟ್ಟು–ಸಾವುಗಳೂ ಇಲ್ಲ’ ಎಂಬ ಮಹಾತತ್ತ್ವದ ಸಾಕಾರರೂಪವೇ ದತ್ತಾತ್ರೇಯ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT