ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಯ ಚಂಬೆಳಕಿಗೆ ಸಂಸ್ಕೃತಿಯ ಕಳೆ

Last Updated 21 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬೆಳಕಿನ ಹಬ್ಬ ದೀಪಾವಳಿಗೂ ಮನೆ ಬೆಳಗುವ ಹೆಣ್ಣುಮಕ್ಕಳ ಬದುಕಿಗೂ ಸಾಮ್ಯತೆ ಇದೆ. ತಮದಿಂದ ಬೆಳಕಿನೆಡೆಗೆ ಬದುಕು ಹೊರಳಿಕೊಳ್ಳಬೇಕಾದಾಗೆಲ್ಲ ಹೆಣ್ಣುಮಕ್ಕಳ ಕಾಣ್ಕೆ ದೊಡ್ಡದಿದೆ.ಮನಸ್ಸುಗಳನ್ನು, ಸಂಸ್ಕೃತಿಯನ್ನು ಏಕಕಾಲಕ್ಕೆ ಬೆಸೆಯುವ ಹಬ್ಬ ಎನ್ನುವ ಹಿನ್ನೆಲೆಯಲ್ಲಿ ಮಲೆನಾಡಿನ ದೀವರ ಜನಾಂಗದ ಮಹಿಳೆಯರು ಆಚರಿಸುವ ದೀಪಾವಳಿ ವಿಶೇಷವಾಗಿದೆ.

ದೀಪಾವಳಿಯನ್ನು ಬೋರೆ ಹಬ್ಬ, ದೊಡ್ಡಬ್ಬ, ವರ್ಷತೊಡಕು ಹೀಗೆ ಮೂರು ದಿನಗಳ ಕಾಲ ದೀವರ ಮಹಿಳೆಯರು ವಿಶಿಷ್ಟವಾಗಿ ಆಚರಿಸುತ್ತಾರೆ. ಈ ಸಂಭ್ರಮದ ತಿದಿ ಊದುವುದೇ ಪ್ರಕೃತಿಯ ಆರಾಧನೆಯಿಂದ.

ಹಸೆ ಚಿತ್ತಾರ...ಬುಟ್ಟಿಗೆ ಹಸೆ ಬರೆಯುತ್ತಿರುವದಿಗಟೆಕೊಪ್ಪದ ಕುಸುಮ ಅಣ್ಣಪ್ಪ...ಚಿತ್ರ: ಅಣ್ಣಪ್ಪ ದಿಗಟೆಕೊಪ್ಪ
ಹಸೆ ಚಿತ್ತಾರ...
ಬುಟ್ಟಿಗೆ ಹಸೆ ಬರೆಯುತ್ತಿರುವ
ದಿಗಟೆಕೊಪ್ಪದ ಕುಸುಮ ಅಣ್ಣಪ್ಪ...
ಚಿತ್ರ: ಅಣ್ಣಪ್ಪ ದಿಗಟೆಕೊಪ್ಪ

ಮೊದಲ ದಿನದ ಬೋರೆ ಹಬ್ಬದಂದು ಬೋರೆಗೊಚ್ಚು ಅಂದರೆ ಗೊಚ್ಚು ಮಣ್ಣನ್ನು ಮನೆಯ ಅಂಗಳ, ಬಾಗಿಲು, ಉಬ್ಬು ತಗ್ಗಾದ ಕೊಟ್ಟಿಗೆಯ ಭಾಗಕ್ಕೆ ಹಾಕಿ ಸಮತಟ್ಟು ಮಾಡುತ್ತಾರೆ. ನಂತರ ಸಗಣಿಯಿಂದ ಅಂಗಳವನ್ನು ಸಾರಿಸಿ, ಜೇಡಿ ಕೆಮ್ಮಣ್ಣು ಬಳಸಿ ಒರೆಯಲಾಗುತ್ತದೆ. ನಂತರ ರಂಗೋಲಿಯಿಂದ ಸಿಂಗರಿಸಲಾಗುತ್ತದೆ.

ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಹೆಣ್ಣುಮಕ್ಕಳೆಲ್ಲ ಸೇರಿ ಹೊಸ ಮಣ್ಣಿನ ಮಗೆಗೆ (ಮಡಿಕೆಗೆ) ಬಾವಿಯಿಂದ ನೀರು ತಂದು ಹಾಕುತ್ತಾರೆ. ಕಲ್ಲಿನ ಹರಳು ಹಾಕಿ ಬಲೀಂದ್ರನ ತಂದು ಅಡಿಕೆ ಹಿಂಗಾರ, ಹಸಿ ಅಡಿಕೆ, ವೀಳ್ಯೆದೆಲೆ ,ಹೂವು ಬೋರೆ ಕಣ್ಣಿ(ಜಾನುವಾರುಗಳನ್ನ ಕಟ್ಟುವ ಹಗ್ಗ,ಕಣ್ಣಿ,ಮಿಣಿ)ಗಳನ್ನ ಇಟ್ಟು ಪೂಜಿಸಲಾಗುತ್ತದೆ. ಆ ದಿನ ರಾಜ್ಯದ ಮಕ್ಕಳನ್ನು ನೋಡಲು ಬಲಿಚಕ್ರವರ್ತಿ ಬರುತ್ತಾನೆ ಎಂಬ ನಂಬಿಕೆ ಇರುವುದರಿಂದ ಅವನನ್ನು ಆರಾಧಿಸಲಾಗುತ್ತದೆ.

ಅಮಾವಾಸ್ಯೆಯ ದಿನದಂದು ಮತ್ತೆ ಮನೆಯನ್ನೆಲ್ಲ ಚೊಕ್ಕ ಮಾಡಿ, ಅಡಿಕೆ, ತೆಂಗು, ಮಾವು ಇತ್ಯಾದಿ ಮರಗಳಿಗೆ ಜೇಡಿ ಕೆಮ್ಮಣ್ಣಿನಿಂದ ಚಿತ್ತಾರ ಬರೆಯಲಾಗುತ್ತದೆ. ಜತೆಗೆ ಗೋಪೂಜೆಗಾಗಿ ಗೋವುಗಳನ್ನು ಸಿಂಗರಿಸಲಾಗುತ್ತದೆ. ಪುರುಷರು ದನಕರುಗಳ ಕೋಡಿಗೆ ಹಸಿರು, ಕೆಂಪು ಬಣ್ಣ ಬಳಿದು ಬ್ಯಾಗಡೆ (ಬಣ್ಣದ ಪೇಪರ್‌) ಹಚ್ಚಿ , ಬಾಸಿಂಗದ ಜತೆ ಹೂವಿನಿಂದ ಸಿಂಗರಿಸುತ್ತಾರೆ.

ಮಹಿಳೆಯರು ಹಿಂದಿನ ದಿನವೇ ಬೇಯಿಸಿದ ಅಕ್ಕಿಹಿಟ್ಟಿನ ಚಪ್ಪೆ ರೊಟ್ಟಿಯನ್ನು ಮಾಡುತ್ತಾರೆ. ಹೆಸರುಕಾಳು, ಕಡಲೆ ನೆನೆಹಾಕಿ, ಹೋಳಿಗೆ ಸೇರಿದಂತೆ ತರಹೇವಾರಿ ಸಿಹಿತಿಂಡಿ ಕಡುಬು ಮಾಡುತ್ತಾರೆ.

ದೊಡ್ಡಬ್ಬದಲ್ಲಿ ಗೋಪೂಜೆ ಮುಖ್ಯವಾದದು. ಕೊಟ್ಟಿಗೆ ಮುಖ್ಯಭಾಗದಲ್ಲಿ ಜೇಡಿಯ ಬಳಿದು ಕೆಮ್ಮಣ್ಣು ಎಳೆಗಳ ಗೋವಿನ ಪಾದ ಹೋಲುವ ಮೂರು ಎಳೆಗಳ ಚಿತ್ತಾರದ ಬರೆದು, ಆ ಭಾಗದಲ್ಲಿ ಮನೆಯಲ್ಲಿದ್ದ ಬೂರೆಮಗೆಯನ್ನಿಡುತ್ತಾರೆ. ದನಕರುಗಳ ಕೊರಳಿಗೆ ಅಡಿಕೆ ಸರ, ಹೂವಿನ ದಂಡೆ, ಎಲೆ, ಚಪ್ಪೆರೊಟ್ಟಿ ಹಿಂಗಾರ ಮಾವಿನ ಕೊನೆ, ಹಸಿಯಡಿಕೆ ಹಿಂಗಾರ ಸೇರಿಸಿದ ಪ್ರಸಾದದ ಗೊಂಚಲನ್ನು ಕಟ್ಟಲಾಗುತ್ತದೆ. ಬೇಣಿನ ಮರದಿಂದ ಆದ ಪುಂಡಿನಾರಿನಿಂದ ಮಾಡಿದ ಕಣ್ಣಿ ಕೊರಳದಂಡೆಯನ್ನು ಕಟ್ಟಲಾಗುತ್ತದೆ.

ಪುರುಷರು ಎತ್ತಿಗೆ ಬಾಸಿಂಗ ತೊಡಿಸಿದರೆ, ಮಹಿಳೆಯರು ಬಾಸಿಂಗ ಕಟ್ಟಿದ ರಾಸುಗಳಿಗೆ ಕಾಲುಗಳನ್ನು ಪೂಜಿಸಿ , ಹಾಡು ಹಾಡುತ್ತಾರೆ.ಕಾಲುಪೂಜೆಗಿಟ್ಟ ಹೆಸರುಕಾಳು ಕಡಲೆ, ಬಾಳೆಹಣ್ಣು, ಸೇಬುಹಣ್ಣು ಹೋಳಿಗೆ, ಸಣ್ಣ ತುಂಡು ಮಾಡಿದ ಹಸಿ ಹಾಲು, ತುಪ್ಪ ಬೆರಸಿದ ಪನಿವಾರ ಮಾಡಿ ಎಲ್ಲರಿಗೂ ಹಂಚುತ್ತಾರೆ.

ಕಾಲುಪೂಜೆ ಮುಗಿದು ದನಬೆದರಿದ ನಂತರ ಬೆಟ್ಟದ ನೆಲ್ಲಿಕಾಯಿ, ಗುಡ್ಡೆ ಗೇರಿಕಾಯಿಗಳಿಂದ ಮಾಡಿದ ಸಗಣಿ ಉಂಡೆಗಳನ್ನು ಮನೆಯ ಹೊಸ್ತಿಲಲ್ಲಿ ಇಡುತ್ತಾರೆ. ಊರಿನ ಮಾಸ್ತಮ್ಮ, ಮಾರಮ್ಮ ಸೇರಿದಂತೆ ಎಲ್ಲಾ ದೇವರಿಗೆ ಎಡೆತೋರಿಸಿ, ಆರತಿ ಬೆಳಗಿ ಕುಟುಂಬಕ್ಕೆ ಶ್ರೇಯಸ್ಸು ನೀಡು ಎಂದು ಬೇಡಿಕೊಳ್ಳುತ್ತಾರೆ.

ಅದೇ ದಿನ ಸಂಜೆ ಊರ ಪ್ರಮುಖರು ದೇವರ ದೀಪ ಹೊತ್ತು ಬರುತ್ತಾರೆ. ಅವರ ಪಾದ ತೊಳೆದು ಬರಮಾಡಿ ಕೊಳ್ಳಲಾಗುತ್ತದೆ. ಬಳಿಕ ಬಲೀಂದ್ರ ಬಳಿ ಇರಿಸಿ, ಎಣ್ಣೆ ಹಾಕಿ, ಕಾಣಿಸಿ ಸಲ್ಲಿಸಲಾಗುತ್ತದೆ. ಬಂದವರಿಗೆಲ್ಲರಿಗೂ ಸಿಹಿ ತಿಂಡಿ ಕಡುಬು ನೀಡಿ ‘ಬಲ್ಲೇಳು ಬಲೀಂದ್ರರಾಯ’ ಎಂದು ಹೆಣ್ಣುಮಕ್ಕಳು ಸೇರಿ ಹಾಡುತ್ತಾರೆ.

ದೀಪಾವಳಿಯ ಮೂರನೇ ದಿನವೇ ವರ್ಷತೊಡಕಿನ ಹಬ್ಬ. ಮನೆ, ಮಾರು ಹಸನು ಮಾಡಿ ಜೇಡಿ ಕೆಮ್ಮಣ್ಣು ಬಳಿದು ಹಳದಿ ಮತ್ತು ಬಿಳಿ ಬಣ್ಣದ ಬೊಟ್ಟುಗಳಿಂದ ಬಾಗಿಲು ಹೊಸ್ತಿಲನ್ನ ಅಲಂಕರಿಸುವುದನ್ನು ನೋಡುವುದೇ ಚಂದ. ನಂತರ ದೋಸೆ ಅಥವ ಕೋಳಿ ಕಜ್ಜಾಯ, ಪಾಯಸ ಮಾಡಿ ಇಡಕಲಿಗೆ (ನೀರು ತುಂಬಿಡುವ ಸ್ಥಳ) ಎಡೆ ಇಡಲಾಗುತ್ತದೆ.

ಬಾಸಿಂಗವನ್ನ ಮನೆಯ ಕೋಳಿಗೆ (ಅಟ್ಟ) ಏರಿಸಿ, ಬೂರೆ ಮಗೆಗೆ ಪೂಜಿಸಿ, ವರ್ಷವಿಡೀ ಯಾವುದೇ ತೊಡಕು ಉಂಟಾಗದಿರಲಿ ಎಂದು ಮನೆ ದೇವರನ್ನ ಪ್ರಾರ್ಥಿಸಲಾಗುತ್ತದೆ.

ಎಲ್ಲ ಹಬ್ಬಗಳಂತೆ ಈ ಹಬ್ಬದಲ್ಲಿಯೂ ಹಬ್ಬದ ಸಿದ್ಧತೆಯಿಂದ ಹಿಡಿದು ಸಮಾಪ್ತಿಯವರೆಗೂ ಹೆಣ್ಣುಮಕ್ಕಳ ಪಾತ್ರ ದೊಡ್ಡದಿದ್ದರೂ, ದೀವರ ಮನೆಗಳಲ್ಲಿ ದೀಪಾವಳಿ ಹೆಣ್ಣಮಕ್ಕಳ ಹಬ್ಬವೆಂದೇ ಎನಿಸಿಕೊಂಡಿದೆ. ಹಾಡು ಹಸೆಯ ಮೂಲಕ ಹೆಣ್ಣುಮಕ್ಕಳೆಲ್ಲ ಒಂದೆಡೆ ಸೇರುತ್ತಾರೆ. ಸೋಬಾನೆ ಹಾಡುತ್ತ ಬದುಕಿನ ಏರಳಿತಕ್ಕೊಂದು ಲಯ ದಕ್ಕಿಸಿಕೊಳ್ಳುತ್ತಾರೆ. ಸಾಂಸ್ಕೃತಿಕ ರಾಯಭಾರಿಗಳಾಗುತ್ತಲೇ ಇಡೀ ದೀಪಾವಳಿಗೆ ಒಂದು ಕಳೆ ತರುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT