ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಸ್ಕೃತಿಯ ಪ್ರಭಾವಳಿ

Last Updated 25 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಳಕಿನ ಹಬ್ಬ ಎಂದೇ ಹೆಸರಾಗಿರುವ ದೀಪಾವಳಿಯು ಧರ್ಮ, ಸಂಸ್ಕೃತಿ, ಸಂಪ್ರದಾಯ, ಪುರಾಣಗಳ ಜೊತೆ ಬೆಸೆದುಕೊಂಡಿದೆ. ನಾಡಿನ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆಗಳು ಕಾಣಸಿಗುತ್ತವೆ. ಎಲ್ಲವೂ ವಿಭಿನ್ನ, ವಿಶಿಷ್ಟ. ಪ್ರತಿ ಆಚರಣೆಯ ಹಿಂದೆಯೂ ಒಂದೊಂದು ನಂಬಿಕೆ ಹಾಗೂ ಕತೆಗಳಿವೆ.ಕೆಡುಕಿನ ಮೇಲೆ ಒಳಿತು ಗೆಲ್ಲುವುದೇಈ ಎಲ್ಲ ಆಚರಣೆಗಳ ತಾತ್ಪರ್ಯ. ಗ್ರಾಮೀಣ ಭಾಗಗಳಲ್ಲಿ ವಿವಿಧ ಸ್ಪರ್ಧೆಗಳು, ಮನೋರಂಜನೆ ಚಟುವಟಿಕೆಗಳು ಪ್ರಾಮುಖ್ಯ ಪಡೆದಿವೆ.

ದೇಶದ ಪ್ರಧಾನ ಹಬ್ಬ ದೀಪಾವಳಿಯಂದು ಲಕ್ಷ್ಮೀ ಪೂಜೆ ಹಾಗೂ ವಿಷ್ಣು ಆರಾಧನೆ ಮುಖ್ಯವಾದವು. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಆಚರಣೆಗಳಲ್ಲಿ ವೈವಿಧ್ಯವಿದೆ. ನರಕ ಚತುರ್ದಶಿಯಂದು ನರಕಾಸುರನ ಬೃಹತ್ ಪ್ರತಿಕೃತಿಯನ್ನು ದಹಿಸುವ ಆಚರಣೆ ಗೋವಾದಲ್ಲಿದೆ.ದೀಪಾವಳಿಯ ಮೂಲಕ ಗುಜರಾತಿಗಳ ವರ್ಷ ಕೊನೆಗೊಳ್ಳುತ್ತದೆ. ದೀಪಾವಳಿಯ ನಂತರದ ದಿನದಂದು ಹೊಸ ವರ್ಷ ‘ಬೆಸ್ತು ವರಸ್’ ಅಡಿಯಿಡುತ್ತದೆ. ಮಹಾರಾಷ್ಟ್ರದಲ್ಲಿಧನ್‌ತೆರಾಸ್ ಆಚರಣೆ ಮೂಲಕ ಮೊದಲ ವೈದ್ಯ ಧನ್ವಂತರಿಯನ್ನು ಸ್ಮರಿಸಲಾಗುತ್ತದೆ.ದೀಪಾವಳಿ ಚಾ ಪಾಡ್ವಾ,ಭಾವ್ ಬಿಜ್ ಮತ್ತು ತುಳಸಿ ಹಬ್ಬ ಇಲ್ಲಿನ ವೈಶಿಷ್ಟ್ಯಗಳು.ಪಶ್ಚಿಮ ಬಂಗಾಳದಲ್ಲಿ ದೀಪಾವಳಿಯಂದು ಕಾಳಿಯ ಆರಾಧನೆಗೆ ಪ್ರಾಧಾನ್ಯವಿದೆ. ಇದು ದುರ್ಗಾಪೂಜೆಯಷ್ಟೇ ಸಂಭ್ರಮದಿಂದ ನಡೆಯುತ್ತದೆ. ಕಾಳಿಪೂಜೆಯ ಮುನ್ನಾದಿನ ಮನೆಗಳಲ್ಲಿ ಹದಿನಾಲ್ಕು ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ.ಕಾಳಿಗೆ ಅಲಂಕಾರ ಮಾಡಿ, ಸಿಹಿ ಪದಾರ್ಥ, ಅಕ್ಕಿ, ಮೀನು ಮೊದಲಾದ ನೈವೇದ್ಯ ಮಾಡಲಾಗುತ್ತದೆ.

ಒಡಿಶಾದ ಜನರು ಸೆಣಬಿನ ಕಟ್ಟಿಗೆ ಸುಡುವ ಮೂಲಕ ಹಿರಿಯರನ್ನು ಸ್ಮರಿಸುತ್ತಾರೆ.ಉತ್ತರ ಪ್ರದೇಶದಲ್ಲಿ ದೇವ ದೀಪಾವಳಿ ಎಂದು ಕರೆಯಲಾಗುತ್ತದೆ. ವಾರಾಣಸಿಯಲ್ಲಿ ದೇವತೆಗಳು ಗಂಗಾ ನದಿಯಲ್ಲಿ ಮುಳುಗುಹಾಕಲು ಬರುತ್ತಾರೆ ಎಂಬ ಪ್ರತೀತಿ ಇದೆ. ಹೀಗಾಗಿ ರಂಗೋಲಿಯಿಂದ ಅಲಂಕರಿಸಲಾದ ಗಂಗಾ ನದಿತಟದಲ್ಲಿ ಪ್ರಜ್ವಲಿಸುವ ದೀಪಗಳನ್ನು ಬೆಳಗಲಾಗುತ್ತದೆ.

ದಕ್ಷಿಣ ಭಾರತದಲ್ಲಿಅಮಾವಾಸ್ಯೆ, ನರಕ ಚತುರ್ದಶಿ ಮತ್ತು ಬಲಿ ಪಾಡ್ಯಮಿಯಂದು ವಿವಿಧ ಆಚರಣೆಗಳು ಇರುತ್ತವೆ. ಈ ಭಾಗದ ರಾಜ್ಯಗಳಲ್ಲಿ ಲಕ್ಷ್ಮೀ ಪೂಜೆಗೆ ಮಹತ್ವ ಹೆಚ್ಚು. ಹಿರಿಯರ ಸ್ಮರಣೆ ಮಾಡಿ ಸಿಹಿ ಅಡುಗೆ ತಯಾರಿಸಲಾಗುತ್ತದೆ. ಮನೆಯ ಮುಂದೆ ರಂಗೋಲಿ ಬಿಡಿಸಿ, ದೀಪ ಬೆಳಗಿಸಿ, ಪಟಾಕಿ ಸಿಡಿಸಲಾಗುತ್ತದೆ. ಅಂಗಡಿಗಳಲ್ಲಿ ಧನಲಕ್ಷ್ಮಿ ಪೂಜೆ ನಡೆಯುತ್ತದೆ. ತಮಿಳುನಾಡಿನಲ್ಲಿ ಎಣ್ಣೆಸ್ನಾನ ಮಾಡುವ ಸಂಪ್ರದಾಯವಿದೆ. ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಲೇಹ್ಯವನ್ನು ಇಲ್ಲಿನ ಜನ ಸೇವಿಸುತ್ತಾರೆ. ಆಂಧ್ರಪ್ರದೇಶದಲ್ಲಿ ‘ಸತ್ಯಭಾವ’ ಎಂಬ ಮಣ್ಣಿನ ದೇವತಾಮೂರ್ತಿಯನ್ನು ಪೂಜಿಸಲಾಗುತ್ತದೆ.

ವಿದೇಶಗಳಲ್ಲಿ ಸಂಭ್ರಮ: ಹಿಂದೂಗಳು ಹೆಚ್ಚಾಗಿ ನೆಲೆಸಿರುವ ಸಿಂಗಪುರ, ಮಲೇಷ್ಯಾ ಮೊದಲಾದ ದೇಶಗಳಲ್ಲೂ ಹಬ್ಬದ ಆಚರಣೆಯಿದೆ. ವಿದೇಶಗಳಲ್ಲಿ ನೆಲೆನಿಂತಿರುವ ಭಾರತೀಯ ಸಮುದಾಯದವರು ಬಹಳ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಭಾರತೀಯ ಸಮುದಾಯದವರು ಹೆಚ್ಚಾಗಿರುವ ಫಿಜಿ, ಮಾರಿಷಸ್‌ನಲ್ಲಿ ದೀಪಾವಳಿಯಂದು ಸರ್ಕಾರಿ ರಜೆಯೂ ಇರುತ್ತದೆ. ನೇಪಾಳದಲ್ಲಿ ತಿಹಾರ್ ಎಂಬ ಹೆಸರಿನಲ್ಲಿ ಆಚರಣೆ ನಡೆಯುತ್ತದೆ. ಮಲೇಷ್ಯಾದಲ್ಲಿ ದೀಪಾವಳಿಯನ್ನು ‘ಹರಿ ದೀಪಾವಳಿ’ ಎನ್ನಲಾಗುತ್ತದೆ. ಕೆನಡಾ, ಬ್ರಿಟನ್, ಟ್ರಿನಿಡಾಡ್ ಮತ್ತು ಟೊಬ್ಯಾಗೊ ದ್ವೀಪರಾಷ್ಟ್ರಗಳೂ ಪ್ರತೀ ವರ್ಷ ದೀಪದ ಹಬ್ಬಕ್ಕೆ ಸಾಕ್ಷಿಯಾಗುತ್ತವೆ.

ಆಚರಣೆಗಳಿಗೆ ನಂಬಿಕೆಯ ಬಂಧ

ರಾಮ ವನವಾಸ ಮುಗಿಸಿ ಮರಳಿ ಬಂದ ದಿನ ಎಂಬ ಅರ್ಥದಲ್ಲಿ ದೀಪಾವಳಿಯನ್ನು ಆಚರಿಸುವುದು ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಪ್ರಚಲಿತದಲ್ಲಿದೆ. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ದೀಪಾವಳಿಯು ಕೃಷ್ಣನ ಕತೆಯೊಂದಿಗೆ ಬೆಸೆದುಕೊಂಡಿದೆ. ಕೃಷ್ಣನು ನರಕಾಸುರನನ್ನು ಕೊಂದನು ಎಂಬುದು ಪೌರಾಣಿಕ ಕತೆ. ಅದಕ್ಕಾಗಿ ಆ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.ಬಲಿ–ವಾಮನರ ಕತೆಯೂ ಮಹತ್ವವಾದುದು. ವಾಮನರೂಪಿಯಾಗಿ ಬಂದ ನಾರಾಯಣನು, ತನ್ನ ಕಾಲಿನಿಂದ ತುಳಿದು ಅಸುರ ಚಕ್ರವರ್ತಿ ಬಲಿಯನ್ನು ನರಕಕ್ಕೆ ಕಳುಹಿಸಿದ್ದ ಕತೆ ಪ್ರಸಿದ್ಧವಾದುದು. ಧೈರ್ಯಶಾಲಿ ಹಾಗೂ ದಾನಶೂರನಾಗಿದ್ದ ಬಲಿ ಚಕ್ರವರ್ತಿ ಚತುರ್ದಶಿಯ ದಿನ ತನ್ನ ಪ್ರಜೆಗಳನ್ನು ನೋಡಲು ಮತ್ತೆ ಬರುತ್ತಾನೆ ಎಂಬ ನಂಬಿಕೆಯಿದ್ದು, ಜನರು ದೀಪಹಚ್ಚಿ ಆತನನ್ನು ಬರಮಾಡಿಕೊಳ್ಳುತ್ತಾರೆ. ಬಲಿಪಾಡ್ಯವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ.

ಸಿಖ್ಖರು ಮತ್ತು ಜೈನ ಸಮುದಾಯದವರಲ್ಲೂ ದೀಪಾವಳಿ ಆಚರಣೆಯಿದೆ. ಹರಗೋವಿಂದ ಸಿಂಗ್‌ ಅವರು ದೊರೆ ಜಹಾಂಗೀರನ ವಶದಲ್ಲಿದ್ದ ರಾಜರನ್ನು ಬಿಡಿಸಿ ತಂದಿದ್ದ ಆ ದಿನವನ್ನು ‘ಬಂಧಮುಕ್ತಿ ದಿನ’ದ ರೂಪದಲ್ಲಿ ಆಚರಿಸಲಾಗುತ್ತದೆ.ಮಹಾವೀರನ ಜ್ಞಾನೋದಯದ ಸಂದರ್ಭವನ್ನು ಗುರುತಿಸಲು ಸ್ವರ್ಗ ಮತ್ತು ಭೂಮಿಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು ಎಂಬುದು ಜೈನರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT