ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚರಣೆಯ ವೈವಿಧ್ಯ: ಬಗೆಬಗೆಯಲಿ ದೀಪಾವಳಿ

Last Updated 15 ನವೆಂಬರ್ 2020, 21:45 IST
ಅಕ್ಷರ ಗಾತ್ರ

ಭಾರತವು ಹಬ್ಬಗಳ ನಾಡು. ಒಂದೊಂದು ಹಬ್ಬವೂ ನಮ್ಮಲ್ಲಿ ಮೂಡಿಸುವ ಸಡಗರ ಸಂಭ್ರಮಕ್ಕೆ ಮಿತಿಯೇ ಇಲ್ಲ. ಜತೆಗೆ ಒಂದೊಂದು ಹಬ್ಬವೂ ವಿಭಿನ್ನ ಮತ್ತು ವಿಶಿಷ್ಟ. ಒಂದೇ ಹಬ್ಬ ನಾಡಿನ ಉದ್ದಗಲಕ್ಕೆ ಬೇರೆ ಬೇರೆ ರೀತಿಯಲ್ಲಿ ಆಚರಣೆಯಾಗುತ್ತದೆ ಎಂಬುದೂ ಈ ದೇಶದ ವೈವಿಧ್ಯ. ಬೆಳಕಿನ ಹಬ್ಬ ದೀಪಾವಳಿಗಂತೂ ಬೇರೆಬೇರೆ ಪ‍್ರದೇಶದಲ್ಲಿ ಬೇರೆಬೇರೆ ಭಾವ, ಬಣ್ಣ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ಕಾಳಿಪೂಜೆ ಅಥವಾ ಶ್ಯಾಮಪೂಜೆ ಜೊತೆಗೆ ದೀಪಾವಳಿ ಅಡಿಯಿಡುತ್ತದೆ. ದೇವಸ್ಥಾನ ಹಾಗೂ ಮನೆಗಳಲ್ಲಿ ಕಾಳಿಗೆ ಅಲಂಕಾರ ಮಾಡಿ, ಸಿಹಿ ಪದಾರ್ಥ, ಅಕ್ಕಿ, ಮೀನು ಮೊದಲಾದ ನೈವೇದ್ಯ ಮಾಡಲಾಗುತ್ತದೆ. ದಕ್ಷಿಣೇಶ್ವರ, ಕಾಳಿಘಾಟ್ ಮೊದಲಾದ ದೇವಸ್ಥಾನಗಳು ಕಾಳಿಪೂಜೆಗೆ ಪ್ರಸಿದ್ಧವಾಗಿವೆ. ಕಾಳಿಪೂಜೆಯ ಮುನ್ನಾದಿನ ರಾತ್ರಿ ಮನೆಗಳಲ್ಲಿ 14 ದೀಪಗಳನ್ನು ಹಚ್ಚುವ ಬಂಗಾಳಿಗರು ದುಷ್ಟಶಕ್ತಿಗಳಿಂದ ಮುಕ್ತಿ ಕೊಡುವಂತೆ ಪ್ರಾರ್ಥಿಸುತ್ತಾರೆ. ಇದನ್ನೇ ‘ಭೂತ ಚತುರ್ದಶಿ’ ಎಂದು ಕರೆಯುತ್ತಾರೆ. ಕೋಲ್ಕತ್ತ ಬಳಿಯ ಬಾರಸತ್‌ನಂತಹ ಸ್ಥಳಗಳಲ್ಲಿ, ಕಾಳಿ ಪೂಜೆಯು ದುರ್ಗಾ ಪೂಜೆಯಂತೆ ಭವ್ಯವಾದ ರೀತಿಯಲ್ಲಿ ನಡೆಯುತ್ತದೆ. ಕಾಳಿ ಪೆಂಡಾಲ್‌ಗಳ ಪ್ರವೇಶದಲ್ಲಿ ಡಾಕಿನಿ ಮತ್ತು ಯೋಗಿನಿ ಎಂಬ ರಾಕ್ಷಸರ ಆಕೃತಿಗಳನ್ನು ಕಾಣಬಹುದು.

ಉತ್ತರ ಪ್ರದೇಶ

ಉತ್ತರ ಪ್ರದೇಶದಲ್ಲಿ ‘ದೇವ ದೀಪಾವಳಿ’ ಎಂದು ಕರೆಯಲಾಗುತ್ತದೆ. ದೇಗುಲಗಳ ಬೀಡು ವಾರಾಣಸಿಯಲ್ಲಿ ಈ ಸಮಯದಲ್ಲಿ ದೇವತೆಗಳು ಪವಿತ್ರ ಗಂಗಾ ನದಿಯಲ್ಲಿ ಮುಳುಗುಹಾಕಲು ಬರುತ್ತಾರೆ ಎಂಬ ಪ್ರತೀತಿ ಇದೆ. ದೀಪಗಳು ಮತ್ತು ರಂಗೋಲಿಯಿಂದ ಅಲಂಕರಿಸಲಾದ ಗಂಗಾ ನದಿತಟಗಳಲ್ಲಿ ದೀಪಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕಾರ್ತೀಕ ಮಾಸದ ಹುಣ್ಣಿಮೆಯಂದು ದೇವ ದೀಪಾವಳಿ ಸಂಪನ್ನವಾಗುವ ಮೂಲಕ 15 ದಿನಗಳ ಆಚರಣೆ ಪೂರ್ಣಗೊಳ್ಳುತ್ತದೆ.

ಒಡಿಶಾ

ಒಡಿಶಾ ರಾಜ್ಯದ ಜನರು ದೀಪಾವಳಿಯಂದು ‘ಕೌಡಿಯಾ ಕಥಿ’ ಎಂಬ ಆಚರಣೆಯಲ್ಲಿ ತೊಡಗುತ್ತಾರೆ. ಅಂದರೆ ಸ್ವರ್ಗವಾಸಿಗಳಾದ ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸುತ್ತಾರೆ. ಸೆಣಬಿನ ಕಟ್ಟಿಗೆಯನ್ನು ಸುಡುವ ಮೂಲಕ ಹಿರಿಯರ ಆಶೀರ್ವಾದ ಬೇಡುತ್ತಾರೆ. ದೀಪಾವಳಿಯ ಅಂಗವಾಗಿ ಲಕ್ಷ್ಮಿ, ಗಣೇಶ ಹಾಗೂ ಕಾಳಿಯನ್ನು ಪೂಜಿಸುತ್ತಾರೆ.

ಮಹಾರಾಷ್ಟ್ರ

ಗೋವುಗಳನ್ನು ಆರಾಧಿಸುವ ‘ವಸು ಬರಸ್‘ ಆಚರಣೆಯೊಂದಿಗೆ ಮಹಾರಾಷ್ಟ್ರದ‌ಲ್ಲಿ ದೀಪಾವಳಿ ಆಚರಣೆ ಶುರುವಾಗುತ್ತದೆ. ಧನ್‌ತೆರಾಸ್ ಆಚರಣೆ ಮೂಲಕ ಮೊದಲ ವೈದ್ಯ ಧನ್ವಂತರಿಯನ್ನು ಸ್ಮರಿಸಲಾಗುತ್ತದೆ. ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ. ಪತಿ ಮತ್ತು ಪತ್ನಿಯ ಪ್ರೀತಿಯನ್ನು ಸಂಭ್ರಮಿಸುವ ‘ದೀಪಾವಳಿ ಚಾ ಪಾಡ್ವಾ’ ಇಲ್ಲಿನ ವಿಶೇಷಗಳಲ್ಲೊಂದು. ಭಾವ್ ಬಿಜ್ ಮತ್ತು ತುಳಸಿ ವಿವಾಹದ ಮೂಲಕ ದೀಪಾವಳಿ ಮುಕ್ತಾಯಗೊಂಡು, ಮದುವೆ ಸಮಾರಂಭಗಳು ಆರಂಭವಾಗುತ್ತವೆ.

ಗುಜರಾತ್

ದೀಪಾವಳಿಯ ಮೂಲಕ ಗುಜರಾತಿಗಳ ವರ್ಷ ಕೊನೆಗೊಳ್ಳುತ್ತದೆ. ದೀಪಾವಳಿಯ ನಂತರದ ದಿನದಂದು ಹೊಸ ವರ್ಷ ‘ಬೆಸ್ತು ವರಸ್’ ಅಡಿಯಿಡುತ್ತದೆ. ವಾಗ ಬರಸ್‌ನಿಂದ ಶುರುವಾಗುವ ಆಚರಣೆಗಳು ಧನ್‌ತೆರಾಸ್, ಕಾಳಿ ಚೌದಶ, ದೀಪಾವಳಿ, ಬೆಸ್ತು ಬರಸ್, ಭಾಯ್ ಬಿಜ್‌ವರೆಗೆ ಮುಂದುವರಿಯುತ್ತವೆ.

ಗೋವಾ

ನರಕಾಸುರನನ್ನು ವಧೆ ಮಾಡಿದ ಕೃಷ್ಣನನ್ನು ಸ್ಮರಿಸಲು ಗೋವಾ ಜನರು ದೀಪಾವಳಿ ಆಚರಿಸುತ್ತಾರೆ. ದೀಪಾವಳಿಯ ಮುನ್ನಾ ದಿನ ನರಕ ಚತುರ್ದಶಿಯಂದು ನರಕಾಸುರನ ಬೃಹತ್ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ಗೋವಾ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ತೆಂಗಿನ ಎಣ್ಣೆಯನ್ನು ಜನರು ತಮ್ಮ ದೇಹದ ಮೇಲೆ ಹಚ್ಚಿಕೊಳ್ಳುವ ಆಚರಣೆಯೂ ಇದೆ.

ದಕ್ಷಿಣ ಭಾರತ

ಕರ್ನಾಟಕದಲ್ಲಿ ಅಮಾವಾಸ್ಯೆ, ನರಕ ಚತುರ್ದಶಿ ಮತ್ತು ಬಲಿ ಪಾಡ್ಯಮಿಗಳಂದು ದೀಪಾವಳಿ ಆಚರಣೆ ಇದೆ. ಲಕ್ಷ್ಮೀ ಪೂಜೆಗೆ ಮಹತ್ವ ಹೆಚ್ಚು. ಸಿಹಿ ಅಡುಗೆ ಮಾಡುವ, ಹಿರಿಯರನ್ನು ಸ್ಮರಿಸುವ, ದೀಪ ಬೆಳಗುವ, ಪಟಾಕಿ ಸಿಡಿಸುವ ಆಚರಣೆಗಳನ್ನು ಕಾಣಬಹುದು. ತಮಿಳುನಾಡಿನಲ್ಲಿ ನಸುಕಿನಲ್ಲಿ ಎದ್ದು ಎಣ್ಣೆಸ್ನಾನ ಮಾಡುವ ಜನರು ಹಬ್ಬದೂಟಕ್ಕೂ ಮುನ್ನ, ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಲೇಹ್ಯವನ್ನು ಸೇವಿಸುತ್ತಾರೆ. ಆಂಧ್ರಪ್ರದೇಶದಲ್ಲಿ ‘ಸತ್ಯಭಾವ’ ಎಂಬ ಮಣ್ಣಿನ ದೇವತಾಮೂರ್ತಿಯನ್ನು ಪೂಜಿಸುತ್ತಾರೆ.

ವಿದೇಶಗಳಲ್ಲಿ ಸಡಗರ

ದೀಪಾವಳಿ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ನೆರೆಯ ದೇಶಗಳಲ್ಲಿ ವಿವಿಧ ಆಚರಣೆಗಳನ್ನು ಕಾಣಬಹುದು. ಹೊರದೇಶಗಳಲ್ಲಿರುವ ಭಾರತೀಯರು ತಾವಿರುವಲ್ಲೇ ದೀಪಾವಳಿಯನ್ನು ಆಚರಿಸುತ್ತಾರೆ.

ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ ಫಿಜಿಯಲ್ಲಿ ದೀಪಾವಳಿ ಬಂದರೆ ಭಾರಿ ಸಂಭ್ರಮ. ಅಂದು ಅಲ್ಲಿ ಸಾರ್ವಜನಿಕ ರಜೆ ಕೂಡ ಇರುತ್ತದೆ. ಔತಣಕೂಟಗಳಲ್ಲಿ ಸ್ನೇಹಿತರು, ಸಂಬಂಧಿಕರು ಸಂಭ್ರಮಪಡುತ್ತಾರೆ. ಇಂಡೊನೇಷ್ಯಾದಲ್ಲಿ ಭಾರತೀಯರ ಸಂಖ್ಯೆ ಕಡಿಮೆಯಿದ್ದರೂ, ಆಚರಣೆಗೇನೂ ಕೊರತೆಯಿಲ್ಲ. ಇಲ್ಲಿನ ಆಚರಣೆಗಳು ಭಾರತದ ಆಚರಣೆಗಳನ್ನೇ ಹೋಲುತ್ತವೆ. ಮಲೇಷ್ಯಾದಲ್ಲಿ ದೀಪಾವಳಿಯನ್ನು ‘ಹರಿ ದೀಪಾವಳಿ’ ಎನ್ನಲಾಗುತ್ತದೆ. ಆಚರಣೆ ಕೊಂಚ ಭಿನ್ನವಾದರೂ, ಜನರು ಎಣ್ಣೆಸ್ನಾನ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಮಾರಿಷಸ್‌ನ ಅರ್ಧದಷ್ಟು ಜನರು ಹಿಂದೂಗಳು. ದೀಪಾವಳಿಯಂದು ಸಾರ್ವಜನಿಕ ರಜೆ ಇದ್ದು, ಸಾಕಷ್ಟು ಉತ್ಸಾಹದಿಂದ ದೀಪಗಳ ಹಬ್ಬ ಆಚರಿಸಲಾಗುತ್ತದೆ. ನೇಪಾಳದಲ್ಲಿ ದೀಪಾವಳಿ ‘ತಿಹಾರ್’ ಎನಿಸಿಕೊಂಡಿದೆ. ದಶೈನ್‌ ಹೊರತುಪಡಿಸಿದರೆ, ದೀಪಾವಳಿಯು ನೇಪಾಳದ ಅತಿದೊಡ್ಡ ಹಬ್ಬವಾಗಿದೆ. ಭಾರತದ ಜತೆ ಗಡಿ ಹಂಚಿಕೊಂಡಿರುವ ಕಾರಣ, ಬಹುತೇಕ ಇಲ್ಲಿನ ಆಚರಣೆಗಳೇ ಅಲ್ಲೂ ಕಂಡುಬರುತ್ತವೆ. ಮಿನಿ ಪಂಜಾಬ್ ಎಂದು ಕರೆಯಲಾಗುವ ಕೆನಡಾದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿರುತ್ತದೆ. ಸಿಂಗಪುರದ ಲಿಟಲ್ ಇಂಡಿಯಾದಲ್ಲಿ ರಂಗೋಲಿ, ವಿದ್ಯುತ್‌ ದೀಪಗಳ ಅಲಂಕಾರದಿಂದ ಹಬ್ಬ ಕಳೆಗಟ್ಟುತ್ತದೆ. ಭಾರತೀಯ ಸಮುದಾಯ ಹೆಚ್ಚಾಗಿ ನೆಲೆಸಿರುವ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ಮತ್ತು ಲೀಸೆಸ್ಟರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಆಚರಣೆ ಕಾಣಸಿಗುತ್ತದೆ. ಟ್ರಿನಿಡಾಟ್ ಮತ್ತು ಟೊಬ್ಯಾಗೊ ಮೊದಲಾದ ಕೆರಿಬಿಯನ್ ದ್ವೀಪಗಳು ಬಹಳ ಸಂಭ್ರಮದಿಂದ ಆಚರಿಸುತ್ತವೆ. ರಾಮಾಯಣದ ದೃಶ್ಯಗಳನ್ನು ಹೊಂದಿರುವ ನಾಟಕಗಳು ಆಚರಣೆಯ ಪ್ರಮುಖ ಭಾಗವಾಗಿವೆ.

ವರದಿ: ಉದಯ ಯು., ಅಮೃತ ಕಿರಣ್ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT