ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಧಾನ್ಯಾರ್ಚನೆ ಫಲಗಳು

ಭಾಗ 104
ಅಕ್ಷರ ಗಾತ್ರ

ಶಿವನ ಪುಷ್ಪಾರ್ಚನೆ ವಿಧಿಯನ್ನು ಹೇಳುವಾಗ ‘ಜಪಾಕುಸುಮ, ಕರವೀರಪುಷ್ಪಗಳಿಂದ ಶಿವನನ್ನರ್ಚಿಸಿದರೆ ಶತ್ರುಗಳು ನಾಶವಾಗುವರು. ರೋಗ ಪರಿಹಾರವಾಗುವುದು. ಅಗಸೇ ಹೂವಿನಿಂದ ಶಿವನನ್ನರ್ಚಿಸಿದರೆ ವಿಷ್ಣುಪ್ರಿಯನಾಗುವನು. ಶಮೀಪತ್ರಗಳಿಂದ ಅರ್ಚಿಸಿದರೆ ಮುಕ್ತಿಯು ಲಭಿಸುವುದು. ದಾಸವಾಳದಿಂದ ಅರ್ಚಿಸಿದರೆ ಅಲಂಕಾರ ಲಭಿಸುವುದು. ಜಾಜೀಪುಷ್ಪದಿಂದ ಉತ್ತಮವಾದ ವಾಹನಗಳು ಲಭಿಸುವುವು. ಮಲ್ಲಿಗೆಹೂವಿನಿಂದ ಅರ್ಚಿಸಿದರೆ ಉತ್ತಮ ಸ್ತ್ರೀಯು ಲಭಿಸುವಳು. ಯೂಥಿಕಾಕುಸುಮದಿಂದ ಅರ್ಚಿಸಿದರೆ ಸ್ಥಿರವಾದ ಗಾರ್ಹಸ್ಥ್ಯವು ಲಭಿಸುವುದು. ಕರ್ಣಿಕಾರಕುಸುಮಗಳಿಂದ ಶಿವನನ್ನರ್ಚಿಸಿದರೆ ಉತ್ತಮವಾದ ವಸ್ತ್ರಗಳು ಲಭಿಸುವುವು’ ಎಂದು ಬ್ರಹ್ಮನು ವಿವರಿಸುತ್ತಾನೆ.

ನಿರ್ಗುಂಡೀಕುಸುಮಗಳಿಂದ ಶಿವನನ್ನು ಅರ್ಚಿಸಿದರೆ ಮನಶ್ಶುದ್ಧಿಯಾಗುವುದು. ಲಕ್ಷ ಬಿಲ್ವಪತ್ರಗಳಿಂದ ಅರ್ಚಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುವುವು. ಅಲಂಕಾರವಾದ ಪುಷ್ಪಹಾರಗಳನ್ನು ಅರ್ಪಿಸಿದರೆ ಹೆಚ್ಚಾದ ಸುಖವು ಲಭಿಸುವುದು. ಆಯಾಯ ಋತುಗಳಲ್ಲಿ ಜನಿಸುವ ಪುಷ್ಪಗಳಿಂದ ಅರ್ಚಿಸಿದರೆ ಮುಕ್ತಿಯು ಲಭಿಸುವುದು. ಕಮಲಪುಷ್ಪಗಳಿಂದ ಶಿವನನನ್ನರ್ಚಿಸಿದರೆ ಶತ್ರುನಾಶವಾಗುವುದು. ಕೆಂಡಸಂಪಿಗೆ, ಕೆಂದಗೆ (ತಾಳೆ)ಹೂವುಗಳನ್ನು ಹೊರತು ಮಿಕ್ಕ ಎಲ್ಲಾ ಹೂವುಗಳೂ ಶಿವನಿಗೆ ಪ್ರಿಯವಾದುವು. ಹಾಗೇ ನೋಡಿದರೆ, ಶಿವನಿಗೆ ಪ್ರಿಯವಲ್ಲದುದು ಯಾವುದೂ ಇಲ್ಲ – ಎಂದ ಬ್ರಹ್ಮ, ಪುಷ್ಪಾರ್ಚನೆ ನಂತರ ಧಾನ್ಯಗಳ ಫಲಗಳ ವಿವರವನ್ನು ನೀಡುತ್ತಾನೆ.

‘ಎಲೈ ನಾರದನೇ, ಈಗ ಶಂಕರನ ಪೂಜೆಯಲ್ಲಿ ಯಾವ ಯಾವ ಧಾನ್ಯಗಳು ಪ್ರಶಸ್ತವಾಗಿರುವುದು? ಎಂತೆಂತಹ ಫಲಗಳನ್ನರ್ಪಿಸಬೇಕು? ಅವುಗಳ ಪರಿಮಾಣವೆಷ್ಟು? ಇವೆಲ್ಲವನ್ನೂ ಹೇಳುವೆನು, ಭಕ್ತಿಯಿಂದ ಕೇಳು’ ಎಂದು ಧಾನ್ಯಗಳ ಫಲಗಳನ್ನು ಹೇಳತೊಡಗುತ್ತಾನೆ.

ಶಿವನ ಮೇಲೆ ಭಕ್ತಿಯಿಂದ ಅಕ್ಷತವಾದ ತಂಡುಲವನ್ನು ಅರ್ಪಿಸಿದರೆ ಸಂಪತ್ತು ಅಭಿವೃದ್ಧಿಯಾಗುವುದು. ಆರು ಪ್ರಸ್ಥ (ಬಳ್ಳ) ತಂಡುಲವನ್ನಾಗಲೀ ಎರಡು ಲಕ್ಷ ಪಲ ತುಂಡುಲವನ್ನಾಗಲೀ ಶಿವನ ಮೇಲೆ ಅರ್ಪಿಸಬೇಕು. ಲಿಂಗದಲ್ಲಿ ಪ್ರಧಾನವಾಗಿ ರುದ್ರನನ್ನ ಸುಂದರವಾದ ವಸ್ತ್ರದಿಂದ ಅಲಂಕರಿಸಿ ಅಲ್ಲಿ ಶಿವನಿಗೆ ಅಕ್ಷತ–ತಂಡುಲಗಳನ್ನು ಅರ್ಪಿಸಬೇಕು. ತುಂಡುಲದ ಮೇಲೆ ಬಿಲ್ವಫಲವನ್ನು ಇರಿಸಿ, ಗಂಧ ಪುಷ್ಪ ಧೂಪಗಳಿಂದ ಪೂಜಿಸಿದರೆ ಇಷ್ಟಸಿದ್ಧಿಯಾಗುವುದು.

ಎರಡು ಪ್ರಾಜಾಪತ್ಯ, ಅಂದರೆ ಹದಿನೆಂಟು ಮಾಷಪ್ರಮಾಣ (ಮಾಷವೆಂದರೆ ಎರಡು ಗುಲಗಂಜಿ ತೂಕ) ಬೆಳ್ಳಿಯನ್ನು ಅಥವಾ ತನ್ನ ಶಕ್ತಿಗನುಸಾರವಾದ ಯಾವುದಾದರೂ ದಕ್ಷಿಣೆಯನ್ನು ಪೂಜೆ ಉಪದೇಶಿಸಿದ ಗುರುವಿಗೆ ಕೊಡಬೇಕು. ಹನ್ನೆರಡು ಸುಜನರಿಗೆ ಭೋಜನವನ್ನು ಮಾಡಿಸಬೇಕು. ಹೀಗೆ ಒಂದು ಲಕ್ಷದ ನೂರೆಂಟು ಪೂಜೆಗಳನ್ನು ವಿಧಿವತ್ತಾಗಿ ಮಾಡಿದರೆ ಸಕಲ ಸಿದ್ಧಿಯೂ ಲಭಿಸುವುದು. ಒಂದು ಲಕ್ಷ ಪಲ ಎಳ್ಳನ್ನು ಶಿವನಿಗೆ ಅರ್ಪಿಸಿದರೆ ಮಹಾಪಾಪಗಳು ನಾಶವಾಗುವುವು. ಹನ್ನೊಂದು ಪಲ ಎಳ್ಳನ್ನ ಅರ್ಪಿಸಿದರೆ ಲಕ್ಷ ಪಲಗಳನ್ನು ಅರ್ಪಿಸಿದಂತಾಗುವುದು. ಲಕ್ಷ ಯವಗಳಿಂದ ಶಿವನನ್ನು ಪೂಜಿಸಬೇಕು. ಎಂಟೂವರೆ ಪ್ರಸ್ಥ (ಕೊಳಗ) ಮತ್ತು ಎರಡು ಪಲಗಳ ಅಳತೆಯುಳ್ಳ ಯವಗಳಿಂದ ಪೂಜಿಸಿದರೆ ಲಕ್ಷಪೂಜೆಯಾಗುವುದು. ಈ ಯವಪೂಜೆಯನ್ನು ಮಾಡಿದರೆ ಸ್ವರ್ಗಸುಖವು ಲಭಿಸುವುದು.

ಲಕ್ಷ ಗೋಧಿಯ ಕಾಳುಗಳಿಂದ ಶಿವನನ್ನು ಪೂಜಿಸಿದರೆ ಪ್ರಜಾಭಿವೃದ್ಧಿ ಆಗುವುದು. ಲಕ್ಷ ಹೆಸರುಗಳಿಂದ ಅರ್ಚಿಸಿದರೆ ಸುಖವು ಲಭಿಸುವುದು. ಅರ್ಧದ್ರೋಣವೆಂದರೆ ಒಂದು ಲಕ್ಷ ಗೋಧಿ ಕಾಳುಗಳು. ಏಳೂವರೆ ಪ್ರಸ್ಥ ಮತ್ತು ಎರಡು ಪಲಮುದ್ಗಗಳಿಗೆ ಒಂದು ಲಕ್ಷ ಹೆಸರುಗಳಾಗುವುವು. ಲಕ್ಷ ಪ್ರಿಯಂಗು(ಜೀರಿಗೆ)ಗಳಿಂದ ಶಿವನನ್ನರ್ಚಿಸಿದರೆ ಸಕಲ ಸುಖವೂ ಧರ್ಮಾರ್ಥಕಾಮಗಳೂ ಲಭಿಸುವುವು. ಒಂದು ಪ್ರಸ್ಥ ಪ್ರಿಯಂಗುಗಳಿಗೆ ಒಂದು ಲಕ್ಷ ಸಂಖ್ಯೆಯಾಗುವುದು. ಪೂಜೆಯ ನಂತರ ಹನ್ನೆರಡು ಜನರಿಗೆ ಮೃಷ್ಟಾನ್ನ ಭೋಜನವನ್ನು ಮಾಡಿಸಬೇಕು.

ಲಕ್ಷ ಸಾಸಿವೆಗಳಿಂದ ಶಿವನನ್ನರ್ಚಿಸಿದರೆ ಶತ್ರುನಾಶವಾಗುವುದು. ಇಪ್ಪತ್ತು ಪಲ ಸಾಸಿವೆಗಳಿಗೆ ಲಕ್ಷ ಸಾಸಿವೆಗಳಾಗುವುದು. ವಿಧಿವತ್ತಾಗಿ ಪೂಜಿಸಿದರೆ ಶತ್ರುನಾಶವಾಗುವುದರಲ್ಲಿ ಸಂಶಯವಿಲ್ಲ. ತೊಗರಿಗಿಡದ ಪತ್ರಗಳಿಂದಲೂ ಶಿವನನ್ನರ್ಚಿಸಬೇಕು. ಸಜ್ಜನರಿಗೆ ಅವರು ಅಪೇಕ್ಷಿಸಿದ ಹಸು ಅಥವಾ ಹೋರಿಯನ್ನೂ ದಾನಮಾಡಬೇಕು. ಮೆಣಸಿನಕಾಯಿಗಳಿಂದ ಶಿವನನ್ನರ್ಚಿಸಿದರೆ ಶತ್ರುಗಳು ನಾಶವಾಗುವರು. ಮೆಣಸಿನ ಪತ್ರಗಳಿಂದ ಶಿವನನ್ನಲಂಕರಿಸಿ ಪೂಜಿಸಿದರೆ ಸಕಲ ಇಷ್ಟಾರ್ಥಗಳನ್ನೂ ಸುಖಗಳನ್ನೂ ಪಡೆಯಬಹುದು – ಎಂದು ಬ್ರಹ್ಮನು ನಾರದನಿಗೆ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT