ಶನಿವಾರ, ಜುಲೈ 24, 2021
28 °C

ಜೀವನ ಸೌಂದರ್ಯ: ಅರಿವಿಗೆ ಬೇಕು ಲೋಕದ ಬೆಳಕು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಇಂದು ಶಿಕ್ಷಣದ ಬಗ್ಗೆ ತುಂಬ ಚರ್ಚೆ ನಡೆಯುತ್ತಿದೆ. ಕೊರೊನಾ ಉಪಟಳದಿಂದಾಗಿ ಶಾಲೆ–ಕಾಲೇಜುಗಳು ಮುಚ್ಚಿವೆ. ಈ ಸಂಗತಿ ಪೋಷಕರಿಗೆ ಒಂದು ವಿಧದ ಆತಂಕವನ್ನು ಒಡ್ಡುತ್ತಿದ್ದರೆ, ಶಿಕ್ಷಣಸಂಸ್ಥೆಗಳ ಯಜಮಾನರಿಗೆ ಮತ್ತೊಂದು ವಿಧದ ಆತಂಕವನ್ನು ಒಡ್ಡುತ್ತಿದೆ. ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಶಿಕ್ಷಣಸಂಸ್ಥೆಗಳಿಗೆ ಅವುಗಳ ಅಸ್ತಿತ್ವದ ಬಗ್ಗೆ ಚಿಂತೆ. ಆದರೆ ಈ ಸಂದರ್ಭವು ಸಮಾಜಕ್ಕೆ ಆತ್ಮಾವಲೋಕನಕ್ಕೆ ಅವಕಾಶವನ್ನು ಒದಗಿಸಿದೆ. ಶಿಕ್ಷಣ ಎಂದರೇನು? ಶಿಕ್ಷಣ ನಮಗೆ ಏಕೆ ಬೇಕು? ಇಂಥ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಇದು ಸಕಾಲ. ಆದರೆ ನಮ್ಮ ಸಮಾಜ ಇಂಥ ವಿವೇಕದ, ವಿಚಾರದ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಮಾಡೀತೆ?

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ವಿದ್ಯೆಯ ಬಗ್ಗೆ, ಅದನ್ನು ಸಂಪಾದಿಸುವ ಕ್ರಮದ ಬಗ್ಗೆ ಚಿಂತನೆ ನಡೆದಿದೆ. ವೇದ–ಉಪನಿಷತ್ತುಗಳಲ್ಲಿಯೂ ಇದರ ಬಗ್ಗೆ ಸಾಕಷ್ಟು ಹೊಳಹುಗಳನ್ನು ನೋಡಬಹುದು. ಹಲವರು ಮಹಾತ್ಮರ ಜೀವನ–ಸಾಧನೆಗಳೂ ಈ ದಿಕ್ಕಿನಲ್ಲಿ ನಮಗೆ ಮಾರ್ಗದರ್ಶನವನ್ನು ಮಾಡಬಲ್ಲದು. ಮೊನ್ನೆಯಷ್ಟೆ ಅಭಿನವಗುಪ್ತರ ಜಯಂತಿ ದೇಶದೆಲ್ಲೆಡೆ ನಡೆದಿದೆ. ಅವರ ಜೀವನ–ದರ್ಶನದಲ್ಲಿ ನಮ್ಮ ಶಿಕ್ಷಣಪದ್ಧತಿಗೂ ದಿಕ್ಸೂಚಿಯಾಗಬಲ್ಲಂಥ ಹಲವು ವಿವರಗಳನ್ನು ಕಾಣಬಹುದು.

ಸುಮಾರು ಒಂದು ಸಾವಿರ ವರ್ಷಗಳಿಗೂ ಹಿಂದೆ ಇದ್ದವರು; ಕಾಶ್ಮೀರದವರು; ಭಾರತೀಯ ಚಿಂತನಪ್ರಸ್ಥಾನಕ್ಕೆ ಹೊಸದಾದ ಕಳೆಯನ್ನು ಒದಗಿಸಿದವರು. ಭಾವುಕರಾಗಿ, ಕವಿಯಾಗಿ, ಶಾಸ್ತ್ರಕಾರರಾಗಿ, ವ್ಯಾಖ್ಯಾನಕಾರರಾಗಿ, ಸಾಧಕರಾಗಿ, ಗುರುವಾಗಿ, ಶಿಷ್ಯನಾಗಿ, ದಾರ್ಶನಿಕರಾಗಿ ಅವನು ಬೇರೆ ಬೇರೆ ಸ್ತರಗಳಲ್ಲಿ ನಿಂತು ಕಾಣಿಸುವ ಕಾಣ್ಕೆಯಿಂದ ನಾವು ಪಡೆಯಬಹುದಾದ ಫಲಗಳು ಹತ್ತಾರು. ಇವುಗಳಲ್ಲಿ ವಿದ್ಯೆಯನ್ನು ಸಂಪಾದಿಸುವ ಮಾರ್ಗದ ತಿಳಿವಳಿಕೆಯೂ ಒಂದು. ಭಾರತೀಯ ವಿದ್ಯೆಯ ಮೂರ್ತರೂಪವೇ ಆದ ಅವರು ಹತ್ತಾರು ಗುರುಗಳ ಪದತಲದಲ್ಲಿ ಕುಳಿತು ಹಲವು ವಿದ್ಯೆಗಳನ್ನು ಸಂಪಾದಿಸಿದವರು. ಅವರ ಈ ವಿದ್ಯಾಸಾಧನೆಯ ಬಗ್ಗೆ ಅವರೇ ಹೇಳಿಕೊಂಡಿರುವ ಮಾತು:

‘ಆಮೋದಾರ್ಥಿ ಯಥಾ ಭೃಂಗಃ ಪುಷ್ಪಾತ್‌ ಪುಷ್ಪಾಂತರಂ ವ್ರಜೇತ್‌ l

ವಿಜ್ಞಾನಾರ್ಥೀ ತಥಾ ಶಿಷ್ಯೋ ಗುರೋಗುರ್ವಂತರಂ ವ್ರಜೇತ್‌ ll’

ಹೀಗೆ ಹಲವು ವಿಷಯಗಳಲ್ಲಿ ಪರಿಣತಿಯನ್ನು ಸಾಧಿಸಿದವರು ಅವರು.

ಎಂದರೆ, ‘ದುಂಬಿಯು ಮಕರಂದವನ್ನು ಬಯಸಿ ಹೂವಿನಿಂದ ಹೂವಿಗೆ ಅಲೆದಾಡುವಂತೆ, ಹೆಚ್ಚಿನ ತಿಳಿವಳಿಕೆಯನ್ನು ಬಯಸುವವನು ಒಬ್ಬ ಗುರುವಿನಿಂದ ಇನ್ನೊಬ್ಬ ಗುರುವಿನ ಬಳಿ ಸಾರಬೇಕು.’

ಜೇನನ್ನು ಸಂಗ್ರಹಿಸಬೇಕಾದರೆ ದುಂಬಿಯು ಕೇವಲ ಒಂದು ಹೂವನ್ನು ಆಶ್ರಯಿಸಿದರೆ ಸಾಲದು; ಹಲವು ಹೂವುಗಳ ಮೂಲಕವಾಗಿಯೇ ಸಂಗ್ರಹಿಸಬೇಕಾಗುತ್ತದೆ. ಮಾತ್ರವಲ್ಲ, ಈ ಸಂಗ್ರಹಕಾರ್ಯದಲ್ಲಿ ಎಚ್ಚರಿಕೆಯೂ ಇರಬೇಕು; ಹೂವಿನ ಮಕರಂದವನ್ನಷ್ಟೆ ದುಂಬಿ ಹೀರಬೇಕೇ ವಿನಾ ಹೂವನ್ನೇ ನಾಶ ಮಾಡಬಾರದು. 

ನಮ್ಮ ಇಂದಿನ ಶಿಕ್ಷಣವ್ಯವಸ್ಥೆ ಕಳೆದುಕೊಳ್ಳುತ್ತಿರುವ ಸೂಕ್ಷ್ಮಸಂವೇದನಶೀಲತೆಯ ಕಡೆಗೆ ಈ ಮಾತು ದಿಕ್ಸೂಚಿಯಾಗಿ ಒದಗಬಲ್ಲದು. ವಿದ್ಯಾರ್ಥಿಗಳು ಮತ್ತು ಶಿಕ್ಷಣಸಂಸ್ಥೆಗಳ ನಡುವಿನ ಇಂದಿನ ನಂಟು ಹೂವು ಮತ್ತು ದುಂಬಿಯ ನಂಟಿನಂತೆ ಮಧುರವಾಗಿದೆಯೆ? ವಿದ್ಯಾರ್ಥಿಗಳು, ಪೋಷಕ–ಪಾಲಕರು ಹೂವಿನ ಬಣ್ಣಕ್ಕೆ ಮರಳಾಗುತ್ತಿದ್ದಾರೋ ಅಥವಾ ಮಕರಂದಕ್ಕಾಗಿ ಹೂವಿನ ಆಶ್ರಯವನ್ನು ಬಯಸುತ್ತಿದ್ದಾರೋ? ಹಲವು ಹೂವುಗಳ ಸಂಪರ್ಕವಿಲ್ಲದೆ ಮಧುಸಂಗ್ರಹ ಹೇಗೆ ಸಾಧ್ಯವಾಗದೊ ಹಾಗೆಯೇ ಹಲವು ಆಕರಗಳ ನೆರವಿಲ್ಲದೆ ವಿದ್ಯೆಯ ಸಂಗ್ರಹವೂ ನಡೆಯದು ಎಂಬ ಅರಿವು ಇಂದಿನ ಪುಸ್ತಕನಿಷ್ಠ ಶಿಕ್ಷಣಪದ್ಧತಿಗೆ ತಿಳಿದಿದೆಯೆ? – ಇಂಥ ಹಲವು ಪ್ರಶ್ನೆಗಳಿಗೆ ಅಭಿನವಗುಪ್ತರ ಮೇಲಣ ಮಾತು ದಾರಿದೀಪವಾಗಬಲ್ಲದು. ಕೇವಲ ಪುಸ್ತಕಗಳಿಂದಲೇ ಅರಿವನ್ನು ಪಡೆಯಬಹುದು ಎಂಬ ನಿಲುವನ್ನೂ ಅವರು ವಿಡಂಬಿಸಿದ್ದಾರೆ. ‘ಗುರುತಃ ಶಾಸ್ತ್ರತಃ ಸ್ವತಃ’ – ಗುರುಗಳಿಂದಲೂ ಶಾಸ್ತ್ರ (=ಪುಸ್ತಕ)ಗಳಿಂದಲೂ ಪಡೆದ ವಿದ್ಯೆಯನ್ನು, ತನ್ನ ಅನುಭವದ (ಸ್ವತಃ) ಬೆಂಬಲದಿಂದ ಗಟ್ಟಿಮಾಡಿಕೊಳ್ಳಬೇಕು. ಈ ಮೂರು ನೆಲೆಗಳಲ್ಲಿ ಒದಗುವುದೇ ದಿಟವಾದ ವಿದ್ಯೆ ಎಂಬುದನ್ನೂ ಅವರು ಧ್ವನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು