ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಶ್ರಾವಣವಿದು ದೇವತೆಗಳ ಜಾತ್ರೆ

Last Updated 22 ಜುಲೈ 2020, 19:31 IST
ಅಕ್ಷರ ಗಾತ್ರ

ಕಾಲದ ಗಣನೆಗೆ ಬಹುತೇಕ ನಾಗರಿಕತೆಗಳೆಲ್ಲ ಆತುಕೊಂಡಿದ್ದು ಸೂರ್ಯ ಮತ್ತು ಚಂದ್ರರನ್ನು. ಭಾರತದಲ್ಲಿ ಸೂರ್ಯ ಚಂದ್ರರ ಚಲನೆಗೆ ಅಚಲವಾದ ನಕ್ಷತ್ರ ಪುಂಜಗಳ ಹಿನ್ನೆಲೆಯನ್ನು ಕಲ್ಪಿಸಿಕೊಂಡು ಸಾಧಾರವಾದ, ತಾರ್ಕಿಕ ವಿವರಣೆಗೆ ನಿಲುಕಬಲ್ಲ ಕಾಲವಿಭಾಗವನ್ನು ರೂಪಿಸಲಾಗಿದೆ. ಚಂದ್ರನ ಚಲನೆಯನ್ನು ಆಧಾರವಾಗಿಟ್ಟುಕೊಂಡ ಪರಂಪರೆಯಲ್ಲಿ ನಿರ್ದಿಷ್ಟ ನಕ್ಷತ್ರದ ಹೆಸರುಗಳಿಂದಲೇ ಮಾಸಗಳನ್ನೂ ಹೆಸರಿಸಲಾಗಿದೆಯಷ್ಟೆ. ಚಿತ್ರಾನಕ್ಷತ್ರದಿಂದ ಚೈತ್ರಮಾಸವೆಂಬ ಹೆಸರು ಬಂದರೆ ಮಘಾ ನಕ್ಷತ್ರದಿಂದ ಮಾಘ ಮಾಸ. ಹಾಗೇ ಶ್ರವಣನಕ್ಷತ್ರದಿಂದ ಶ್ರಾವಣಮಾಸವೆಂಬ ಹೆಸರು ನಿಂತಿದೆ.

ಭಾರತೀಯ ಕಾಲಗಣನೆಯ ಒಂದೊಂದು ಮಾಸಕ್ಕೂ ಒಂದೊಂದು ಬಗೆಯ ವಿಶೇಷತೆಯಿದೆ. ಅದರಲ್ಲೂ ಶ್ರಾವಣವೆಂದರಂತೂ ಹಬ್ಬಗಳದ್ದೇ ಸಂತೆ ಎದ್ದು ಬಂದಂತೆ. ಹಬ್ಬಗಳ ಕಾರಣಕ್ಕಲ್ಲದೆಯೂ ಶ್ರಾವಣಕ್ಕೆ ಬೇರೆ ವಿಶೇಷತೆಗಳಿವೆಯೆಂದೇ ಶ್ರಾವಣವು ಸಂಪ್ರದಾಯನಿಷ್ಠರನ್ನಲ್ಲದೆ ಕವಿಮನಗಳನ್ನೂ ಸೆಳೆದಿದೆ. ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ’ ಎಂದು ನಲಿದಾಡಿದ ಶ್ರಾವಣದ ಕವಿ ಬೇಂದ್ರೆಯವರನ್ನಿಲ್ಲಿ ನೆನೆಯಬಹುದು. ಆಷಾಢದ ವಿರಹವನ್ನು ಕಳೆದು ಒಲುಮೆಯ ಪತಿ ಪತ್ನಿಯರನ್ನು ಒಂದುಮಾಡುವ ಪ್ರಣಯಸಹಕಾರಿಯೂ ಶ್ರಾವಣವೇ, ನೆಲದೊಡಲಿನ ಬೀಜಗಳ ರಹಸ್ಯಕ್ಕೆ ಜೀವಬರಿಸಿ ಹಸಿರಾಗಿಸುವ ಸೃಷ್ಟಿಶೀಲ ಜೀವಪ್ರೇಮಿಯೂ ಶ್ರಾವಣವೇ. ದಕ್ಷಿಣ ಭಾರತದಲ್ಲಂತೂ ಆ ಹೊತ್ತಿಗೆ ಮಳೆಯ ಕಾಲವಾದ್ದರಿಂದ ಫಲವತ್ತತೆ ಅನ್ನುವುದು ಶ್ರಾವಣದ ಸ್ವಭಾವದಲ್ಲೇ ಇರುವಂಥದು. ಹಾಗೆಂದೇ ಶ್ರಾವಣದಲ್ಲಿ ನಡೆಸುವ ಪೂಜೆ ಪುನಸ್ಕಾರ ಪಾರಾಯಣಾದಿಗಳು ಉಳಿದೆಡೆಗಳಿಗಿಂತ ಹೆಚ್ಚು ಫಲಕಾರಿಯೆಂಬ ಶ್ರದ್ಧೆಯೂ ಸಮಾಜದಲ್ಲಿದೆ.

ಆಸ್ತಿಕಲೋಕವು ಶ್ರಾವಣಮಾಸದಲ್ಲಿ ವಾರದ ಒಂದೊಂದು ದಿನಕ್ಕೂ ಒಂದೊಂದು ದೇವತೆಯ ಆರಾಧನೆಯನ್ನು ಹಮ್ಮಿಕೊಂಡಿದೆ. ಅದರಲ್ಲೂ ಶ್ರಾವಣದ ಸೋಮವಾರಗಳು ರುದ್ರನ ಆರಾಧನೆ ಮತ್ತು ಸಂತರ್ಪಣೆಗೆ ಖ್ಯಾತವಾದವುಗಳು. ಶ್ರವಣನಕ್ಷತ್ರದ ದೇವತೆಯೇ ವಿಷ್ಣುವಾದ್ದರಿಂದ ಈ ಮಾಸದಲ್ಲಿ ವಿಷ್ಣುವಿನ ಆರಾಧನೆಯೂ ಶ್ರೇಯಸ್ಕರ. ಧರೆಯೆಂಬ ಹೆಣ್ಣಿನ ಹೆಣ್ಣುತನ ಢಾಳಾಗಿ ತೋರುವ ಮಾಸವಾದ್ದರಿಂದಲೋ ಅನ್ನುವಂತೆ ಈ ಮಾಸದಲ್ಲಿ ಸ್ತ್ರೀದೇವತೆಗಳ ಆರಾಧನೆಯೂ ಅಷ್ಟೇ ಪ್ರಮುಖವಾಗಿದೆ.

ಶ್ರಾವಣದ ಉಳಿದ ದಿನಗಳದ್ದೊಂದು ತೂಕವಾದರೆ ಶನಿವಾರಗಳದ್ದು ಬೇರೆಯದೇ ತೂಕ. ಆ ದಿನದ ಪೂಜೆ ಮತ್ತು ಸಮರ್ಪಣೆಗಳಲ್ಲಿ ಭಕ್ತಿಯ ಜೊತೆಯಲ್ಲೇ ತನ್ನ ಬದುಕಿನ ಕುರಿತ ಕಾಳಜಿಯಿಂದಾಗಿ ಹುಟ್ಟಿದ ಭಯವೊಂದಿಷ್ಟು ಮಿಶ್ರಿತವಾಗಿರುತ್ತದೆ. ಮಾನವ ಬದುಕಿನ ಕಷ್ಟಮಯ ಕಾಲದ ಅಧಿಪತಿಯೆಂದೇ ಶನಿಮಹಾತ್ಮನನ್ನು ಪರಿಭಾವಿಸಿ ಕಷ್ಟ ಕೋಟಲೆಯಿಂದ ಪಾರುಮಾಡೆಂದು ಅವನನ್ನೇ ಮೊರೆಹೊಗುವ ಕೈಂಕರ್ಯಕ್ಕೆ ಶ್ರಾವಣದ ಶನಿವಾರಗಳು ಪ್ರಶಸ್ತವೆಂಬ ಗ್ರಹಿಕೆ ಆಸ್ತಿಕರದ್ದು. ಶನಿಮಹಾತ್ಮನ ಪೂಜೆಯೆಂದರೆ ಅದು ನಮ್ಮದೇ ಹಿಂದಿನ ಕರ್ಮಗಳ ಕಟುತನವನ್ನು ಇದೀಗ ಉಣ್ಣಲು ಮಾನಸಿಕವಾಗಿ ಸಿದ್ಧಗೊಳ್ಳುವ ಪ್ರಕ್ರಿಯೆಯೂ ಹೌದು.

ಶನಿಮಹಾತ್ಮನ ಪ್ರಭಾವದ ಭಯದಲ್ಲೇ ರಕ್ಷಣೆಯ ಆಶಾಭಾವವನ್ನು ಹೊಮ್ಮಿಸುವ ಇನ್ನೊಂದು ದೇವತೆಯೆಂದರೆ ಅಂಜನೀಪುತ್ರನಾದ ಆಂಜನೇಯ. ಶ್ರಾವಣದ ಶನಿವಾರಗಳಂದು ಶನಿಮಹಾತ್ಮನಂತೆಯೇ ಅಥವಾ ಅದಕ್ಕಿಂತ ವಿಶೇಷ ರೀತಿಯಲ್ಲಿ ಭಕ್ತರನ್ನಾಕರ್ಷಿಸುವಾತ ಆಂಜನೇಯ.

ಉಗ್ರತೆಯ ಪೂರ್ಣ ಅಭಿವ್ಯಕ್ತಿಯಿದ್ದೂ ತನ್ನ ಎಡತೊಡೆಯಮೇಲೆ ಮೃದುಲತೆಯ ಪ್ರತಿಮೂರ್ತಿಯಾದ ಮಹಾಲಕ್ಷ್ಮಿಯನ್ನು ಕೂರಿಸಿಕೊಂಡು ಏಕಕಾಲಕ್ಕೆ ರೌದ್ರ ಮತ್ತು ಸೌಮ್ಯತೆಗಳನ್ನು ಆವಿಷ್ಕರಿಸುವ ಲಕ್ಷ್ಮೀನೃಸಿಂಹದೇವರಿಗೂ ಶ್ರಾವಣ ಶನಿವಾರದ ಉಪಚಾರ ಪೂಜೆಗಳು ವಿಶೇಷವೆನಿಸಿಕೊಳ್ಳುತ್ತವೆ.

ಹೀಗೆಯೇ ಶ್ರಾವಣ ಶನಿವಾರಗಳಂದು ಶ್ರೀನಿವಾಸನ ಪೂಜೆಗಳೂ ವಿಶೇಷವಾಗಿ ನಡೆಯುತ್ತವೆ. ವೆಂಕಟೇಶ, ವೆಂಕಟರಮಣ, ತಿಮ್ಮಪ್ಪ – ಹೀಗೆ ಹಲವು ಹೆಸರುಗಳಿಂದ ಪೂಜೆಗೊಳ್ಳುತ್ತಾನೆ.ಕಲಿಯುಗದ ವೈಕಂಠ - ಎಂಬ ಕೀರ್ತಿಗೆ ಪಾತ್ರವಾಗಿರುವ ತಿರುಪತಿಯಲ್ಲಂತೂ ಅವನ ಆರಾಧನೆಯ ವೈಭವವನ್ನು ಕಾಣಬಹುದು. ನಾಡಿನ ಉದ್ದಕ್ಕೂ ವೆಂಕಟರಮಣನ ಆಲಯಗಳಲ್ಲಿ ಶ್ರಾವಣ ಶನಿವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.

ಸಮೃದ್ಧಿ, ಉಪಭೋಗ, ಸಾಂಸಾರಿಕ ನೆಮ್ಮದಿ ಮತ್ತು ದೇವಯಜ್ಞದ ಮಾಸವಾದ ಶ್ರಾವಣದಲ್ಲಿ ಆಗಾಗ ಮಾನವನು ತನ್ನ ಎಲ್ಲ ಕುಕರ್ಮಗಳ ಫಲವಾದ ಕಹಿತನವನ್ನು ನೆನೆಸಿಕೊಳ್ಳಲೊಂದು ಅವಕಾಶವೆಂಬಂತೆ ಶನಿವಾರಗಳಂದು ಹಲವು ದೇವತೆಗಳ ಪೂಜೆಗಳು ಆಚರಣೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT