ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಮುಕ್ತಿಸಾಧನ ತಿಳಿದ ವ್ಯಾಸರು

ಅಕ್ಷರ ಗಾತ್ರ

ಈಶ್ವರನ ನಾಮ ಶ್ರವಣ, ಕೀರ್ತನ, ಮನನ ಎಂಬ ಮೂರು ಮುಕ್ತಿಸಾಧನಗಳು ಬ್ರಹ್ಮಕುಮಾರನಾದ ಸನತ್ಕುಮಾರನಿಂದ ವೇದವ್ಯಾಸರಿಗೆ ಹೇಗೆ ತಿಳಿಯಿತು ಎಂಬ ವಿಚಾರವನ್ನು ಸೂತಮುನಿಯೂ ಪ್ರಯಾಗದ ಮಹಾಸತ್ರಯಾಗದ ಮುನಿಗಳಿಗೆ ಹೇಳುತ್ತಾನೆ. ಹಿಂದೆ ಪರಾಶರಮುನಿಯ ಪುತ್ರ ವ್ಯಾಸಮಹರ್ಷಿ, ಸಂಸಾರಕ್ಲೇಶದ ನಿವಾರಣೆಗಾಗಿ ಸರಸ್ವತೀನದಿ ದಡದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾರೆ. ಆಗ ಆಕಾಶಮಾರ್ಗದಲ್ಲಿ ವಿಮಾನದಲ್ಲಿ ಸಂಚರಿಸುತ್ತಾ ಇದ್ದ ಸನತ್ಕುಮಾರ ದೇವ, ಸರಸ್ವತೀನದಿ ದಡದಲ್ಲಿ ವ್ಯಾಸಮುನಿಯ ತಪಸ್ಸು ಮಾಡುತ್ತಿರುವುದನ್ನು ನೋಡಿ ಹತ್ತಿರ ಬರುತ್ತಾನೆ. ಎಚ್ಚರಗೊಂಡ ವ್ಯಾಸಮುನಿ ಎದುರಿಗೆ ನಿಂತಿರುವ ಬ್ರಹ್ಮನ ಮಾನಸಪುತ್ರನಾದ ಸನತ್ಕುಮಾರನನ್ನು ನೋಡಿ ತುಂಬಾ ಆಶ್ಚರ್ಯಗೊಳ್ಳುತ್ತಾನೆ. ನಂತರ ಬ್ರಹ್ಮಪುತ್ರ ಸನತ್ಕುಮಾರನಿಗೆ ಅರ್ಘ್ಯವನ್ನು ಕೊಟ್ಟು ನಮಸ್ಕರಿಸುತ್ತಾನೆ.

ಆಗ ಸನತ್ಕುಮಾರ ಯಾವ ಕಾರಣಕ್ಕಾಗಿ ತಪಸ್ಸಿಗೆ ಕುಳಿತಿರುವೆ – ಎಂದು ವ್ಯಾಸಮುನಿಯನ್ನು ಕೇಳುತ್ತಾನೆ. ಓ ದೇವಮುನಿಯೇ! ನಾನು ಲೋಕದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳು ಜನರಿಗೆ ಲಭಿಸುವಂತೆ ಮಾಡಿರುವೆ. ಹಾಗೇ, ಜನರು ವೇದಮಾರ್ಗದಲ್ಲಿ ನಡೆಯುವಂತೆ ಸಹ ಮಾಡಿರುವೆ. ಇದರಿಂದ ನಾನು ಎಲ್ಲರಿಗೂ ಗುರುವಾಗಿದ್ದರೂ, ನನಗೆ ಸಂಸಾರಕ್ಲೇಶವನ್ನು ಹೋಗಲಾಡಿಸುವ ಮುಕ್ತಿಸಾಧನ ಸಿಕ್ಕಿಲ್ಲ. ಅತಿ ಶ್ರೇಷ್ಠವಾದ, ಮುಕ್ತಿಗೆ ಸಾಧನವಾಗುವಂತಹ ಜ್ಞಾನವು ಇನ್ನೂ ನನಗೆ ಲಭಿಸಿಲ್ಲ. ಅದಕ್ಕಾಗಿ ಮುಕ್ತಿಯನ್ನು ಅರಸಿ, ತಪಸ್ಸನ್ನು ಆಚರಿಸುತ್ತಿರುವೆ. ಆದರೆ ಆ ಮುಕ್ತಿಗೆಸಾಧನಏನೆಂಬುದು ನನಗಿನ್ನೂ ತಿಳಿದಿಲ್ಲ ಅನ್ನುತ್ತಾನೆ.

ಪೂಜ್ಯನಾದ ಮತ್ತು ಜ್ಞಾನಿಯೂ ಆದ ಸನತ್ಕುಮಾರ, ಮುಕ್ತಿಯ ಸಾಧನಗಳನ್ನು ನಿಶ್ಚಯಾತ್ಮಕವಾಗಿ ತಿಳಿಯುವ ಮಾರ್ಗವನ್ನು ವೇದವ್ಯಾಸರಿಗೆ ಹೇಳುತ್ತಾನೆ. ‘ಶಂಕರನ ನಾಮಶ್ರವಣ, ಕೀರ್ತನ, ಮನನ ಎಂಬ ಮೂರು ಮುಕ್ತಿಸಾಧನಗಳಿವೆ. ಇವು ಶ್ರೋತವ್ಯೋ ಮಂತ್ರವ್ಯೊ ನಿದಿಧ್ಯಾಸಿತವ್ಯಃ ಎಂದು ಮೊದಲಾದ ಶ್ರುತಿಗಳಲ್ಲಿ ಹೇಳಲ್ಪಟ್ಟಿವೆ. ಹಿಂದೆ ನಾನು ಸಹ ನಿನ್ನಂತೆ ಜೀವನದಲ್ಲಿ ತುಂಬಾ ಭ್ರಾಂತನಾಗಿ ಮುಕ್ತಿಯನ್ನು ಪಡೆಯಲು ಯಾವುದೋ ಬೇರೆ ಸಾಧನಗಳನ್ನು ಆಶ್ರಯಿಸಿ ಮಂದಾರಪರ್ವತದ ತಪ್ಪಲಲ್ಲಿ ತಪಸ್ಸನ್ನು ಆಚರಿಸುತ್ತಿದ್ದೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕೆಲ ಕಾಲಾನಂತರ ಶಿವನ ಆಜ್ಞೆಯಂತೆ, ಪೂಜ್ಯನಾದ ನಂದಿಕೇಶ್ವರನು ನನ್ನ ಬಳಿಗೆ ಬಂದ. ದಯಾಳುವೂ ಪ್ರಮಥಗಣಗಳಿಗೆ ನಾಯಕನೂ ಸರ್ವಜ್ಞನೂ ಆದ ಆ ನಂದಿಕೇಶ್ವರನು ನನಗೆ ಉತ್ತಮವಾದ ಮುಕ್ತಿಸಾಧನವನ್ನು ಸ್ನೇಹಪೂರ್ವಕವಾಗಿ ಹೇಳಿದ.

ಎಲೈ ದೇವೋತ್ತಮನಾದ ಸನತ್ಕುಮಾರನೇ! ಶಂಕರನ ಶ್ರವಣ, ಮನನ, ಕೀರ್ತನ ಎಂಬೀ ಮೂರು ಸಾಧನಗಳು ಮುಕ್ತಿಗೆ ಮಾರ್ಗದರ್ಶನಗಳು – ಎಂದು ವೇದದಲ್ಲಿ ಹೇಳಿರುವುದನ್ನು ಸಾಕ್ಷಾತ್ ಶಿವನೇ ನನಗೆ ಹೇಳಿರುವನು. ಆದ ಕಾರಣ ನೀನೂ ಸಹ ಶ್ರವಣ, ಮನನ, ಕೀರ್ತನ ಎಂಬೀ ಮೂರು ಸಾಧನಗಳನ್ನು ಅನುಸರಿಸಿ, ಮುಕ್ತಿಗಾಗಿ ಧ್ಯಾನಿಸು’ ಎಂದು ನಂದಿಕೇಶ್ವರನು ನನಗೆ ಹೇಳಿದನು. ಅದರಂತೆ ನಾನು ತಪಸ್ಸು ಮಾಡಿದಾಗ ಶಿವನ ಸಾಕ್ಷಾತ್ಕಾರವಾಗಿ,ಮುಕ್ತಿಸಿಕ್ಕಿತು. ವ್ಯಾಸಮುನಿಯೇ! ನನ್ನಂತೆ ನೀನೂ ಸಹ ಶಿವನ ಶ್ರವಣ, ಮನನ, ಕೀರ್ತನ ಎಂಬೀ ಮೂರು ಸಾಧನಗಳನ್ನು ಅನುಸರಿಸಿ,ಮುಕ್ತಿಪಡೆ – ಅಂತ ತಿಳಿಸಿದ. ಸನತ್ಕುಮಾರನ ಮಾತು ಕೇಳಿ ಆನಂದಿತರಾದ ವ್ಯಾಸಮುನಿಗಳು, ಆತನಿಗೆ ಕೃತಜ್ಞತೆಯಿಂದ ನಮಸ್ಕರಿಸಿದರು. ವ್ಯಾಸರಿಂದ ಯಥೋಚಿತ ಆತಿಥ್ಯ ಸ್ವೀಕರಿಸಿದ ನಂತರ ಸನತ್ಕುಮಾರ, ತನ್ನ ವಿಮಾನದಲ್ಲಿ ಪರಮಮಂಗಳಕರವಾದ ಬ್ರಹ್ಮಲೋಕಕ್ಕೆ ತೆರಳಿದ.

ಹೀಗೆ ಸೂತಮುನಿಯು ವ್ಯಾಸರಿಗೆ ಸನತ್ಕುಮಾರದೇವನಿಂದತಿಳಿದಮುಕ್ತಿಮಾರ್ಗದ ಕತೆಯನ್ನ ಮಹಾಸತ್ರಯಾಗದ ಋಷಿಗಳಿಗೆ ಹೇಳಿದ. ‘ಎಲೈ ಋಷಿಮುನಿಗಳೇ, ಸಂಕ್ಷೇಪವಾಗಿ ವ್ಯಾಸರಿಗೆ ಸನತ್ಕುಮಾರನಿಂದತಿಳಿದಮುಕ್ತಿಮಾರ್ಗದ ವೃತ್ತಾಂತವನ್ನು ಹೇಳಿರುವೆ. ಶಿವಪುರಾಣದ ಶ್ರವಣ-ಪಠಣ-ಮನನದಿಂದಮುಕ್ತಿಪಡೆದು, ಶಿವಸನ್ನಿಧಾನ ಸೇರಿ’ ಅಂತ ಸೂತಮುನಿಯು ಮುನಿವೃಂದಕ್ಕೆ ತಿಳಿಸುವುದರೊಂದಿಗೆ ಶ್ರೀಶಿವಪುರಾಣದ ವಿದ್ಯೇಶ್ವರಸಂಹಿತೆಯ ಸಾಧ್ಯಸಾಧನಖಂಡದಲ್ಲಿ ನಾಲ್ಕನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT