ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ನಂದಿಕೇಶ್ವರ ಹೇಳಿದ ಶಿವನ ಆಕಾರ

ಅಕ್ಷರ ಗಾತ್ರ

ಶಿವನ ಆಕಾರದ ಬಗ್ಗೆ ದೇವಮುನಿ ಸನತ್ಕುಮಾರ ಮತ್ತು ಶಿವನ ವಾಹನವಾದನಂದಿಕೇಶ್ವರಹೇಳಿದ ವಿವರವನ್ನೂ ಸಹ ಪ್ರಯಾಗದ ಋಷಿಮುನಿಗಳಿಗೆ ಸೂತಮುನಿ ತಿಳಿಸುತ್ತಾನೆ. ಶಿವನ ಆಕಾರ ಮತ್ತು ನಿರಾಕಾರದ ಬಗ್ಗೆ ನಂದಿಕೇಶ್ವರನು ಸನತ್ಕುಮಾರನಿಗೆ. ಸನತ್‍ಕುಮಾರದೇವನು ವ್ಯಾಸರಿಗೆ, ವ್ಯಾಸರು ತನಗೆ ಹೇಳಿದ್ದನ್ನು ಸೂತಮುನಿಯು ತಿಳಿಸುತ್ತಾನೆ.

ಮಂದಾರಪರ್ವತದಲ್ಲಿ ತಪಸ್ಸು ಮಾಡುತ್ತಿದ್ದ ಬ್ರಹ್ಮಪುತ್ರನಾದ ಸನತ್ಕುಮಾರ ತನ್ನ ಬಳಿ ಬಂದ ನಂದಿಕೇಶ್ವರನಿಗೆ ‘ಶಿವನನ್ನು ಮಾತ್ರ ಲಿಂಗ ಮತ್ತು ವಿಗ್ರಹಗಳೆರಡರಲ್ಲೂ ಏಕೆ ಪೂಜೆ ಮಾಡುತ್ತಾರೆ?’ ಅಂತ ಕೇಳುತ್ತಾನೆ. ಇದಕ್ಕೆನಂದಿಕೇಶ್ವರ‘ಅನುತ್ತರಮಿಮಂ ಪ್ರಶ್ನಂ, ರಹಸ್ಯಂ-ಬ್ರಹ್ಮಲಕ್ಷಣಂ’ ಅಂತ ಬಹಳ ಸರಳವಾಗಿ ಉತ್ತರಿಸುತ್ತಾನೆ. ‘ನೀನು ಕೇಳಿದ ಪ್ರಶ್ನೆ ಅತಿ ರಹಸ್ಯವಾದುದು. ಸಾಮಾನ್ಯರು ಬ್ರಹ್ಮವಿಷಯವಾದ ಈ ಪ್ರಶ್ನೆಗೆ ಉತ್ತರವನ್ನು ಹೇಳಲು ಸಾಧ್ಯವಿಲ್ಲ. ಆದರೂ ಶಿವನು ನನಗೆ ಹೇಳಿದ್ದನ್ನು ಶಿವಭಕ್ತನಾದ ನಿನಗೆ ಹೇಳುವೆನು ಕೇಳು’ ಅಂತ ತಿಳಿಸುತ್ತಾನೆ.

ಶಿವನು ಬ್ರಹ್ಮರೂಪನು ಮತ್ತು ಆಕಾರವಿಲ್ಲದವನು. ಆದಕಾರಣ ಆಕಾರವಿಲ್ಲದ ಲಿಂಗವೇ ಶಿವಪೂಜೆಯಲ್ಲಿ ಪ್ರಶಸ್ತವಾದುದು. ವೇದಗಳಲ್ಲಿಯೂ ಹಾಗೆಯೇ ಹೇಳಿದೆ. ಅಲ್ಲದೆ, ಶಂಕರನು ಮಾಯಿಕವಾದ ಆಕಾರವುಳ್ಳವನೂ ಆಗಿದ್ದಾನೆ. ಹೀಗಾಗಿ ಈಶ್ವರನು ಸಾಕಾರ ಮತ್ತು ನಿರಾಕಾರ ಎರಡು ರೂಪಗಳುಳ್ಳವನೂ ಆಗಿದ್ದಾನೆ. ಆದ್ದರಿಂದ ಶಿವನನ್ನು ಸಾಕಾರವಾದ ವಿಗ್ರಹದಲ್ಲಿಯೂ ಜನರು ಪೂಜಿಸಬಹುದು. ಶಿವನ ಹೊರತು ಮಿಕ್ಕ ದೇವರುಗಳು ಜೀವವುಳ್ಳವರು ಮತ್ತು ಆಕಾರವುಳ್ಳವರು. ಹಾಗೇ, ಚಿರಾಯುಗಳಲ್ಲದ ಮತ್ತು ಬ್ರಹ್ಮರೂಪರಲ್ಲದ ಇತರ ದೇವರುಗಳನ್ನು ವಿಗ್ರಹದಲ್ಲಿಯೇ ಪೂಜೆ ಮಾಡಬೇಕೆಂದು ವೇದಗಳಲ್ಲಿ ಹೇಳಿದೆ. ದೇವತೆಗಳು ಸಾಕಾರವಾದಂತಹ ರೂಪದಿಂದಲೇ ಆವಿರ್ಭವಿಸುವರು ಮತ್ತು ಪ್ರತ್ಯಕ್ಷರಾಗುವರು. ಆದರೆ ಶಿವನು ಸಾಕಾರನಾಗಿ ಮತ್ತು ನಿರಾಕಾರನಾಗಿ ಎರಡು ರೀತಿಯಲ್ಲೂ ಗೋಚರನಾಗುವನು ಎನ್ನುತ್ತಾನೆನಂದಿಕೇಶ್ವರ.

ಆಕಾರ ಮತ್ತು ನಿರಾಕಾರಗಳಲ್ಲಿ ಶಿವನನ್ನು ಏಕೆ ಪೂಜಿಸಬೇಕು ಎಂಬುದನ್ನು ಸ್ವತಃ ಶಿವನಿಂದ ತಾನು ಕೇಳಿ ತಿಳಿದ ವಿವರವನ್ನು ಸಹ, ನಂದಿಕೇಶ್ವರನಿಗೆ ಇದೇ ಸಂದರ್ಭದಲ್ಲಿ ಸನತ್ಕುಮಾರನಿಗೆ ಹೇಳುತ್ತಾನೆ.

ಬಹಳ ಹಿಂದಿನ ಕಲ್ಪದಲ್ಲಿ, ಅಂದರೆ, ಲೋಕಪ್ರಸಿದ್ಧನಾದ ಮಹಾಕಾಳೇಶ್ವರನು ಲೋಕದಲ್ಲಿ ಅವತರಿಸಿದ ಕಾಲದಲ್ಲಿ ಒಂದು ಘಟನೆ ನಡೆಯುತ್ತದೆ. ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಪರಸ್ಪರ ನಾನು ಮೇಲು, ತಾನು ಮೇಲು ಎಂದು ಹೊಡೆದಾಡುತ್ತಾರೆ. ಇದನ್ನು ತಿಳಿದ ಮಹಾಶಿವನು ಬ್ರಹ್ಮ ಮತ್ತು ವಿಷ್ಣು ಗರ್ವವನ್ನು ಹೋಗಿಸಲು ನಿರ್ಧರಿಸುತ್ತಾನೆ. ಇದಕ್ಕಾಗಿ ಪರಮೇಶ್ವರನು ಅವರ ಮಧ್ಯದಲ್ಲಿ ನಿರಾಕಾರವಾದ ದೊಡ್ಡ ಕಂಬದ ರೂಪದಲ್ಲಿ ನಿಲ್ಲುತ್ತಾನೆ. ಶಿವನು ತನ್ನ ಸ್ವರೂಪವನ್ನು ಗುರುತಿಸುವಂತಹ ಆ ಕಂಬವನ್ನು ಜಗತ್ತಿನ ಕ್ಷೇಮಕ್ಕಾಗಿ ಪ್ರಕಟಿಸಿದನು. ಅಂದಿನಿಂದ ಶಿವಪೂಜೆಗೆ ಕಂಬರೂಪದ ಲಿಂಗದ ಜೊತೆಗೆ ಶಿವನ ಮೂರ್ತಿಯು ಸಹ ಕಲ್ಪಿಸಲ್ಪಟ್ಟವು. ಇದು ಲಿಂಗ ಮತ್ತು ಮೂರ್ತಿಗಳೆರಡರಲ್ಲೂ ಈಶ್ವರನನ್ನು ಪೂಜಿಸಬಹುದೆಂಬುದರ ಅರ್ಥ.

ಇತರ ದೇವತೆಗಳಿಗೆ ಮೂರ್ತಿಪೂಜೆ ಮಾತ್ರ ವಿಹಿತವಾಗಿರುವುದು. ಏಕೆಂದರೆ, ಆ ದೇವತೆಗಳು ಭಕ್ತರಿಗೆ ಐಹಿಕ ಮತ್ತು ಸ್ವರ್ಗೀಯ ಭೋಗಗಳನ್ನು ಮಾತ್ರ ಕೊಡಲು ಸಮರ್ಥರಾಗಿರುವರು, ಮೋಕ್ಷಫಲವನ್ನು ಕೊಡಲು ಶಕ್ತರಲ್ಲ. ಆದರೆ ಈಶ್ವರನು ಭಕ್ತರಿಗೆ ಐಹಿಕಾದಿ-ಭೋಗಗಳನ್ನೂ ಮೋಕ್ಷವನ್ನೂ ಕೊಡಲು ಸಮರ್ಥನಾಗಿದ್ದಾನೆ. ಆದ್ದರಿಂದ ಪರಮೇಶ್ವರನು ಲಿಂಗ ಮತ್ತು ಮೂರ್ತಿಗಳ ರೂಪದಲ್ಲಿ ಆರಾಧಿಸಲ್ಪಡುವನು ಎಂದು ನಂದಿಕೇಶ್ವರನು ಸನತ್ಕುಮಾರದೇವನಿಗೆ ತಿಳಿಸಿದ್ದ. ನಂದಿಕೇಶ್ವರನಿಂದ ಕೇಳಿದ ಮಹಾಕಾಳೇಶ್ವರ ಆವಿರ್ಭವಿಸಿದ ಕಥೆಯನ್ನು ಸನತ್ಕುಮಾರನು ವೇದವ್ಯಾಸರಿಗೆ ತಿಳಿಸಿದ್ದ. ಹೀಗೆ ಶಿವಮಹಾಪುರಾಣದ ಮೊದಲ ಸಂಹಿತೆಯಾದ ವಿದ್ಯೇಶ್ವರ ಸಂಹಿತೆಯ ಐದನೇ ಅಧ್ಯಾಯವುನಂದಿಕೇಶ್ವರಹೇಳುವ ಶಿವಲಿಂಗಾಕಾರದ ವಿವರವಾದ ಮಾತಿನೊಂದಿಗೆ ಮುಗಿಯುತ್ತದೆ. ಆರನೇ ಅಧ್ಯಾಯದಲ್ಲಿ, ಸುಳ್ಳು ಹೇಳಿದ ಬ್ರಹ್ಮ ತನ್ನ ಐದನೇ ತಲೆಯನ್ನು ಹೇಗೆ ಕತ್ತರಿಸಿಕೊಂಡ ಎಂಬ ಘಟನೆಯನ್ನು ಸೂತಮುನಿ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT