ಭಾನುವಾರ, ಅಕ್ಟೋಬರ್ 25, 2020
28 °C

ಸಚ್ಚಿದಾನಂದ ಸತ್ಯ ಸಂದೇಶ: ಧರ್ಮ-ವಿಜ್ಞಾನ ಬೇರೆಯಲ್ಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ganapathi sachidananda swamiji

ಹುಟ್ಟಿದ ಪ್ರತಿ ಜೀವಿಯೂ ಸಾವಿಗೆ ಶರಣಾಗಲೇ ಬೇಕು. ಈ ಸೃಷ್ಟಿನಿಯಮ ಬ್ರಹ್ಮಾಂಡದಲ್ಲಿರುವ ಎಲ್ಲಾ ಗ್ರಹ-ನಕ್ಷತ್ರಗಳಿಗೂ ಅನ್ವಯಿಸುತ್ತೆ. ಜೀವಾತ್ಮಗಳಿಗೆ ಜೀವನ್ಮರಣದ ಸರಪಣಿ ಇರುವಂತೆಯೇ, ಗ್ರಹಕಾಯಗಳಿಗೂ ಜೀವನ್ಮರಣದ ಸರಪಣಿ ಇದೆ. ಭಗವಂತನ ಈ ಸೃಷ್ಟಿಬಂಧ ನಿರಂತರವಾಗಿರುತ್ತೆ. ಇದರಿಂದ ಹೊರಬರಲು ಜೀವಾತ್ಮಗಳಿಗೆ ಮಾತ್ರ ಅವಕಾಶವಿದೆ. ಅದೇ ಮೋಕ್ಷಮಾರ್ಗ. 

ಒಂದು ನಕ್ಷತ್ರದ ಅಳಿವನ್ನು ಗ್ರೀಕ್ ಪುರಾಣದಲ್ಲಿ ಬರುವ ಫೀನಿಕ್ಸ್‌ ಹಕ್ಕಿಗೆ ಹೋಲಿಸಬಹುದು. ಫೀನಿಕ್ಸ್ ಹಕ್ಕಿ ಸಂಗಾತಿ ಇಲ್ಲದ ಕೊರಗಿನಲ್ಲೆ ಸೊರಗಿ ಸುಟ್ಟು ಬೂದಿಯಾಗುತ್ತೆ. ಅದೇ ಬೂದಿಯಿಂದ ಅದು ಮರುಹುಟ್ಟು ಪಡೆಯುತ್ತೆ. ಅದರಂತೆ ಒಂದು ನಕ್ಷತ್ರದ ಜೀವನವೃತ್ತಾಂತವೂ ಸಾಗಿದೆ. ಜೀವ ಧಗೆಯಿಂದ ಉರಿವ ನಕ್ಷತ್ರ ಪ್ರತಿ ಜೀವಕಣಗಳಲ್ಲೂ ಚೈತನ್ಯ ತುಂಬುತ್ತಾ, ಕೊನೆಗೊಂದು ದಿನ ತನ್ನ ಚೈತನ್ಯ ಕಳೆದುಕೊಂಡು ಶ್ವೇತಕುಬ್ಜ(ಬ್ಲ್ಯಾಕ್ ಹೋಲ್)ವಾಗುತ್ತದೆ.

ಶ್ವೇತಕುಬ್ಜವಾದ ನಕ್ಷತ್ರ ಮತ್ತೆ ಚೈತನ್ಯ ತುಂಬಿಕೊಳ್ಳಲು ತನ್ನ ತೆಕ್ಕೆಗೆ ಸಿಗುವ ಗ್ರಹ-ಉಪಗ್ರಹ-ಉಲ್ಕೆ-ಧೂಮಕೇತುಗಳನ್ನೆಲ್ಲಾ ನುಂಗುತ್ತಾ ಸುಂಟರಗಾಳಿಯಂತೆ ಸಾಗುತ್ತದೆ. ಕೊನೆಗೊಂದು ದಿನ ತನ್ನ ಹಸಿವು ಹಿಂಗಿ ಹೊಟ್ಟೆ ದುಂಡಗಾಗುತ್ತಿದ್ದಂತೆ ಆಕಾಶದಲ್ಲಿ ಗ್ರಹಗಳ ಮೊಟ್ಟೆ ಇಡುತ್ತಾ ಹೋಗುತ್ತದೆ. ಈ ಗ್ರಹಗಳಲ್ಲೂ ಕೆಲವು ಮೊಟ್ಟೆಗಳನ್ನಿಟ್ಟು ಉಪಗ್ರಹಗಳಾಗುತ್ತವೆ. ಹೀಗೆ ಸೃಷ್ಟಿಯಾದ ಸೌರಮಂಡಲದ ಗ್ರಹಗಳಲ್ಲಿ ಜೀವಜಲ ಉಕ್ಕಿ, ಜೀವಸಂಕುಲಗಳು ಮೊಳೆಯುತ್ತವೆ. ಇದನ್ನೇ ಶಂಕರಾಚಾರ್ಯರು ‘ಪುನರಪಿ ಜನನಂ, ಪುನರಪಿ ಮರಣಂ’ ಅಂದದ್ದು.

ಸೃಷ್ಟಿಚಕ್ರದ ಬಗ್ಗೆ ಧರ್ಮ ವ್ಯಾಖ್ಯಾನ ಮಾಡಿ ಸಾವಿರಾರು ವರ್ಷಗಳಾಗಿವೆ. ನಕ್ಷತ್ರದ ಸಾವಿನ ಬಗ್ಗೆ ವಿಜ್ಞಾನ ಹೇಳಿ ಐವತ್ತು ವರ್ಷ ಕಳೆಯುತ್ತಾ ಬರುತ್ತಿದೆ. ಆದರೆ ವಿಕೃತ ಮನುಷ್ಯನ ಬುದ್ಧಿ ಮಾತ್ರ ಅರ್ಧ ಸಹಸ್ರಮಾನದಷ್ಟು ಹಿಂದೆ ಹೋಗುತ್ತಲೇ ಇದೆ. ಮನುಷ್ಯನ ಬುದ್ಧಿ ವಿಜ್ಞಾನ-ತಂತ್ರಜ್ಞಾನದಿಂದ ಗಗನದಾಚೆ ಸಾಗಿ ನಾಗಾಲೋಟದಲ್ಲಿ ಓಡುತ್ತಿದ್ದರೂ, ಅವನ ಸಂಕುಚಿತ ಮನಸ್ಸು ಮಾತ್ರ ಇನ್ನೂ ಇದ್ದಲ್ಲೆ ಒದ್ದಾಡುತ್ತಿದೆ. ಇದೆ ಸೃಷ್ಟಿಯ ವಿಪರ್ಯಾಸ.

ನನ್ನ ದೃಷ್ಟಿಯಲ್ಲಿ ಧರ್ಮ ಮತ್ತು ವಿಜ್ಞಾನ ಬೇರೆ ಬೇರೆಯಲ್ಲ. ಎರಡೂ ಮನುಷ್ಯನನ್ನು ಸನ್ಮಾರ್ಗಕ್ಕೆಳೆಸುವ ಸಾಧನಗಳು. ಇವೆರಡೂ ಸನ್ಮಾರ್ಗದಲ್ಲಿ ನಡೆಯುವಾಗ ಜಗತ್ತು ನೆಮ್ಮದಿಯಾಗಿರುತ್ತೆ. ಒಂದರಲ್ಲಿ ಏರುಪೇರಾದರೂ ಸೃಷ್ಟಿಯಲ್ಲಿ ತಲ್ಲಣವಾಗುತ್ತೆ. ಒಬ್ಬ ಯೋಗಿಯು ಮನುಷ್ಯನನ್ನು ನೈತಿಕವಾಗಿ ಬೆಳೆಸಿದರೆ, ಒಬ್ಬ ವಿಜ್ಞಾನಿಯು ಮನುಷ್ಯನನ್ನು ವಿಚಾರವಂತನಾಗಿಸುತ್ತಾನೆ. ಮನುಷ್ಯ ಹುಟ್ಟುವಾಗ ಇತರೆ ಪ್ರಾಣಿ-ಪಕ್ಷಿಗಳಂತೆ ಬುದ್ಧಿಹೀನನಾಗಿರುತ್ತಾನೆ; ಮೃಗೀಯನೂ ಆಗಿರುತ್ತಾನೆ. ಇಂಥವನನ್ನು ನೀತಿವಂತನಾಗಿ-ಬುದ್ಧಿವಂತನನ್ನಾಗಿ ಬೆಳೆಸುವುದು ಧರ್ಮ ಮತ್ತು ವಿಜ್ಞಾನ. ಧರ್ಮ ಕುರುಡಾಗದಿರಲು ಧರ್ಮದೊಳಗೆ ವಿಜ್ಞಾನ ಇರಬೇಕು; ವಿಜ್ಞಾನ ಕೆಡುಕಾಗದಿರಲು ವಿಜ್ಞಾನದೊಳಗೆ ಧರ್ಮವಿರಬೇಕು.

ಮನುಷ್ಯ ಸನ್ಮಾರ್ಗದಲ್ಲಿ ನಡೆಯಲು ಧರ್ಮ ಬೆಳಕಾಗಿದ್ದರೆ, ವಿಜ್ಞಾನ ವಾಹಕಶಕ್ತಿಯಾಗಿರುತ್ತದೆ. ಎರಡೂ ಜತೆಗೂಡಿ ನಡೆದಾಗ ಮಾತ್ರ ಮಾನವ ಉದ್ಧಾರವಾಗುತ್ತಾನೆ. ಅರ್ಥಾತ್, ಜೀವನ್ಮರಣಚಕ್ರದಿಂದ ಮುಕ್ತವಾಗಿ ಮೋಕ್ಷದ ಹಾದಿ ತುಳಿಯುತ್ತಾನೆ. ಇಂದು ಜಗತ್ತಿನಲ್ಲಿ ಧರ್ಮ ಮತ್ತು ವಿಜ್ಞಾನ ಭಿನ್ನ ಹಾದಿಯಲ್ಲಿ ತುಳಿಯುತ್ತಿರುವುದರಿಂದ ಮಾನವರಲ್ಲಿ ಅಶಾಂತಿ ಮೂಡಿದೆ. ದುರಾಸೆ ದುರಾಕ್ರಮಣಕ್ಕೆ ಎಡೆಮಾಡಿಕೊಡುತ್ತಿದೆ. ವೈಜ್ಞಾನಿಕವಾಗಿ ಬೆಳೆದರೂ, ನೈತಿಕವಾಗಿ ಕುಸಿದಿರುವ ಇಂದಿನ ಮನುಷ್ಯರಿಗೆ ಧರ್ಮ ಅಗತ್ಯವಾಗಿಬೇಕು. ಯುದ್ಧದಾಹಿಯಾಗಿದ್ದ ಅಶೋಕನನ್ನು ಪರಿವರ್ತಿಸಿದ್ದು ಧರ್ಮವೇ. ಆಳುವವರು ಧರ್ಮವಂತರಾದರೆ ರಾಜ್ಯ ಸುಭಿಕ್ಷವಾಗಿರುತ್ತದೆ. ದೇಶಗಳ ನಡುವೆ ಸೌಹಾರ್ದತೆ ಇರುತ್ತೆ. ಇಂಥ ಸದ್ವರ್ತನೆಯಿಂದ ಮನುಕುಲ ‘ಸಚ್ಚಿದಾನಂದ’ಮಯವಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.