ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಲಿಂಗ ನಿರ್ಮಾಣ ಪೂಜಾಕ್ರಮ

ಅಕ್ಷರ ಗಾತ್ರ

ಈಗ ಸೂತಮುನಿ, ಶಿವಪೂಜಾಕ್ರಮವನ್ನು ಮತ್ತು ಲಿಂಗನಿರ್ಮಾಣದ ನಿಯಮವನ್ನು ತಿಳಿಸುತ್ತಾನೆ.

‘ಸದ್ಯೋಜಾತಂ’ ಎಂಬ ಮಂತ್ರದಿಂದ ಮಣ್ಣನ್ನು ತರಬೇಕು. ‘ವಾಮದೇವಾಯ ನಮಃ’ ಎಂಬ ಮಂತ್ರದಿಂದ ಜಲದಿಂದ ಮಣ್ಣನ್ನು ಶೋಧಿಸಬೇಕು. ‘ಅಘೋರೇಭ್ಯೋ’ ಎಂಬ ಮಂತ್ರದಿಂದ ಲಿಂಗವನ್ನು ನಿರ್ಮಿಸಬೇಕು. ‘ತತ್ಪುರುಷಾಯ’ ಎಂಬ ಮಂತ್ರದಿಂದ ವಿಧಿವತ್ತಾಗಿ ಶಿವನನ್ನು ಆಹ್ವಾನಿಸಬೇಕು. ನಂತರ ‘ಈಶಾನಃ’ ಎಂಬ ಮಂತ್ರದಿಂದ ಶಿವನನ್ನು ಪೀಠದಲ್ಲಿ ಪ್ರತಿಷ್ಠಾಪಿಸಬೇಕು. ಗುರು ಉಪದೇಶಿಸಿರುವಂತಹ ಶಿವಪಂಚಾಕ್ಷರೀಮಂತ್ರದಿಂದ ಷೋಡಶೋಪಚಾರಗಳನ್ನರ್ಪಿಸಿ ವಿಧಿವತ್ತಾಗಿ ಪೂಜಿಸಬೇಕು.

ಭವಾಯ (ಜಗದ್ರೂಪನಾದಂತಹ) ಭವನಾಶಾಯ (ಸಂಸಾರವನ್ನು ನಾಶಮಾಡುವಂತಹ) ಮಹಾದೇವಾಯ (ದೇವದೇವನಾದ ಪರಮೇಶ್ವರ) ಧೀಮಹಿ (ಪೂಜೆಯಿಂದ ಸಂತೋಷಗೊಳಿಸುವ). ಉಗ್ರಾಯ (ಉಗ್ರನೂ) ಉಗ್ರನಾಶಾಯ (ಕ್ರೂರರನ್ನು ನಾಶಮಾಡುವವ) ಶಶಿಮೌಲಿನೆ (ಚಂದ್ರಕಲೆಯನ್ನು ಧರಿಸಿರುವವನು) ಶರ್ವಾಯ (ಶಿವನಿಗೆ ನಮಸ್ಕಾರ) – ಎಂಬ ವೈದಿಕ ಮಂತ್ರದಿಂದ ಭಕ್ತಿಪೂರ್ವಕವಾಗಿ ಪೂಜಿಸಬೇಕು. ಜನಸಾಮಾನ್ಯರು ಓಂಕಾರವು ಆದಿಯುಲ್ಲುಳ್ಳ, ಚತುರ್ಥೀವಿಭಕ್ತ್ಯಂತವಾದ ಮತ್ತು ಕೊನೆಯಲ್ಲಿ ನಮಃ ಪದವುಳ್ಳ ಎಂಟು ಶಿವನಾಮಗಳನ್ನು ಉಚ್ಚರಿಸಿ ಮಣ್ಣನ್ನು ತರಬೇಕು. ಅದಕ್ಕೆ ಜಲದಿಂದ ಕಲಸಿ ಲಿಂಗವನ್ನು ನಿರ್ಮಿಸಬೇಕು. ನಂತರ ‘ಓಂ ಹರಾಯ ನಮಃ, ಓಂ ಮಹೇಶ್ವರಾಯ ನಮಃ, ಓಂ ಶಂಭವೇ ನಮಃ, ಓಂ ಶೂಲಪಾಣಿಯೇ ನಮಃ, ಓಂ ಪಿನಾಕಧರಾಯ ನಮಃ, ಓಂ ಶಿವಾಯ ನಮಃ, ಓಂ ಪಶುಪತಯೇ ನಮಃ, ಓಂ ಮಹಾದೇವಾಯ ನಮಃ’ ಅಂತ ಮಂತ್ರೋಚ್ಚಾರ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು. ಆಹ್ವಾನ, ಅಭಿಷೇಕ, ಪೂಜೆ ನಂತರ, ಕ್ಷಮಿಸು ಎಂದು ಹೇಳಿ ವಿಸರ್ಜನೆಮಾಡಬೇಕು. ಆರು ಅಂಗನ್ಯಾಸ ಮತ್ತು ಕರನ್ಯಾಸಗಳನ್ನು ವಿಧಿವತ್ತಾಗಿ ಮಾಡಿದ ಬಳಿಕ ‘ಓಂ ನಮಃ ಶಿವಾಯ’ ಎಂಬ ಷಡಕ್ಷರಮಂತ್ರದಿಂದ ಶಿವಧ್ಯಾನವನ್ನು ಮಾಡಬೇಕು.

ಕೈಲಾಸದ ರಜತಪೀಠದ ಮಧ್ಯದಲ್ಲಿ ಕುಳಿತಿರುವ, ಸನಂದ ಮುಂತಾದವರಿಂದ ಅರ್ಚಿಸಲ್ಪಡುತ್ತಿರುವ, ಚಕ್ಷುರಾದಿ ಪ್ರಯಾಣಗಳಿಗೆ ಅಗೋಚರನಾಗಿರುವ, ಪಾರ್ವತಿಯಿಂದ ಆಲಂಗಿಸಲ್ಪಟ್ಟಿರುವ, ಸಕಲಾಭರಣಗಳಿಂದ ಅಲಂಕೃತನಾಗಿರುವ, ಜಗತ್ತಿಗೆ ಅಲಂಕಾರಪ್ರಾಯನಾದ ಶಿವನೇ; ಬೆಳ್ಳಿಯ ಬೆಟ್ಟದಂತೆ ಶುಭ್ರವಾದ ವರ್ಣದಿಂದ ವಿರಾಜಿಸುವವನೇ, ಶಿರಸ್ಸಿನಲ್ಲಿ ಚಂದ್ರಕಲೆಯಿರುವವನೆ, ರತ್ನಾಭರಣಗಳ ಕಾಂತಿಯಿಂದ ಪ್ರಕಾಶಿಸುತ್ತಲಿರುವವವನೆ, ಕೈಗಳಲ್ಲಿ ಕೊಡಲಿ, ಜಿಂಕೆ, ವರದಮುದ್ರೆ ಮತ್ತು ಅಭಯಮುದ್ರೆಗಳನ್ನು ಧರಿಸಿರುವವನೆ, ಪ್ರಸನ್ನವಾದ ಮುಖದಿಂದ ಬೆಳಗುತ್ತಿರುವವನೇ, ಪದ್ಮಾಸನದಲ್ಲಿ ಕುಳಿತು ಹುಲಿಯ ಚರ್ಮವನ್ನುಟ್ಟಿರುವವನೆ, ನೀನೇ ಜಗತ್ತಿಗೆ ಆದಿಪುರುಷನು, ಆದಿಕರಣನು; ಸಕಲ ಭಯವನ್ನೂ ಹೋಗಲಾಡಿಸುವವನು, ಐದು ಮುಖಗಳಿಂದಲೂ, ಮೂರು ಕಣ್ಣುಗಳಿಂದಲೂ ಶೋಭಿಸುತ್ತಿರುವನು – ಅಂತ ಶಿವನನ್ನು ಧ್ಯಾನಿಸಿ ಪ್ರಾರ್ಥಿವಲಿಂಗವನ್ನು ಪೂಜಿಸಬೇಕು. ಬಳಿಕ ಪಂಚಾಕ್ಷರಮಂತ್ರವನ್ನು ಗುರುವಿನ ಉಪದೇಶದಂತೆ ವಿಧಿವತ್ತಾಗಿ ಜಪಿಸಬೇಕು.

ಶಿವನನ್ನು ನಮಸ್ಕರಿಸುತ್ತಾ ಅನೇಕ ವಿಧವಾಗಿ ಸ್ತೋತ್ರಗಳಿಂದ ಸ್ತುತಿಸಬೇಕು. ಶತರುದ್ರೀಯವನ್ನು ನೂರು ಬಾರಿ ಪಠಿಸಬೇಕು. ಅಕ್ಷತೆ–ಪುಷ್ಪಗಳನ್ನು ಅಂಜಲಿಯಲ್ಲಿ ಧರಿಸಿ ಭಕ್ತಿಯಿಂದ ‘ಭೂತನಾಥನಾದ ಓ ಶಿವನೇ! ಓ ದಯಾಮೂರ್ತಿಯೇ! ನಾನು ನಿನ್ನವನು, ನಿನ್ನ ಗುಣಗಳೇ ಪ್ರಾಣ. ನಿನ್ನ ಗುಣಗಳನ್ನೇ ಪ್ರೀತಿಸುವವನು, ನಿನ್ನಲ್ಲಿಯೇ ನೆಟ್ಟ ಮನಸ್ಸುಳ್ಳವನು ಎಂದು ತಿಳಿದು ನನ್ನಲ್ಲಿ ಪ್ರಸನ್ನನಾಗು!’ ಅಂತ ಪ್ರಾರ್ಥಿಸಬೇಕು.

‘ಓ ಮಹಾದೇವ! ವೇದಗಳು, ಪುರಾಣಗಳು, ಶಾಸ್ತ್ರಗಳು ಮತ್ತು ಋಷಿಗಳೂ ನಿನ್ನ ಸ್ವರೂಪವನ್ನು ತಿಳಿಯಲಾರರು. ಇಂತಹ ನಿನ್ನನ್ನು ನಾನು ಹೇಗೆ ತಿಳಿಯಬಲ್ಲೆನು? ಓ ಮಹೇಶ್ವರ! ಹೇಗಾದರೂ ನಾನು ಸರ್ವವಿಧಗಳಿಂದಲೂ ನಿನ್ನವನಾಗಿರುವವನು. ಆದುದರಿಂದ ಓ ಪರಮೇಶ್ವರ! ಪ್ರಸನ್ನನಾಗು, ನನ್ನನ್ನು ರಕ್ಷಿಸು’ ಎಂದು ಪ್ರಾರ್ಥಿಸಿ ಅಕ್ಷತೆ–ಪುಷ್ಪಗಳನ್ನು ಶಿವಲಿಂಗದ ಮೇಲೆ ಹಾಕಿ ಪೂಜಿಸಬೇಕು. ಭಕ್ತಿಯಿಂದ ಶಂಕರನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಬೇಕು; ವಿಧಿವತ್ತಾಗಿ ಪ್ರದಕ್ಷಿಣವನ್ನು ಮಾಡಬೇಕು. ಬಳಿಕ ಮಹಾದೇವನನ್ನು ಶ್ರದ್ಧೆ-ಭಕ್ತಿಯಿಂದ ಸ್ತುತಿಸಿ, ನಮ್ರತೆಯಿಂದ ನಮಸ್ಕರಿಸಬೇಕು. ಕೊನೆಯಲ್ಲಿ ‘ನನ್ನಿಂದ ಯಾವುದಾದರೂ ತಪ್ಪಾಗಿದ್ದರೆ ಕ್ಷಮಿಸು’ ಎಂದು ವಿಸರ್ಜನವನ್ನು ಮಾಡಬೇಕು ಎಂದು ಸೂತಮುನಿ ಹೇಳುವುದರೊಂದಿಗೆ ವಿದ್ಯೇಶ್ವರ ಸಂಹಿತೆಯ ಇಪ್ಪತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT