ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಲಿಂಗಗಳಲ್ಲಿ ಪಾರ್ಥಿವಲಿಂಗವೇ ಶ್ರೇಷ್ಠ

ಅಕ್ಷರ ಗಾತ್ರ

ಈಗ ಸೂತಮುನಿಯು ಶಿವನ ಪಾರ್ಥಿವಲಿಂಗದ ಮಹಿಮೆಯನ್ನು ವಿವರಿಸುತ್ತಾನೆ. ‘ಲಿಂಗಗಳಲ್ಲೆಲ್ಲಾ ಪಾರ್ಥಿವಲಿಂಗವೇ ಶ್ರೇಷ್ಠ. ಅದನ್ನು ಪೂಜಿಸಿ ಅನೇಕರು ಸಿದ್ಧಿಯನ್ನು ಪಡೆದಿರುವರು’ ಎಂದು ತಿಳಿಸುತ್ತಾನೆ.

ಬ್ರಹ್ಮ, ವಿಷ್ಣು, ಋಷಿಗಳು ಮತ್ತು ದಕ್ಷ ಮುಂತಾದವರೆಲ್ಲರೂ ಪಾರ್ಥಿವ ಲಿಂಗಗಳನ್ನು ಪೂಜಿಸಿ ಇಷ್ಟಸಿದ್ಧಿಯನ್ನು ಪಡೆದಿದ್ದಾರೆ. ಇನ್ನೂ ಅನೇಕ ದೇವತೆ ಗಳು, ರಾಕ್ಷಸರು, ಮನುಷ್ಯರು, ನಾಗರು, ಅಸುರರು ಮುಂತಾದವರು ಪಾರ್ಥಿವಲಿಂಗವನ್ನು ಪೂಜಿಸಿ ಇಷ್ಟಸಿದ್ಧಿಯನ್ನು ಪಡೆದಿದ್ದಾರೆ. ಕೃತಯುಗದಲ್ಲಿ ರತ್ನಮಯವಾದ ಲಿಂಗ ಉತ್ತಮವಾದುದಾಗಿತ್ತು. ತ್ರೇತಾಯುಗದಲ್ಲಿ ಸುವರ್ಣಲಿಂಗವು ಉತ್ತಮ ಎನಿಸಿದರೆ, ದ್ವಾಪರಯುಗದಲ್ಲಿ ಪಾದರಸದ ಲಿಂಗವು ಶ್ರೇಷ್ಠ ಎನಿಸಿತ್ತು. ಕಲಿಯುಗದಲ್ಲಿ ಪಾರ್ಥಿವಲಿಂಗವು ಪೂಜೆಗೆ ಶ್ರೇಷ್ಠವಾಗಿದೆ.

ಈಶ್ವರನ ಎಂಟು ಮೂರ್ತಿಗಳಲ್ಲಿ ಪೃಥ್ವೀರೂಪವಾದ ಮೂರ್ತಿಯು ಶ್ರೇಷ್ಠವಾದುದು. ಇನ್ನಾವುದನ್ನೂ ಅಪೇಕ್ಷಿಸದೆ ಆ ಪಾರ್ಥಿವಮೂರ್ತಿಯನ್ನೆ ಕುರಿತು ತಪಸ್ಸು ಮಾಡಿದರೆ ಮಹತ್ತಾದ ಫಲ ಲಭಿಸುತ್ತದೆ. ದೇವರುಗಳಲ್ಲಿ ಮಹೇಶ್ವರನು ಮೊದಲನೆಯವನೂ ಶ್ರೇಷ್ಠನೂ ಆಗಿರುವಂತೆ, ಲಿಂಗಗಳಲ್ಲೆಲ್ಲಾ ಪಾರ್ಥಿವಲಿಂಗವು ಶ್ರೇಷ್ಠವಾದುದಾಗಿದೆ. ನದಿಗಳಲ್ಲಿ ಗಂಗೆಯಂತೆ, ಮಂತ್ರ ಗಳಲ್ಲಿ ಪ್ರಣವಮಂತ್ರದಂತೆ, ಪಟ್ಟಣಗಳಲ್ಲಿ ಕಾಶೀಪಟ್ಟಣದಂತೆ, ವ್ರತಗಳಲ್ಲಿ ಶಿವರಾತ್ರಿವ್ರತದಂತೆ, ಶಕ್ತಿದೇವತೆಯಲ್ಲಿ ಶಿವಶಕ್ತಿ ಶ್ರೇಷ್ಠವಾಗಿರುವಂತೆ ಪಾರ್ಥಿವ ಲಿಂಗವು ಶಿವಲಿಂಗಗಳಲ್ಲೆ ಅತ್ಯಂತ ಶ್ರೇಷ್ಠ; ಮತ್ತು ಶಿವನನ್ನು ಆರಾಧಿಸಲು ಯೋಗ್ಯವೂ ಆಗಿದೆ.

ಪ್ರಾರ್ಥಿವಲಿಂಗದಲ್ಲಿ ಶಿವನನ್ನು ಬಿಟ್ಟು ಮಿಕ್ಕದೇವತೆಗಳನ್ನು ಪೂಜಿಸಿದರೆ, ಆ ಪೂಜೆ ವ್ಯರ್ಥವಾಗುವುದು. ಪಾರ್ಥಿವಲಿಂಗದ ಪೂಜೆಯು ಪುಣ್ಯಪ್ರದವಾದುದು. ಧನ ಮತ್ತು ಆಯುಸ್ಸುಗಳನ್ನು ಹೆಚ್ಚಿಸುವುದು. ಸಂತೋಷ ಮತ್ತು ಪುಷ್ಟಿಗಳನ್ನು ನೀಡುವುದು. ಇಂತಹ ಪಾರ್ಥಿವಲಿಂಗದ ಪೂಜೆಯನ್ನು ಸಾಧಕ ಶ್ರೇಷ್ಠರು ಭಕ್ತಿಯಿಂದ ಆಚರಿಸಬೇಕು. ಯೋಗ್ಯವಾಗಿ ಸಂಗ್ರಹಿಸಿದ ಸಾಮಾಗ್ರಿ ಗಳಿಂದ, ಉಪಚಾರಗಳಿಂದ, ಭಕ್ತಿಶ್ರದ್ಧಾ ಪೂರ್ವಕವಾಗಿ ಪಾರ್ಥಿವಲಿಂಗವನ್ನು ಪೂಜಿಸಬೇಕು. ಇದರಿಂದ ಸಕಲ ಇಷ್ಟಾರ್ಥಗಳೂ ನೆರವೇರುವುದು.

ಪಾರ್ಥಿವ(ಮಣ್ಣಿನ)ಲಿಂಗವನ್ನು ನಿರ್ಮಿಸಿ, ಶುಭ ವೇದಿಕೆಯಲ್ಲಿ ಯಾರು ಪೂಜಿಸುವರೋ ಅವರು ಇಹಲೋಕದಲ್ಲಿ ಶ್ರೀಮಂತನಾಗಿದ್ದು ಮರಣಾನಂತರ ರುದ್ರಸ್ವರೂಪವನ್ನು ಪಡೆಯುವರು. ಮೂರು ಸಂಧ್ಯಾಕಾಲಗಳಲ್ಲಿಯೂ ಹನ್ನೊಂದು ಪಾರ್ಥಿವಲಿಂಗಗಳನ್ನು ಮಾಡಿ ಬಿಲ್ವಪತ್ರೆಗಳಿಂದ ಯಾರು ಪೂಜಿಸುವರೋ, ಅವರು ಸಶರೀರವಾಗಿ ರುದ್ರಲೋಕಕ್ಕೆ ಹೋಗುವರು.

ಪಾರ್ಥಿವಲಿಂಗವನ್ನು ನಿರ್ಮಿಸಿ ಅದರಲ್ಲಿ ಶಿವನನ್ನು ನಿತ್ಯವೂ ಜೀವಿಸಿರು ವವರೆಗೆ ಪೂಜಿಸುವವನು ಶಿವಲೋಕವನ್ನು ಸೇರುವನು. ಶಿವಲೋಕದಲ್ಲಿ ಶಿವನೊಡನೆ ಅನೇಕ ವರ್ಷಗಳು ಇದ್ದು, ಸಕಾಮನಾಗಿದ್ದರೆ ಅವನು ತಿರುಗಿ ಪವಿತ್ರವಾದ ಭರತಭೂಮಿಯಲ್ಲಿ ಚಕ್ರವರ್ತಿಯಾಗಿ ಜನಿಸುವನು. ಆದುದರಿಂದ ಫಲೇಚ್ಛೆಯಿಲ್ಲದವನಾಗಿ, ಅಂದರೆ ನಿಷ್ಕಾಮನಾಗಿ ನಿತ್ಯವೂ ಪಾರ್ಥಿವಲಿಂಗವನ್ನು ಅರ್ಚಿಸಬೇಕು. ಹಾಗೆ ಅರ್ಚಿಸಿದವನು ಬಹಳಕಾಲ ಶಿವಲೋಕದಲ್ಲಿದ್ದು, ಕೊನೆಗೆ ಮುಕ್ತಿಯನ್ನು ಪಡೆಯುವನು. ಶಿವನೊಡನೆ ಐಕ್ಯವನ್ನು ಸಹ ಹೊಂದುವನು.

ಚರಲಿಂಗವು ಅಖಂಡವಾಗಿರಬೇಕು. ಚರಪಾರ್ಥಿವಲಿಂಗವನ್ನು ವಿಖಂಡ ಮಾಡಬಾರದು. ಅಂದರೆ ಪೀಠ ಮತ್ತು ಲಿಂಗಗಳು ಬೇರೆಯಾಗಿರುವಂತೆ ಮಾಡಬಾರದು. ಅಖಂಡ(ಒಟ್ಟಾಗಿ)ವಾಗಿಯೇ ನಿರ್ಮಿಸಬೇಕು. ವಿಖಂಡವಾಗಿ ಮಾಡಿದರೆ ಪೂಜೆಯ ಫಲವು ಲಭಿಸಲಾರದು. ರತ್ನಮಯವಾದ ಮತ್ತು ಸುವರ್ಣಲಿಂಗಗಳು, ಪಾದರಸಲಿಂಗ, ಸ್ಫಟಿಕಲಿಂಗ, ಪಾರ್ಥಿವಲಿಂಗ, ಪುಷ್ಪರಾಗದಲಿಂಗಗಳನ್ನು ಅಖಂಡವಾಗಿ (ಪೀಠ ಮತ್ತು ಲಿಂಗಗಳು ಸೇರಿರು ವಂತೆ) ನಿರ್ಮಿಸಬೇಕು. ಇದನ್ನು ವಿಧಿವತ್ತಾಗಿ ಮತ್ತು ಮನೋಹರವಾಗಿ ನಿರ್ಮಿಸಬೇಕು. ಪಂಚಯಜ್ಞವಿಧಿಯನ್ನು ಸಹ ಆ ಪಾರ್ಥಿವಲಿಂಗದೊಡನೆ ಆಚರಿಸಬೇಕು.

ಸ್ಥಿರವಾಗಿ ಪ್ರತಿಷ್ಠಾಪಿಸುವ ಲಿಂಗವು ವಿಖಂಡವಾಗಿರಬೇಕು. ಅಂದರೆ ಪೀಠ ಮತ್ತು ಲಿಂಗಗಳು ಬೇರೆಯಾಗಿರಬೇಕು. ಶುಭಮುಹೂರ್ತದಲ್ಲಿ ಪೀಠದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಬೇಕು. ಹೀಗೆ ಅಖಂಡ ಮತ್ತು ವಿಖಂಡ ವಿಚಾರವು ಚರಲಿಂಗ ಮತ್ತು ಅಚರಲಿಂಗಗಳಿಗೆ ಸಂಬಂಧಪಟ್ಟಿದ್ದು. ಪೀಠವು ಶಿವಶಕ್ತಿ ಸ್ವರೂಪವಾದರೆ, ಲಿಂಗವು ಮಹಾದೇವಸ್ವರೂಪ. ಆದುದರಿಂದ ಸ್ಥಿರವಾದ ಲಿಂಗಗಳಲ್ಲಿ ಲಿಂಗವು ದ್ವಿಖಂಡವಾಗಿ (ಪೀಠ ಮತ್ತು ಲಿಂಗಗಳು ಬೇರೆಯಾಗಿ) ಇರಬೇಕು.

ಅಖಂಡವಾದ ಚರಲಿಂಗದಲ್ಲಿ ಶಿವನನ್ನು ಪೂಜಿಸಿದರೆ ಸಂಪೂರ್ಣ ಫಲವು ಲಭಿಸುವುದು. ದ್ವಿಖಂಡವಾದ ಚರಲಿಂಗದಲ್ಲಿ ಪೂಜಿಸಿದರೆ ಮಹಾ ಅನಿಷ್ಟವು ಪ್ರಾಪ್ತವಾಗುವುದು ಎಂದು ಸೂತಮುನಿ ವಿವಿಧ ಲಿಂಗಗಳ ಪೂಜೆ ಮತ್ತದರ ಫಲಗಳನ್ನು ಪ್ರಯಾಗದ ಋಷಿಸಮೂಹಕ್ಕೆ ಹೇಳುವುದರೊಂದಿಗೆ ಶ್ರೀ ಶಿವಮಹಾಪುರಾಣದಲ್ಲಿನ ಮೊದಲನೆ ಸಂಹಿತೆಯಾದ ವಿದ್ಯೇಶ್ವರಸಂಹಿತೆಯ ಹತ್ತೊಂಬತ್ತನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT