ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ತಾರಕ ಹುಟ್ಟಿದಾಗ ಅನಿಷ್ಟ ಗೋಚರ

ಭಾಗ- 211
ಅಕ್ಷರ ಗಾತ್ರ

ವಜ್ರಾಂಗನ ಮಡದಿಯಾದ ವರಾಂಗಿಯು ತಾರಕಾಸುರನ ಗರ್ಭವನ್ನು ಧರಿಸಿದಾಗ, ಅವಳ ಮುಖ ಮಹಾತೇಜಸ್ಸಿನಂತೆ ಬೆಳಗಿತು. ಗರ್ಭವು ವಜ್ರಾಂಗಿಯ ಉದರದಲ್ಲಿ ದಿನದಿಂದ ದಿನಕ್ಕೆ ಬೃಹತ್ತಾಗಿ ಬೆಳೆಯುತ್ತಾ ಹೋಯಿತು. ಒಂಬತ್ತು ತಿಂಗಳ ದಿನ ತುಂಬಿದಾಗ ವರಾಂಗಿಯು ಪುತ್ರನೋರ್ವನನ್ನು ಹಡೆದಳು. ಆ ಮಗು ಹುಟ್ಟಿದಾಗಲೇ ದೊಡ್ಡ ದೇಹವುಳ್ಳದ್ದಾಗಿತ್ತು. ಮಹಾ ತೇಜಸ್ವಿಯಂತೆ ಬೆಳಗುತ್ತಿತ್ತು. ಆದರೆ ವರಾಂಗಿಗೆ ಹೆರಿಗೆಯಾದಾಗ ಸ್ವರ್ಗ, ಭೂಮಿ, ಅಂತರಿಕ್ಷ ಎಂಬ ಮೂರು ಲೋಕಗಳಲ್ಲೂ ಅನಿಷ್ಟವನ್ನು ಸೂಚಿಸುವಂತಹ ಉತ್ಪಾತಗಳಾದವು. ಆಗಸದಲ್ಲಿ ಸಿಡಿಲಬ್ಬರದ ಮಹಾಶಬ್ದವಾಯಿತು. ನಂತರ ಬೆಂಕಿಕೆಂಡಗಳ ಸುರಿಮಳೆಯಾಯಿತು. ಬೆಂಕಿಯ ಮಳೆ ಜೊತೆಗೆ ಭೂ ಒಡಲು ಬಿರಿದು, ಭೂಕಂಪವಾಯಿತು. ಪರ್ವತಗಳು ನಡುಗಿದರೆ, ಎಲ್ಲಾ ದಿಕ್ಕುಗಳು ಉರಿಯತೊಡಗಿದವು. ನದಿಗಳು, ಸಮುದ್ರಗಳು ತುಂಬಾ ಕ್ಷೋಭೆಗೊಳಗಾದವು.

ಬಿರುಗಾಳಿಯು ಜೋರಾಗಿ ಬೀಸಿ, ಭಯಂಕರ ದೂಳು ಎದ್ದಿತು. ಪ್ರಚಂಡ ಬಿರುಗಾಳಿ ಹೊಡೆತಕ್ಕೆ ಸಿಲುಕಿದ ದೊಡ್ಡ ದೊಡ್ಡ ಮರಗಳು, ಬೇರುಸಮೇತ ಕಿತ್ತು ಬುಡಮೇಲಾದವು. ಸೂರ್ಯಚಂದ್ರರಿಗೆ ಗ್ರಹಣಹಿಡಿದುದಲ್ಲದೇ ಸುತ್ತಲೂ ಪರಿಧಿಗಳು ಕಾಣಿಸಿದವು. ಭೂತ-ಪಿಶಾಚಗಳಿಂದ ಭಯಂಕರವಾದ ಫೂತ್ಕಾರಗಳು ಕೇಳಿಬಂದವು. ಪರ್ವತಕಂದರಗಳಲ್ಲಿ ಭಯವನ್ನು ಸೂಚಿಸುವಂತಹ ಶಬ್ದಗಳಾದವು. ನರಿಗಳು ಗೂಬೆಗಳು ಮತ್ತಿತರ ಭಯ, ಆತಂಕಗಳನ್ನು ಸೃಷ್ಟಿಸುವ ಪ್ರಾಣಿ-ಪಕ್ಷಿಗಳು ಭಯಂಕರವಾಗಿ ಕೂಗಿದ್ದಲ್ಲದೆ, ಬಾಯಿಂದ ಬೆಂಕಿಯನ್ನು ಉಗುಳಿದವು.

ಗ್ರಾಮಗಳ ಮಧ್ಯೆ ತೋಳಗಳು ಅಮಂಗಳವಾಗಿ ಊಳಿಟ್ಟರೆ, ನಾಯಿಗಳು ಬೊಗಳಿದುವು. ಭಯಂಕರ ಪಿಶಾಚಿಯನ್ನ ಕಂಡಂತೆ ನಾಯಿಗಳು ಅಲ್ಲಲ್ಲಿ ತಲೆಯನ್ನು ಎತ್ತಿಕೊಂಡು ಅಳುತ್ತಾ ಅರಚಾಡಿದವು. ಕತ್ತೆಗಳು ಗುಂಪುಗುಂಪಾಗಿ ಕೂಡಿಕೊಂಡು, ಅಪಸ್ವರದಿಂದ ಕೂಗುತ್ತಾ, ನೆಲವನ್ನು ಗೊರಸುಗಳಿಂದ ಕೆರೆಯುತ್ತಾ, ಕುಟ್ಟುತ್ತಾ ಸುತ್ತಾಡಿದವು. ಕತ್ತೆಗಳ ಭಯಂಕರ ಅರಚಾಟ ಕೇಳಿ ಪಕ್ಷಿಗಳು ಹೆದರಿ ಗೂಡುಗಳಿಂದ ಹಾರಿದವು. ಕೊಟ್ಟಿಗೆಯಲ್ಲಿದ್ದ ಪಶುಗಳಂತೂ ಭಯದಿಂದ ಸೆಗಣಿ ಮೂತ್ರಗಳನ್ನು ಒಂದೇ ಸಮನೆ ವಿಸರ್ಜಿಸಿದವು. ಹಸುಗಳು ಭಯಗೊಂಡು ಕಣ್ಣೀರನ್ನು ಸುರಿಸಿದ್ದಷ್ಟೇ ಅಲ್ಲದೆ, ಕೆಚ್ಚಲಿನಿಂದ ಹಾಲಿನ ಬದಲಾಗಿ ರಕ್ತವನ್ನು ಒಸರಿದವು. ಮೇಘಗಳು ಭಯಂಕರವಾಗಿ ರಕ್ತದ ಮಳೆ ಸುರಿಸಿದವು.

ದೇವಸ್ಥಾನದ ದೇವತಾವಿಗ್ರಹಗಳು ಅಲ್ಲಾಡಿದರೆ, ಶಿಲಾಬಾಲಿಕೆಯರ ಕಣ್ಣಲ್ಲಿ ನೀರು ಸುರಿಯಿತು. ಹಲವೆಡೆ ಮಳೆಗಾಳಿಯಿಲ್ಲದೆಯೇ ಮರಗಳು ಇದ್ದಕ್ಕಿದ್ದಂತೆ ಉರುಳಿ ಬಿದ್ದವು. ಆಕಾಶದಲ್ಲಿ ಗ್ರಹಗಳಿಗೆ ಘರ್ಷಣೆಗಳಾಗಿ ಉಲ್ಕಾಪಾತವಾಯಿತು. ಉತ್ಪಾತಗಳನ್ನು ನೋಡಿದ ಜನರು ಪ್ರಳಯವಾಗುತ್ತಿದೆ ಅಂದುಕೊಂಡರು. ಇಂಥ ಪ್ರಳಯಾಂತಕ ಮಗುವಿಗೆ ತಾತ ಕಶ್ಯಪಬ್ರಹ್ಮ ತಾರಕನೆಂದು ಹೆಸರಿಟ್ಟ.

ತಾರಕ ವಜ್ರದಂತೆ ಬಲಿಷ್ಠವಾದ ಶರೀರವನ್ನು ಹೊಂದಿದ್ದ. ತಪಸ್ಸನ್ನಾಚರಿಸಿ ಮತ್ತಷ್ಟು ಶಕ್ತಿ ಸಂಪಾದಿಸಲು ತಂದೆ-ತಾಯಿಯ ಅನುಮತಿಯನ್ನು ಬೇಡಿದ. ಹೆತ್ತವರು ಅನುಮತಿ ನೀಡಿದಾಗ, ತಾರಕ ಮಧುವನವೆಂಬ ಅರಣ್ಯಕ್ಕೆ ಬಂದ. ಅಲ್ಲಿ ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನಾಚರಿಸಿದ. ದೃಢವಾದ ನಿಯಮದಿಂದ ಜಿತೇಂದ್ರಿಯನಾಗಿ ಎರಡು ಬಾಹುಗಳನ್ನು ಮೇಲಕ್ಕೆತ್ತಿ ಒಂದೇ ಕಾಲಿನಲ್ಲಿ ನಿಂತು, ಸೂರ್ಯನನ್ನು ನೆಟ್ಟದೃಷ್ಟಿಯಿಂದ ನೋಡುತ್ತಾ ನೂರು ವರ್ಷಗಳವರೆಗೆ ತಪವನ್ನಾಚರಿಸಿದ.

ಒಂಟಿಕಾಲಿನ ತಪಸ್ಸಿನ ನಂತರ ಕಾಲಿನ ಉಂಗುಷ್ಠದ ಮೇಲೆ ನಿಂತು ನೂರು ವರ್ಷಗಳವರೆಗೆ ತಪವನ್ನಾಚರಿಸಿದ. ನೂರು ವರ್ಷಗಳ ಕಾಲ ನೀರನ್ನು ಮಾತ್ರ ಸೇವಿಸುತ್ತಾ, ನೂರು ವರ್ಷ ವಾಯುವನ್ನು ಮಾತ್ರ ಸೇವಿಸುತ್ತ ತಪವನ್ನಾಚರಿಸಿದ. ನೂರು ವರ್ಷ ನೀರಿನಲ್ಲಿ ನಿಂತು, ನೂರು ವರ್ಷ ಸ್ಥಂಡಿಲದಲ್ಲಿ ಇದ್ದುಕೊಂಡು ತಪವನ್ನು ಆಚರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT