ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ಸೌಂದರ್ಯದ ಬೆರಗು

ಭಾಗ 268
ಅಕ್ಷರ ಗಾತ್ರ

ಹರಿಯ ಸೂಚನೆಯಂತೆ ಶಿವನ ಬಳಿಗೆ ಬಂದ ನಾರದ, ಸುಂದರರೂಪ ಧರಿಸಿ ಹಿಮವಂತನ ಅರಮನೆಗೆ ಬರುವಂತೆ ಪ್ರಾರ್ಥಿಸುತ್ತಾನೆ. ಮೇನಾದೇವಿಯನ್ನು ಕಾಡಿದ್ದು ಸಾಕು. ಆಕೆಗೆ ನಿಜ ರೂಪ ತೋರಿಸಿ ವಿವಾಹಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಮಾಡು ಎಂಬ ನಾರದನ ಕೋರಿಕೆಯನ್ನು ಕೇಳಿ ಮಹದೇವ ಗಹಗಹಿಸಿ ನಗುತ್ತಾನೆ. ‘ನಾನು ನಿರ್ಮಲಮನಸ್ಸಿನವರಿಗೆ ನಿರ್ಮಲನಾಗಿ ಕಾಣುತ್ತೇನೆ. ಮಲೀನಮನಸ್ಸಿನವರಿಗೆ ಮಲೀನನಾಗೇ ಕಾಣುತ್ತೇನೆ. ನಾನು ವಿಕಾರ ರೂಪಿಯೂ ಅಲ್ಲ, ವಿಕಾರವಾದಿಯೂ ಅಲ್ಲ. ನಾನು ಸಮಚಿತ್ತದ ಸಮಷ್ಟಿರೂಪಿ. ದುರ್ಬುದ್ಧಿಯ ಮೇನಾದೇವಿಗೆ ಸುಬುದ್ಧಿ ಕಲಿಸಲು ಮಾಯಾರೂಪ ಧರಿಸಿ ಕಾಡಿದೆನಷ್ಟೆ. ಈಗ ಆಕೆಯ ಅಜ್ಞಾನ ಅಳಿದು ಸುಜ್ಞಾನ ಮೂಡಿದೆ. ಆದ್ದರಿಂದ ನಾನು ಸುಂದರರೂಪ ತಾಳಿಯೇ ಮದುವೆ ಮಂಟಪಕ್ಕೆ ಬರುತ್ತೇನೆ’ ಎಂದ ಶಿವ, ಕ್ಷಣಮಾತ್ರದಲ್ಲಿ ಅತ್ಯಾಶ್ಚರ್ಯಕರವಾದ ಸುಂದರರೂಪ ಧರಿಸಿದ.

ಸಂತೋಷದಿಂದ ಮೇನಾದೇವಿ ಬಳಿ ಬಂದ ನಾರದ ‘ಎಲೈ ವಿಶಾಲಾಕ್ಷಿ, ಶಿವನ ಸುಂದರರೂಪವನ್ನು ನೋಡು, ಕರುಣಾಮಯನಾದ ಅವನು ನಮ್ಮಲ್ಲಿ ಕೃಪೆಯನ್ನು ಮಾಡಿರುವನು’ ಎಂದು ವಿಶ್ವಸುಂದರನಾದ ಶಿವನನ್ನು ತೋರಿಸುತ್ತಾನೆ. ನಾರದನ ಮಾತನ್ನು ಕೇಳಿ ಮೇನಾದೇವಿ ಅತಿಲೋಕಸುಂದರನಾದ ಶಿವನತ್ತ ನೋಡಿ ಆಶ್ಚರ್ಯ ಮತ್ತು ಆನಂದದಿಂದ ನೋಡುತ್ತಾ ಮೈಮರೆಯುತ್ತಾಳೆ. ಶಿವಸೌಂದರ್ಯವನ್ನು ಕಣ್ಣು ತುಂಬಾ ನೋಡಿದ ಮೇನಾದೇವಿ ತನ್ನ ಮಗಳು ಪಾರ್ವತಿ ಇಂಥ ಗಂಡನನ್ನು ಪಡೆದು ಭಾಗ್ಯವಂತಳಾದರೆ, ಇಂಥ ಅಳಿಯನನ್ನು ಪಡೆದ ತಾನು ಧನ್ಯೆ ಅಂತ ಸಂತೋಷಪಡುತ್ತಾಳೆ.

ಕೋಟಿಸೂರ್ಯರಷ್ಟು ತೇಜಸ್ವಿಯಾಗಿದ್ದ ಶಿವನ ಸರ್ವಾವಯವಗಳು ಸುಂದರವಾಗಿ ಪ್ರಜ್ವಲಿಸುತ್ತಿದ್ದರೆ, ಅವನ ಸುಂದರವಾದ ಅವಯವಗಳು ದಿವ್ಯವಾದ ವಸ್ತ್ರವನ್ನು ಅಲಂಕರಿಸಿ ನೋಡುಗರ ಕಣ್ಣುಗಳನ್ನು ಸೆಳೆಯುತ್ತಿದ್ದವು. ಸರ್ವಾಲಂಕಾರ ಭೂಷಿತನಾಗಿ ಕಂಗೊಳಿಸುತ್ತಿದ್ದ. ಶುಭ್ರವಾದ ಶರೀರಕಾಂತಿಯಿಂದ ಮತ್ತು ಶಿರಸ್ಸಿನಲ್ಲಿದ್ದ ಚಂದ್ರಕಲೆಯಿಂದ ಮನೋಹರವಾಗಿ ಕಣ್ಮನ ಸೆಳೆಯುತ್ತಿದ್ದ.

ಇಂಥ ಸರ್ವಾಂಗ ಸುಂದರನಾದ ಶಿವನ ಬಳಿ ಹರಿ, ಬ್ರಹ್ಮ ಮೊದಲಾದ ದೇವತೆಗಳೆಲ್ಲ ಭಕ್ತಿಯಿಂದ ಶಿವನನ್ನು ಸೇವಿಸುತ್ತಿದ್ದ ದೃಶ್ಯ ನೋಡಿ ಮೇನಾದೇವಿ ಬಿಟ್ಟ ಕಣ್ಣು ಮುಚ್ಚದಂತೆ ನೋಡುತ್ತಾ ನಿಂತುಬಿಟ್ಟಳು. ಶಿವನ ನೆತ್ತಿಯನ್ನು ಸೂರ್ಯ ಛತ್ರಿ ಹಿಡಿದು ಕಾಯುತ್ತಿದ್ದರೆ, ಸಮೀಪದಲ್ಲಿ ನಿಂತಿದ್ದ ಚಂದ್ರ ತಂಪನ್ನೀಯುತ್ತಿದ್ದ. ಗಂಗಾ–ಯಮುನೆಯರು ಶಿವನಿಗೆ ಚಾಮರ ಬೀಸುತ್ತಿದ್ದರೆ, ಅಷ್ಟಸಿದ್ಧಿಗಳು ಶಿವನೆದುರು ನರ್ತನ ಮಾಡಿ ರಂಜಿಸುತ್ತಿದ್ದರು. ಶಿವಗಣಗಳು ಸುಂದರವಾಗಿ ಅಲಂಕರಿಸಿಕೊಂಡು ಜಯಧ್ವನಿಯನ್ನು ಮಾಡುತ್ತಾ ಶಿವನ ಮುಂದೆ ನಿಂತಿದ್ದರು. ದೇವತೆಗಳು ಪರಬ್ರಹ್ಮನಾದ ಶಿವನನ್ನು ಸ್ತುತಿಸುತ್ತಿದ್ದರು. ಶಿವನಿರುವಲ್ಲಿಗೆ ವಿಶ್ವಾವಸು ಮೊದಲಾದ ಗಂಧರ್ವರು ಅಪ್ಸರೆಯರೊಡನೆ ಬಂದು ಶಿವನ ಮಹಿಮೆಯನ್ನು ಗಾನಮಾಡುತ್ತಿದ್ದರು.

ಹೀಗೆ ಶಿವ ಸುಂದರನಾಗಿ ಮಹಾವೈಭವದಿಂದ ಹಿಮವಂತನ ಅರಮನೆಗೆ ಬಂದಾಗ, ಅಲ್ಲಿ ಮಹತ್ತಾದ ಉತ್ಸವದ ಸಂಭ್ರಮವೇ ನಡೆಯಿತು. ಜಗನ್ಮಾತೆ ಪಾರ್ವತಿ ವರಿಸಲು ಬಂದ ಪರಮಾತ್ಮನಾದ ಶಿವನ ಅಪೂರ್ವ ತೇಜಸ್ಸನ್ನು ವರ್ಣಿಸಲು ಯಾರಿಗೂ ಸಾಧ್ಯವಿರಲಿಲ್ಲ. ಮಹಾಸುಂದರನಾಗಿ ಕಾಣಿಸುತ್ತಿದ್ದ ಶಿವನನ್ನು ನೋಡಿದ ಮೇನಾದೇವಿ ಅತ್ಯಾಶ್ಚರ್ಯದಿಂದ ಬೊಂಬೆಯಂತೆ ಸ್ತಂಭಿತಳಾಗಿ ಬಹಳ ಹೊತ್ತು ನಿಂತೇ ಇದ್ದಳು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT