ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಹೆತ್ತವರ ಮುದ್ದಾದ ಪಾರ್ವತಿ

ಭಾಗ 200
ಅಕ್ಷರ ಗಾತ್ರ

ವಸಂತಋತುವಿನ ವೈಶಾಖಮಾಸದ, ನವಮಿಯ ಅರ್ಧರಾತ್ರಿಯಲ್ಲಿ, ಪುನರ್ವಸು ನಕ್ಷತ್ರದಲ್ಲಿ ಜಗನ್ಮಾತೆ ಉಮಾದೇವಿಯು ಮೇನಾದೇವಿಯ ಗರ್ಭದಿಂದ ಜನಿಸಿದಳು. ಚಂದ್ರಮಂಡಲದಿಂದ ಗಂಗೆಯಂತೆ, ಸಾಗರದಿಂದ ಲಕ್ಷ್ಮಿಯಂತೆ ಉಮಾದೇವಿಯು ಧರೆಗೆ ಬಂದಳು. ಆ ಸಂದರ್ಭದಲ್ಲಿ ಜಗತ್ತೆಲ್ಲವೂ ಪ್ರಸನ್ನವಾಯಿತು. ಸುವಾಸನೆಯುಳ್ಳ ಗಾಳಿಯು ಮಂದವಾಗಿ ಬೀಸಿತು. ತಂಪಾಗಿ ಮಳೆ ಮತ್ತು ಪುಷ್ಪವೃಷ್ಟಿಯೂ ಆಯಿತು. ಅಗ್ನಿ ಶಾಂತವಾಗಿ ಜ್ವಲಿಸಿದರೆ, ಮೇಘಗಳು ಗಂಭೀರವಾಗಿ ಗರ್ಜಿಸಿದವು.

ದೇವತೆಗಳು ಹಿಮವಂತನ ಮನೆಗೆ ಬಂದರು. ಅವನ ಪುತ್ರಿಯಾಗಿ ಜನಿಸಿದ ಜಗದಂಬೆಯನ್ನು ನೋಡಿ ಭಕ್ತಿಯಿಂದ ‘ಜಗನ್ಮಾತೆಯಾದ ಓ ಮಹಾದೇವಿ! ನೀನು ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವವಳು, ಸದಾ ದೇವತೆಗಳ ಕಾರ್ಯವನ್ನು ನಿರ್ವಹಿಸುವವಳು. ನಿನ್ನ ಭಕ್ತರಾದ ದೇವತೆಗಳಿಗೆ ಕ್ಷೇಮವನ್ನು ಉಂಟುಮಾಡಿರುವೆ. ಮೇನಾದೇವಿಯ ಮನೋರಥವನ್ನು ಪೂರ್ಣಗೊಳಿಸಿರುವೆ. ಅದರಂತೆ ಶಿವನ ಮನೋರಥವನ್ನೂ ಪೂರ್ಣಮಾಡು’ ಎಂದು ಸ್ತುತಿಸಿದರು.

ಮೇನಾದೇವಿಯು ಕನ್ನೈದಿಲೆಯಂತೆ ನೀಲಬಣ್ಣದ ಕಾಂತಿಯುಳ್ಳ ಪುತ್ರಿಯನ್ನು ನೋಡಿ, ‘ಜಗನ್ಮಾತೆಯಾದ ಓ ಮಹೇಶ್ವರಿ, ನನ್ನಲ್ಲಿ ಅನುಗ್ರಹವನ್ನು ಮಾಡಿ ನನ್ನೆದುರಿಗೆ ಆವಿರ್ಭವಿಸಿರುವೆ. ನೀನು ಆದಿಶಕ್ತಿಯು, ತ್ರಿಲೋಕಮಾತೆಯು. ಶಿವನ ಪ್ರಿಯಮಡದಿಯಾದ ನಿನ್ನನ್ನು ದೇವತೆಗಳೆಲ್ಲ ಸ್ತುತಿಸುವರು. ಓ ಪರಮೇಶ್ವರಿ, ಅನುಗ್ರಹವನ್ನು ಮಾಡು. ಈ ನಿನ್ನ ರೂಪವನ್ನು ಬಿಟ್ಟು ನನ್ನ ಪುತ್ರಿಗನುಸಾರವಾದ ರೂಪವನ್ನು ಧರಿಸು’ ಎಂದು ಪ್ರಾರ್ಥಿಸಿದಳು.

ಮೇನಾದೇವಿಯ ಮಾತನ್ನು ಕೇಳಿ ಪರಮೇಶ್ವರಿಯು ‘ಎಲೈ ಮೇನಾದೇವಿ, ಹಿಂದೆ ನೀನು ನನ್ನನ್ನು ಭಕ್ತಿಯಿಂದ ಆರಾಧಿಸಿ ವರವನ್ನು ಕೇಳಿದ್ದೆ. ಅದರಂತೆ ನಿನ್ನ ಪುತ್ರಿಯಾಗಿ ಜನಿಸಿರುವೆ. ನಾನು ಪರಮೇಶ್ವರಿ ಎಂದು ತಿಳಿಸಲು ಈ ದಿವ್ಯರೂಪವನ್ನು ಧರಿಸಿ ಪ್ರತ್ಯಕ್ಷಳಾಗಿರುವೆ. ಮುಂದೆ ನನ್ನನ್ನು ಪುತ್ರಿಯೆಂಬ ವಾತ್ಸಲ್ಯದಿಂದಲೂ, ದೇವಿ ಎಂಬ ಭಕ್ತಿಯಿಂದಲೂ ಸೇವಿಸಿರಿ. ಕೊನೆಯಲ್ಲಿ ನಿಮಗೆ ನನ್ನ ದಿವ್ಯಲೋಕವು ಲಭಿಸುವುದು. ನಿಮ್ಮ ಪುತ್ರಿಯಾಗಿ ಜನಿಸಿದ ನಾನು ದುಷ್ಟರನ್ನು ಶಿಕ್ಷಿಸುವೆ, ಶಿಷ್ಟರನ್ನು ಉದ್ಧರಿಸುವೆ’ ಎಂದಳು.

ಬಳಿಕ ಜಗನ್ಮಾತೆಯು ಶಿಶುವಿನ ಸ್ವರೂಪವನ್ನು ತಾಳಿದಳು. ಶಿಶುವಿನ ಅಳುವನ್ನು ಕೇಳಿ ಒಳಮನೆಯತ್ತ ಅರಮನೆಯ ಸ್ತ್ರೀಯರೆಲ್ಲರೂ ಓಡಿ ಬಂದರು. ಕಂಚುಕಿಯು ಹಿಮವಂತನಿಗೆ ಮಗುವಿನ ಜನ್ಮವಾಯಿತೆಂದು ತ್ವರೆಯಿಂದ ನಿವೇದಿಸಿದ. ಶುಭಸಮಾಚಾರವನ್ನು ತಿಳಿಸಿದ ಕಂಚುಕಿಗೆ ಹಿಮವಂತನು ಬೆಲೆಬಾಳುವ ವಸ್ತುಗಳನ್ನು ಬಹುಮಾನವಾಗಿ ಕೊಟ್ಟ. ನಂತರ ಪುರೋಹಿತರು, ಮಂತ್ರಿ ಮಹೋದಯರೊಡನೆ ಮಗು ನೋಡಲು ತೆರಳಿದ. ಮಹಾತೇಜಸ್ವಿನಿಯಾಗಿರುವ ಪುತ್ರಿಯನ್ನು ನೋಡಿ ತುಂಬಾ ಸಂತೋಷಗೊಂಡ.

ಶುಭವಾದೊಂದು ಮುಹೂರ್ತದಲ್ಲಿ ಹಿಮವಂತನು, ಆ ಶಿಶುವಿಗೆ ಕಾಳೀ, ತಾರಾ, ಮಹಾವಿದ್ಯಾ, ಷೋಡಶೀ, ಭುವನೇಶ್ವರಿ, ಭೈರವೀ, ಛಿನ್ನಮಸ್ತಾ, ಸದ್ಯಾ, ಧೂಮಾವತೀ, ಬಗಲಾಮುಖೀ, ಸಿದ್ಧಿವಿದ್ಯಾ, ಮಾತಂಗೀ, ಕಮಲಾತ್ಮಿಕಾ ಎಂಬ ಹಲವು ಹೆಸರುಗಳನ್ನು ಇಟ್ಟು ನಾಮಕರಣ ಮಾಡಿದ. ಹಿಮವಂತನ ಅರಮನೆಯಲ್ಲಿ ಸುಂದರಿಯಾದ ದೇವಿಯು, ಮಳೆಗಾಲದ ಗಂಗೆಯಂತೆಯೂ ಶರದೃತುವಿನ ಶುಕ್ಲಪಕ್ಷದ ಚಂದ್ರಕಲೆಯಂತೆಯೂ ದಿನದಿನವೂ ಬೆಳೆಯತೊಡಗಿದಳು. ಬಂಧುಗಳು ತಮ್ಮ ಪರ್ವತಕುಲಕ್ಕನುಸಾರವಾಗಿ ಮಗುವಿಗೆ ‘ಪಾರ್ವತೀ’ ಎಂದು ಕರೆದರು.

ಹಿಮವಂತನಿಗೆ ಅನೇಕ ಮಕ್ಕಳಿದ್ದರೂ ಪಾರ್ವತಿಯ ಮೇಲೆ ವಿಶೇಷವಾದ ಪ್ರೀತಿ ತೋರಿಸುತ್ತಿದ್ದ. ಪ್ರಭೆಯುಳ್ಳ ಶಿಖೆಯಿಂದ ದೀಪವು ಶೋಭಿಸುವಂತೆ ಪುಟ್ಟಪಾರ್ವತಿ ಕಂಗೊಳಿಸುತ್ತಿದ್ದಳು, ಬಾಲ್ಯಸಹಜ ಆಟಗಳಿಂದ ಎಲ್ಲರನ್ನು ಸಂತೋಷಪಡಿಸುತ್ತಿದ್ದಳು – ಎಂದು ಬ್ರಹ್ಮ ನಾರದನಿಗೆ ಹೇಳುವಲ್ಲಿಗೆ ಪಾರ್ವತೀಖಂಡದ ಏಳನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT