ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವಪಾರ್ವತಿ ಕಲ್ಯಾಣಕ್ಕೆ ನಾರದ ಸಲಹೆ

ಭಾಗ 201
ಅಕ್ಷರ ಗಾತ್ರ

ಪಾರ್ವತಿಯು ಬಾಲಸಹಜ ಆಟಗಳನ್ನು ಆಡುತ್ತಿದ್ದಳು. ತಂದೆ ಹಿಮವಂತ ಕೊಡಿಸಿದ ಗೊಂಬೆಗಳೊಂದಿಗೆ ಮತ್ತು ಗಂಗಾನದಿಯ ಮರಳು ದಿಣ್ಣೆಗಳಲ್ಲಿ ಆಟವಾಡುತ್ತಿದ್ದಳು. ಸಖಿಯರೊಂದಿಗೆ ಆಡುತ್ತಾ ಬೆಳೆದ ಪಾರ್ವತಿ ಸಕಾಲದಲ್ಲಿ ಗುರುಗಳಿಂದ ವಿದ್ಯಾಭ್ಯಾಸ ಮಾಡಿದಳು. ಶರತ್ಕಾಲದಲ್ಲಿ ಹಂಸಗಳು ಗಂಗಾನದಿಯನ್ನು ಸೇರುವಂತೆ, ಔಷಧಿಯುಕ್ತ ಜ್ಯೋತಿರ್ಲತೆಗಳಲ್ಲಿ ರಾತ್ರಿ ಜ್ಯೋತಿಯು ಸೇರುವಂತೆ, ಪಾರ್ವತಿಗೆ ಅವಳ ಹಿಂದಿನ ಜನ್ಮದ ವಿದ್ಯೆಗಳೆಲ್ಲವೂ ಬಂದು ಸೇರಿದವು. ಹೀಗಾಗಿ ಪಾರ್ವತಿಯು ಬಾಲ್ಯದಲ್ಲಿಯೇ ಶಿವನ ಕುರಿತು ತಪಸ್ಸು ಮಾಡಲು ಹೊರಡುತ್ತಿದ್ದಳು. ಆಗ ಅವಳ ತಾಯಿ ಮೇನಾದೇವಿಯು ತಡೆಯುತ್ತಿದ್ದಳು. ಇದರಿಂದ ಆಕೆಗೆ ‘ಉಮಾ’ ಎಂಬ ಹೆಸರು ಬಂತು. (ಉ - ಎಂದರೆ ಪಾರ್ವತಿ, ಮಾ - ಎಂದರೆ ಮಾಡಬೇಡ ಎಂಬ ಅರ್ಥ.)

ಒಂದು ದಿನ ನಾರದ ಹಿಮವಂತನ ಅರಮನೆಗೆ ಬಂದ. ಆಗ ಹಿಮವಂತನು ಆದರದಿಂದ ಆತನನ್ನು ಬರಮಾಡಿಕೊಂಡು ಪೂಜಿಸಿದ. ಪಾರ್ವತಿಯ ಜಾತಕಫಲವನ್ನು ಕೇಳಿದ. ಪಾರ್ವತಿಯ ಹಸ್ತ ನೋಡಿದ ನಾರದ ‘ಇವಳು ತನ್ನ ಪತಿಗೆ ತುಂಬಾ ಸುಖವನ್ನುಂಟುಮಾಡಿ, ತಂದೆತಾಯಿಗಳಿಗೆ ಕೀರ್ತಿಯನ್ನು ತರುತ್ತಾಳೆ. ಇವಳ ಕೈಯಲ್ಲಿ ಎಲ್ಲಾ ಶುಭಲಕ್ಷಣಗಳೂ ಇವೆ. ಆದರೆ ಒಂದು ಗೆರೆಯು ವಿಲಕ್ಷಣವಾಗಿದೆ. ಅದರ ಫಲವೇನೆಂದರೆ ಇವಳ ಪತಿಯು ದಿಗಂಬರನೂ ನಿರ್ಗುಣನೂ ತಾಯಿತಂದೆಗಳಿಲ್ಲದವನೂ ಅಮಂಗಳವಾದ ವೇಷವುಳ್ಳವನೂ ಆಗಿರುವನು’ ಎಂದನು.

ನಾರದನ ಮಾತನ್ನು ಕೇಳಿ ಮೇನಾದೇವಿ ಮತ್ತು ಹಿಮವಂತ ದುಃಖಗೊಂಡರು. ಆದರೆ, ಪಾರ್ವತಿಯು ಸಂತೋಷಪಟ್ಟಳು. ಇಂಥ ಲಕ್ಷಣಗಳಿರುವುದು ಶಿವನಿಗೆ ಮಾತ್ರ, ಆತ ತನ್ನ ಪತಿಯಾಗುವನೆಂದು ತಿಳಿದು ಉಲ್ಲಸಿತಳಾದಳು. ದುಃಖಿತನಾದ ಹಿಮವಂತ ‘ನಾರದ! ನಿನ್ನ ಮಾತನ್ನು ಕೇಳಿ ನನಗೆ ತುಂಬಾ ದುಃಖವಾಗಿದೆ. ಇದಕ್ಕಾಗಿ ಏನು ಉಪಾಯವನ್ನು ಮಾಡಲಿ’ ಎಂದು ಕೇಳಿದ. ಅದಕ್ಕೆ ನಾರದ, ‘ಎಲೈ ಪರ್ವತರಾಜನೆ, ಸ್ನೇಹದಿಂದ ಹೇಳುವೆನು ಕೇಳು. ನಾನು ಹೇಳಿದಂತಹವನೇ ಪಾರ್ವತಿಗೆ ಪತಿಯಾಗುವನು. ಅದಕ್ಕೊಂದು ಉಪಾಯವನ್ನು ಹೇಳುವೆನು, ಆದರದಿಂದ ಕೇಳು’ ಎಂದ.

‘ನಾನು ಹೇಳಿದಂತಹ ವರನೋರ್ವನಿದ್ದಾನೆ. ಅವನು ಸಾಮಾನ್ಯನಲ್ಲ. ಆತ ಜಗದೊಡೆಯನಾದ ಶಂಭು. ಕೆಟ್ಟ ಲಕ್ಷಣಗಳೆಲ್ಲವೂ ಅವನಲ್ಲಿ ಸದ್ಗುಣಗಳೇ ಆಗುವುವು. ಪರಮೇಶ್ವರನಲ್ಲಿನ ದೋಷವು ದುಃಖವನ್ನುಂಟುಮಾಡುವುದಿಲ್ಲ. ಇದಕ್ಕೆ ಸೂರ್ಯ, ಅಗ್ನಿ, ಗಂಗೆಯರೇ ದೃಷ್ಟಾಂತವಾಗಿದೆ. ಆದುದರಿಂದ ನಿನ್ನ ಮಗಳನ್ನು ಶಿವನಿಗೆ ಮದುವೆ ಮಾಡಿಕೊಡು. ಶಿವನು ಸರ್ವೇಶ್ವರನು. ಎಲ್ಲರೂ ಅವನನ್ನು ಸೇವಿಸುವರು. ಜನ್ಮಮೊದಲಾದ ಯಾವ ವಿಕಾರಗಳೂ ಅವನಿಗಿಲ್ಲ. ನಾಶ ಎಂಬುದು ಅವನಿಗೆ ಇಲ್ಲವೇ ಇಲ್ಲ. ಶಿವನು ಪ್ರಸನ್ನನಾದರೆ ಸಂಶಯವಿಲ್ಲದೇ ಪಾರ್ವತಿಯನ್ನು ಮದುವೆಯಾಗುವನು. ಆದರೆ ಈ ಕಾರ್ಯವು ತಪಸ್ಸಿನಿಂದಲೇ ಆಗಬೇಕಾಗಿದೆ. ಪಾರ್ವತಿಯು ಶಿವನನ್ನು ಕುರಿತು ತಪಸ್ಸು ಮಾಡಬೇಕು. ಎಲೈ ಪರ್ವತರಾಜ! ನಿನ್ನ ಸುತೆಯು ಶಂಕರನಿಗೆ ಎಲ್ಲಾ ರೀತಿಯಲ್ಲೂ ಅನುಕೂಲಳಾಗಿದ್ದಾಳೆ. ಅವನಿಗೆ ತುಂಬಾ ಪ್ರಿಯಳಾಗುವಳು. ಜಗನ್ಮಾತೆಯಾಗಿ ಎಲ್ಲರ ಸಲಹುತ್ತಾಳೆ. ಪಾರ್ವತಿಯು ತನ್ನ ತಪಸ್ಸಿನಿಂದ ಶಂಕರನ ಮನಸ್ಸನ್ನು ಖಂಡಿತ ಸೆಳೆಯುವಳು. ಶಂಕರನೂ ಇವಳ ಹೊರತು ಇನ್ನಾವ ಸ್ತ್ರೀಯನ್ನೂ ಮದುವೆಯಾಗುವುದಿಲ್ಲ. ಪಾರ್ವತೀಪರಮೇಶ್ವರರಿಗೆ ಇರುವಂಥ ಪ್ರೇಮವೂ, ಇನ್ನಾವ ದಂಪತಿಗಳಲ್ಲೂ ಇರಲಾರದು. ಇವರೀರ್ವರೂ ಅನೇಕ ದೇವಕಾರ್ಯಗಳನ್ನು ನಿರ್ವಹಿಸಿ, ಜಗತ್‍ಕಲ್ಯಾಣಕ್ಕೆ ಪ್ರೇರಕರಾಗುವರು’ ಎನ್ನುತ್ತಾನೆ ನಾರದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT