ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪರಶಿವನ ಮನಗೆದ್ದ ಗಿರಿಜೆ

ಭಾಗ 203
ಅಕ್ಷರ ಗಾತ್ರ

ನಾರದನ ಮಾತುಗಳನ್ನ ಕೇಳಿದ ಮೇನಾದೇವಿಯು ಹಿಮವಂತನಲ್ಲಿ, ‘ನನಗೆ ನಾರದನ ಅಭಿಪ್ರಾಯವು ಸರಿಯಾಗಿ ತಿಳಿಯಲಿಲ್ಲ. ಅವಳನ್ನು ನಿರ್ಗತಿಕನಿಗೆ ಕೊಟ್ಟು ವಿವಾಹ ಮಾಡಬೇಡಿ. ಪಾರ್ವತಿಗೆ ಯೋಗ್ಯನಾದ ಸುಂದರನಾದ ವರನೊಂದಿಗೆ ಮದುವೆಮಾಡಿ. ನಮ್ಮ ಪುತ್ರಿ ಕೈಹಿಡಿಯುವ ವರ ಲಕ್ಷಣವಂತನಾಗಿ ಸತ್ಕುಲಪ್ರಸೂತನಾಗಿರಬೇಕು. ಯೋಗ್ಯನಾದ ವರನಿಗೇ ಕೊಟ್ಟು ಪಾರ್ವತಿ ವಿವಾಹ ಮಾಡಬೇಕು’ ಎಂದು ಕಂಬನಿ ತುಂಬಿದ ಕಂಗಳಿಂದ ಹೇಳಿದಳು.

ಹಿಮವಂತ ತನ್ನ ಪತ್ನಿಯನ್ನು ಸಮಾಧಾನಗೊಳಿಸಿ, ‘ಎಲೈ ಮೇನಾದೇವಿ, ನಾರದಮುನಿಯ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ಶಂಕರ ನಿರ್ಗತಿಕನಲ್ಲ, ನಿರ್ಗುಣ ಸಂಪನ್ನ. ನಿನಗೆ ಪಾರ್ವತಿ ಮೇಲೆ ಪ್ರೀತಿ ಇದ್ದರೆ, ಅವಳನ್ನು ಶಂಕರನ ಕುರಿತು ಭಕ್ತಿಯಿಂದ ತಪಸ್ಸು ಮಾಡಲು ಕಳುಹಿಸು. ತಪಸ್ಸಿಗೆ ಶಂಕರನು ಪ್ರಸನ್ನನಾದರೆ, ಅವನೇ ಪಾರ್ವತಿಯನ್ನು ಮದುವೆಯಾಗುವನು. ಇದರಿಂದ ಎಲ್ಲವೂ ಶುಭವಾಗುವುದು. ಪಾರ್ವತಿ ಹಸ್ತದಲ್ಲಿರುವ ಒಂದು ಗೆರೆಯಲ್ಲಿರುವ ಅಮಂಗಳವು ನಿವಾರಣೆಯಾಗುವುದು. ಪಾರ್ವತಿಯು ತಪಸ್ಸು ಮಾಡುವಂತೆ ಪ್ರೇರೇಪಿಸು’ ಎನ್ನುತ್ತಾನೆ.

ಹಿಮವಂತನ ಮಾತು ಕೇಳಿ ಮೇನಾದೇವಿಗೆ ದುಗುಡ ಅಳಿದು, ಆನಂದವಾಗುತ್ತದೆ. ನಂತರ ಮೇನಾದೇವಿ ತಪಸ್ಸಿನ ವಿಧಿಯನ್ನು ಉಪದೇಶಿಸಲು ಪಾರ್ವತಿ ಬಳಿ ಬರುತ್ತಾಳೆ. ಸುಕೋಮಲವಾದ ಪಾರ್ವತಿ ಸೌಂದರ್ಯವನ್ನು ನೋಡಿ ಮೇನಾದೇವಿ ತುಂಬಾ ವ್ಯಥೆ ಪಡುತ್ತಾಳೆ. ಅರಮನೆಯಲ್ಲಿ ಸುಖವಾಗಿ ಬೆಳೆದ ಮಗಳು, ಕಾಡಿನಲ್ಲಿ ಕಠಿಣವಾದ ತಪಸ್ಸು ಮಾಡುವುದನ್ನು ನೆನೆದು ಕಣ್ಣೀರಿಡುತ್ತಾಳೆ. ತಾಯಿಯನ್ನು ಸಮಾಧಾನಗೊಳಿಸಿದ ಪಾರ್ವತಿ ‘ಮಾತೆಯೆ, ಇಂದು ರಾತ್ರಿ ಬ್ರಾಹ್ಮಿಮುಹೂರ್ತದಲ್ಲಿ ಒಂದು ಸ್ವಪ್ನವನ್ನು ಕಂಡೆ. ಅದರಲ್ಲಿ ಓರ್ವ ತಪಸ್ವಿಯಾದ ಬ್ರಾಹ್ಮಣ ನನ್ನ ಬಳಿ ಬಂದು, ಶಿವನನ್ನು ಕುರಿತು ತಪಸ್ಸು ಮಾಡೆಂದು ಉಪದೇಶಿಸಿದ’ ಎಂದಳು.

ಪಾರ್ವತಿಯ ಸ್ವಪ್ನದ ವಿಚಾರವನ್ನು ಮೇನಾದೇವಿಯು ಹಿಮವಂತನಿಗೆ ತಿಳಿಸಿದಳು. ಆಗ ಹಿಮವಂತ ತಾನೂ ಬೆಳಗಿನ ಜಾವದಲ್ಲಿ ಸ್ವಪ್ನವೊಂದನ್ನು ಕಂಡೆ ಎನ್ನುತ್ತಾನೆ. ‘ನಾರದ ಹೇಳಿದಂಥ ಲಕ್ಷಣಗಳುಳ್ಳ ಓರ್ವ ಮಹಾತಪಸ್ವಿಯು ತಪವನ್ನಾಚರಿಸಲು ನಮ್ಮ ನಗರಕ್ಕೆ ಬಂದ. ಅವನ ಬಳಿಗೆ ಪಾರ್ವತಿಯನ್ನು ಕರೆದುಕೊಂಡು ಹೋದೆ. ಆತ ನಾರದ ಹೇಳಿದಂಥ ವರ ಶಂಕರನಾಗಿದ್ದ. ಆಗ ನಾನು ಪಾರ್ವತಿಯನ್ನು ಶಂಕರನ ಸೇವೆಗೆ ನಿಯಮಿಸಿದೆ. ಆದರೆ ಅವನು ಅಂಗೀಕರಿಸಲಿಲ್ಲ. ಆಗ ಪಾರ್ವತಿಯು ಅವನನ್ನು ಪತಿಯಾಗಿ ಪಡೆಯಲು ಭಕ್ತಿಯಿಂದ ಸೇವಿಸಿದಳು. ಮೇನಾದೇವಿ, ಈ ಸ್ವಪ್ನದ ಫಲವೇನೆಂದು ಯೋಚಿಸಿ ನೋಡು. ಪಾರ್ವತಿಯು ಶಿವನನ್ನು ಕುರಿತು ತಪಸ್ಸು ಮಾಡುವುದೇ ಯೋಗ್ಯ ಅನ್ನಿಸುತ್ತದಲ್ಲವೆ’ ಎಂದು ಮನದಟ್ಟು ಮಾಡಿಸುತ್ತಾನೆ.

ಪರಮೇಶ್ವರನು ಸತೀದೇವಿಯ ವಿರಹದಿಂದ ದುಃಖಿತನಾಗಿ ಹಿಮಾಲಯದಲ್ಲಿ ತಪಸ್ಸನ್ನಾಚರಿಸತೊಡಗಿದ. ಪಾರ್ವತಿಯು ಸಖಿಯರೀರ್ವರೊಡನೆ ಶಂಕರನನ್ನು ಭಕ್ತಿಯಿಂದ ಸೇವಿಸತೊಡಗಿದಳು. ದೇವತೆಗಳು ಶಂಕರನ ತಪಸ್ಸನ್ನು ಭಂಗಗೊಳಿಸಲು ಮನ್ಮಥನನ್ನು ಕಳುಹಿಸಿದರು. ಅವನು ತನ್ನ ಬಾಣಗಳನ್ನು ಶಿವನ ಮೇಲೆ ಪ್ರಯೋಗಿಸಿದ. ಆದರೂ ಪರಮೇಶ್ವರನು ಸ್ವಲ್ಪವೂ ಕಾಮ ವಿಕಾರನಾಗಲಿಲ್ಲ. ಬದಲಿಗೆ, ತನ್ನ ಮೂರನೆಯ ಕಣ್ಣನ್ನು ತೆರೆದು ಮನ್ಮಥನನ್ನು ಭಸ್ಮ ಮಾಡಿದ. ಇದಾದ ನಂತರ ಗಿರಿಜೆಯು ಶಿವನನ್ನು ಕುರಿತು ಘೋರವಾದ ತಪವನ್ನಾಚರಿಸಿದಳು. ಶಿವನು ಪ್ರಸನ್ನನಾದ. ವಿಷ್ಣುವಿನ ಪ್ರಾರ್ಥನೆಯನ್ನು ಮನ್ನಿಸಿ ರುದ್ರನು ಪಾರ್ವತಿಯನ್ನು ಮದುವೆಯಾದ. ಮುಂದೆಲ್ಲವೂ ಮಂಗಳವಾಯಿತು ಎಂದು ನಾರದನಿಗೆ ಬ್ರಹ್ಮ ಹೇಳುವಲ್ಲಿಗೆ ಪಾರ್ವತೀಖಂಡದ ಒಂಬತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT