ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ಬೆವರಿಂದ ಹುಟ್ಟಿದ ಮಂಗಳ

ಭಾಗ 204
ಅಕ್ಷರ ಗಾತ್ರ

ನಾರದ ‘ಓ ಬ್ರಹ್ಮನೇ! ಶಿವಲೀಲೆಯನ್ನು ಇನ್ನೂ ವಿಸ್ತಾರವಾಗಿ ಹೇಳು. ಸತೀದೇವಿಯಿಂದ ವಿರಹಿತನಾದ ಶಂಕರ ಏನು ಮಾಡಿದ? ಹಿಮಾಲಯದ ತಪ್ಪಲಿಗೆ ತಪಸ್ಸನ್ನಾಚರಿಸಲು ಯಾವಾಗ ಬಂದ? ಶಿವಪಾರ್ವತಿ ವಿವಾಹ ಹೇಗಾಯಿತು? ಕಾಮದಹನ ಹೇಗಾಯಿತು? ಪಾರ್ವತಿ ತಪವನ್ನಾಚರಿಸಿ ಶಿವನನ್ನು ಹೇಗೆ ಪಡೆದಳು?’ ಎಂದು ಕೋರುತ್ತಾನೆ. ಬ್ರಹ್ಮನು ಶಿವಪಾರ್ವತಿ ಕಲ್ಯಾಣದ ಕಥೆ ಹೇಳತೊಡಗುತ್ತಾನೆ.

ಕೈಲಾಸಕ್ಕೆ ಬಂದ ಶಂಕರ ತನ್ನ ಪ್ರಿಯೆಯ ನೆನೆದು ದುಃಖಿಸುತ್ತಿದ್ದ. ಪ್ರಾಣಾಧಿಕಳಾದ ಸತೀದೇವಿಯನ್ನು ಕುರಿತು ಚಿಂತಿಸುತ್ತಿದ್ದ. ಪ್ರೀತಿಯನ್ನು ದ್ವಿಗುಣಗೊಳಿಸುವ ಅವಳ ಸದ್ಗುಣಗಳನ್ನು ತನ್ನ ಗಣಗಳೆದುರು ಬಣ್ಣಿಸಿ ಗದ್ಗದಿತನಾಗುತ್ತಿದ್ದ. ಲೀಲಾಮಯನಾದ ಅವನು ಗೃಹಸ್ಥಾಶ್ರಮದ ವಿಧಿಯನ್ನು ಮರೆತು, ಭೈರಾಗಿಯಂತೆ ದಿಗಂಬರನಾಗಿ ಲೋಕಗಳನ್ನೆಲ್ಲಾ ಸಂಚರಿಸುತ್ತಿದ್ದ. ಹೀಗಿರುವಾಗ ಶಿವ ಮತ್ತೆ ಹಿಮಾಲಯಕ್ಕೆ ಬಂದ. ಅಲ್ಲಿ ಮನಸ್ಸನ್ನು ಸ್ಥಿರವಾಗಿರಿಸಿ ಸಮಾಧಿಸ್ಥಿತಿಯಲ್ಲಿ ಕುಳಿತ. ತಪೋನಿಷ್ಠನಾಗಿ ನಾಶರಹಿತವಾದ ತನ್ನ ಸ್ವರೂಪವನ್ನು ಸಾಕ್ಷಾತ್ಕರಿಸಿದ.

ಸತ್ವ-ರಜಸ್ಸು-ತಮೋ ಗುಣಗಳ ಸಂಬಂಧವಿಲ್ಲದೇ ನಿರ್ವಿಕಾರನಾಗಿ ಸಮಾಧಿಸ್ಥಿತಿಯಲ್ಲಿ ಬಹಳ ಕಾಲ ಕಳೆದ. ನಂತರ ಸಮಾಧಿಸ್ಥಿತಿಯನ್ನು ತ್ಯಜಿಸಿ ಮತ್ತಷ್ಟು ಕಾಲ ಕಳೆದ. ಇವೆರಡು ಕಾಲಘಟ್ಟಗಳ ನಡುವೆ ಅನೇಕ ಘಟನೆಗಳು ನಡೆದವು. ಅದರಲ್ಲಿ ಮೊದಲ ಪ್ರಮುಖ ಘಟನೆ ಎಂದರೆ ಮಂಗಳ ಗ್ರಹದ ಜನನ.

ಒಮ್ಮೆ ಶಂಕರ ಸಮಾಧಿಯಿಂದ ಬಹಿರ್ಮುಖನಾದಾಗ ಆಯಾಸದಿಂದ ಅವನ ಲಲಾಟದಿಂದ ಬೆವರ ಹನಿ ಉದುರಿತು. ಆ ಬೆವರಿನಿಂದ ಒಂದು ಶಿಶುವಾಯಿತು. ಆ ಶಿಶುವಿಗೆ ನಾಲ್ಕು ಕೈಗಳಿದ್ದುವು. ಕೆಂಬಣ್ಣದಿಂದ ಕೂಡಿತ್ತು. ತುಂಬಾ ಸುಂದರವಾಗಿ, ಮಹಾತೇಜಸ್ವಿಯಾಗಿ ಮತ್ತು ಮಹಾಕಾಂತಿಯಿಂದ ಪ್ರಜ್ವಲಿಸುತ್ತಿತ್ತು. ಶಿಶುವು ಸಮಾನ್ಯ ಮಾನವರ ಶಿಶುವಿನಂತೆ ಶಂಕರನೆದುರಿನಲ್ಲಿ ಅಳತೊಡಗಿತು. ಆಗ ಭೂದೇವಿಯು ತನ್ನ ಸುಬುದ್ಧಿಯಿಂದ ಆಲೋಚಿಸಿ ಸುಂದರವಾದ ಸ್ತ್ರೀರೂಪವನ್ನು ಧರಿಸಿ ಶಂಕರನೆದುರಿಗೆ ಪ್ರತ್ಯಕ್ಷಳಾದಳು. ಅವಳು ಶಂಕರನ ಲಲಾಟದಿಂದ ಜನಿಸಿದ ಶಿಶುವನ್ನು ತನ್ನ ತೊಡೆಯಲ್ಲಿ ಇಟ್ಟುಕೊಂಡು ಪ್ರೀತಿಯಿಂದ ಎದೆಹಾಲನ್ನು ಉಣಿಸಿದಳು. ಹೀಗೆ ಭೂದೇವಿ ತಾಯಿ ಇಲ್ಲದ ಮಗುವಿಗೆ ತಾನೇ ತಾಯಿಯಾಗಿ ಪರಮೇಶ್ವರನ ಮನಸ್ಸು ಹರ್ಷಗೊಳ್ಳುವಂತೆ ಮಾಡಿದಳು. ಭೂದೇವಿಯು ಸ್ತ್ರೀರೂಪದಿಂದ ಬಂದು ಮಗುವಿಗೆ ಸ್ತನ್ಯಪಾನ ಮಾಡಿಸಿದುದನ್ನು ತನ್ನ ಜ್ಞಾನದೃಷ್ಟಿಯಿಂದ ತಿಳಿದ ಶಿವ, ‘ಎಲೈ ಭೂದೇವಿ, ಈ ಮಗುವನ್ನು ನೀನು ಸಲಹು. ಮಗು ನನ್ನ ನಿನ್ನ ಹೆಸರಿನಿಂದಲೇ ಪ್ರಸಿದ್ಧಿಯನ್ನು ಪಡೆಯುವನು. ಗುಣವಂತನೂ ನಿನಗೆ ಆನಂದವನ್ನುಂಟುಮಾಡುವವನೂ, ನನ್ನನ್ನು ಸಂತೋಷಗೊಳಿಸುವವನೂ ಆಗುವನು. ಇಂತಹ ಶಿಶುವನ್ನು ನಿನ್ನಿಷ್ಟದಂತೆಯೇ ಸ್ವೀಕರಿಸು’ ಎಂದ. ಹೀಗೆ ಶಿವ ವಿರಹದ ಕಡೆಗೆ ಸಂಪೂರ್ಣ ಮನಸ್ಸು ಕೊಡದೆ, ಸ್ವಲ್ಪಕಾಲ ಲೋಕವ್ಯವಹಾರದ ಕಡೆಗೂ ಗಮನಹರಿಸುತ್ತಿದ್ದ.

ಭೂದೇವಿಯು ಆ ಮಗುವಿನೊಡನೆ ತನ್ನ ಸ್ಥಾನಕ್ಕೆ ತೆರಳಿದಳು. ಆ ಶಿಶುವು ಯುವಕನಾಗಿ ‘ಭೌಮ’ (ಅಂಗಾರಕ-ಕುಜ-ಮಂಗಳ) ಎಂಬ ಹೆಸರನ್ನು ಪಡೆದ. ಮುಂದೆ ಕಾಶಿಯಲ್ಲಿ ಬಹಳ ಕಾಲ ವಾಸಿಸುತ್ತಾ ಶಂಕರನನ್ನು ಆರಾಧಿಸಿದ. ಅಲ್ಲಿ ವಿಶ್ವೇಶ್ವರನ ಪ್ರಸಾದವನ್ನು ಪಡೆದ. ಅವನ ಅನುಗ್ರಹದಿಂದ ನವಗ್ರಹಗಳಲ್ಲಿ ಒಬ್ಬನಾಗಿ ಶುಕ್ರಲೋಕಕ್ಕಿಂತಲೂ ಮೇಲಿರುವ ದೇವಲೋಕಕ್ಕೆ ತೆರಳಿದ ಎಂದು ನಾರದನಿಗೆ ಬ್ರಹ್ಮ ಹೇಳುತ್ತಾನೆ. ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ, ಎರಡನೆಯದಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದ ಹತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT