ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಗೀತಾಜಯಂತಿ: ಭಗವದ್ಗೀತೆ; ಜೀವನಶಾಸ್ತ್ರ

Last Updated 24 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಜೀವನ ಎಂಬುದು ಕದನ ಇದ್ದ ಹಾಗೆ; ನಿರಂತರ ಹೋರಾಟ, ಯುದ್ಧ. ಈ ಕದನವಾದರೂ ಎರಡು ಆಯಾಮಗಳಲ್ಲಿ ನಡೆಯುತ್ತಿರುತ್ತದೆ; ಹೊರಗಿನ ಶತ್ರುಗಳೊಂದಿಗೆ ಮಾತ್ರವಲ್ಲದೆ, ಒಳಗಿನ ಶತ್ರುಗಳೊಂದಿಗೂ ನಡೆಯುವುದೇ ಜೀವನಸಂಗ್ರಾಮ. ಬಹಿರಂಗದಲ್ಲಿರುವ ನಮ್ಮ ಶತ್ರುಗಳನ್ನು ಗುರುತಿಸಬಹುದು; ಆದರೆ ಅಂತರಂಗದಲ್ಲಿರುವ ಶತ್ರುಗಳನ್ನು ಗುರುತಿಸುವುದು ಕಷ್ಟ. ಹೀಗೆ ಹೊರಗಡೆ ಇರುವ ಶತ್ರುಗಳ ಮೂಲಕ ಒಳಗಡೆಯ ಶತ್ರುಗಳ ಗುಟ್ಟನ್ನೂ ರಟ್ಟು ಮಾಡುವ ಅಪೂರ್ವ ದಾರ್ಶನಿಕ ಕೃತಿಯೇ ಭಗವದ್ಗೀತೆ. ಇದು ಕೇವಲ ಶತ್ರುಗಳನ್ನು ಗುರುತಿಸಿಕೊಡುವುದಷ್ಟೆ ಅಲ್ಲ, ಅವರನ್ನು ಅಥವಾ ಅವುಗಳನ್ನು – ನಿಗ್ರಹಿಸುವ ಕಲೆಯನ್ನೂ ಕಲಿಸಿಕೊಡುತ್ತದೆ. ಸಾವಿರಾರು ವರ್ಷಗಳಿಂದಲೂ ಈ ಗ್ರಂಥ ಉಪದೇಶಿಸುತ್ತಿರುವ ಸಾರ್ವಕಾಲಿಕ ವಿದ್ಯೆ ಎಂದರೆ ಇದೇ: ಜೀವನಸಂಗ್ರಾಮಕ್ಕೆ ಕಾರಣವಾಗುವ ವಿವಿಧ ಭಂಗಿಗಳ ನಿದಾನ; ಅಂತರಂಗ–ಬಹಿರಂಗದ ಶತ್ರುಗಳನ್ನು ಮಣಿಸುವ ವಿಧಾನ.

ಭಗವದ್ಗೀತೆ ತೋರಿಕೊಂಡ ಸಂದರ್ಭವೂ ಸ್ವಾರಸ್ಯಕರವಾಗಿದೆ. ಇದು ಹುಟ್ಟಿಕೊಂಡದ್ದೇ ಯುದ್ಧಭೂಮಿಯಲ್ಲಿ! ಪಾಂಡವರು ಮತ್ತು ಕೌರವರು – ದಾಯಾದಿಗಳು, ಎಂದರೆ ಅಣ್ಣತಮ್ಮಂದಿರು; ಈಗ ಯುದ್ಧರಂಗದಲ್ಲಿ ಪರಸ್ಪರ ಶತ್ರುಗಳಾಗಿ ಅಪಾರ ಸೇನಾಬಲದೊಂದಿಗೆ ಯುದ್ಧಕ್ಕೆ ಸಿದ್ಧರಾಗಿ ಮುಖಾಮುಖಿಯಾಗಿದ್ದಾರೆ. ಒಂದು ಕಡೆ ಪಾಂಡವರು; ಇನ್ನೊಂದು ಕಡೆ ಕೌರವರು. ಪಾಂಡವಪಕ್ಷದ ಮಹಾವೀರ ಅರ್ಜುನ; ಯುದ್ಧದ ಆರಂಭಕ್ಕೂ ಮೊದಲು ಶತ್ರುಪಕ್ಷದಲ್ಲಿರುವವರನ್ನು ಹತ್ತಿರದಿಂದ ನೋಡಲು ಬಯಸುತ್ತಾನೆ. ಆಗ ಎರಡೂ ಸೇನೆಗಳ ಮಧ್ಯೆ ಅವನ ರಥವನ್ನು ಸಾರಥಿಯಾಗಿದ್ದ ಶ್ರೀಕೃಷ್ಣನು ನಿಲ್ಲಿಸುತ್ತಾನೆ. ಶತ್ರುಪಕ್ಷದಲ್ಲಿರುವವರೆಲ್ಲರೂ ತನ್ನವರೇ; ಬಂಧುಗಳು, ಅಣ್ಣತಮ್ಮಂದಿರು, ಸ್ನೇಹಿತರು, ಹಿತೈಷಿಗಳು. ಅವರೊಂದಿಗೆ ಯುದ್ಧಮಾಡಲು ಮನಸ್ಸು ಒಪ್ಪುವುದಿಲ್ಲ. ನನ್ನವರನ್ನು ಕೊಂದು ಪಡೆಯುವ ರಾಜ್ಯಸುಖ ನನಗೆ ಬೇಡ – ಎಂದು ಬಿಲ್ಲುಬಾಣಗಳನ್ನು ಬಿಸಾಡುತ್ತಾನೆ. ಆಗ ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡಿ, ಅವನಲ್ಲಿ ತೋರಿಕೊಂಡ ವಿಷಾದವನ್ನು ದೂರ ಮಾಡಿ, ಅವನನ್ನು ಯುದ್ಧಕ್ಕೆ ತೊಡಗಿಸುತ್ತಾನೆ. ಹೀಗೆ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಈ ಉಪದೇಶವೇ ಗೀತೆ; ಭಗವದ್ಗೀತೆ.

ಭಗವದ್ಗೀತೆಯು ಮಹಾಭಾರತದ ಭಾಗವಾಗಿದ್ದರೂ, ಅದನ್ನೊಂದು ಸ್ವತಂತ್ರ ಗ್ರಂಥವಾಗಿಯೇ ಪರಂಪರೆಯಲ್ಲಿ ಆದರಿಸಲಾಗಿದೆ. ಏಳುನೂರು ಶ್ಲೋಕಗಳ ಈ ಕೃತಿಗೆ ಸಾವಿರಾರು ವರ್ಷಗಳಿಂದ ಹಲವರು ದಾರ್ಶನಿಕರು, ಚಿಂತಕರು, ಸಾಧಕರು ಭಾಷ್ಯ–ವ್ಯಾಖ್ಯಾನ–ಟೀಕೆಗಳನ್ನುಬರೆದಿದ್ದಾರೆ; ಬರೆಯುತ್ತಲೇ ಇದ್ದಾರೆ. ಭಗವದ್ಗೀತೆಯನ್ನು ಉಪನಿಷತ್ತು ಎಂದೇ ಪರಂಪರೆ ಒಕ್ಕಣಿಸಿದೆ. ಇದನ್ನು ಮೋಕ್ಷಶಾಸ್ತ್ರವನ್ನಾಗಿಯೂ ಕಂಡವರಿದ್ದಾರೆ; ಧರ್ಮಶಾಸ್ತ್ರ, ಕರ್ಮಶಾಸ್ತ್ರ – ಹೀಗೆ ಹಲವು ಆಯಾಮಗಳಲ್ಲಿ ಅದರೊಂದಿಗೆ ಅನುಸಂಧಾನ ನಡೆದಿದೆ. ಆಧುನಿಕ ಜಗತ್ತಿನಲ್ಲಿ ಇದೊಂದು ಮ್ಯಾನೇಜ್‌ಮೆಂಟ್‌ ಮ್ಯಾನ್ಯುಅಲ್‌ ಆಗಿಯೂ ಒದಗಿದೆ. ಹೀಗಿದ್ದರೂ ಅದನ್ನು ಮೋಕ್ಷಶಾಸ್ತ್ರ ಎಂಬ ನೆಲೆಯಲ್ಲಿಯೇ ಅದಕ್ಕೆ ಹೆಚ್ಚಿನ ಆದರ ಲಭಿಸಿರುವುದು ಸುಳ್ಳಲ್ಲ. ಈ ವಿಷಯವಾಗಿ ಡಿವಿಜಿ ಅವರ ಮಾತುಗಳು ಮನನೀಯ. ಗೀತೆ ಮೋಕ್ಷಶಾಸ್ತ್ರ ಹೌದು; ಜೊತೆಗೆ ಅದು ಜೀವನಶಾಸ್ತ್ರವೂ ಹೌದು ಎಂಬುದನ್ನು ಮರೆಯಬಾರದು ಎಂದು ಅವರು ಎಚ್ಚರಿಸಿದ್ದಾರೆ:

‘ಪ್ರತಿಯೊಬ್ಬನಿಗೂ ಪ್ರತಿಯೊಬ್ಬಳಿಗೂ ಜೀವನದಲ್ಲಿ ಒಂದು ಗೌರವ, ಕರ್ತವ್ಯದ ವಿಷಯದಲ್ಲಿ ಒಂದು ಉತ್ಸಾಹ, ಆಪತ್ಕಾಲದಲ್ಲಿ ಧೈರ್ಯ, ಸಂಶಯ ಹುಟ್ಟಿದಾಗ ನೆಮ್ಮದಿಯನ್ನುಂಟುಮಾಡುವ ನಂಬಿಕೆ – ಇವು ಗೀತೆಯಿಂದ ನಾವು ಸಂಪಾದಿಸಿಕೊಳ್ಳಬೇಕಾದ ಸಂಪತ್ತು.’

ಗೀತೆಯ ಸಾರ್ಥಕತೆಯ ಬಗ್ಗೆ ಡಿಜಿವಿ ಅವರ ಈ ಮಾತುಗಳು ಮನನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT