ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುವ ಆಯ್ಕೆಯನ್ನು ದೇವರಿಗೇ ಬಿಡಿ!

Last Updated 29 ಜನವರಿ 2020, 19:45 IST
ಅಕ್ಷರ ಗಾತ್ರ

ಬ್ರಹ್ಮಚೈತನ್ಯ ಮಹಾರಾಜ ಗೋಂದಾವಲೇಕರ (1845–1913) ಭಾರತ ಕಂಡಿರುವ ಶ್ರೇಷ್ಠ ಸಂತರಲ್ಲಿ ಒಬ್ಬರು; ಮಹಾರಾಷ್ಟ್ರದ ಗೋಂದಾವಲೆಯಲ್ಲಿ ಜನಿಸಿದವರು. ರಾಮನಾಮದ ಮೂಲಕವೇ ಅಧ್ಯಾತ್ಮದ ಸೌರಭವನ್ನೂ ಶಕ್ತಿಯನ್ನೂ ಹರಡಿದವರು. ಅವರು ನೀಡುತ್ತಿದ್ದ ಪ್ರವಚನಗಳು ಸಾಧಕರ ಜೀವನಕ್ಕೆ ಒದಗಿದ ಬೆಳಕಿನ ದಾರಿಗಳೇ ಹೌದು. ಹೀಗೆ ಅವರು ಗುರುಪೌರ್ಣಮಿಯಂದು ನೀಡಿದ ಪ್ರವಚನವೊಂದರ ಕೆಲವೊಂದು ಸಾಲುಗಳು ಇವು:

‘ನಮಗೆ ಅತ್ಯಂತ ರುಚಿಸುವ ವಿಷಯವನ್ನೇ ನಾವು ಭಗವಂತನ ಹತ್ತಿರ ಕೇಳುತ್ತೇವೆ; ಹಾಗೂ ಯಾವ ವಿಷಯದಲ್ಲಿ ನಮ್ಮ ಜೀವನದ ಅತ್ಯಂತ ಹಾನಿ ಇರುತ್ತದೋ ಅದೇ ನಮಗೆ ರುಚಿಸುತ್ತದೆ ಎಂದು ಕಂಡುಬರುತ್ತದೆ. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ನೀವು ಭಗವಂತನ ಹತ್ತಿರ ಏನಾದರೂ ಕೇಳುವುದಕ್ಕಿಂತಲೂ, ‘ಭಗವಂತ, ನೀನು ದಾತಾ, ನೀನು ಎಲ್ಲ ದೃಷ್ಟಿಯಿಂದಲೂ ಯೋಗ್ಯವಾದುದನ್ನೇ ಮಾಡುತ್ತೀ; ಅಂದಮೇಲೆ ನಾನು ನಿನ್ನ ಹತ್ತಿರ ಏನಾದರೂ ಕೇಳುವುದಕ್ಕಿಂತಲೂ, ನೀನೇ ನನಗೆ ಉಚಿತವಾದುದನ್ನು ಕೊಡು’ ಎಂದು ಕೇಳಬೇಕು... ಬೇಡುವ ಮನುಷ್ಯನು ತನ್ನ ಯೋಗ್ಯತೆಯನ್ನು ನೋಡಿಕೊಂಡೇ ಬೇಡುತ್ತಾನೆ. ಮನೆಯ ಮುಂದೆ ಬಂದ ಭಿಕ್ಷಕನು ನಿಮ್ಮ ಮನೆಯನ್ನು ನನ್ನ ಹೆಸರಿಗೆ ಮಾಡಿಕೊಡಿರಿ ಎಂದು ಕೇಳುವುದಿಲ್ಲ. ಅವನು ನನಗೆ ನಾಲ್ಕು ದುಡ್ಡು ಕೊಡಿರಿ; ಒಂದು ಹೊತ್ತಿನ ಅನ್ನ ಕೊಡಿರಿ ಎಂದು ತನ್ನ ಯೋಗ್ಯತೆ ನೋಡಿಕೊಂಡೇ ಕೇಳುತ್ತಾನೆ. ಅದರಂತೆ ಕೊಡುವವನು ಎಷ್ಟೇ ದೊಡ್ಡವನಾಗಿದ್ದರೂ ನಾವು ನಮ್ಮ ಯೋಗ್ಯತೆಗನುಸಾರ ಕೇಳುತ್ತೇವೆ. ಮಹಾದಾನಿಯಾದ ಭಗವಂತನು ವಸ್ತುವಿನ ಹೊರತು ಸಮಾಧಾನ ಕೊಡುವವಂಥವನಿರುತ್ತಾನೆ. ಆದ್ದರಿಂದ ನಾವು ಅವನಿಗೆ ‘ಹೇ ಭಗವಂತನೇ! ನಿನಗೆ ರುಚಿಸಿದ್ದನ್ನೇ ನನಗೆ ಕೊಡು. ನಾನು ಹೇಗಾಗಬೇಕೆಂದು ನಿನಗೆ ಅನಿಸುತ್ತದೋ ಅದನ್ನೇ ನನಗೆ ಕೊಡು’ ಎಂದು ಕೇಳುವುದೇ ಅವಶ್ಯವಿರುತ್ತದೆ.’

(ಗ್ರಂಥಕೃಪೆ: ಶ್ರೀಬ್ರಹ್ಮಚೈತನ್ಯ ಮಹಾರಾಜ ಗೋಂದಾವಲೇಕರ ಪ್ರವಚನಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT