ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಶಿವಪೂಜಾ ವಿಧಾನ

ಭಾಗ 94
ಅಕ್ಷರ ಗಾತ್ರ

ಸೃಷ್ಟಿ ಉಪಾಖ್ಯಾನದ ಹನ್ನೊಂದನೆಯ ಅಧ್ಯಾಯವಾದ ಶಿವ ಪೂಜಾ ವಿಧಿ ವರ್ಣನದಲ್ಲಿ ಋಷಿಮುನಿಗಳು ಶಿವಪೂಜಾ ಕ್ರಮಗಳ ಬಗ್ಗೆ ಕೇಳುತ್ತಾರೆ. ಅದಕ್ಕೆ ಸೂತಮುನಿ ಹೇಳುವ ವಿವರವಿದೆ.

ಶೌನಕಾದಿ ಮುನಿಗಳು ‘ಓ ಸೂತಮುನಿ, ನಿನಗೆ ನಮಸ್ಕಾರ. ನಾವು ಈಗ ಪರಮಪಾವನವಾದ ಶಿವಕಥೆಯನ್ನು ನಿನ್ನಿಂದ ಕೇಳಿದೆವು. ಯಾವು ದನ್ನು ಕೇಳಿದ ಮಾತ್ರದಿಂದ ದುಃಖಗಳೆಲ್ಲವೂ ಪರಿಹಾರವಾಗುವುದೋ, ಅಂತಹ ಪರಮಾದ್ಭುತವಾದ ಲಿಂಗದ ಉತ್ಪತ್ತಿಯನ್ನೂ ಕೇಳಿದ್ದಾಯಿತು. ಇಂಥ ಪರಮ ಪವಿತ್ರವಾದ ಲಿಂಗವನ್ನು ಯಾವ ರೀತಿ ಪೂಜಿಸಿದರೆ ಶಿವನು ಸುಪ್ರೀತನಾಗುವನೋ, ಅಂತಹ ಶಿವಪೂಜಾ ವಿಧಾನವನ್ನ ಬ್ರಹ್ಮ-ನಾರದ ಸಂವಾದಕ್ಕೆ ಅನುಸಾರವಾಗಿ ನಮಗೆ ತಿಳಿಸು’ ಎಂದು ಕೋರುತ್ತಾರೆ.

ಸುಖದಾಯಕವೂ ಶ್ರುತಿಸಮ್ಮತವೂ ಆದ ಮುನಿಗಳ ಮಾತನ್ನು ಕೇಳಿ ಸೂತಪುರಾಣಿಕನು ಶಿವಪೂಜಾಕ್ರಮಗಳ ಬಗ್ಗೆ ಹೇಳಲು ಉತ್ಸುಕನಾಗಿ, ‘ಎಲೈ ಋಷಿಶ್ರೇಷ್ಠರಿರಾ, ನಾನು ವ್ಯಾಸಮಹರ್ಷಿಗಳಿಂದ ಕೇಳಿ ತಿಳಿದದ್ದನ್ನ ನಿಮಗೆ ಹೇಳುತ್ತೇನೆ ಕೇಳಿ’ ಎಂದು ಶಿವನ ಪೂಜಾಕ್ರಮಗಳನ್ನು ಹೇಳುತ್ತಾನೆ.

‘ನೀವು ನನ್ನನ್ನು ಈಗ ಕೇಳಿದಂತೆ, ಹಿಂದೆ ವ್ಯಾಸಮಹರ್ಷಿಯು ಸನತ್ಕುಮಾರನನ್ನು ಕೇಳಿದ್ದರು. ಅದನ್ನು ಉಪಮನ್ನ್ಯು ಮಹರ್ಷಿಯು ಕೇಳಿದ್ದನು. ವ್ಯಾಸಮಹರ್ಷಿಯು ಸನತ್ಕುಮಾರನಿಂದ ಶಿವಪೂಜಾವಿಧಿ ಗಳನ್ನು ಕೇಳಿ ತಿಳಿದುಕೊಂಡ ನಂತರ, ಪ್ರಪಂಚಕ್ಕೆಲ್ಲ ಇದು ಪ್ರಚಾರ ವಾಗಲಿ ಎಂದು ಅದೆಲ್ಲವನ್ನೂ ನನಗೆ ಉಪದೇಶಿಸಿದರು. ಉಪಮನ್ಯು ಮಹರ್ಷಿಯಿಂದ ಇದೇ ಶಿವಪೂಜಾ ವಿಧಾನವನ್ನು ಶ್ರೀಕೃಷ್ಣನು ಕೇಳಿ ತಿಳಿದಿದ್ದ. ಅದನ್ನೇ ನಾನೀಗ ಹಿಂದೆ ಬ್ರಹ್ಮನು ನಾರದನಿಗೆ ಹೇಳಿದಂತೆ ನಿಮಗೆ ತಿಳಿಸುವೆನು’ ಎಂದ ಸೂತಮುನಿಯು ಮತ್ತೆ ‘ಬ್ರಹ್ಮ ಮತ್ತು ನಾರದಸಂವಾದ’ದಲ್ಲಿ ಶಿವಪೂಜಾ ಕ್ರಮವನ್ನು ನಾರದನಿಗೆ ಬ್ರಹ್ಮ ಹೇಳಿದ್ದನ್ನು ತಿಳಿಸುತ್ತಾನೆ.

ಬ್ರಹ್ಮ ನಾರದನಿಗೆ ಶಿವಪೂಜಾ ಕ್ರಮವನ್ನು ಉಪದೇಶಿಸುವಾಗ ‘ಎಲೈ ವತ್ಸ ನಾರದ, ಶಿವಲಿಂಗ ಪೂಜಾಕ್ರಮವನ್ನು ಸಂಕ್ಷೇಪವಾಗಿ ನಿನಗೆ ಹೇಳುವೆನು. ವಿಸ್ತಾರವಾಗಿ ಹೇಳಲು ಹೊರಟರೆ, ನೂರು ವರ್ಷಗಳೂ ಸಾಲಲಾರವು’ ಎಂದು ಸ್ಪಷ್ಟಪಡಿಸಿ ಮುಂದುವರೆಯುತ್ತಾನೆ.

‘ಎಲ್ಲ ಮನೋರಥಗಳನ್ನೂ ಪಡೆಯಬೇಕೆಂಬ ಅಭಿಲಾಷೆಯುಳ್ಳ ವನು; ಸುಖಕರವೂ ಸ್ವಚ್ಛವೂ ಸನಾತನವೂ ಆದ ಶಿವಸ್ವರೂಪವನ್ನೂ ಪೂಜಾಕ್ರಮವನ್ನೂ ಅತಿಶಯವಾದ ಭಕ್ತಿಯಿಂದ ಅರ್ಚಿಸಬೇಕು. ಎಲ್ಲಿಯ ವರೆಗೆ ಶಿವನನ್ನು ಪೂಜಿಸುವುದಿಲ್ಲವೋ, ಅಲ್ಲಿಯವರೆಗೆ ದಾರಿದ್ರ್ಯ, ರೋಗರುಜಿನಗಳು, ಸಂಕಟಗಳು, ಶತ್ರುಪೀಡೆ – ಎಂಬ ನಾಲ್ಕು ವಿಧವಾದ ಪಾಪಗಳೂ ಪೀಡಿಸುವುವು. ದೇವದೇವನಾದ ಶಿವನನ್ನು ಪೂಜಿಸಿದ ಬಳಿಕ ಎಲ್ಲ ದುಃಖಗಳೂ ಅಡಗಿ ಹೋಗುವುವು. ಎಲ್ಲವೂ ಸುಖವಾಗಿ ಪರಿಣಮಿಸುವುದು. ಬಳಿಕ ಮುಕ್ತಿಯೂ ದೊರಕುವುದು.

‘ಯಾರು ಮನುಷ್ಯಜನ್ಮವನ್ನು ಪಡೆದು, ಅವಿಚ್ಛಿನ್ನವಾಗಿ ಸುಖವನ್ನು ಪಡೆಯಬೇಕೆಂದು ಬಯಸುವರೋ, ಅವರ ಎಲ್ಲ ಕೆಲಸಗಳೂ ಸಫಲ ವಾಗಲು ಕಾರಣನಾದ ಶಿವನನ್ನು ಅರ್ಚಿಸಬೇಕು. ಎಲ್ಲ ಇಷ್ಟಾರ್ಥ ಗಳನ್ನೂ ಪಡೆಯುವುದಕ್ಕಾಗಿ ವಿಧಿಯನ್ನನುಸಿರಿಸಿ ಶಿವನ ಪೂಜೆಯನ್ನು ಮಾಡಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿಯೇ ಎದ್ದು, ತನ್ನ ಗುರುವನ್ನು ಸ್ಮರಿಸಿ ಶಿವನನ್ನೂ ಪುಣ್ಯತೀರ್ಥಗಳನ್ನೂ ವಿಷ್ಣುವನ್ನೂ ಬ್ರಹ್ಮನಾದ ನನ್ನನ್ನೂ ದೇವತೆಗಳನ್ನೂ ಮಹರ್ಷಿಗಳನ್ನೂ ಸ್ಮರಿಸಬೇಕು. ನಂತರ ಸ್ತೋತ್ರಗಳನ್ನೂ ಶಿವನಾಮಗಳನ್ನೂ ವಿಧಿಪೂರ್ವಕವಾಗಿ ಕೀರ್ತನೆ ಮಾಡಬೇಕು. ಹಾಗೆಯೇ, ಎದ್ದು ದಕ್ಷಿಣ ದಿಕ್ಕಿನ ಕಡೆಗೆ ಹೋಗಿ ಮಲವಿಸರ್ಜನೆಯನ್ನು ಮಾಡಬೇಕು.

‘ಮಲವಿಸರ್ಜನೆಯನ್ನು ರಹಸ್ಯವಾದ ಸ್ಥಳದಲ್ಲಿ ಮಾಡಬೇಕೆಂದು ಕೇಳಿರುವಿರಷ್ಟೆ? ಅದನ್ನೆ ವಿವರಿಸುವೆನು. ಮನಸ್ಸಿಟ್ಟು ಕೇಳಿ. ಮಲ ವಿಸರ್ಜನೆಯಾದನಂತರ ಶುದ್ಧಿಯಾಗಲು, ಶುದ್ಧವಾದ ಮಣ್ಣನ್ನು, ಐದು, ನಾಲ್ಕು, ಮೂರು ಅಥವಾ ಎರಡು ಬಾರಿಯಾದರೂ ತೆಗೆದುಕೊಂಡು, ಗುದಭಾಗದಲ್ಲಿ ಉಜ್ಜಿ ತೊಳೆದುಕೊಳ್ಳುವುದಲ್ಲದೆ, ಒಂದು ಸಲ ಲಿಂಗದ ಮುಂಭಾಗವನ್ನೂ ಮಣ್ಣು ಅಥವಾ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

‘ಎಡಗೈಯನ್ನು ಹತ್ತು ಸಲವೂ, ಪ್ರತ್ಯೇಕವಾಗಿ ಎರಡು ಕಾಲುಗಳನ್ನೂ ಏಳು ಸಲವೂ, ಮಣ್ಣು ಹಾಕಿ ಉಜ್ಜಿ ತೊಳೆದಮೇಲೆ ಮತ್ತೊಮ್ಮೆ ಎರಡು ಕೈಗಳನ್ನೂ ಮೂರು ಸಲ ಮಣ್ಣಿನಿಂದ ತೊಳೆಯಬೇಕು. ಹೆಂಗಸರು ಸಹ ಮೇಲೆ ಹೇಳಿದಂತೆ, ಮಣ್ಣನ್ನು ತೆಗೆದುಕೊಳ್ಳಬೇಕು. ಕೈಕಾಲುಗಳನ್ನು ತೊಳೆದುಕೊಂಡಮೇಲೆ ಮತ್ತೊಮ್ಮೆ ಮಣ್ಣಿನಿಂದ ತೊಳೆಯಬೇಕು.’

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT