ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಶಿವಭಕ್ತನಿಗೆ ಒಳ್ಳೆಯ ಸಿದ್ಧಿ ಲಭ್ಯ

ಭಾಗ 96
ಅಕ್ಷರ ಗಾತ್ರ

ಶಿವನ ಮುಂದೆ ವಿಧಿವತ್ತಾಗಿ, ಹಾಲು, ಮೊದಲು, ತುಪ್ಪ, ಜೇನು, ಸಕ್ಕರೆ ಎಂಬ ಪಂಚಗವ್ಯಗಳನ್ನು ಪಾತ್ರೆಯಲ್ಲಿ ಇಡಬೇಕು. ಪ್ರಣವದಿಂದ ಅಭಿಮಂತ್ರಣವನ್ನು ಮಾಡಿ, ಹಸುವಿನ ಹಾಲು, ಮೊಸರುಗಳಿಂದಲೂ ತುಪ್ಪ, ಜೇನು, ಸಕ್ಕರೆಗಳಿಂದಲೂ ಸುವಾಸಿತವಾದ ಗಂಧೋದಕದಿಂದ ಮನೋರಥಗಳೆಲ್ಲವನ್ನೂ ನೀಡುವ ಮಹಾದೇವನನ್ನು ಪುಣ್ಯಕರವಾದ ದ್ರವ್ಯಗಳಿರುವ ಶುದ್ಧವಾದ ಜಲದಿಂದ ಪ್ರಣವವನ್ನು ಉಚ್ಚರಿಸುತ್ತಾ ಅಭಿಷೇಕಮಾಡಬೇಕು.

ಅಭಿಷೇಕದ ನಂತರ ಬಿಳಿಯದಾದ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು. ನಂತರ ಮೊನೆ ಮುರಿಯದಿರುವ ಅಕ್ಕಿಯ ಕಾಳುಗಳಿಂದ ಶಂಕರನನ್ನು ಪೂಜಿಸಬೇಕು. ದರ್ಭೆ, ಉತ್ತರಣಿ, ಕರ್ಪೂರ, ಜಾಜೀ, ಸಂಪಿಗೆ, ಪಾದರಿ, ದಾಸವಾಳ, ಮಲ್ಲಿಗೆ, ಕಮಲ, ನೈದಿಲೆ ಮೊದಲಾದ ಅರಳಿದ ಹೂವುಗಳಿಂದಲ್ಲದೆ ಇತರೆ ಅಪರೂಪದ ಪುಷ್ಪಗಳಿಂದಲೂ ಗಂಧಾದಿಗಳಿಂದಲೂ ಪೂಜಿಸಬೇಕು. ಶಿವನ ಮೇಲೆ ಸತತವಾಗಿ ಧಾರಾಕಾರವಾಗಿ ನೀರು ಬೀಳುವಂತೆ ಮಾಡಬೇಕು. ವಿಧವಿಧವಾದ ಪಾತ್ರೆಗಳಿಂದ ಮಹೇಶ್ವರನಿಗೆ ಸ್ನಾನಮಾಡಿಸಬೇಕು.

ಓ ನಾರದ! ನಿನ್ನ ಕೋರಿಕೆಗಳು ಈಡೇರಲೆಂದು ಆ ಶಿವಮಂತ್ರಗಳೆಲ್ಲವನ್ನೂ ನಿನಗೆ ಸಂಗ್ರಹವಾಗಿ ತಿಳಿಸುವೆನು. ಪಾಠ್ಯಮಾನ, ವಾಙ್ಮಯಕ, ರುದ್ರ, ನೀಲರುದ್ರ, ಸುಶುಕ್ಲ, ಶುಭ, ಹೋತಾರ, ಅಥರ್ವಶೀರ್ಷ, ಶಾಂತಿಗಳು, ವಾರುಣ, ಅರುಣ, ಮತ್ತು ಅರ್ಥಾಭೀಷ್ಟ. ದೇವವ್ರತ, ರಥಂತರ ಎಂಬ ಸಾಮಗಳು. ಪುಷ್ಪಸೂಕ್ತ, ಮೃತ್ಯುಂಜಯ, ಪಂಚಾಕ್ಷರಮಂತ್ರಗಳು – ಎಂದು ಶಿವಮಂತ್ರಗಳನ್ನು ಬ್ರಹ್ಮ ತಿಳಿಸುತ್ತಾನೆ.

ವೇದಮಂತ್ರಗಳನ್ನಾಗಲೀ, ಶಿವನ ಸಹಸ್ರನಾಮಗಳನ್ನಾಗಲೀ, ನೂರೊಂದು ನಾಮಗಳನ್ನಾಗಲಿ, ಜಪಿಸುತ್ತಾ ಶಿವನ ತಲೆಯ ಮೇಲೆ ಧಾರಾಕಾರವಾಗಿ ನೀರು ಬೀಳುವಂತೆ ಮಾಡಬೇಕು. ಆಮೇಲೆ ಗಂಧಪುಷ್ಪಾದಿಗಳನ್ನು ಶಿವನ ಮೇಲೆ ಧರಿಸಬೇಕು. ಪ್ರಣವದಿಂದಲೇ ಮುಖವು ಸುವಾಸನೆಯಿಂದ ಕೂಡಿರಲನುವಾಗುವಂತೆ ತಾಂಬೂಲಾದಿಗಳನ್ನು ಅರ್ಪಿಸಬೇಕು. ಬ್ರಹ್ಮ-ಇಂದ್ರ-ವಿಷ್ಣು ಮೊದಲಾದ ದೇವತೆಗಳಿಗೂ ಅಗೋಚರನೂ, ವೇದವಿದ್ವಾಂಸರಿಂದಲೂ ಅಗೋಚರನೆಂದು ಸ್ಮರಿಸಲ್ಪಡುವವನೂ ಆದ, ಆದಿ ಮಧ್ಯ ಅಂತ್ಯಗಳೊಂದೂ ಇಲ್ಲದ, ಔಷಧಸ್ವರೂಪನೂ ಆದಂಥ ಶಿವನ ಶಿವತತ್ವವೆಂಬ ಶಿವಲಿಂಗವನ್ನು ಭಾವಿಸಬೇಕು.

ನಂತರ ಪ್ರಣವಮಂತ್ರದಿಂದಲೇ, ಸುಂದರವಾದ ಧೂಪದೀಪಗಳಿಂದ, ನೈವೇದ್ಯ ತಾಂಬೂಲಗಳಿಂದ, ಮಂಳಾರತಿಯಿಂದ, ನಮಸ್ಕಾರಗಳಿಂದ, ಮಂತ್ರಗಳಿಂದ ಶಿವಲಿಂಗವನ್ನು ಪೂಜಿಸಬೇಕು. ಅರ್ಘ್ಯವನ್ನಿತ್ತು, ಪಾದಗಳಿಗೆ ಹೂಗಳನ್ನರ್ಪಿಸಿ, ಶಿವನನ್ನಾರಾಧಿಸಬೇಕು. ‘ಓ ಶಂಕರ, ಜ್ಞಾನವಿಲ್ಲದೆಯೋ ಜ್ಞಾನಪೂರ್ವಕವಾಗಿಯೋ, ನಾನು ಮಾಡಿದ, ಜಪಪೂಜಾದಿಗಳೆಲ್ಲವೂ ನಿನ್ನ ಕರುಣೆಯಿಂದ ಸಫಲವಾಗಲಿ’ ಎಂದು ಹೇಳಿ ಹೂಗಳನ್ನು ಶಿವನ ಮೇಲಿಡಬೇಕು. ಸ್ವಸ್ತಿಮಂತ್ರಗಳಿಂದ, ಸ್ತೋತ್ರಗಳಿಂದ ಶಿವನನ್ನರ್ಚಿಸಬೇಕು.

ಶಿವನ ಮೇಲೆ ಪುನಃ ಮಾರ್ಜನೆಯನ್ನು ಮಾಡಬೇಕು. ನಂತರ ನಮಸ್ಕಾರ, ಕ್ಷಮಾಪ್ರಾರ್ಥನೆಯನ್ನೂ ಮಾಡಿ, ಮತ್ತೆ ಆಚಮನೀಯವನ್ನು ನೀಡಬೇಕು. ಪಾಪನಾಶಕವಾದ ಮಂತ್ರಗಳನ್ನುಚ್ಚರಿಸುತ್ತಾ ಪುನಃ ನಮಸ್ಕರಿಸಿ, ಸರ್ವಭಾವಗಳಿಂದಲೂ ಮತ್ತೊಮ್ಮೆ ‘ಜನ್ಮಜನ್ಮದಲ್ಲಿಯೂ ಶಿವನಲ್ಲಿ ಭಕ್ತಿಯುಂಟಾಗಲಿ, ಹರನಲ್ಲಿ ಭಕ್ತಿಯು ಶಾಶ್ವತವಾಗಿರಲಿ. ಎಲೈ ಹರನೇ, ನನಗೆ ನೀನೊಬ್ಬನೇ ದಿಕ್ಕು ನೀನೇ ಕಾಪಾಡಬೇಕು’ ಎಂದು ಪ್ರಾರ್ಥಿಸಬೇಕು.

ಹೂಗಳನ್ನು ಕೈಲಿ ಹಿಡಿದು, ಬದ್ಧಾಂಜಲಿಯಾಗಿ ಮತ್ತೆ ಸರ್ವಸಿದ್ಧಿಗಳನ್ನೂ ಕೊಡುವ ಕರುಣಾಳುವಾದ ಆ ದೇವನನ್ನು ಪ್ರಾರ್ಥಿಸಬೇಕು. ಅತಿಶಯಿತವಾದ ಭಕ್ತಿಯಿಂದ, ಭಾವಪೂರಿತ ಗದ್ಗದ ಕಂಠದಿಂದ ಪೂಜಿಸಬೇಕು. ಪ್ರಮಥಾದಿ ಪರಿವಾರ ಮತ್ತು ದೇವತೆಗಳೊಡಗೂಡಿದ ಶಿವನನ್ನು ನಮಸ್ಕರಿಸಿ ಬಳಿಕ ಅಮಿತಾನಂದದಿಂದ ತನ್ನ ಕೆಲಸದಲ್ಲಿ ತೊಡಗಬೇಕು.

ಈ ರೀತಿಯಾಗಿ ಯಾರು ನಿತ್ಯವೂ ಕೇವಲ ಶಿವಭಕ್ತಿಯುಳ್ಳವನಾಗಿ ಪೂಜಿಸುತ್ತ ಬರುವರೋ, ಅವರಿಗೆ ಹೆಜ್ಜೆಹೆಜ್ಜೆಗೂ ಸಿದ್ಧಿಗಳೆಲ್ಲವೂ ಉಂಟಾಗುವುವು. ಅಲ್ಲದೆ, ರೋಗರುಜಿನಗಳು, ಸಂಕಟ, ಪೀಡೆ, ವ್ಯಸನ, ಹೃದಯದೌರ್ಬಲ್ಯ, ಮರೆ, ಮೋಸ, ವಂಚನೆ, ವಿಷ, ಮೊದಲಾದ ಎಷ್ಟು ಕಷ್ಟಗಳು ಸಂಭವಿಸಿದರೂ, ಆ ಸಂಕಟಗಳೆಲ್ಲವನ್ನೂ ಶಿವ ನಾಶಮಾಡುವನು. ಶಿವಪೂಜೆ ಮಾಡುವ ಮನುಷ್ಯನಿಗೆ ಸದಾ ಒಳ್ಳೆಯದೇ ಆಗುವುದು. ಶಂಕರನನ್ನು ಪೂಜಿಸುವವರು ಶುಕ್ಲಪಕ್ಷದ ಚಂದ್ರನಂತೆ ಗುಣಶಾಲಿಯಾಗಿ ದಿನೇ ದಿನೇ ಪ್ರವರ್ಧಮಾನರಾಗುವರು.

ನಾರದ, ಈ ರೀತಿ ಶಿವನ ಪೂಜಾವಿಧಾನವನ್ನು ನಿನಗೆ ವಿವರಿಸಿದುದಾಯಿತು. ಮತ್ತೇನನ್ನು ಕೇಳಬೇಕೆಂದಿರುವೆ, ಕೇಳು, ಹೇಳುವೆನು – ಎಂದು ಬ್ರಹ್ಮ ನುಡಿಯುವಲ್ಲಿಗೆ ಶಿವಪೂಜಾವಿಧಿವರ್ಣನ ಎಂಬ ಹನ್ನೊಂದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT