ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಸಂಧ್ಯೆ ತಪಸ್ಸಿಗೆ ವಸಿಷ್ಠನ ನೆರವು

ಭಾಗ 130
ಅಕ್ಷರ ಗಾತ್ರ

ಸಂಧ್ಯೆಯು ತಪಸ್ಸಿಗಾಗಿ ಚಂದ್ರಭಾಗಪರ್ವತಕ್ಕೆ ಹೋದುದನ್ನು ತಿಳಿದ ಬ್ರಹ್ಮ ತನ್ನ ಸಮೀಪದಲ್ಲಿಯೇ ಕುಳಿತಿದ್ದ ಪುತ್ರ ವಸಿಷ್ಠಮುನಿಗೆ ಹೇಳಿದ, ‘ಸಂಧ್ಯೆಯು ತಪಸ್ಸು ಮಾಡುವುದಕ್ಕಾಗಿ ಚಂದ್ರಭಾಗ ಪರ್ವತಕ್ಕೆ ಹೋಗಿದ್ದಾಳೆ. ಅವಳಿಗೆ ತಪಸ್ಸು ಮಾಡುವ ವಿಧಾನ ತಿಳಿ ಯದು. ನೀನು ಅಲ್ಲಿಗೆ ಹೋಗಿ ಆಕೆ ವಿಧಿವತ್ತಾಗಿ ತಪವನ್ನಾಚರಿಸಿ ತನ್ನ ಇಷ್ಟಾರ್ಥವನ್ನು ಪಡೆಯುವಂತೆ ಉಪದೇಶಿಸು. ನಿನ್ನ ರೂಪವನ್ನು ಹಿಂದೆ ಕಾಮವಿಕಾರವನ್ನು ಹೊಂದಿದಾಗ ನೋಡಿದ್ದಾಳೆ. ಈ ರೂಪದಿಂದಲೇ ಅವಳ ಬಳಿಗೆ ನೀನು ಹೋದರೆ ಆ ಸಂಧ್ಯೆಯು ಲಜ್ಜೆಗೊಂಡು ನಿನ್ನ ಬಳಿಗೆ ಬರಲಾರಳು. ಆದುದರಿಂದ ಬೇರೆ ರೂಪವನ್ನು ಧರಿಸು.’

‘ಹಿಂದೆ ನಾವೆಲ್ಲ ಸಂಧ್ಯೆಯನ್ನು ಕಾಮುಕರಾಗಿ ನೋಡಿದ್ದರಿಂದ ಸಂಧ್ಯೆಗೆ ತುಂಬಾ ಲಜ್ಜೆಯುಂಟಾಗಿತ್ತು. ಅದರ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರಾಣತ್ಯಾಗ ಮಾಡುತ್ತಿದ್ದಾಳೆ. ಅಲ್ಲದೆ, ಸಂಧ್ಯೆಯು ತಪಸ್ಸು ಮಾಡಿ, ಜನಗಳು ಹುಟ್ಟಿದೊಡನೆಯೇ ಕಾಮೇಚ್ಛೆಯುಳ್ಳವರಾಗಬಾರದೆಂಬ ಮರ್ಯಾದೆಯನ್ನು ಜಗತ್ತಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದಾಳೆ. ಅದಕ್ಕಾಗಿ ಆ ಸಾಧ್ವಿಗೆ ಅಗತ್ಯ ಮಾರ್ಗದರ್ಶನ ನೀಡು’ ಎಂದ ಬ್ರಹ್ಮ.

ತಂದೆ ಬ್ರಹ್ಮನ ಅಪ್ಪಣೆಯಂತೆ ವಸಿಷ್ಠ ಬ್ರಹ್ಮಚಾರಿರೂಪವನ್ನು ಧರಿಸಿ ಚಂದ್ರಭಾಗಗಿರಿಗೆ ಹೋದ. ಮಾನಸಸರೋವರದಂತಿದ್ದ ಬೃಹಲ್ಲೋಹಿತ ಎಂಬ ಸರೋವರತೀರದಲ್ಲಿ ಸಂಧ್ಯೆ ಇದ್ದಳು. ಕಮಲದಂತೆ ಪರಿಪೂರ್ಣವಾದ ಆ ಸರಸ್ಸು ಉದಯಿಸುತ್ತಿರುವ ಚಂದ್ರ ಮತ್ತು ನಕ್ಷತ್ರಗಳುಳ್ಳ ಪ್ರದೋಷಕಾಲದ ಆಕಾಶದಂತೆ ಕಾಣಿಸಿತು. ಆ ಬೃಹಲ್ಲೋಹಿತ ಸರಸ್ಸಿನಿಂದ ಹೊರಟ ಚಂದ್ರಭಾಗವೆಂಬ ನದಿಯು, ಆ ಪರ್ವತದ ದೊಡ್ಡ ತಪ್ಪಲಿನ ಮಾರ್ಗವಾಗಿ ಬಂದು, ದಕ್ಷಿಣ ಸಮುದ್ರದೆಡೆಗೆ ಹರಿಯುತ್ತಿತ್ತು. ಆ ಸರಸ್ಸಿನ ದಡದಲ್ಲಿ ನಿಂತಿದ್ದ ಸಂಧ್ಯೆ ಬಳಿ ಬಂದ ವಸಿಷ್ಠಮುನಿಯು ಹೀಗೆ ಪ್ರಶ್ನಿಸಿದ:

‘ಎಲೈ ಮಂಗಳಸ್ವರೂಪಳೇ! ಜನರ ಸುಳಿವೇ ಇಲ್ಲದಿರುವ ಈ ಪರ್ವತಕ್ಕೆ ಯಾವ ಕಾರ್ಯಾರ್ಥವಾಗಿ ಬಂದಿರುವೆ? ನೀನಾರ ಮಗಳು? ಪೂರ್ಣಚಂದ್ರನಂತಿರುವ ನಿನ್ನ ಮುಖವು ಕಾಂತಿಯಿಲ್ಲದೆ ಬಾಡಿರುವುದೇಕೆ?’ ಎಂದು ತನಗೇನೂ ಗೊತ್ತಿಲ್ಲದವನಂತೆ ಪೀಠಿಕೆ ಹಾಕಿದ. ಬ್ರಹ್ಮಚಾರಿವೇಷದಲ್ಲಿದ್ದ ವಸಿಷ್ಠಮುನಿಯನ್ನು ನೋಡಿದ ಸಂಧ್ಯೆ ಭಕ್ತಿಯಿಂದ ನಮಸ್ಕರಿಸಿ ‘ಓ ಬ್ರಾಹ್ಮಣೋತ್ತಮನೇ! ನಾನು ಬ್ರಹ್ಮನ ಮನಸ್ಸಿನಿಂದ ಜನಿಸಿದವಳು. ಸಂಧ್ಯೆ ಎಂದು ನನ್ನ ಹೆಸರು. ತಪಸ್ಸು ಮಾಡಲು ಜನಸಂಚಾರವಿಲ್ಲದ ಈ ಪರ್ವತಕ್ಕೆ ಬಂದಿರುವೆ. ತಪಸ್ಸು ಮಾಡುವ ಕ್ರಮ ನನಗೆ ತಿಳಿಯದು. ಅದೇ ಚಿಂತೆಯಿಂದ ಪರಿತಪಿಸುತ್ತಿರುವೆ. ನಿನಗೆ ಯುಕ್ತವಾಗಿ ತೋರಿದರೆ ತಪಸ್ಸನ್ನು ಮಾಡುವ ವಿಧಾನವನ್ನು ಉಪದೇಶಿಸು’ ಎಂದು ಕೋರಿದಳು.

‘ಎಲೈ ಸಂಧ್ಯೆ! ಮೊದಲಿಗೆ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳ ಬೇಕು. ಇಂದ್ರಿಯಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಮನಸ್ಸನ್ನು ಏಕಾಗ್ರಗೊಳಿಸಬೇಕು. ಜಿತೇಂದ್ರಿಯಳಾಗಿ ಭಕ್ತವತ್ಸಲನೂ, ಪರಮಪೂಜ್ಯ ನಾದಂತಹ ಶಂಕರನನ್ನು ಮನಸ್ಸಿನಲ್ಲಿ ಭಕ್ತಿಯಿಂದ ಧ್ಯಾನಮಾಡ ಬೇಕು. ಶಿವನೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಿಗೆ ಆದಿಕಾರಣನಾಗಿದ್ದಾನೆ. ಓಂ ನಮಶ್ಶಿವಾಯ ಓಂ ಎಂಬ ಮಂತ್ರ ಪಠಿಸು; ನಿನಗೆ ಬೇಕಾದುದೆಲ್ಲವೂ ಲಭಿಸುವುದು. ಸ್ನಾನ, ಶಿವಪೂಜೆ ಗಳೆಲ್ಲವನ್ನು ಮೌನವಾಗಿಯೇ ಮಾಡಬೇಕು. ಹಗಲುನ್ನು ಆರು ಭಾಗವಾಗಿ ವಿಭಾಗಿಸಬೇಕು. ಆರು ಭಾಗದ ಪ್ರತಿಯೊಂದು ಭಾಗಕ್ಕೆ ಷಷ್ಠ ಕಾಲ ಎಂದು ಹೆಸರು. ಮೊದಲಿನ ಎರಡು ಷಷ್ಠಕಾಲಗಳಲ್ಲಿ ಕ್ರಮವಾಗಿ ಎಲೆಗಳನ್ನೂ ಜಲವನ್ನೂ ಮಾತ್ರ ಆಹಾರವನ್ನಾಗಿ ತೆಗೆದುಕೊಳ್ಳಬೇಕು. ಮೂರನೇ ಉಪವಾಸವನ್ನೇ ಮಾಡಬೇಕು. ಈ ರೀತಿ ದಿನವನ್ನು ತಪಸ್ಸಿನ ಆಚರಣೆಯಿಂದ ಕಳೆದು, ಅಂತ್ಯದಲ್ಲಿ ಬಹಿರಂಗದ ವ್ಯಾಪಾರಾದಿಗಳಲ್ಲಿ ತೊಡಗಬಹುದು. ಹೀಗೆ ಮೌನ ತಪಸ್ಸನ್ನಾಚ ರಿಸಿದರೆ ಬ್ರಹ್ಮಚರ್ಯವು ಸಿದ್ಧಿಸುವುದು. ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದು. ಶಿವನು ಪ್ರಸನ್ನನಾಗಿ ನಿನ್ನ ಇಷ್ಟಾರ್ಥವನ್ನು ಈಡೇರಿಸಿ, ನಿನಗೆ ಸನ್ಮಂಗಳವನ್ನುಂಟು ಮಾಡುವನು’ ಎಂದು ಉಪದೇಶಿಸಿದ.

ವಸಿಷ್ಠಮುನಿಯು ಸಂಧ್ಯೆಗೆ ತಪಸ್ಸನ್ನಾಚರಿಸುವ ವಿಧಾನವನ್ನು ಉಪದೇಶಿಸಿ ಅವಳಿಂದ ಯೋಗ್ಯವಾಗಿ ಬೀಳ್ಕೊಂಡು ಅಲ್ಲಿಯೇ ಅಂತರ್ಧಾನನಾದ. ಹೀಗೆ ಬ್ರಹ್ಮ ತನ್ನ ಪುತ್ರ ನಾರದನಿಗೆ ಸಂಧ್ಯಾದೇವಿ ಚರಿತ್ರೆ ಹೇಳುವಲ್ಲಿಗೆ ಶಿವಪುರಾಣದಲ್ಲಿನ ರುದ್ರಸಂಹಿತೆಯ ಸತೀಖಂಡದಲ್ಲಿ ಐದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT