ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ನೈವೇದ್ಯ ಕದ್ದ ಗುಣನಿಧಿ

ಭಾಗ 113
ಅಕ್ಷರ ಗಾತ್ರ

ತನ್ನ ಮನೆಯಲ್ಲಿ ನಡೆದ ಹಗರಣವೆಲ್ಲವನ್ನೂ ಕೇಳಿದ ಯಜ್ಞದತ್ತನ ಮಗನಾದ ಗುಣನಿಧಿ, ತನ್ನ ಹಿಂದಿನ ಬಾಳನ್ನು ನೆನೆದು ರೋದಿಸುತ್ತಾನೆ. ತನ್ನ ಹೀನ ಬದುಕನ್ನು ಹೀಯಾಳಿಸಿಕೊಂಡು ಯಾವುದೋ ಒಂದು ದಿಕ್ಕನ್ನು ಹಿಡಿದು ದೇಶಾಂತರ ಹೋಗುತ್ತಾನೆ. ಮನೆಮಠಗಳಿಲ್ಲದೆ, ತಂದೆತಾಯಿಗಳಿಂದ ಪರಿತ್ಯಕ್ತನಾದ ಗುಣನಿಧಿ, ಹುಟ್ಟ ಊರನ್ನು ಬಿಟ್ಟು ಸ್ವಲ್ಪದೂರ ಹೋದಮೇಲೆ, ಉತ್ಸಾಹಹೀನನಾಗಿ ಆಯಾಸದಿಂದ ಅಲ್ಲಿಯೇ ನಿಂತುಬಿಡುತ್ತಾನೆ. ‘ನಾನೆಲ್ಲಿಗೆ ಹೋಗಲಿ? ಏನು ಮಾಡಲಿ? ನಾನೋ ವಿದ್ಯೆಯನ್ನು ಕಲಿತವನಲ್ಲ. ನನ್ನ ಬಳಿಯಲ್ಲಿ ಹೆಚ್ಚು ಹಣವೂ ಇಲ್ಲ’

ದೇಶಾಂತರ ಹೋಗುವಾಗ ಖರ್ಚಿಗೆ ಹಣವಿರಬೇಕು. ಹಾಗಂತ ತನ್ನ ಬಳಿ ಹಣವಿದ್ದರೆ ಕಳ್ಳರು ಕಸಿದುಕೊಳ್ಳುವ ಅಪಾಯವಿದೆ. ಅಯ್ಯೋ, ಹಣ ಇದ್ದರೂ ಕಷ್ಟ, ಇಲ್ಲದಿದ್ದರೂ ಕಷ್ಟ. ಎಲ್ಲ ಕಡೆಯೂ ಈ ಪ್ರಪಂಚ ವಿಘ್ನಗಳಿಂದ ತುಂಬಿಹೋಗಿದೆ ಅಂತ ಅನಿಸುತ್ತದೆ ಗುಣನಿಧಿಗೆ. ಸೋಮಯಾಜಿಗಳ ವಂಶದಲ್ಲಿ ಹುಟ್ಟಿದ್ದರೂ, ತನಗೇಕೆ ಜೂಜು ಮುಂತಾದ ವ್ಯಸನಗಳು ಹತ್ತಿಕೊಂಡವು? ಆಹಾ! ವಿಧಿಯ ಬಲವೇ ಬಲವು. ಕರ್ಮಗಳನ್ನು ಅದು ನಡೆಸದೇ ಬಿಡದು. ಅದನ್ನು ಅನುಭವಿಸಲೇ ಬೇಕು ಅಂತ ಪರಿತಪಿಸುತ್ತಾನೆ.

‘ನನಗೆ ಭಿಕ್ಷೆ ಬೇಡುವುದೂ ಬರುವುದಿಲ್ಲ. ಯಾರ ಪರಿಚಯವೂ ಇಲ್ಲ. ನನ್ನ ಬಳಿ ಅಲ್ಪಸ್ವಲ್ಪ ಹಣವೂ ಇಲ್ಲ. ನನಗೆ ಮುಂದೇನು ಗತಿ? ಸೂರ್ಯನು ಹುಟ್ಟುವುದಕ್ಕಿಂತ ಮುಂಚೆಯೇ ನನ್ನ ತಾಯಿ ರುಚಿಕರವಾದ ತಿಂಡಿಗಳನ್ನು ಮಾಡಿಕೊಡುತ್ತಿದ್ದಳು. ಈಗ ಯಾರನ್ನೂ ಕೇಳಲಿ? ಇಲ್ಲಿ ನನ್ನ ತಾಯಿ ಇಲ್ಲವಲ್ಲ’ ಎಂದು ಗೋಳಾಡುತ್ತಾನೆ. ಅತಿ ದೈನ್ಯದಿಂದ ಅಳುತ್ತಾ ಒಂದು ಮರದ ಕೆಳಗೆ ಕುಳಿತುಕೊಂಡು ಗುಣನಿಧಿ ಯೋಚಿಸುತ್ತಿರುವಂತೆಯೇ ಸೂರ್ಯನು ಅಸ್ತಮಾನವಾದ.

ಇದೇ ಸಮಯದಲ್ಲಿ ಶಿವನ ಭಕ್ತರ್ನೋವ, ಆ ದಿನ ಶಿವರಾತ್ರಿಯಾದುದರಿಂದ ಶಿವನನ್ನು ಪೂಜಿಸಬೇಕೆಂದು ಊರಿನ ಹೊರಗೆ ಇರುವ ಶಿವದೇವಾಲಯಕ್ಕೆ ತನ್ನ ಬಂಧು-ಬಳಗದವರೊಡನೆ ಹೋಗುತ್ತಿದ್ದ. ಆ ಶಿವಭಕ್ತ ತಾನು ಉಪವಾಸವಿದ್ದರೂ, ಶಿವನ ನೈವೇದ್ಯಕ್ಕಾಗಿ ನಾನಾ ವಿಧವಾದ ಭಕ್ಷ್ಯಭೋಜ್ಯಾದಿಗಳನ್ನು ಕೊಂಡೊಯ್ಯುತ್ತಿದ್ದ. ಪಕ್ವಾನ್ನಗಳ ವಾಸನೆ ಗುಣನಿಧಿ ಮೂಗಿಗೆ ಬಡಿದಿದ್ದರಿಂದ ಶಿವಭಕ್ತನನ್ನು ಹಿಂಬಾಲಿಸಿ ಶಿವದೇಗುಲಕ್ಕೆ ಬಂದ. ಶಿವಭಕ್ತ ತಾನು ತಂದಿದ್ದ ತಿಂಡಿ-ತೀರ್ಥಗಳನ್ನು ನೈವೇದ್ಯಕ್ಕಿಟ್ಟು ಶಿವನನ್ನು ಭಕ್ತಿಯಿಂದ ಪೂಜಿಸಿದ.

ಆ ರಾತ್ರಿ ಶಿವನ ಭಕ್ತರೆಲ್ಲರೂ ನಿದ್ರೆಗೆ ಜಾರಿದ ಮೇಲೆ, ತಾನು ನೈವೇದ್ಯವನ್ನೆಲ್ಲಾ ತಿಂದು ಬಿಡಬೇಕು ಅಂತ ಯೋಚಿಸಿದ ಗುಣನಿಧಿ ದೇವಾಲಯದ ಬಾಗಿಲಲ್ಲಿಯೇ ಕಾದು ಕುಳಿತಿದ್ದ. ಶಿವಭಕ್ತನು ಶಿವನಿಗೆ ಮಾಡುತ್ತಿದ್ದ ಮಹಾಪೂಜೆ, ನೃತ್ಯಗೀತಾದಿಗಳನ್ನು ನೋಡಿದ. ಎಲ್ಲಾ ಪೂಜಾವಿಧಿಗಳು ನೆರವೇರಿದ ನಂತರ ಭಕ್ತರೆಲ್ಲರೂ ಶಿವಾಲಯದ ಪ್ರಾಂಗಣದಲ್ಲೆ ಮಲಗಿದರು. ಭಕ್ತರೆಲ್ಲ ಗಾಢವಾದ ನಿದ್ದೆ ಮಾಡುತ್ತಿದ್ದಾಗ ಗುಣನಿಧಿಯು ನೈವೇದ್ಯವನ್ನು ತೆಗೆದುಕೊಳ್ಳಲು ಶಿವನ ಲಿಂಗವಿದ್ದ ಗರ್ಭಗೃಹ ಪ್ರವೇಶಿಸಿದ. ಆಗ ಅಲ್ಲಿದ್ದ ದೀಪವು ಮಂಕಾಗಿದ್ದರಿಂದ ಪಕ್ವಾನ್ನ ಎಲ್ಲಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಇದಕ್ಕಾಗಿ ತನ್ನ ಬಟ್ಟೆಯ ಅಂಚಿನಿಂದಲೇ ಬತ್ತಿಯನ್ನು ಮಾಡಿ ದೀಪವನ್ನು ಬೆಳಗಿಸಿದ.
ಆಗ ಗುಣನಿಧಿಗೆ ನಿವೇದಿತವಾಗಿದ್ದ ಪಕ್ವಾನ್ನ ಕಂಡಿತು. ಅದನ್ನು ಆತುರದಿಂದ ತೆಗೆದುಕೊಂಡ ಗುಣನಿಧಿ, ಅಲ್ಲಿಂದ ಬೇಗಬೇಗನೆ ಹೊರಗಡೆ ಹೋಗುತ್ತಿದ್ದಾಗ ಮಲಗಿದ್ದವನೊಬ್ಬನನ್ನು ತುಳಿದುಬಿಟ್ಟ. ಎಚ್ಚೆತ್ತವನು ‘ಯಾರಿವನು? ಆತುರದಿಂದ ಓಡಿಹೋಗುತ್ತಿದ್ದಾನೆ, ಹಿಡಿಯಿರಿ’ ಎಂದು ಗಟ್ಟಿಯಾಗಿ ಕಿರಿಚಿಕೊಂಡ. ಕೂಗನ್ನು ಕೇಳಿದ ಊರಿನ ಕಾವಲುಗಾರರು ಪಕ್ವಾನ್ನ ಎತ್ತಿಕೊಂಡು ಓಡುತ್ತಿದ್ದ ಗುಣನಿಧಿಯ ಬೆನ್ನತ್ತಿದರು. ಕತ್ತಲು ಇದ್ದಿದ್ದರಿಂದ ಕಣ್ಣು ಕಾಣದೆ ತಡವರಿಸಿ ಓಡುತ್ತಿದ್ದ ಗುಣನಿಧಿಯನ್ನು ಕಾವಲುಭಟರು ಕ್ಷಣಮಾತ್ರದಲ್ಲಿ ಹಿಡಿದು, ಅಲ್ಲೇ ಅವನನ್ನು ಕೊಂದುಬಿಟ್ಟರು.

ಮೃತನಾದ ಗುಣನಿಧಿಯನ್ನು ನರಕಕ್ಕೆ ಕೊಂಡೊಯ್ಯಲು ಯಮನಭಟರು ಬಂದರು. ಅವನನ್ನು ಯಮನ ಪಟ್ಟಣವಾದ ಸಂಯಮಕ್ಕೆ ಕೊಂಡೊಯ್ಯಬೇಕೆಂದು ಹಗ್ಗದಿಂದ ಬಿಗಿದರು. ಅಷ್ಟರಲ್ಲಿಯೇ, ಕಿರುಗೆಜ್ಜೆಗಳ ಹಾರಗಳನ್ನು ಧರಿಸಿ, ಶೂಲವನ್ನು ಕೈಯಲ್ಲಿಡಿದಿರುವ ಶಿವನ ಕಿಂಕರರು ದಿವ್ಯವಾದ ವಿಮಾನದೊಂದಿಗೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT