ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಅನಿಶ್ಚಿತತೆಯಿಂದ ಆನಂದದೆಡೆಗೆ

ಜೀವನ- ಸೌಂದರ್ಯ
Last Updated 10 ಜೂನ್ 2020, 19:30 IST
ಅಕ್ಷರ ಗಾತ್ರ

ಅಗಾಧವಾದ ಜಲರಾಶಿಯಲ್ಲಿ ಕೊಚ್ಚಿಹೋಗುತ್ತಿರುವವರಿಗೆ ಒಂದು ಹುಲ್ಲುಕಡ್ಡಿಯೂ ಆಸರೆಯಾಗಬಹುದು. ಹಾಗೆ ಯಾವುದನ್ನಾದರೂ ನೆಚ್ಚಿಕೊಂಡು, ಗಟ್ಟಿಯಾಗಿ ಹಿಡಿದುಕೊಂಡು, ಯಾವುದಕ್ಕಾದರೂ ನೇತುಹಾಕಿಕೊಂಡೇ ಬದುಕುವುದು ಮನುಷ್ಯರ ಜಾಯಮಾನವಿರಬಹುದು. ಯಾವುದನ್ನಾದರೂ ಆಧಾರಿಸಿಯೇ ಬದುಕುವುದು ಅನಿವಾರ್ಯವೇ? ನಮ್ಮ ನಮ್ಮ ಜೀವನದಲ್ಲಿ ಹಾಗೆ ಆಸರೆಯ ಭ್ರಮೆ ನೀಡುವ ‘ಹುಲ್ಲುಕಡ್ಡಿಗಳು’ ಯಾವುವು?

ನಮಗೆ ಯಾವುದಾದರೂ ಭದ್ರತೆಯ ಆಶ್ರಯ ಬದುಕಿಗೆ ಬೇಕೇ ಬೇಕು; ಬಹುಶಃ ಅಂತಹ ಭದ್ರ ನೆಲೆಗಳ ಹುಡುಕಾಟವೇ ಬದುಕಿನ ಬಹಳಷ್ಟು ಸಮಯ, ಶಕ್ತಿಯನ್ನು ಕಸಿದುಕೊಂಡುಬಿಡುತ್ತದೆ. ಸ್ಥಿರತೆ ಇಲ್ಲದೆ ಬದುಕುವುದು ಹೇಗೆ? ಮುಂದೇನಾಗುವುದೋ ಎಂಬ ಅನಿಶ್ಚಿತತೆ ಆತಂಕವನ್ನಲ್ಲದೆ, ‘ಮುಂದೇನಾಗುವುದೋ ಗೊತ್ತೇ ಇಲ್ಲ’ ಎಂಬ ಗೊಂದಲದಲ್ಲಿ ನಿಷ್ಕ್ರಿಯತೆಯನ್ನು ತಂದುಕೊಡಬಹುದು.

ನಮ್ಮ ಬದುಕನ್ನು ವಿನ್ಯಾಸಗೊಳಿಸಿಕೊಳ್ಳುವುದರಲ್ಲಿ ಭಯದ ಪಾತ್ರ ಎಷ್ಟು? ರೋಗದ ಭಯ, ಸಾವಿನ ಭಯ, ಬಡತನದ ಭಯ, ಒಂಟಿತನದ ಭಯ, ದುಃಖದ ಭಯ – ಇನ್ನೂ ಹಲವಾರು ರೀತಿಯ ಭಯಗಳಿಲ್ಲದೆ ಇದ್ದಾಗ ನಾವು ತೆಗೆದುಕೊಳ್ಳುವ ನಿರ್ಧಾರ, ಮಾಡುವ ಕೆಲಸಗಳು ಭಯದ ನೆರಳಲ್ಲಿ ನಾವು ಕೈಗೊಳ್ಳುವ ನಿರ್ಧಾರಗಳಿಗಿಂತ ತುಂಬಾ ಭಿನ್ನವಾದವು. ಭಯಗಳೇ ಇಲ್ಲದೆ ಹೋಗಿದ್ದರೆ ಮಾನವಸಮಾಜವೇ ಬೇರೆ ರೀತಿಯಲ್ಲಿ ರಚನೆಗೊಳ್ಳುತ್ತಿದ್ದಿರಬಹುದು.

ಭಯ ಕೇವಲ ಮಾನವ ಸಮಾಜಕ್ಕಷ್ಟೇ ಸೀಮಿತವಾದುದಲ್ಲ; ಪ್ರಾಣಿ ಸಂಕುಲವೂ ಸಾವಿನ, ಶತ್ರುವಿನ, ಅಗಲಿಕೆಯ ಭಯದ ನೆರಳಲ್ಲೇ ಬಾಳುತ್ತದೆ. ಜೀವಕ್ಕೆ ಸಾವಿನ ಮತ್ತು ಸಾವಿನಷ್ಟೇ ತೀವ್ರವಾದ ಭಯದ ನಂಟು ನಿಶ್ಚಿತ. ಒಂಟಿತನ, ಅವಮಾನ, ತಿರಸ್ಕಾರ, ನಿರ್ಲಕ್ಷ್ಯ, ಅಸಹಾಯಕತೆ, ಪರಾಧೀನತೆ, ಎಲ್ಲ ಕಡೆಯಿಂದಲೂ ಎದುರಾಗುವ ಸೋಲು – ಇನ್ನೂ ಹಲವಾರು ಭಯಗಳು ಸಾವಿನ ಭಯದಷ್ಟೇ ಗೆಲ್ಲಲ್ಲು ಅಸಾಧ್ಯವೇನೋ ಎನಿಸುವಷ್ಟು ಗಾಢವಾದ್ದು.

ಇಷ್ಟೊಂದು ಭಯದ ಭಾರದಲ್ಲೂ ನಲುಗಿಹೋಗದೆ, ಕುಸಿದುಬೀಳದೆ, ದಡ ಸೇರಬೇಕೆಂಬ ಆಸೆ ಬಿಟ್ಟು ಭಯದ ಅಬ್ಬರದ ಅಲೆಗಳ ಮೇಲೇ ವಿರಮಿಸುವುದು ಕಲಿತರೆ ಹೇಗೆ? ಬಿರುಗಾಳಿ ನಮ್ಮನ್ನು ಚೆಲ್ಲಾಪಿಲ್ಲಿಯಾಗಿಸುತ್ತಿರುವಾಗ ಗಟ್ಟಿ ನೆಲದ ಮೇಲೆ ಕಾಲೂರಬೇಕೆಂಬ ಹಪಾಹಪಿಯನ್ನು ತೊರೆದು ಹಾರಾಟದ ಆನಂದ ಅನುಭವಿಸುವಂತಾಗಿಬಿಟ್ಟರೆ? ಯಾಕೆ ಅದು ಅಷ್ಟು ಸರಳವಾಗಿಲ್ಲ; ಕಾರಣ ನಮ್ಮ ಆ ‘ಏನನ್ನಾದರೂ ಆಸರೆಗಾಗಿ ಗಟ್ಟಿಯಾಗಿ ಹಿಡಿದುಕೊಂಡು ಬಿಡುವ ಸ್ವಭಾವ’. ಅದನ್ನು ಅಹಂ ಎನ್ನಿ, ಬದುಕಿನ ಅರ್ಥ–ಉದ್ದೇಶಗಳೆನ್ನಿ, ಸಾಧನೆ ಎನ್ನಿರಿ ಅಥವಾ ಭದ್ರತೆಗಾಗಿ ನಮ್ಮ ಸುತ್ತ ನಾವೇ ಕಟ್ಟಿಕೊಂಡ ಗೋಡೆ – ಯಾವ ಹೆಸರಿನಿಂದಲಾದರೂ ಕರೆಯಿರಿ, ಒಟ್ಟಿನಲ್ಲಿ ನಿಶ್ಚಿತ ಐಡೆಂಟಿಟಿಗಳಿಗೆ ಜೋತುಬೀಳುವುದು, ಇದು ನಮ್ಮ ಜೀವನವನ್ನು ಒಂದು ಸಾಂದ್ರವಾದ ಅನುಭವವಾಗಿ ಸ್ವೀಕರಿಸುವುದಕ್ಕೆ ಅಡ್ಡಿಯಾಗಿ ನಿಂತಿದೆ.

ಅನಿಶ್ಚಿತತೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಆಸರೆಯನ್ನು ಅರಸುವುದು, ಆಸರೆಯನ್ನು ಹಿಡಿದುಕೊಂಡು ಜೀವನಾನುಭವಕ್ಕೆ ವಿಮುಖವಾಗುವುದು, ಮತ್ತಷ್ಟು ಭದ್ರತೆಗಾಗಿ ಕಾತರಿಸುವುದು, ಭ್ರಮನಿರಸನಗೊಳ್ಳುವುದು. ಇದು ಹೀಗೆ ಸಾಗಿ ನಮ್ಮನ್ನು ಬಿಡುಗಡೆಯೇ ಇರದ ಸುಳಿಯಲ್ಲಿ ಬಂಧಿಸಿಟ್ಟಿರುತ್ತದೆ.

ಅನಿಶ್ಚಿತತೆಯನ್ನು ನಿರಾಕರಿಸುವುದೇ ದುಃಖ, ಬದುಕಿನ ಮೂಲಭೂತ ಆಧಾರರಹಿತತೆಯನ್ನು, ಪ್ರತಿಕ್ಷಣ ಬದಲಾಗುವ ಅದರ ಗುಣವನ್ನು ಗ್ರಹಿಸಿ ಒಪ್ಪುವುದೇ ದುಃಖನಿವೃತ್ತಿಯ ಮರ್ಮ ಎನಿಸುತ್ತದೆ. ಭಯಮೂಲವಾದ, ನಮ್ಮನ್ನು ನಿಶ್ಚೇಷ್ಠಿತಗೊಳಿಸುವ ಐಡೆಂಟಿಟಿಯನ್ನು ಮೀರಿ ಬದುಕನ್ನು ನೋಡುವುದೇ ಎಚ್ಚೆತ್ತುಕೊಳ್ಳುವ ಮಾರ್ಗ. ಸುಖ, ಸೌಕರ್ಯಗಳನ್ನಷ್ಟೇ ಅರಸುವ ಸಂಕಟಗಳನ್ನು ತಪ್ಪಿಸಲು ಹೆಣಗಾಡುವ ನಮ್ಮ ಪ್ರವೃತ್ತಿಯನ್ನು ಸ್ವಲ್ಪಕಾಲ ಪಕ್ಕಕ್ಕಿಟ್ಟು ಎಲ್ಲ ಅನುಭವಗಳೂ ನಮ್ಮನ್ನು ಯಾವುದರೆಡೆಗೊ ಪ್ರಚೋದಿಸುತ್ತಿರಬಹುದು ಎಂಬ ಭಾವನೆ ನಮಗೆ ಉಂಟಾದಾಗ ವಿನಾ ಕಾರಣ ಯಾವುಯಾವುದರಿಂದಲೋ ತಪ್ಪಿಸಿಕೊಂಡು ಓಡುವ ಆಯಾಸದಿಂದ ಪಾರಾಗಬಹುದು.

ಈ ಕ್ಷಣ ನಾವು ನಮ್ಮ ಮನೆಯಲ್ಲಿರಬಹುದು, ಕಷ್ಟದ ಪರಿಸ್ಥಿತಿಗಳನ್ನೆದುರಿಸುತ್ತಿರಬಹುದು, ಏನನ್ನಾದರೂ ಕಳೆದುಕೊಳ್ಳುವ ಭಯದಲ್ಲಿ ನಿರಾಶೆಯ ಕತ್ತಲಕೋಣೆ ಸೇರಿರಬಹುದು, ಏನೋ ಘಟಿಸಬಹುದೆಂಬ ನಿರೀಕ್ಷೆಯಲ್ಲಿರಬಹುದು ಅಥವಾ ಸಂತೋಷವಾಗಿ ಕಾಲ ಕಳೆಯುತ್ತಲೂ ಇರಬಹುದು; ಒಟ್ಟಾರೆ ನಾವು ಎಲ್ಲಿ ಹೇಗಿದ್ದೇವೋ, ಏನಾಗಿ, ಏನನ್ನು ಅನುಭವಿಸುತ್ತಿದ್ದೇವೋ ಅದೇ ನಮ್ಮನ್ನು ‘ಎಚ್ಚರಗೊಳಿಸಿ’ ನಮ್ಮನ್ನು ನಮಗೇ ತೋರುವ ಸಲುವಾಗಿ ನಮ್ಮ ಬದುಕೇ ಅಣಿಮಾಡಿಟ್ಟ ಸಂದರ್ಭ. ಇದು ವಿನಾ ಕಾರಣ ಒದಗಿದ್ದಲ್ಲ, ನಮಗೆ ಈ ಸಮಯದಲ್ಲಿ ಅವಶ್ಯ ಬೇಕಾದ ಏನನ್ನೋ ಗಳಿಸಿಕೊಡಲು ಅವಿರ್ಭವಿಸಿದ್ದು ಎಂಬ ಪ್ರಜ್ಞೆ ನಮ್ಮನ್ನು ಯಾವುದು ಜೀವನದಲ್ಲಿ ಮುಖ್ಯವೋ ಅದರೆಡೆಗೆ ಗಮನ ಕೊಡಲು ಪ್ರೇರೇಪಿಸುತ್ತದೆ. ಅನಿಶ್ಚಿತತೆ ಆತಂಕವಲ್ಲ, ಆನಂದದ ಕೀಲಿಕೈಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT