ಮಂಗಳವಾರ, ಏಪ್ರಿಲ್ 7, 2020
19 °C

ಗುಡಿಯ ಕಟ್ಟಿರಣ್ಣ...

ಯಶಸ್ವಿನಿ ಶರ್ಮ Updated:

ಅಕ್ಷರ ಗಾತ್ರ : | |

Prajavani

ದೇವಸ್ಥಾನಗಳ ನಿರ್ಮಾಣಕ್ಕೆ ಮೊದಲು ಜನರು ಹೋಮ, ಹವನಗಳಿಂದ ಪಂಚಭೂತಗಳನ್ನು ವೈದಿಕ ವಿಧಿ–ವಿಧಾನಗಳಿಂದ ಪೂಜಿಸುತ್ತಿದ್ದರು. ವ್ಯಕ್ತಿಗತ ರೂಪದಲ್ಲಿ ದೇವರನ್ನು ಪ್ರಾರ್ಥಿಸುವ ಆಚರಣೆ ಪ್ರಚಲಿತಕ್ಕೆ ಬಂದ ಹಾಗೆ ದೇವರ ಮೂರ್ತಿಯನ್ನು, ದೇವಸ್ಥಾನವನ್ನು ಸ್ಥಾಪಿಸುವ ಆಗಮಗಳೂ ವಾಸ್ತುಶಿಲ್ಪಶಾಸ್ತ್ರಗಳು ರೂಪಗೊಂಡವು.

ದೇವಸ್ಥಾನಗಳಲ್ಲಿ ಪ್ರಮುಖವಾಗಿ ಶೈವಾಗಮ, ಪಾಂಚರಾತ್ರ ಹಾಗೂ ವೈಖಾನಸ ಆಗಮಗಳನ್ನು ಅನುಸರಿಸಲಾಗುತ್ತದೆ. ಆಗಮಶಾಸ್ತ್ರಗಳು ಧಾರ್ಮಿಕ ವಿಧಿ–ವಿಧಾನಗಳ ಹಾದಿಯನ್ನು ಹಾಕಿದರೆ, ವಾಸ್ತು–ಶಿಲ್ಪಶಾಸ್ತ್ರಗಳು ದೇವಸ್ಥಾನದ ವಿನ್ಯಾಸದ ವಿಧಿ–ವಿಧಾನಗಳನ್ನು ನೀಡುತ್ತವೆ. ಆದರೆ ಈ ಶಾಸ್ತ್ರಗಳನ್ನು ಓದುವವರು ವಾಸ್ತುಕಲಾಶಾಸ್ತ್ರದಲ್ಲಿ ನುರಿತವರೆಂದು ಭಾವಿಸಿ ನಿಯಮಗಳನ್ನು ಚರ್ಚಿಸುತ್ತವೆ. ಇವುಗಳು ಪಾಕವಿಧಾನದಂತಲ್ಲ, ಆ ಒಂದು ಸಂಪ್ರದಾಯದಲ್ಲಿ ಕಲಿತು ಬಂದಿರುವವರಿಗೆ ಒಲಿಯುವ ತತ್ವಗಳು. ಹಾಗೆ ಕಲಿಯಲು ಸಾಧ್ಯವಾಗದೆ ಇದ್ದಲ್ಲಿ ಪ್ರಾಚೀನ ದೇವಸ್ಥಾನಗಳ ಅಧ್ಯಯನವನ್ನು ದೀರ್ಘಕಾಲ ಮಾಡಿ ಅದರ ಸಾರವನ್ನು ಗ್ರಹಿಸಿದವರಿಗೆ ಈ ಶಾಸ್ತ್ರಗಳ ಆಂತರಿಕ ಗುಟ್ಟುಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ.

ಈಗ ನಮ್ಮ ಅರಿವಿಗೆ ಬಂದಿರುವ ಶಾಸ್ತ್ರಗಳಲ್ಲಿ ಹನ್ನೊಂದನೆಯ ಶತಮಾನದಲ್ಲಿ ಭೋಜದೇವನಿಂದ ರಚಿಸಲ್ಪಟ್ಟ ‘ಸಮರಾಂಗಣ ಸೂತ್ರಧಾರ’, ಹನ್ನೆರಡನೆಯ ಶತಮಾನದಲ್ಲಿ ಭುವನದೇವನಿಂದ ರಚಿಸಲ್ಪಟ್ಟ ‘ಅಪರಾಜಿತಪ್ರಚ್ಛ’, ‘ವಿಷ್ಣುಧರ್ಮೋತ್ತರಪುರಾಣ’, ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ರಾಜನಾದ ಮೂರನೆಯ ಸೋಮೇಶ್ವರನಿಂದ ರಚಿಸಲ್ಪಟ್ಟ ‘ಅಭಿಲಾಷಿತಾರ್ಥಚಿಂತಾಮಣಿ’ (ಮಾನಸೋಲ್ಲಾಸ), ಸೋಂಪುರರ ‘ಶಿಲ್ಪರತ್ನಾಕರ’, ‘ನಾರದ ಶಿಲ್ಪಶಾಸ್ತ್ರ’ ಹಾಗೂ ‘ಕಾಶ್ಯಪ ಶಿಲ್ಪಶಾಸ್ತ್ರ’ (ಮಾರಿಚ್ಯಸಂಹಿತ) ಮುಖ್ಯವಾದವು. ಆದರೆ ಕೆಲವು ಶೈಲಿಗಳ ಶಿಲ್ಪಶಾಸ್ತ್ರಗಳು ನಮಗೆ ದೊರಕಿಲ್ಲ, ಉದಾಹರಣೆಗೆ ಗಂಗರ ಶೈಲಿ, ಹೊಯ್ಸಳರ ಶೈಲಿ. ಈ ಶೈಲಿಗಳಲ್ಲಿ ದೇವಸ್ಥಾನವನ್ನು ರಚಿಸಬೇಕಾದಲ್ಲಿ ಅದೇ ಶೈಲಿಯಲ್ಲಿ ನಿರ್ಮಾಣವಾದ ವಿಭಿನ್ನ ದೇವಸ್ಥಾನಗಳನ್ನು ಅಧ್ಯಯನ ಮಾಡಿ ಅದರ ವಿನ್ಯಾಸ ಸಾಧಿಸಬೇಕು.

ದೇವಸ್ಥಾನದ ವಿನ್ಯಾಸ ಸಂಪೂರ್ಣವಾದ ಮೇಲೆ ಅದರ ನಿರ್ಮಾಣ ತಕ್ಷಣ ನಡೆಯುವುದಿಲ್ಲ. ಅದನ್ನು ನಿರ್ಮಿಸುವ ಸ್ಥಳದ ಪರಿಶೀಲನೆ ಹಾಗೂ ಇತರ ಧಾರ್ಮಿಕ ವಿಧಿಗಳು ನಡೆಯಬೇಕು. ಇಡೀ ಪ್ರದೇಶದ ಪರಿಶೀಲನೆ ಕೈಗೊಂಡು ಆಗಮಶಾಸ್ತ್ರ ಪಂಡಿತರು ಗರ್ಭಗೃಹವನ್ನು ಸ್ಥಾಪಿಸಬೇಕಾದ ಸ್ಥಳವನ್ನು ಸೂಚಿಸುತ್ತಾರೆ. ತದನಂತರ ಶಂಕು ಸ್ಥಾಪನೆ ಮಾಡಿ, ಬ್ರಹ್ಮಸೂತ್ರ ನಡೆಸಿ ದೇವಸ್ಥಾನದ ಪೂರ್ವಾಭಿಮುಖವನ್ನು ನಿರ್ಣಯಿಸಲಾಗುತ್ತದೆ. ಆ ಭೂಮಿಯಲ್ಲಿ ಉತ್ಖನನ ಮಾಡಿ ನವಧಾನ್ಯಗಳ ಬಿತ್ತನೆಯನ್ನು ಒಳ್ಳೆಯ ರಾಸುಗಳನ್ನು ಉಪಯೋಗಿಸಿ ಮಾಡುತ್ತಾರೆ. ಅದು ಬೆಳದು ನಿಂತ ಬಳಿಕ ಅದನ್ನು ಹಸುಗಳಿಗೆ ಮೇವಾಗಿ ನೀಡಲಾಗುತ್ತದೆ. ಇದಾದ ಬಳಿಕ ಶಿಲಾನ್ಯಾಸ ಕಾರ್ಯ ನೆರವೇರುತ್ತದೆ. ನಾಲ್ಕು ಕಲ್ಲುಗಳನ್ನು ನಾಲ್ಕು ವೇದಗಳ ರೂಪದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಅವುಗಳನ್ನು ಮೊದಲಿಗೆ ಶಿಲಾನ್ಯಾಸ ಮಾಡಿ, ನಂತರ ಗರ್ಭಗೃಹದ ಅಡಿಪಾಯದ ಮೊದಲ ಕಲ್ಲನ್ನು ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಲಾಗುತ್ತದೆ.

ಅಡಿಪಾಯ ಸಿದ್ಧವಾದ ಬಳಿಕ ಗರ್ಭನ್ಯಾಸ ಮಾಡಿ ಮೂರ್ತಿಯ ಕೆತ್ತನೆಯ ಕಾರ್ಯ ಶುರುಮಾಡುತ್ತಾರೆ. ವಿನ್ಯಾಸದಂತೆ ಮೊದಲ ಪಟ್ಟಿಕೆ ಅಥವಾ ಅಧಿಷ್ಠಾನದ ಮೊದಲ ಭಾಗವನ್ನು ಈಶಾನ್ಯದಿಂದ ಪ್ರಾರಂಭಿಸಿ, ಅದನ್ನು ಕಟ್ಟಿದ ಮೇಲೆ ಕಂಭಗಳು, ಗೋಡೆಗಳನ್ನು ಸುಣ್ಣದ ಗಾರೆಯಲ್ಲಿ ಕಟ್ಟಿ ಗರ್ಭಗೃಹ, ಮಂಟಪ ಇತ್ಯಾದಿ ಭಾಗಗಳನ್ನು ವಿನ್ಯಾಸಕ್ಕೆ ಅನುಗುಣವಾಗಿ ನಿರ್ಮಿಸಿ, ತದನಂತರ ವಿಮಾನಶಿಖರವನ್ನು ಗರ್ಭಗೃಹದ ಮೇಲೆ ನಿರ್ಮಿಸುತ್ತಾರೆ. ಗರ್ಭಗೃಹ ರೂಪುಗೊಂಡಂತೆ ದೇವರ ಮೂರ್ತಿಯ ಸ್ಥಾಪನೆಯಾಗುತ್ತದೆ. ದೇವಸ್ಥಾನದ ಪ್ರಕಾರವನ್ನು ನಿರ್ಮಿಸಿ ಪೂರ್ವ ದಿಕ್ಕಿನಲ್ಲಿ ರಾಜಗೋಪುರವನ್ನು ಕಟ್ಟಿ ದೇವಸ್ಥಾನದ ನಿರ್ಮಾಣಕಾರ್ಯವನ್ನು ಪೂರೈಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು