ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯದಲ್ಲಿ ಬೆರೆತು ವಿಷ ಬಿತ್ತುವ ಕಾರ್ಯ ಸಲ್ಲದು’

Last Updated 6 ಡಿಸೆಂಬರ್ 2020, 19:42 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸ್ಥಾನ ನೀಡಿಕೆ ಮತ್ತು ಜಾತಿ ಹೆಸರಿನಲ್ಲಿ ನಿಗಮ ರಚನೆಯ ಬೇಡಿಕೆ ಕುರಿತು ಮಾತನಾಡುತ್ತಿರುವ ಕೆಲವು ಮಠಾಧೀಶರು ‘ಸರ್ಕಾರವನ್ನೇ ನಿಯಂತ್ರಿಸುವ’ ಎಚ್ಚರಿಕೆಯನ್ನೂನೀಡಿದ್ದಾರೆ. ಈ ಬೆಳವಣಿಗೆಗಳಿಂದಾಗಿ, ಧಾರ್ಮಿಕ ನಾಯಕರ ರಾಜಕೀಯ ಹಸ್ತಕ್ಷೇಪದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಾಜಕೀಯ ನಾಯಕರು ಹಾಗೂ ಮಠಾಧೀಶರ ಪ್ರತಿಕ್ರಿಯೆಗಳು ಇಲ್ಲಿವೆ

‘ರಾಜಕೀಯ ಮಾಡುವವ ಸ್ವಾಮೀಜಿನೇ ಅಲ್ಲ’

ಮಠಾಧೀಶರು, ಶ್ರೀಗಳು ಅಧ್ಯಾತ್ಮ, ಧರ್ಮಕ್ಕೆ ಹೆಚ್ಚಿನ ಆದ್ಯತೆ ನಿಡಬೇಕು ವಿನಾ ರಾಜಕೀಯ ಹಸ್ತಕ್ಷೇಪ ಮಾಡುವುದು ಧರ್ಮಕ್ಕೆ ವಿರೋಧವಾಗಿದೆ.ಅನಾದಿ ಕಾಲದಿಂದಲೂ ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡುತ್ತ ಬಂದಿದ್ದಾರೆ. ಸರ್ಕಾರ ಸಮಾಜವನ್ನು ಏಕದೃಷ್ಟಿಯಿಂದ ನೋಡುವಾಗ ಎಲ್ಲಿಯಾದರೂ ಎಡವಿದರೆ ಎಚ್ಚರಿಸುವ ಹಾಗೂ ಸಲಹೆ ನೀಡುವಂತಹ ಕೆಲಸ ಮಾತ್ರ ಮಾಡಬೇಕು. ಅದೂ ಒತ್ತಡ ತಂತ್ರವಾಗಿರಬಾರದು.ಜಾತಿ ವಿಷ, ಧರ್ಮ ಅಮೃತ ಹೀಗಿರುವಾಗ ಶ್ರೀಗಳು ರಾಜಕೀಯದಲ್ಲಿ ಬೆರೆತು ಸಮಾಜದಲ್ಲಿ ವಿಷ ಬಿತ್ತುವ ಕಾರ್ಯ ಸಲ್ಲದು. ಜಾತಿ ಮಾಡುವ ಸ್ವಾಮಿ ಸ್ವಾಮೀಜಿಯೇ ಅಲ್ಲ.

- ವಿಜಯಮಹಾಂತೇಶ್ವರ ಸ್ವಾಮೀಜಿ, ಮೈಸೂರು ಸಂಸ್ಥಾನಮಠ, ಕುದರಿಮೋತಿ

***
‘ಮಠಾಧೀಶರಿಗೆ ರಾಜಕೀಯ ಸಲ್ಲ’

ಮಠಾಧೀಶರು ರಾಜಕೀಯ ಮಾಡಬಾರದು. ಧರ್ಮ ಹಾಗೂ ರಾಜಕೀಯ ಸಮ್ಮಿಳಿತಗೊಂಡರೆ ಸಮಾಜ ಕಟ್ಟಲಾಗುವುದಿಲ್ಲ. ಆದ್ದರಿಂದ ಮಠಾಧೀಶರು ರಾಜಕೀಯದಿಂದ ದೂರವಿರಬೇಕು. ಮಠಗಳನ್ನು ಬೆಳೆಸಲು ರಾಜಕೀಯ ಲಾಭ ಅಷ್ಟಕಷ್ಟೇ ಪಡೆಯಬೇಕು.

ಭಕ್ತರೇ ಸಮಾಜದ ಆಸ್ತಿ. ರಾಜಕಾರಣಿಗಳಲ್ಲ. ಅವರನ್ನು ಓಲೈಸುವ ಪ್ರವೃತ್ತಿ ಬಿಟ್ಟು. ಪೂಜೆ, ದಾಸೋಹ, ಸಮೃದ್ಧ ಸಮಾಜ ಕಟ್ಟಲು ಸ್ವಾಮೀಜಿಗಳಾದವರು ಸದಾ ಮಂಚೂಣಿಯಲ್ಲಿರಬೇಕು.

- ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆದವಟ್ಟಿ, ಕುಕನೂರು ತಾಲ್ಲೂಕು, ಕೊಪ್ಪಳ ಜಿಲ್ಲೆ

***

'ರಾಜಕೀಯಕ್ಕೆ ಬರಬಹುದು'

ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಸ್ವಾಮೀಜಿಗಳಾದವರು ರಾಜಕೀಯಕ್ಕೆ ಬಂದು ಎಂಎಲ್‌ಎ, ಎಂಪಿ ಆಗಬಹುದು. ಆದರೆ, ಮಠದಲ್ಲಿದ್ದು ರಾಜಕೀಯ ಮಾಡಬಾರದು. ಅರಿಷಡ್ವರ್ಗವನ್ನು ತೊರೆದು ತ್ಯಾಗವನ್ನೇ ತಮ್ಮ ಜೀವನವನ್ನಾಗಿ ಮಾಡಿಕೊಂಡಿದ್ದರಿಂದಲೇ ಅವರ ಕಾಲಿಗೆ ನಾವು ಬೀಳುತ್ತೇವೆ.
ಆದರೆ, ಎಲ್ಲೊ ಒಂದು ಕಡೆ ಸ್ವಾಮೀಜಿಗಳು ತಾರತಮ್ಯ, ಓಲೈಕೆ, ಐಶ್ವರ್ಯದ ಮದ, ಆಶೆಯಿಂದ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ವರನ್ನು ಸಮಾನತೆಯಿಂದ ಕಂಡು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕಾಗಿರುವುದು ಸ್ವಾಮೀಜಿಗಳ ಕರ್ತವ್ಯ.

- ಬಸವರಾಜ ರಾಯರಡ್ಡಿ, ಮಾಜಿ ಸಚಿವ, ಯಲಬುರ್ಗಾ, ಕೊಪ್ಪಳ ಜಿಲ್ಲೆ

***

‘ಬೆದರಿಕೆ ಹಾಕಬಾರದು...’

ನಾಡಿನಲ್ಲಿ ಪ್ರತಿ ಸಮುದಾಯಕ್ಕೂ ಒಂದೊಂದು ಮಠಗಳಿವೆ. ಸಮುದಾಯದರಿಗೆ ಸಚಿವ ಸ್ಥಾನ, ನಿಗಮ– ಮಂಡಳಿಯಲ್ಲಿ ಸ್ಥಾನ ನೀಡುವಂತೆ ಮಠಾಧೀಶರು ಒತ್ತಡ ಹಾಕಿದರೆ ತಪ್ಪೇನಿಲ್ಲ. ಸ್ಥಾನ ಕಲ್ಪಿಸದಿದ್ದರೆ ಸರ್ಕಾರ ಬೀಳಿಸುತ್ತೇನೆ ಎಂದು ಬೆದರಿಕೆವೊಡ್ಡಬಾರದು. ಹಠ ಹಿಡಿಯಬಾರದು.

ಮಠಗಳಿಗೆ ಅನುದಾನ ನೀಡುವುದು ತಪ್ಪಲ್ಲ. ಸಮುದಾಯದ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಪರಿಸರ, ಧಾರ್ಮಿಕ ಕ್ಷೇತ್ರಗಳಿಗೆ ಮಠಗಳ ಕೊಡುಗೆ ಮೊದಲಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅನುದಾನ ನೀಡಬೇಕು.

- ಟಿ.ಡಿ. ರಾಜೇಗೌಡ, ಶಾಸಕ, ಶೃಂಗೇರಿ ಕ್ಷೇತ್ರ

***
'ಮಠಾಧೀಶರು ಲಾಭಿ ಮಾಡಬಾರದು'

ಮಠಾಧೀಶರು, ಸಂತರು ಇರುವುದು ಸಮಾಜಕ್ಕೆ ಮಾರ್ಗದರ್ಶನ ನೀಡಲು. ರಾಜಕೀಯ ನಾಯಕರಿಗೆ ಮಠಾಧಿಪತಿಗಳು ಮಾರ್ಗದರ್ಶನ ಮಾಡುವುದು ತಪ್ಪಲ್ಲ. ಆದರೆ, ರಾಜಕೀಯ ಮಾಡಬಾರದು. ತಮ್ಮ ಸಮುದಾಯದವರಿಗೆ ಸಚಿವ ಸ್ಥಾನ ನೀಡುವಂತೆ, ರಾಜಕೀಯ ಸ್ಥಾನಮಾನ ಕೊಡುವಂತೆ ಸರ್ಕಾರದ ಮಟ್ಟದಲ್ಲಿ ಸ್ವಾಮೀಜಿಗಳು ಲಾಬಿ ಮಾಡಬಾರದು. ಜಾತಿಗೊಂದು ನಿಗಮ– ಮಂಡಳಿ ರಚಿಸಿ, ಮೀಸಲಾತಿ ಕೊಡಿ ಎಂದು ಒತ್ತಾಯಿಸುವುದು ಮೂರ್ಖತನ. ಅರ್ಹರಿದ್ದವರಿಗೆ, ಅನುಭವ ಹೊಂದಿದವರಿಗೆ, ದೂರದೃಷ್ಟಿ ಉಳ್ಳವರಿಗೆ ರಾಜಕೀಯ ಸ್ಥಾನಮಾನಗಳು ಸಿಗಬೇಕು.

- ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT