ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನವೇ ವಿಜಯದ ಶಕ್ತಿ

Last Updated 24 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಯಾರಿಗೆ ತಾನೆ ವಿಜಯ ಬೇಡ? ವಿಜಯ ಎಂದರೆ ಗೆಲುವು. ನಾವು ಮಾಡುವ ಪ್ರತಿಯೊಂದು ಕೆಲಸವೂ ಯಶಸ್ಸನ್ನು ಪಡೆಯಬೇಕೆಂದು ನಾವು ಆಶಿಸುತ್ತೇವೆ. ಈ ಯಶಸ್ಸೇ ಆ ಕೆಲಸದ ಫಲ ಕೂಡ. ಈ ಫಲವೇ ವಿಜಯ; ಅದೇ ಗೆಲವು.

ನವರಾತ್ರಿಪರ್ವದ ಕೊನೆಯ ದಿನವನ್ನು ’ವಿಜಯದಶಮಿ’ ಎಂದು ಅಚರಿಸಲಾಗುತ್ತದೆಯಷ್ಟೆ. ಈ ಪದ್ಧತಿಯಲ್ಲಿ ಹಲವು ಸ್ವಾರಸ್ಯಗಳಂಟು. ಪೌರಾಣಿಕವಾಗಿಯೂ ಐತಿಹಾಸಿಕವಾಗಿಯೂ ಈ ದಿನಕ್ಕೆ ತುಂಬ ಮಹತ್ವವಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ, ವಿಜಯವನ್ನು ಪಡೆದದ್ದು ಇದೇ ದಿನ ಎಂಬುದು ಆಸ್ತಿಕರ ನಂಬಿಕೆ.

ಹಿಂದೆ ಕ್ಷತ್ರಿಯರು ಈ ದಿನ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿತ್ತೆಂದು ತಿಳಿದುಬರುತ್ತದೆ. ಇದರ ಹಿಂದಿನ ದಿವಸ ಆಯುಧಗಳನ್ನು ಪೂಜಿಸುವುದು, ದಶಮಿಯಂದು ಶಮೀಪೂಜೆ ಮಾಡುವುದು – ಇವೆಲ್ಲವೂ ವಿಜಯಯಾತ್ರೆಯ ಸೂಚಕಗಳಾಗಿದ್ದವು ಎಂಬುದನ್ನು ತೋರಿಸುತ್ತವೆ.

ವಿಜಯ ಎಂಬುದು ರಾಜರಿಗೇ ಮಾತ್ರವೇ ಅಲ್ಲ; ನಮ್ಮೆಲ್ಲರಿಗೂ ಬೇಕಾಗಿರುವಂಥದ್ದೇ. ಒಂಬತ್ತು ದಿನಗಳು ಶಕ್ತಿಯ ವಿವಿಧ ರೂಪಗಳನ್ನು ಪೂಜಿಸಿ, ಹತ್ತನೆಯ ದಿನ ವಿಜಯದ ಸಂಕಲ್ಪಮಾಡುವುದು ಯುಕ್ತವಾಗಿಯೇ ಇದೆ. ಗೆಲುವು ಎನ್ನುವುದು ಕೇವಲ ಯುದ್ಧದಲ್ಲಿ ಮಾತ್ರವೇ ಬೇಕಾಗುವಂಥದ್ದಲ್ಲ; ಜೀವನದ ಪ್ರತಿ ವಿವರದಲ್ಲೂ ನಮಗೆ ಗೆಲುವಿನ ಆವಶ್ಯಕತೆ ಇರುತ್ತದೆ. ಹೀಗೆ ನಮ್ಮ ಬದುಕು ಪ್ರತಿ ದಿನವೂ ಪ್ರತಿ ಕ್ಷಣವೂ ವಿಜಯವನ್ನು ಕಾಣುವಂತಾಗಲಿ ಎಂಬ ಪ್ರಾರ್ಥನೆಯೇ ವಿಜಯದಶಮಿ ಆಚರಣೆಯ ಮೂಲ ಉದ್ದೇಶ; ಪ್ರತಿ ಕ್ಷಣವೂ ನಮ್ಮ ಪಾಲಿಗೆ ಹೊಸತಾಗಬೇಕು ಎಂಬುದೇ ನವರಾತ್ರಿಯ ಆಶಯ. ವಿದ್ಯೆ, ವ್ಯಾಪಾರ, ಕೃಷಿ, ಯುದ್ಧ – ಹೀಗೆ ನಮ್ಮ ಎಲ್ಲ ಆಗುಹೋಗುಗಳೂ ಫಲಪ್ರದವಾಗಬೇಕು. ಫಲಪ್ರದವಾಗಲು ನಮಗೆ ಶಕ್ತಿ ಬೇಕು. ಆ ಶಕ್ತಿಯ ಆರಾಧನೆಯ ಅಂತಿಮ ಹಂತವೇ ವಿಜಯದ ಆಚರಣೆ ಎಂಬ ತಾತ್ವಿಕತೆ ಈ ಪರ್ವದ ಹಿನ್ನೆಲೆಯಲ್ಲಿದೆ. ಈ ದಿನ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವ ಪದ್ಧತಿಯೂ ಉಂಟು.

ವಿಜಯದಶಮಿಯಂದು ಶಮೀವೃಕ್ಷವನ್ನು ಪೂಜಿಸಲಾಗುತ್ತದೆ. ಇದನ್ನೇ ಕನ್ನಡದಲ್ಲಿ ‘ಬನ್ನಿ’ಮರ ಎಂದು ಕರೆಯುತ್ತೇವೆ. ಇದರ ಮೂಲ ಸಂಸ್ಕೃತದ ವಹ್ನಿ. ಇದರ ಅರ್ಥ ಅಗ್ನಿ. ಎಂದರೆ ಈ ಮರವನ್ನು ಪ್ರಾಚೀನ ಕಾಲದಲ್ಲಿ ಯಜ್ಞದ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದರು. ಈ ಮರದ ಕೊರಡುಗಳ ಮೂಲಕವೇ ಅಗ್ನಿಯನ್ನು ಉತ್ಪಾದಿಸಿಕೊಳ್ಳುತ್ತಿದ್ದರು. ಈ ಮರದಲ್ಲಿ ದುರ್ಗೆ ವಾಸಮಾಡುತ್ತಿರುತ್ತಾಳೆ – ಎಂಬ ನಂಬಿಕೆಯಿದೆ. ದುರ್ಗೆ ಎಂದರೆ ನಮ್ಮ ಕಷ್ಟಗಳನ್ನು ಹೋಗಲಾಡಿಸುವವಳು ಎಂದು ತಾತ್ಪರ್ಯ. ಹೀಗಾಗಿ ವಿಜಯದಶಮಿ ಎಂದರೆ ನಮಗೆ ಒದಗಿರುವ ಕಷ್ಟಗಳನ್ನು ನಿವಾರಿಸಿಕೊಂಡು, ವಿಜಯವನ್ನು ಗಳಿಸಲು ನೆರವಾಗುವ ಹಬ್ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT